More

    ಭಾರತ ಟಿ20 ತಂಡದ ಉಪನಾಯಕತ್ವಕ್ಕೆ ತ್ರಿಕೋನ ಸ್ಪರ್ಧೆ!

    ನವದೆಹಲಿ: ವಿರಾಟ್ ಕೊಹ್ಲಿ ಮುಂಬರುವ ವಿಶ್ವಕಪ್ ನಂತರ ಭಾರತ ಟಿ20 ತಂಡದ ನಾಯಕತ್ವ ತ್ಯಜಿಸಲು ನಿರ್ಧರಿಸಿರುವ ಬೆನ್ನಲ್ಲೇ ರೋಹಿತ್ ಶರ್ಮ ಮುಂದಿನ ನಾಯಕರಾಗುವುದು ಬಹುತೇಕ ಖಚಿತವೆನಿಸಿದೆ. ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ ಎನ್ನುವಷ್ಟರ ಮಟ್ಟಿಗೆ ರೋಹಿತ್‌ಗೆ ಪಟ್ಟ ನಿಶ್ಚಿತವಾಗಿದೆ. ಆದರೆ ರೋಹಿತ್ ನಾಯಕರಾಗಿ ಬಡ್ತಿ ಪಡೆದಾಗ ಅವರಿಂದ ತೆರವಾಗುವ ಟಿ20 ತಂಡದ ಉಪನಾಯಕ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಈ ಹುದ್ದೆಗೆ ಮೂವರು ಆಟಗಾರರು ಪೈಪೋಟಿಯಲ್ಲಿದ್ದಾರೆ ಎನ್ನಲಾಗಿದೆ.

    ಈಗಾಗಲೆ ಮಾಜಿ ನಾಯಕ ಸುನೀಲ್ ಗಾವಸ್ಕರ್ ಬೆಂಬಲವನ್ನೂ ಪಡೆದುಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್, ಉಪನಾಯಕ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಅಭ್ಯರ್ಥಿಯಾಗಿದ್ದಾರೆ. ಐಪಿಎಲ್‌ನಲ್ಲಿ ಕಳೆದೆರಡು ಆವೃತ್ತಿಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬಂದಿರುವ ರಾಹುಲ್, ಉತ್ತಮ ನಾಯಕತ್ವ ಗುಣವನ್ನೂ ಪ್ರದರ್ಶಿಸಿದ್ದಾರೆ. ನಾಯಕತ್ವ ಅವರ ಬ್ಯಾಟಿಂಗ್ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರಿರುವುದು ಕೂಡ ಕಾಣಿಸಿದೆ. ಇದಲ್ಲದೆ ಈ ಹಿಂದೆ ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಯಿಂದ ಕೊಹ್ಲಿ ವಿಶ್ರಾಂತಿ ಪಡೆದಾಗ ಮತ್ತು ಆಸ್ಟ್ರೇಲಿಯಾ ಪ್ರವಾಸದ ಸೀಮಿತ ಓವರ್ ಸರಣಿಗೆ ರೋಹಿತ್ ಅಲಭ್ಯರಾದಾಗ ರಾಹುಲ್ ಅವರೇ ಉಪನಾಯಕರಾಗಿದ್ದರು.

    ಆದರೆ ಭವಿಷ್ಯದ ಕಡೆ ಗಮನ ಹರಿಸುವುದೇ ಆದರೆ 29 ವರ್ಷದ ಕೆಎಲ್ ರಾಹುಲ್‌ಗಿಂತ 23 ವರ್ಷದ ರಿಷಭ್ ಪಂತ್‌ಗೆ ಉಪನಾಯಕತ್ವ ವಹಿಸುವುದೇ ಸೂಕ್ತ ಎನ್ನುವ ಮಾತುಗಳೂ ಕೇಳಿಬಂದಿವೆ. ಭಾರತ ಎ, ದೆಹಲಿ ತಂಡಗಳನ್ನು ಮುನ್ನಡೆಸಿರುವ ಜತೆಗೆ, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿಯೂ ಈಗಾಗಲೆ ಸಾಕಷ್ಟು ಗಮನಸೆಳೆದಿರುವುದು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಂತ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಅವರು ಈ ಸಲ ಡೆಲ್ಲಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವಲ್ಲೂ ಯಶಸ್ವಿಯಾದರೆ ಆಗ ಭಾರತ ಟಿ20 ತಂಡದ ಉಪನಾಯಕತ್ವಕ್ಕೆ ಫೇವರಿಟ್ ಎನಿಸಲಿದ್ದಾರೆ.

    ಇನ್ನು ವೇಗಿ ಜಸ್‌ಪ್ರೀತ್ ಬುಮ್ರಾ ಹೆಸರು ಕೂಡ ಟಿ20 ತಂಡದ ಉಪನಾಯಕತ್ವಕ್ಕೆ ಕೇಳಿಬಂದಿದ್ದು, ಅವರು ಈ ರೇಸ್‌ನಲ್ಲಿ ಕರಿಗುದುರೆಯಾಗಿದ್ದಾರೆ. 27 ವರ್ಷದ ಬುಮ್ರಾಗೆ ನಾಯಕತ್ವದ ಅನುಭವ ಇಲ್ಲದಿದ್ದರೂ, ಬೌಲರ್‌ಗಳಿಗೂ ಪ್ರಾತಿನಿಧ್ಯ ನೀಡಲು ಬಯಸಿದರೆ ಅವರೇ ಬಲಿಷ್ಠ ಸ್ಪರ್ಧಿಯಾಗಿರಲಿದ್ದಾರೆ.

    ಟಿ20 ವಿಶ್ವಕಪ್ ಬಳಿಕ ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು, ಅದಕ್ಕೆ ತಂಡದ ಆಯ್ಕೆ ನಡೆದಾಗ ಟಿ20 ತಂಡದ ಹೊಸ ಉಪನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ.

    ಭದ್ರತಾ ಭೀತಿಯಿಂದಾಗಿ ಪಾಕ್ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದ ನ್ಯೂಜಿಲೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts