More

    ಸ್ಮರಣೆ ಶಕ್ತಿ ಪರೀಕ್ಷೆ ಗಿನ್ನೆಸ್ ದಾಖಲೆ ಯತ್ನ

    ಕಡಬ: ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳಿಂದ ‘ಮೆಮೋರೈಸಿಂಗ್ ಆ್ಯಂಡ್ ರೀಕಾಲಿಂಗ್ ಝೀರೋ ಟು ಇನ್ಪಿನೆಂಟ್ ಕ್ಯಾಲೆಂಡರ್’ ವಿಷಯದಲ್ಲಿ ಗಿನ್ನೆಸ್ ದಾಖಲೆಗಾಗಿ ಪ್ರಯತ್ನ ಸೋಮವಾರ ನಡೆಯಿತು.

    7ನೇ ತರಗತಿ ವಿದ್ಯಾರ್ಥಿಗಳಾದ ಮೋಕ್ಷಿತ್, ನಿತಿನ್, ಮಧುಶ್ರೀ ದಾಖಲೆಗಾಗಿ ಯತ್ನಿಸಿದವರು. ಇವರಿಗೆ ದಿನಾಂಕ, ತಿಂಗಳು, ವರ್ಷ ಹೇಳಿದರೆ ಸಾಕು, ಮೂರು ಸೆಕೆಂಡಿನೊಳಗೆ ವಾರದ ಹೆಸರು ಥಟ್ ಅಂತ ಹೇಳುತ್ತಾರೆ.

    ಸ್ಮರಣ ಶಕ್ತಿ ತರಬೇತುದಾರ ಮೈಸೂರಿನ ರಾಕೇಶ್ ಮೋಹನ್ ಎಂಬುವರಿಂದ ಪಳಗಿದ ಈ ವಿದ್ಯಾರ್ಥಿಗಳು ಯಾವುದೇ ಅಳುಕಿಲ್ಲದೆ ಸಿಕ್ಕ ಅವಕಾಶವನ್ನು ಬಳಸಿಕೊಂಡರು. ವಿದ್ಯಾರ್ಥಿಗಳ ಪಾಲಕರು, ಶಾಲಾ ಆಡಳಿತ ಮಂಡಳಿ ಪ್ರಮುಖರು, ಶಿಕ್ಷಕರು ತಾರೀಕು, ತಿಂಗಳು, ವರ್ಷವನ್ನು ಕೇಳಿ ವಾರದ ಹೆಸರನ್ನು ಖಾತ್ರಿಪಡಿಸಿದರು.

    ಹೇಗಿತ್ತು ಪ್ರಯತ್ನ?: ಸಭಾಂಗಣದ ಒಂದು ಭಾಗದಲ್ಲಿ ಒಬ್ಬರಂತೆ ವಿದ್ಯಾರ್ಥಿಗಳನ್ನು ಕೂರಿಸಿ ತಲಾ 15 ಪ್ರಶ್ನೆಗಳನ್ನು ಕೇಳಲಾಯಿತು. ಪ್ರಶ್ನೆಗಳನ್ನು ಕರಿ ಹಲಗೆಯಲ್ಲಿ ರಾಕೇಶ್ ಮೋಹನ್ ಬರೆಯುತ್ತಿದ್ದಂತೆ ವಿದ್ಯಾರ್ಥಿಗಳು ಸರಿಯಾದ ಉತ್ತರ ನೀಡಿದರು. ಸಭಾಂಗಣದ ಇನ್ನೊಂದು ಭಾಗದಲ್ಲಿ ಕಂಪ್ಯೂಟರ್ ಮೂಲಕ ತಂತ್ರಾಂಶದಲ್ಲಿ ಈ ಪ್ರಶ್ನೆಗಳನ್ನು ದಾಖಲಿಸಿ ಉತ್ತರವನ್ನು ದೊಡ್ಡ ಪರದೆ ಮೇಲೆ ಬಿತ್ತರಿಸಲಾಯಿತು. ವಿದ್ಯಾರ್ಥಿಗಳು ನೀಡಿದ ಉತ್ತರ ಮತ್ತು ಪರದೆ ಮೇಲೆ ಬಿತ್ತರವಾದ ಉತ್ತರಕ್ಕೂ ತಾಳೆಯಾಗುತ್ತಿತ್ತು.
    ವಿಶ್ವ ದಾಖಲೆಯ ನಿಯಮದಂತೆ ಗಜೆಟೆಡ್ ಅಧಿಕಾರಿಗಳಾದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ. ಸತೀಶ್ ಭಟ್, ಕಡಬ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜನಾರ್ದನ ಸಾಕ್ಷಿಯಾಗಿದ್ದರು.

    2 ವರ್ಷಗಳ ಪ್ರಯತ್ನ: ಎರಡು ವರ್ಷದಿಂದ ಹಲವು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಬಳಿಕ ಆಯ್ದ ಮೂವರಿಗೆ ನಾಲ್ಕು ತಿಂಗಳಿಂದ ವಿಶೇಷ ತರಬೇತಿ ನೀಡಿ ದಾಖಲೆಗೆ ಸಿದ್ಧಪಡಿಸಲಾಗಿತ್ತು. ಈಗ ಪ್ರದರ್ಶನ ನಡೆದಿದ್ದು, ಗಿನ್ನೆಸ್ ದಾಖಲೆಯಾಗಿರುವ ಕುರಿತು ಇನ್ನಷ್ಟೇ ಖಾತ್ರಿಯಾಗಬೇಕಿದೆ.

    ಕಾರ್ಯಕ್ರಮ ಉದ್ಘಾಟನೆ: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ‌್ಯದರ್ಶಿ ಕೊಂಕೋಡಿ ಕೃಷ್ಣ ಭಟ್ ಕಾರ‌್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸುರೇಶ್ ಕುಮಾರ್ ಕುಡೂರು, ಸಂಚಾಲಕ ಈಶ್ವರ ಗೌಡ ಪಜ್ಜಡ್ಕ, ಕಾರ‌್ಯದರ್ಶಿ ಗಂಗಾಧರ ಗೌಡ ಕುಂಡಡ್ಕ, ಶಿಕ್ಷಣ ಇಲಾಖಾ ಸಿಆರ್‌ಪಿ ಪ್ರದೀಪ್ ಬಾಕಿಲ, ಸ್ಮರಣಶಕ್ತಿ ಮುಖ್ಯ ತರಬೇತುದಾರ ರಾಕೇಶ್ ಮೋಹನ್, ಇನ್ನೋರ್ವ ತರಬೇತುದಾರ ಮಿಲನ್ ಪುಣಚ ಉಪಸ್ಥಿತರಿದ್ದರು. ಮುಖ್ಯಮಾತಾಜಿ ಕನಕಲತಾ ಎಸ್.ಎನ್. ಭಟ್ ವಂದಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ. ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts