More

    ತೊಕ್ಕೊಟ್ಟು-ನಾಟೆಕಲ್ ರಸ್ತೆ ವಿಸ್ತರಣೆಗೆ ಮರಗಳ ಹನನ

    ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಜನ ಅಭಿವೃದ್ಧಿಯ ಖುಷಿಯಲ್ಲಿದ್ದರೆ, ಅತ್ತ ರಸ್ತೆಯ ಇಕ್ಕೆಲಗಳಲ್ಲಿರುವ ಸಾಲು ಮರಗಳು ಪ್ರಾಣಾರ್ಪಣೆ ಮಾಡುತ್ತಿದ್ದು, ಪರಿಸರ ಪ್ರೇಮಿಗಳ ಕರುಳು ಹಿಂಡುತ್ತಿದೆ.

    ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಆಗಲೇಬೇಕು. ಅಭಿವೃದ್ಧಿ ಸಂಬಂಧಿತ ಪ್ರತಿಯೊಂದು ಕಾರ್ಯದಲ್ಲೂ ಪರಿಸರ ನಾಶವಾಗುತ್ತಿದೆ. ಇದೀಗ ಅಂತಹ ಸರದಿ ರಸ್ತೆ ಕಾಮಗಾರಿ ಸಂದರ್ಭ ಎದುರಾಗಿದೆ. ಸದ್ಯ ತೊಕ್ಕೊಟ್ಟಿನಿಂದ ನಾಟೆಕಲ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಈಗಾಗಲೇ ಹಲವು ಬೃಹತ್ ಮರಗಳನ್ನು ಬಲಿ ಪಡೆಯಲಾಗಿದೆ. ಇನ್ನಷ್ಟು ಮರಗಳ ಬಲಿಗೂ ಸಿದ್ಧತೆ ನಡೆದಿದೆ. ಈ ಮರಗಳೆಲ್ಲವೂ ಅದೆಷ್ಟೋ ವರ್ಷಗಳಿಂದ ಜನರಿಗೆ ಗಾಳಿ, ನೆರಳು ನೀಡಿದೆ. ಆದರೆ ಅವುಗಳ ಉಳಿವು ಸಾಧ್ಯವಾಗಿಲ್ಲ ಎನ್ನುವುದು ದುರಂತ ಎನ್ನುವುದು ಪರಿಸರಪ್ರೇಮಿಗಳ ಅಳಲು.

    ಒಂದು ಮರ ಕಡಿದರೆ ಎರಡು ಗಿಡಗಳನ್ನು ನೆಡಬೇಕು ಅನ್ನುವುದು ಅರಣ್ಯ ಇಲಾಖೆ ನಿಯಮ. ಆದರೆ ಅವುಗಳನ್ನು ಉಳಿಸಿ ದೊಡ್ಡದಾಗಿಸಲು ಅದೆಷ್ಟೋ ವರ್ಷಗಳು ಬೇಕು. ಅದಕ್ಕಿಂತಲೂ ಮುಖ್ಯವಾಗಿ ನೆಟ್ಟ ಗಿಡಗಳನ್ನು ಪೋಷಿಸುವವರಾರು ಎನ್ನುವ ಪ್ರಶ್ನೆಯೂ ಇದೆ.

    ಅರಣ್ಯ ಇಲಾಖೆ ದೂರದೃಷ್ಟಿ ಅಗತ್ಯ: ತೊಕ್ಕೊಟ್ಟಿನಿಂದ ನಾಟೆಕಲ್‌ವರೆಗೆ ರಸ್ತೆಗಾಗಿ ಬಲಿಯಾಗಿರುವ, ಮುಂದಕ್ಕೆ ಬಲಿಗೆ ಸಿದ್ಧವಾಗಿರುವ ಮರಗಳೆಲ್ಲವೂ ಬೃಹತ್ ಗಾತ್ರದ್ದು. ಅದರಲ್ಲೂ ಹೆಚ್ಚಿನವು ವಿಶಾಲವಾಗಿ ಬೆಳೆದು ನೆರಳು ನೀಡುವ ಬಾದಾಮಿ ಮರಗಳಾಗಿವೆ. ಹಿಂದೆ ಇವೆಲ್ಲವನ್ನೂ ಅರಣ್ಯ ಇಲಾಖೆಯಿಂದಲೇ ನೆಡಲಾಗಿತ್ತು. ಈಗ ಅದೇ ಇಲಾಖೆ ಮರಗಳ ಹನನಕ್ಕೆ ಅನುಮತಿ ನೀಡಿದೆ. ಮುಂದಕ್ಕೆ ರಸ್ತೆ ಕಾಮಗಾರಿ ಮುಗಿದ ಬಳಿಕ ಮತ್ತೆ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡಲಾಗುತ್ತದೆ. ಆ ಸಂದರ್ಭದಲ್ಲಾದರೂ ನೆಟ್ಟ ಗಿಡಗಳು ಮರಗಳಾಗಿ ಶಾಶ್ವತವಾಗಿ ಇರಬೇಕಾದರೆ ಸಾಕಷ್ಟು ದೂರದೃಷ್ಟಿ ಅಗತ್ಯ. ಅದಲ್ಲದೆ ಈಗಾಗಲೇ ನಾಟೆಕಲ್ ರಸ್ತೆ ಬದಿ ನೆಟ್ಟ ಗಿಡಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಿದೆ. ಯಾಕೆಂದರೆ ಈ ರಸ್ತೆಗಳೂ ಕೆಲವೇ ವರ್ಷಗಳಲ್ಲಿ ಅಗಲೀಕರಣ ಆಗಲಿದೆ.

    ರಸ್ತೆ ಅಗಲೀಕರಣಕ್ಕಾಗಿ ಮರ ಕಡಿಯುವ ಸಂಬಂಧ ಸರ್ಕಾರ ಅನುಮತಿ ನೀಡಿದೆ. ಅದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ದಂಡವನ್ನೂ ಪಾವತಿಸಬೇಕಾಗುತ್ತದೆ. ಒಂದು ಮರದ ಬದಲಿಗೆ ಎರಡು ಗಿಡಗಳನ್ನು ನೆಡುವುದು ಇದ್ದೇ ಇರುತ್ತದೆ. ಅದರ ಜತೆ ಬೆಳವಣಿಗೆಗೂ ಇಲಾಖೆ ಆದ್ಯತೆ ನೀಡಲಿದೆ.

    ಮಹಾಬಲ ಡಿ.ಎಸ್., ಕೋಟೆಕಾರ್ ಶಾಖಾ ಅರಣ್ಯಾಧಿಕಾರಿ

    ಅಭಿವೃದ್ಧಿಗೆ ತಕ್ಕಂತೆ ರಸ್ತೆ ಅಗಲೀಕರಣ ಅನಿವಾರ್ಯವಾದರೂ ಅದಕ್ಕಾಗಿ ಮರಗಳನ್ನು ಕಡಿಯಲೇಬೇಕೆಂದಿಲ್ಲ, ಮಂಗಳೂರಿನಲ್ಲೇ ಸ್ಥಳಾಂತರ ಪ್ರಕ್ರಿಯೆ ನಡೆದು ಮರಗಳನ್ನು ಉಳಿಸಲಾಗಿದೆ. ಅದೇ ರೀತಿ ಮಂಗಳೂರಿನಲ್ಲಿ ವೃತ್ತಗಳನ್ನು ತೆರವುಗೊಳಿಸುತ್ತಿದ್ದರೆ, ಇಲ್ಲಿ ನಿರ್ಮಿಸುವ ಮೂಲಕ ಕಾಮಗಾರಿ ಅವೈಜ್ಞಾನಿಕ ಎನಿಸಿದೆ.

    ಮಹಮ್ಮದ್ ಅಸ್ಗರ್ ಸಾಂಬಾರ್‌ತೋಟ, ವಕೀಲ

    ಅಭಿವೃದ್ಧಿ, ಕಾಮಗಾರಿ ಸಂದರ್ಭ ಮರಗಳನ್ನು ಕಡಿಯುವುದು ಅನಿವಾರ್ಯ ಎನಿಸಿದರೂ ಸಾಧ್ಯವಾದಷ್ಟು ಉಳಿಸುವ ಪ್ರಯತ್ನ ನಡೆಯಬೇಕು. ಒಂದು ಮರ ದೊಡ್ಡದಾಗಲು ಅದೆಷ್ಟೋ ವರ್ಷಗಳು ಬೇಕಾಗುವುದರಿಂದ ಕಡಿದ ಮರಗಳಿಗೆ ಬದಲು ಗಿಡಗಳನ್ನು ನೆಟ್ಟರೂ ಅದರ ಬೆಳವಣಿಗೆಗೆ ಸಾಕಷ್ಟು ವರ್ಷಗಳು ಬೇಕಾಗುತ್ತದೆ.

    ಶೇಖರ್ ಬಾಳೆಪುಣಿ, ಸಸ್ಯ ಪ್ರೇಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts