More

    ಗಿರಿಜನರ ಗುರುತಿಸುವಿಕೆಗೆ ನಿರ್ದಿಷ್ಟ ಚೌಕಟ್ಟು ಅಗತ್ಯ ಎಂದ ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ

    ರಾಯಚೂರು: ಗಿರಿಜನರನ್ನು ಗುರುತಿಸುವಿಕೆಗೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ. ಅವರ ಆಚಾರ, ವಿಚಾರಗಳನ್ನು ಆಧರಿಸಿ ಅವರನ್ನು ಗಿರಿಜನ ಎಂದು ಗುರುತಿಸಲಾಗುತ್ತಿದೆ. ಗಿರಿಜನರನ್ನು ಗುರುತಿಸಲು ಒಂದು ನಿರ್ದಿಷ್ಟ ಚೌಕಟ್ಟು ರೂಪಿಸುವ ಅಗತ್ಯವಿದೆ ಎಂದು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಅಭಿಪ್ರಾಯಪಟ್ಟರು.

    ನಗರ ಹೊರವಲಯದಲ್ಲಿರುವ ರಾಯಚೂರು ವಿವಿಯ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿರುವ ಐದು ದಿನಗಳ ಗಿರಿಜನ ಕಲ್ಯಾಣ ಸವಾಲು ಮತ್ತು ಅವಕಾಶಗಳು ಕುರಿತು ಕಮ್ಮಟವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

    30 ವರ್ಷಗಳಲ್ಲಿ ಗಿರಿಜನರ ಸಂಖ್ಯೆಯಲ್ಲಿ ಶೇ.54 ಹೆಚ್ಚಳವಾಗಿದೆ. ಅವರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಸಂವಿಧಾನಾತ್ಮಕವಾಗಿ ಅವರ ಬೆಳವಣಿಗೆಗೆ ಹಲವು ಸೌಲಭ್ಯಗಳನ್ನು ನೀಡಲಾಗಿದ್ದರೂ ಅವರ ಸಮಸ್ಯೆಗಳು ಮಾತ್ರ ಹಾಗೆ ಉಳಿದಿವೆ. ಗಿರಿಜನರಲ್ಲಿ ಸ್ವಯಂ ಗೌರವ ಹೆಚ್ಚಾಗಿ ಕಾಣುತ್ತಿದ್ದು, ಅವರು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಹೆಚ್ಚಿನ ಅವಕಾಶಗಳಿವೆ. ಗಿರಿಜನರ ಕುರಿತು ಸಾಕಷ್ಟು ಅಧ್ಯಯನ ನಡೆಯುತ್ತಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪೂರಕ ಚಿಂತನೆಗಳು ನಡೆಯಬೇಕಾಗಿದೆ ಎಂದರು.

    ಹಳೇ ಶಿಕ್ಷಣ ಪದ್ಧತಿ ಕೇವಲ ಶಿಕ್ಷಣವನ್ನು ನೀಡುತ್ತದೆಯೇ ಹೊರತು ಉದ್ಯೋಗವನ್ನಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಉದ್ಯೋಗಕ್ಕೆ ಪೂರಕವಾದ ಶಿಕ್ಷಣವನ್ನು ಕೊಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಜಾಗತಿಕ ಬದಲಾವಣೆಗೆ ತಕ್ಕಂತೆ ಉದ್ಯೋಗಗಳ ರಚನೆ ಬದಲಾಗುತ್ತಿದ್ದು, ಅದನ್ನು ಅರಿತುಕೊಳ್ಳಬೇಕಾಗಿದೆ ಎಂದು ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.

    ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿವಿ ಕುಲಪತಿ ಪ್ರೊ.ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ಗಿರಿಜನರು ಕಾಯಕವೇ ಕೈಲಾಸ ಎಂದು ಬದುಕಿದ ಸ್ವಾವಲಂಬಿ ಜನರು. ಗಿರಿಜನರ ಕೌಶಲವನ್ನು ಗುರುತಿಸಿ ಅವರನ್ನು ಬೆಳೆಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದರು.

    ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್, ಶಿಷ್ಠ ಪರಂಪರೆಯ ಬಗ್ಗೆ ಮಾತನಾಡುವ ಇಂದಿನ ದಿನಮಾನದಲ್ಲಿ ನೈಜ ಪರಂಪರೆ ಗಿರಿಜನರದ್ದಾಗಿದೆ. ಪ್ರಕೃತಿಯ ಮತ್ತು ಸಮಾಜದ ಜತೆಗೆ ಸಂಬಂಧದ ಕುರುಹುಗಳ ಮೂಲಕ ಗಿರಿಜನರ ಬದುಕನ್ನು ಕಾಣಬೇಕಾಗಿದೆ ಎಂದು ತಿಳಿಸಿದರು.

    ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ ಅಧ್ಯಕ್ಷತೆ ವಹಿಸಿ, ನಮಗೆ ಹಲವು ದಶಕಗಳಿಂದ ಇಲ್ಲ ಎನ್ನುವದನ್ನು ಕಲಿಸಿ ಕೊಡಲಾಗಿದೆ. ಇರುವುದನ್ನು ನಾವು ಹೇಳುತ್ತಿಲ್ಲ, ಗುರುತಿಸುತ್ತಿಲ್ಲ. ಎಲ್ಲ ಸಿಕ್ಕ ಮೇಲೂ ಅತೃಪ್ತ ಆತ್ಮಗಳಂತಿರುತ್ತೇವೆ.

    ಗಿರಿಜನರು ಕೀಳು ಎಂದು ಹೇಳಿಕೊಟ್ಟವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅವರಲ್ಲಿರುವ ಹೆಗ್ಗಳಿಕೆಯನ್ನು ಹೇಳಿಕೊಟ್ಟಿದ್ದರೆ ಅವರಿಂದು ಮುಂಚೂಣಿಯಲ್ಲಿರುತ್ತಿದ್ದರು. ನಮ್ಮ ಶಿಕ್ಷಣ ಪದ್ಧತಿಯಲ್ಲೂ ದ್ವೇಷ ಮಾಡುವುದನ್ನು ಹೇಳಿಕೊಟ್ಟಿದ್ದೇವೆಯೇ ಹೊರತು ಪ್ರೀತಿ ಮಾಡುವುದನ್ನು ಕಲಿಸಿಕೊಡಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

    ರಾಯಚೂರು ವಿವಿ ಮೌಲ್ಯಮಾಪನ ಕುಲಸಚಿವ ಡಾ.ಎಂ.ಯರಿಸ್ವಾಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ, ಸದಸ್ಯ ಡಾ.ಬಿ.ಎಂ.ಶರಭೇಂದ್ರಸ್ವಾಮಿ, ಶಿಬಿರದ ನಿರ್ದೇಶಕ ಡಾ.ಆನಂದಕುಮಾರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಶಿಬಿರಾರ್ಥಿಗಳು ಇದ್ದರು. ವೆಂಕಟೇಶ ಹೂಗಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts