More

    ರಚನೆಯಾಗದ ವೃಕ್ಷ ಪ್ರಾಧಿಕಾರ

    ಭರತ್ ಶೆಟ್ಟಿಗಾರ್ ಮಂಗಳೂರು

    ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಮರಗಳ ರಕ್ಷಣೆಗಾಗಿ ಜಾರಿಗೆ ತಂದ ‘ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976’ಕ್ಕೆ 44 ವರ್ಷ ಕಳೆದರೂ ‘ವೃಕ್ಷ ಪ್ರಾಧಿಕಾರ’ ಅಸ್ತಿತ್ವಕ್ಕೆ ಬಂದಿಲ್ಲ.
    ಈ ಕಾಯ್ದೆ ಪ್ರಕಾರ ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ವೃಕ್ಷ ಪ್ರಾಧಿಕಾರ ರಚಿಸಬೇಕು. ಮರಗಳ ರಕ್ಷಣೆ ಮತ್ತು ಜಾಗೃತಿಗಾಗಿ ಹಲವು ನಿಯಮಗಳನ್ನು ಕಾಯ್ದೆಯಲ್ಲಿ ರೂಪಿಸಲಾಗಿದೆ. 2014ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅದರಲ್ಲಿಯೂ ನಿಯಮಾವಳಿಗಳನ್ನು ಮುಂದುವರಿಸಲಾಗಿದೆ.
    ಅಭಿವೃದ್ಧಿ ಹಾಗೂ ಸಮಸ್ಯೆ ಹೆಸರಿನಲ್ಲಿ ಇಂದು ಎಲ್ಲೆಡೆ ಮರಗಳಿಗೆ ಕೊಡಲಿಯೇಟು ಬೀಳುತ್ತಿದೆ. ಮರ ತೆರವಿಗೆ ಸಂಬಂಧಿಸಿ ಅರಣ್ಯ ಇಲಾಖೆಗೆ ದಿನವೊಂದಕ್ಕೆ ಕನಿಷ್ಠ 50 ಅರ್ಜಿಗಳು ಬರುತ್ತವೆ. 50ಕ್ಕಿಂತ ಹೆಚ್ಚು ಮರ ಕಡಿಯಬೇಕಿದ್ದರೆ ವೃಕ್ಷ ಪ್ರಾಧಿಕಾರದ ಅನುಮತಿ ಕಡ್ಡಾಯ. ಆದರೆ ಪ್ರಸ್ತುತ ಪ್ರಾಧಿಕಾರ ರಚನೆಯಾಗದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೇ ಈ ಅರ್ಜಿ ವಿಲೇವಾರಿ ಮಾಡುತ್ತಿದ್ದಾರೆ. ಅಧಿಕಾರಿಗಳು ಒಂದಷ್ಟು ಮೊತ್ತ ಪಡೆದು ಮರಗಳನ್ನು ಕಡಿಯಲು ಅನುಮತಿ ನೀಡುತ್ತಾರೆ. ಆ ಹಣ ಪರ್ಯಾಯ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ವ್ಯಯವಾಗುತ್ತಿಲ್ಲ. ಪ್ರಾಧಿಕಾರ ರಚನೆಯಾದರೆ ಕಾರಣವಿಲ್ಲದೆ ಮರ ಕಡಿಯುವುದಕ್ಕೆ ಕಡಿವಾಣ ಬೀಳಲಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

    ಸ್ವರೂಪ ಹೇಗೆ?
    ನಗರ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಪಿಡಬ್ಲುಡಿ ಅಧೀಕ್ಷಕ ಇಂಜಿನಿಯರ್, ನಗರ ಸ್ಥಳೀಯ ಸಂಸ್ಥೆಯ ಆಯುಕ್ತ ಮತ್ತು ಓರ್ವ ಸಸ್ಯಶಾಸ್ತ್ರಜ್ಞ ಅಥವಾ ಪರಿಸರ ಶಾಸ್ತ್ರಜ್ಞ ಸದಸ್ಯರಾಗಿರುತ್ತಾರೆ. ಜತೆಗೆ ಸರ್ಕಾರೇತರ ಸಂಘಟನೆಗಳ ಮೂವರು ಪ್ರತಿನಿಧಿಗಳು ಇರುತ್ತಾರೆ. ಗ್ರಾಮೀಣ ವ್ಯಾಪ್ತಿಯಲ್ಲಿಯೂ ಸಿಸಿಎಫ್ ಅಧ್ಯಕ್ಷರಾಗಿದ್ದು, ಜಿಲ್ಲಾಧಿಕಾರಿ ಅಥವಾ ಅಥವಾ ಅವರಿಂದ ನೇಮಿಸಲ್ಪಟ್ಟ ಸಹಾಯಕ ಆಯುಕ್ತ ದರ್ಜೆ ಹೊಂದಿರುವ ಅಧಿಕಾರಿ, ವ್ಯಾಪ್ತಿಯ ಪಿಡಬ್ಲುಡಿ ಅಧೀಕ್ಷಕ ಇಂಜಿನಿಯರ್ ಮತ್ತು ಇಬ್ಬರು ಅಧಿಕಾರಿಯೇತರ ಸದಸ್ಯರು- ಪರಿಸರ ಸಂರಕ್ಷಣೆಗೆ ಸಂಬಂಧಿಸಿ ಸರ್ಕಾರದಿಂದ ನೇಮಿಸಲ್ಪಟ್ಟವರು. ತನ್ನ ವ್ಯಾಪ್ತಿಯಲ್ಲಿ ವೃಕ್ಷ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಜವಾಬ್ದಾರಿ ಪ್ರಾಧಿಕಾರ ಮೇಲಿದ್ದು, ಮರಗಳನ್ನು ಸಂರಕ್ಷಿಸುವುದು, ಮರಗಳ ಗಣತಿ, ಗಿಡಗಳನ್ನು ನೆಟ್ಟು ಪೋಷಿಸುವುದು ಮುಖ್ಯವಾಗಿದೆ.

    ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಸಂಬಧಿಸಿ ವೃಕ್ಷ ಪ್ರಾಧಿಕಾರ ರಚಿಸಿ, ಪದಾಧಿಕಾರಿಗಳ ಪಟ್ಟಿಯನ್ನು ಎರಡೆರಡು ಬಾರಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದಿಂದ ಈ ಕುರಿತು ಅಧಿಸೂಚನೆ ಬಂದಿಲ್ಲ. ಸರ್ಕಾರದಿಂದ ಅಂಕಿತ ಬಿದ್ದ ತಕ್ಷಣ ಪ್ರಾಧಿಕಾರ ಕಾರ್ಯಾರಂಭಿಸಲಿದೆ.
    – ಡಾ.ವಿ.ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ

    ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಮರಗಳನ್ನು ಕಡಿಯುವ ಪ್ರಸ್ತಾಪ ಬಂದಾಗಲೇ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ವೃಕ್ಷ ಪ್ರಾಧಿಕಾರ ರಚಿಸುವಂತೆ ಮನವಿ ಸಲ್ಲಿಸಿದ್ದೆವು. ಆದರೆ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ. ಹೆಸರಿಗೆ ಮಾತ್ರ ಪ್ರಾಧಿಕಾರ ರಚಿಸದೆ, ನೈಜ ಪರಿಸರಾಸಕ್ತರನ್ನು ಒಳಗೊಂಡಂತೆ ಪ್ರಕೃತಿ ಸಂರಕ್ಷಣೆಗೆ ಪೂರಕವಾದ ಸಮಿತಿ ರಚಿಸಬೇಕು.
    – ಶಶಿಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts