More

    ಕೊಪ್ಪದಲ್ಲೇ 50 ಹಾಸಿಗೆಗಳುಳ್ಳ ಕರೊನಾ ಆಸ್ಪತ್ರೆ ನಿರ್ಮಾಣ

    ಕೊಪ್ಪ: ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಗಳುಳ್ಳ ಕರೊನಾ ಆಸ್ಪತ್ರೆ ನಿರ್ವಿುಸಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಮಹೇಂದ್ರ ಕಿರೀಟಿ ತಿಳಿಸಿದ್ದಾರೆ.

    ಸೋಮವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಕರೊನಾಕ್ಕೆ ಮೀಸಲಿಡಲಾಗುವುದು. 30 ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಸಲಾಗುವುದು. ಈ ಆಸ್ಪತ್ರೆಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

    ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ಜೂ.28ರಂದು ಹೊರರಾಜ್ಯದಿಂದ ಬಂದವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಕೊಪ್ಪದಲ್ಲಿ ಕ್ವಾರಂಟೈನ್​ನಲ್ಲಿದ್ದ 17 ಜನರಲ್ಲಿ ಕರೊನಾ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿದೆ. ಸೋಂಕು ಹೇಗೆ ಬರುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ ಎಂದು ತಿಳಿಸಿದರು.

    ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರ್ ಮಾತನಾಡಿ, 94ಸಿ ಹಕ್ಕುಪತ್ರ ವಿತರಿಸಲು ವಿಳಂಬವಾಗುತ್ತಿದೆ. ಕಳೆದ ಬಾರಿ ಸ್ಥಿರೀಕರಣವಾದ 53 ಅರ್ಜಿಗಳಿಗೆ ಇನ್ನೂ ಸಾಗುವಾಳಿ ಚೀಟಿ ನೀಡಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕಿಯಿಸಿದ ಶಿರಸ್ತೇದಾರ್ ಶೇಷಮೂರ್ತಿ, 94ಸಿ ಹಕ್ಕುಪತ್ರ ವಿತರಿಸಲಾಗುತ್ತಿದೆ. ಗೋಮಾಳ ಜಾಗದಲ್ಲಿ ಸೆಕ್ಷನ್ 4 ಇರುವ ಪ್ರದೇಶಗಳಿಗೆ ಹಕ್ಕುಪತ್ರ ನೀಡಲಾಗುತ್ತಿಲ್ಲ. ಸೊಪ್ಪಿನ ಬೆಟ್ಟದಲ್ಲಿ ವಾಸವಿರುವವರಿಗೆ ಹಕ್ಕುಪತ್ರ ನೀಡಲು ಅವಕಾಶವಿಲ್ಲ. ಸ್ಥಿರೀಕರಣವಾದ 53 ಅರ್ಜಿಗಳಿಗೆ ಶೀಘ್ರ ಹಕ್ಕುಪತ್ರ ನೀಡುವಂತೆ ತಿಳಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts