More

    ಸ್ವರ್ಣ ನದಿ ದ್ವೀಪದಲ್ಲಿ ಟ್ರೀಪಾರ್ಕ್, ಕಟ್ಟೆಕುದ್ರು 33 ಎಕ್ರೆ ಪ್ರದೇಶದಲ್ಲಿ ಯೋಜನೆ

    ಉಡುಪಿ: ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಸ್ವರ್ಣ ನದಿಯ ದ್ವೀಪದಲ್ಲಿ ಬೃಹತ್ ಟ್ರೀಪಾರ್ಕ್ ನಿರ್ಮಾಣವಾಗಲಿದೆ.

    ಮೂಡುತೋನ್ಸೆ ಗ್ರಾಮದ ಕಟ್ಟೆಕುದ್ರುವಿನಲ್ಲಿ 30 ಎಕ್ರೆ ಭೂಮಿಯಲ್ಲಿ ಈ ಟ್ರೀಪಾರ್ಕ್ ರೂಪುಗೊಳ್ಳಲಿದೆ. ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೆ ಹಲವು ಕುದ್ರುಗಳಿದ್ದು, ಪರಿಸರಕ್ಕೆ ಹಾನಿಯಾಗದೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಅದರಂತೆ ಟ್ರೀಪಾರ್ಕ್‌ಯೋಜನೆ ರೂಪಿಸುವ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಅಡಿಯಲ್ಲಿ, ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೆ ಬರಲಿದೆ. ಸುತ್ತಲೂ ಸ್ವರ್ಣ ನದಿ ನೀರಿನಿಂದ ಆವೃತವಾಗಿರುವ ಕಟ್ಟೆಕುದ್ರು ಅತ್ಯಂತ ಸುಂದರ ಪರಿಸರವಾಗಿದೆ. ಕಲ್ಯಾಣಪುರ ರಸ್ತೆ ಮೂಲಕ ನೇರ ಸಾಗಿ ದೋಣಿ ಮೂಲಕ ಕುದ್ರುವಿಗೆ ತೆರಳಬೇಕಿದೆ. ಸದ್ಯ ಈ ಕುದ್ರುವಿನಲ್ಲಿ ಅಕೇಶಿಯ, ತೆಂಗು, ಇನ್ನಿತರೆ ಮರ, ಗಿಡಗಂಟಿಗಳಿಂದ ಆವೃತವಾಗಿದೆ.

    2.70 ಕೋಟಿ ರೂ. ವೆಚ್ಚ: ಅರಣ್ಯ ಇಲಾಖೆ 2.70 ಕೋಟಿ ರೂ. ವೆಚ್ಚದಲ್ಲಿ ಟ್ರೀಪಾರ್ಕ್ ನಿರ್ಮಿಸುವ ಬಗ್ಗೆ ಅನುದಾನ ಮಂಜೂರಾತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸ್ಥಳೀಯ ಪಕ್ಷಿ, ಮೀನಿನ ಸಂತತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳೀಯ ಗಿಡ, ಮರಗಳಿಗೆ ಆಧ್ಯತೆ ನೀಡಿ ಬೆಳೆಸಲಾಗುತ್ತದೆ. ಟ್ರೀಪಾರ್ಕ್‌ನಲ್ಲಿ ವಾಕ್‌ವೇ, ಸಿಟ್‌ಬೆಂಚ್, ಸೆಲ್ಫಿ ಪಾಯಿಂಟ್ಸ್, ವಲಸೆ ಪಕ್ಷಿಗಳು, ವಿಶೇಷ ಮೀನುಗಳ ಬಗ್ಗೆ ಫಲಕಗಳನ್ನು ಅಳವಡಿಸಲಾಗುವುದು. ಮೂಡುತೋನ್ಸೆಯಿಂದ ಕುದ್ರುವಿಗೆ ಸ್ವಲ್ಪ ದೂರ ದೋಣಿಯಲ್ಲಿ ಪ್ರಯಾಣಿಸಬೇಕಾಗಿರುವುದರಿಂದ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ವಿಶೇಷ ಅನುಭವ ಸಿಗಲಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

    145 ಜಾತಿಯ ವಲಸೆ ಹಕ್ಕಿಗಳು: ಕುದ್ರುವಿನಲ್ಲಿ ಟ್ರೀಪಾರ್ಕ್ ಯೋಜನೆ ರೂಪಿಸುವ ಉದ್ದೇಶದಿಂದ ಕೋಸ್ಟಲ್ ಕರ್ನಾಟಕ ಬರ್ಡ್ ವಾಚರ್ಸ್ ನೆಟ್‌ವರ್ಕ್ ಸಂಸ್ಥೆ ವತಿಯಿಂದ ವಲಸೆ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಕುದ್ರುವಿಗೆ ಪ್ರತಿವಾರ 145 ಜಾತಿಯ ಪಕ್ಷಿಗಳು ವಲಸೆ ಬರುತ್ತವೆ ಎಂದು ಈ ಸಂಸ್ಥೆ ವರದಿ ನೀಡಿದೆ. ಬ್ರಾಹ್ಮಿಣಿ ಕೈಟ್, ಕೋರ್ನೊಮಂಟ್ಸ್, ಸ್ಯಾಂಡ್‌ಪ್ಲೋರ್, ಕೆಂಟಿಶ್‌ಪ್ಲೋರ್, ಲೆಸ್ಸೆರ್ ಕ್ರಿಸ್ಟಡ್‌ಟರ್ನ್‌ನಂತ ವಿಶೇಷ ಪಕ್ಷಿಗಳನ್ನು ಇಲ್ಲಿ ಕಾಣಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕಟ್ಟೆಕುದ್ರು ದ್ವೀಪದಲ್ಲಿ ಟ್ರೀಪಾರ್ಕ್ ಯೋಜನೆಗೆ ವಿರೋಧವಿಲ್ಲ. ಅಲ್ಲಿರುವ ಅಕೇಶಿಯ ಮರಗಳನ್ನು ಉಳಿಸಿಕೊಂಡು ಟ್ರೀಪಾರ್ಕ್ ಮಾಡುವುದು ಬೇಡ. ಕೂಡಲೇ ಅಕೇಶಿಯ ಮರಗಳನ್ನು ತೆರವುಗೊಳಿಸಬೇಕು. ಪ್ರಾಕೃತಿಕವಾದ ಗಿಡ, ಮರಗಳನ್ನು ಬೆಳೆಸಬೇಕು. ಈ ಯೋಜನೆ ಸ್ಥಳೀಯರಿಗೆ ಉಪಯೋಗವಾಗುವಂತೆ ರೂಪಿಸಬೇಕು.
    -ಜನಾರ್ದನ್ ತೋನ್ಸೆ, ಜಿಲ್ಲಾ ಪಂಚಾಯಿತಿ ಸದಸ್ಯ

    ಕಟ್ಟೆಕುದ್ರುವಿನಲ್ಲಿ ಟ್ರೀಪಾರ್ಕ್ ಯೋಜನೆ ರೂಪಿಸುವ ನಿಟ್ಟಿನಲ್ಲಿ 2.70 ಕೋಟಿ ರೂ. ಅನುದಾನ ಮಂಜೂರಾತಿ, ಪ್ರಸ್ತಾವನೆಯನ್ನು ಇಲಾಖೆ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತ ತಕ್ಷಣ ಟ್ರೀಪಾರ್ಕ್ ನಿರ್ಮಾಣಕ್ಕೆ ತಯಾರಿ ನಡೆಸಲಾಗುವುದು. ಅಕೇಶಿಯ ಮರ ತೆರವುಗೊಳಿಸುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
    -ಆಶಿಶ್ ರೆಡ್ಡಿ, ಕುಂದಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts