More

    ಲಾಕ್​ಡೌನ್​ನಿಂದ ಕೃಷಿಗಿಲ್ಲ ತೊಂದರೆ

    ಹುಬ್ಬಳ್ಳಿ: ಲಾಕ್​ಡೌನ್​ನಿಂದ ಜಿಲ್ಲೆಯ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ, ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ಗೊಬ್ಬರ ಪೂರೈಕೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
    ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
    ಜಿಲ್ಲೆಯಲ್ಲಿ 27 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು. ಅಗತ್ಯ ಎನಿಸಿದರೆ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರ ನಡುವೆ ಕೃಷಿ ಚಟುವಟಿಕೆ ನಿರಾತಂಕವಾಗಿ ನಡೆಯುವ ದಿಸೆಯಲ್ಲಿ ನಿಯಮಾವಳಿ ಅನುಸರಿಸಿ ತುರ್ತು ಸಭೆ ನಡೆಸಲಾಗಿದೆ ಎಂದರು.
    ಬಿತ್ತನೆ ಬೀಜ ನಾಳೆಯಿಂದಲೇ ರೈತರಿಗೆ ವಿತರಣೆಯಾಗಲಿದೆ. ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಬೀಜ- ಗೊಬ್ಬರ, ಔಷಧಗಳನ್ನು ಕೊಳ್ಳಲು ರೈತರು ಬರುತ್ತಾರೆ. ಇವರಿಗೆ ಸಮಯದಲ್ಲಿ ವಿನಾಯಿತಿ ನೀಡಲಾಗುವುದು. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸಿ ನಿಯಮ ರೂಪಿಸಲಾಗುವುದು ಎಂದರು.
    ಗ್ರಾಮವಾರು ಸಮಯ ನಿಗದಿ: ಹೋಬಳಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಂಚುವಾಗ ಜನಸಂದಣಿ ಉಂಟಾಗಬಾರದು. ಕೋವಿಡ್ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಹೋಬಳಿ ವ್ಯಾಪ್ತಿಗೆ ಬರುವ ಪತ್ರಿ ಹಳ್ಳಿಗೆ ಸಮಯ ಅಥವಾ ದಿನವನ್ನು ನಿಗದಿ ಪಡಿಸಲಾಗುವುದು. ಈ ಕುರಿತು ಗ್ರಾಮಗಳಲ್ಲಿ ಮುಂಚಿತವಾಗಿ ಡಂಗುರ ಸಾರಲಾಗುವುದು ಎಂದರು.
    ಲಾಕ್​ಡೌನ್​ನಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ನಿಜ. ಆದರೆ, ಸೊಂಕು ಹರಡುವುದನ್ನು ತಡೆಯಲು ಇದು ಅವಶ್ಯಕವಾಗಿದೆ. ಇಂದಿರಾ ಕ್ಯಾಂಟೀನ್​ಗಳಲ್ಲಿ ಸಮರ್ಪಕ ಆಹಾರ ಪೂರೈಕೆ ಪ್ರಕ್ರಿಯೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸುವರು. ಲೋಪದೋಷಗಳು ಇದ್ದರೆ ಸರಿಪಡಿಸಲಾಗುವುದು. ಕಿರಾಣಿ ಅಂಗಡಿಯವರು ಹೋಮ್ ಡೆಲಿವರಿ ಕೊಡಲು ಮುಂದೆ ಬಂದರೆ ಅವಕಾಶ ನೀಡಲಾಗುವುದು. ಎಪಿಎಂಸಿಗಳಲ್ಲಿ ಬೆಳಗ್ಗೆ 6ರಿಂದ 8ರವರೆಗೆ ಸಗಟು ವ್ಯಾಪಾರಕ್ಕೆ ಮಾತ್ರ ಅವಕಾಶ ಇದೆ ಎಂದು ಉತ್ತರಿಸಿದರು.
    ತೋಟಗಾರಿಕೆ ಅಧಿಕಾರಿಗಳು ತರಾಟೆಗೆ: ಕಳೆದ ಬಾರಿ ತೋಟಗಾರಿಕೆ ಇಲಾಖೆಯಿಂದ ಹಲವು ಫಲಾನುಭವಿಗಳಿಗೆ ಬೆಳೆ ವಿಮೆ ಹಾಗೂ ಪರಿಹಾರ ಹಣ ತಲುಪಿಲ್ಲ. ಇದಕ್ಕೆ ಅಧಿಕಾರಿಗಳು ಸರಿಯಾಗಿ ಬೆಳೆ ಸಮೀಕ್ಷೆ ಮಾಡದಿರುವುದೇ ಕಾರಣ ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ ತರಾಟೆಗೆ ತೆಗೆದುಕೊಂಡರು. ಈ ವರ್ಷವಾದರೂ ಸರಿಯಾಗಿ ಸಮೀಕ್ಷೆ ಮಾಡಿ ಅರ್ಹರಿಗೆ ಪರಿಹಾರ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಕುಸುಮಾವತಿ ಶಿವಳ್ಳಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
    ಶೇ. 141ರಷ್ಟು ಹೆಚ್ಚು ಮಳೆ
    ಪ್ರಸಕ್ತ ಮುಂಗಾರು ಪೂರ್ವ ಸೀಸನ್​ನಲ್ಲಿ 180 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ. 141ರಷ್ಟು ಹೆಚ್ಚಿನ ಮಳೆ ಆಗಿದೆ. ವಿವಿಧ ನಮೂನೆಯ 15000 ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದ್ದು, ಕೃಷಿ ಇಲಾಖೆ ಇದೀಗ 11 ಸಾವಿರ ಕ್ವಿಂಟಾಲ್ ದಾಸ್ತಾನು ಮಾಡಿಕೊಂಡಿದೆ. 58088 ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಇದೆ. 31,973 ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts