ಮೊಳಕಾಲ್ಮೂರು: ತಾಲೂಕು ಆಸ್ಪತ್ರೆಯಲ್ಲಿ ಜನರೇಟರ್ ದುರಸ್ತಿ ಪಡಿಸದೆ, ವಿದ್ಯುತ್ ವ್ಯತ್ಯಯ ಉಂಟಾಗಿ ಮುಂಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಿರುವ ವಿಚಾರವಾಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಶಾಸಕರು, ಇದು ಆಡಳಿತ ನಿರ್ಲಕ್ಷೃ ಅಲ್ಲದೆ, ಮತ್ತೇನು ಎಂದು ಶಾಸಕರು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ವಿಡಿಯೋ ಮಾಡಿದ್ದು, ಅದು ವೈರಲ್ ಆಗಿದ್ದು ಹೇಗೆ ಎಂದು ಡಾ.ಸುರೇಂದ್ರಬಾಬು ಅವರನ್ನು ಪ್ರಶ್ನಿಸಿದರು.
ಮೇಣದ ಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇಡೀ ರಾತ್ರಿ ರೋಗಿಗಳು ಮೊಬೈಲ್ ಟಾರ್ಚ್ನಲ್ಲಿ ಕಾಲ ಕಳೆದಿದ್ದರು. ಈ ಕುರಿತು ಬಿಜೆಪಿ ಕರ್ನಾಟಕ ಫೇಸ್ಬುಕ್ ಪೇಜ್ನಲ್ಲಿ ಕತ್ತಲಿನಲ್ಲಿ ಚಿಕಿತ್ಸೆಯೆಂದು ಪೋಸ್ಟ್ ಮಾಡಿದ್ದರು.
ಸರ್ಕಾರದ ವಿರುದ್ಧ ವಾಗ್ದಾಳಿ ಹಿನ್ನಲೆಯಲ್ಲಿ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ವಿಡಿಯೋ ವೈರಲ್ ಕುರಿತು ನನಗೆ ಗೊತ್ತಿಲ್ಲವೆಂದ ಡಾ.ಸುರೇಂದ್ರಬಾಬುಗೆ ಸ್ವಾಮಿ ನಮಸ್ಕಾರ ಎಂದು ಶಾಸಕರು ಕೈ ಮುಗಿದರು.
ನನಗೆ ನಿಮ್ಮ ಕುರಿತು ಎಲ್ಲವೂ ಗೊತ್ತಿದೆ. ತನಿಖೆಯಾಗಲಿ ಎಂದು ಶಾಸಕರು ಕೆಂಡಾಮಂಡಲವಾದರು. ಬೆಂಬಲಿಗರು ಮತ್ತು ವೈದ್ಯರ ನಡುವೆಯೂ ಕೆಲಕಾಲ ಮಾತಿನ ಚಕಮಕಿ ನಡೆಯಿತು.