More

    ಆಲಂಕಾರು ಸರ್ಕಾರಿ ಶಾಲೆಯಲ್ಲಿ ಆಂಗ್ಲ ಕಲಿಕೆ

    ಪ್ರವೀಣ್‌ರಾಜ್ ಕಡಬ

    ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನ ಒಂದನೇ ತರಗತಿಯಿಂದ ಆಂಗ್ಲಮಾಧ್ಯಮ ಶಿಕ್ಷಣ ದೊರೆಯಲಿದೆ. ರಾಜ್ಯ ಸರ್ಕಾರ ರಾಜ್ಯದ 959 ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಶಿಕ್ಷಣ ನೀಡಲು ಮುಂದಾಗಿದ್ದು ಅದರಂತೆ ಈ ಶಾಲೆಗೆ ಆಂಗ್ಲಮಾಧ್ಯಮ ಭಾಗ್ಯ ಲಭಿಸಿದೆ.

    1919ರಲ್ಲಿ ಸ್ಥಾಪನೆಯಾಗಿ ಆಲಂಕಾರು ಸುತ್ತಮುತ್ತ ಗ್ರಾಮಗಳ ಶಿಕ್ಷಣಾಕಾಂಕ್ಷಿಗಳಿಗೆ ಆಸರೆಯಾಗಿದ್ದ ಈ ಶಾಲೆ ಇತ್ತೀಚೆಗಷ್ಟೆ ಶತಮಾನೋತ್ಸವ ಆಚರಿಸಿದೆ. ಆಂಗ್ಲಮಾಧ್ಯಮ ಪ್ರಭಾವದಿಂದ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಮನಗಂಡ ಹಳೇ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಪಾಲಕರು, ಸ್ಥಳೀಯರು ಇಲ್ಲಿ ಆಂಗ್ಲಮಾಧ್ಯಮ ತರಗತಿ ಆರಂಭಿಸುವ ಕುರಿತು ಸಭೆೆ ನಡೆಸಿ ಚರ್ಚಿಸಿದ್ದರು. 2015ರಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಯಿತು. ಇದರಿಂದ ಮಕ್ಕಳ ಸೇರ್ಪಡೆಯಲ್ಲಿ ಏರುಗತಿ ಕಂಡಿದೆ.

    ಶಾಲಾ ವಿಶೇಷ: ಈ ಹಿಂದೆ ಪುತ್ತೂರು ಶಿಕ್ಷಣಾಧಿಕಾರಿಯಾಗಿದ್ದ ಶಶಿಧರ್ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಬಲವರ್ಧನೆಗಾಗಿ ವಿಷನ್ ಪುತ್ತೂರು ಧ್ಯೇಯದೊಂದಿಗೆ ವಿವಿಧ ಯೋಜನೆ ಹಮ್ಮಿಕೊಂಡಿದ್ದರು. ಇದರಿಂದ ಪ್ರೇರಿತರಾದ ಇಲ್ಲಿನ ಮುಖ್ಯಶಿಕ್ಷಕ ಲಿಂಗರಾಜು ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿದ್ದರು. 2016-2017ನೇ ಸಾಲಿನ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಗುಬ್ಬಚ್ಚಿ ಸ್ಪೀಕಿಂಗ್ ಆರಂಭವಾಗಿದೆ. 2017-18ರ ಸಾಲಿನಿಂದ ಚೆನ್ನೈ ಮೂಲದ ಕರಡಿಪಾತ್ ಎಂಬ ಸಂಸ್ಥೆ ಶಾಲೆಯಲ್ಲಿ ಇಂಗ್ಲಿಷ್‌ನಲ್ಲಿ ನಲಿಕಲಿ ಶಿಕ್ಷಣ ನೀಡಲು ಸಹಕರಿಸುತ್ತಿದೆ. ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ ಕೂಡ ಲಭ್ಯವಿದೆ. ಆಲಂಕಾರು ಸುತ್ತಮುತ್ತಲಿನ ರಾಮಕುಂಜ, ಕುಂತೂರು, ಪೆರಾಬೆ ಗ್ರಾಮಗಳ ವಿದ್ಯಾರ್ಥಿಗಳೂ ಇಲ್ಲಿ ಅಭ್ಯಸಿಸುತ್ತಿದ್ದಾರೆ. 2020-21ನೇ ಸಾಲಿನಲ್ಲಿ 269 ವಿದ್ಯಾರ್ಥಿಗಳು ಇದ್ದರು. ಪ್ರಸಕ್ತ 300 ಸಂಖ್ಯೆ ದಾಟುವ ನಿರೀಕ್ಷೆಯಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಲಿಂಗರಾಜು.

    ಕಡಬ ತಾಲೂಕಿನ ಬೊಬ್ಬೆಕೇರಿ, ಬಜತ್ತೂರು, ಆಲಂಕಾರು ಸರ್ಕಾರಿ ಶಾಲೆಯಲ್ಲಿ ಈ ಪ್ರಸಕ್ತ ಸಾಲಿನಿಂದ ಇಂಗ್ಲಿಷ್ ಮಾಧ್ಯಮ ಆರಂಭವಾಗಿದೆ. ಅಲಂಕಾರು ಶಾಲೆಯಲ್ಲಿ ಈ ಹಿಂದೆಯೇ ಎಲ್ಕೆಜಿ, ಯುಕೆಜಿ ತೆರೆಯಲಾಗಿತ್ತು. ಅದರೆ ಇದಕ್ಕೆ ಸರ್ಕಾರದ ಅನುಮತಿ ಇರಲಿಲ್ಲ. ಆಂಗ್ಲಮಾಧ್ಯಮಕ್ಕೆ ಹಿಂದೆಯೆ ಬೇಡಿಕೆಯಿಡಲಾಗಿತ್ತು. ಅದಕ್ಕೆ ಮಾನ್ಯತೆ ಸಿಕ್ಕಿದೆ. ಗುಣಮಟ್ಟದ ಶಿಕ್ಷಣಕ್ಕೆ ಹಲವಾರು ಯೋಜನೆ ಹಾಕಿಕೊಂಡಿರುವುದು ಮಾದರಿ.
    ಲೋಕೇಶ್, ಶಿಕ್ಷಣಾಧಿಕಾರಿ ಪುತ್ತೂರು

    ಖಾಸಗಿ ಶಾಲೆಯಂತೆ ಸರ್ಕಾರಿ ಶಾಲೆಯನ್ನು ಮಾರ್ಪಡಿಸಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ವಿವಿಧ ಸಮುದಾಯದ ಸಹಕಾರವಿದೆ. ಪ್ರಸಕ್ತ ಸರ್ಕಾರವೇ ಆಂಗ್ಲಮಾಧ್ಯಮ ತರಗತಿ ಆರಂಭಿಸಲು ಮುಂದಾಗಿದೆ.
    ಲಿಂಗರಾಜು
    ಮುಖ್ಯ ಶಿಕ್ಷಕ , ಆಲಂಕಾರು ಸರ್ಕಾರಿ ಹಿ.ಪ್ರಾ.ಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts