More

    ನಿಧಿಗಾಗಿ ಕಲ್ಲುಗುಂಡಿಯಲ್ಲಿ ಪ್ರಾಣಿಬಲಿ, ವಾಮಾಚಾರ

    ತೀರ್ಥಹಳ್ಳಿ: ನಿಧಿ ಮೇಲಿನ ಆಸೆಯಿಂದ ಕಿಡಿಗೇಡಿಗಳು ತಾಲೂಕಿನ ಆರಗ ಸಮೀಪದ ಕಲ್ಲುಗುಂಡಿಯಲ್ಲಿ ಪ್ರಾಣಿಬಲಿ ನೀಡಿ ವಾಮಾಚಾರ ನಡೆಸಿದ್ದಲ್ಲದೇ ಮಾಸ್ತಿ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ.

    ಕರ್ನಾಟಕ ಇತಿಹಾಸ ಅಕಾಡೆಮಿಯಿಂದ ಕಳೆದ ವರ್ಷ ಐತಿಹಾಸಿಕ ಸ್ಮಾರಕ ಸಂರಕ್ಷಣೆಗೆ ಸ್ಥಳೀಯ ಇತಿಹಾಸ ತಜ್ಞರಾದ ರಾಘವೇಂದ್ರ, ಸತ್ಯನಾರಾಯಣ,ರವಿ ಕಲ್ಗುಂಡಿ ಷಣ್ಮುಖ ಇತರರ ಪ್ರಯತ್ನದಲ್ಲಿ ಈ ಭಾಗದಲ್ಲಿ ಅಲ್ಲಲ್ಲಿ ಇದ್ದ ಇಂಥ ಸ್ಮಾರಕಗಳನ್ನು ಒಟ್ಟುಗೂಡಿಸಿ ಕಲ್ಲುಗುಂಡಿಯಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಲಾಗಿತ್ತು.

    ಈ ಜಾಗದಲ್ಲಿ ನಿಧಿ ಇದೆ ಎಂಬ ಶಂಕೆಯಿಂದ ದುಷ್ಕರ್ವಿುಗಳು ಆಳವಾದ ಗುಂಡಿ ತೋಡಿ ಮಾಸ್ತಿಕಲ್ಲುಗಳನ್ನು ಕಿತ್ತು ಎಲ್ಲೆಂದರಲ್ಲಿ ಎಸೆದಿದ್ದಾರೆ. ಇವುಗಳನ್ನು ಕೀಳುವ ಯತ್ನದಲ್ಲಿ ಕೆಲವೊಂದು ಕಲ್ಲುಗಳು ಭಿನ್ನವಾಗಿವೆ. ವಾಮಾಚಾರ ನಡೆಸಿರುವ ಜಾಗದಲ್ಲಿ ಕೋಳಿ ಬಲಿ ನೀಡಲಾಗಿದ್ದು, ಸ್ಥಳದಲ್ಲಿ ಲಿಂಬೆಹಣ್ಣು ಕುಂಕುಮ ಮುಂತಾದ ವಸ್ತುಗಳನ್ನು ಹಾಕಲಾಗಿದೆ. ಈ ಪ್ರದೇಶದ ಆಸುಪಾಸಿನಲ್ಲಿ ಇಂತಹ ಪ್ರಯತ್ನ ನಡೆಯುತ್ತಲೇ ಇದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಎರಡು ದಿನಗಳ ಹಿಂದೆ ನಡೆದಿರುವ ಕೃತ್ಯದಲ್ಲಿ ಸ್ಥಳೀಯರ ಸಹಕಾರ ಇರುವ ಸಾಧ್ಯತೆಯೂ ಇರಬಹುದು ಎಂದು ಶಂಕಿಸಲಾಗಿದೆ.

    ಉತ್ಖನನ ಮೂಲಕ ರಕ್ಷಣೆ ಅಗತ್ಯ: ಕಲ್ಲುಗುಂಡಿ ಹಾಗೂ ಸಮೀಪದ ಕಬ್ಗಲ್ ಗ್ರಾಮದಲ್ಲಿ ಇಂತಹ ಹಲವಾರು ವೀರಗಲ್ಲು ಶಾಸನ ಮುಂತಾದ ಪ್ರಾಚೀನ ಶಿಲಾಶಾಸನಗಳು ಮಣ್ಣಿನಲ್ಲಿ ಹೂತು ಹೋಗಿದ್ದು ಉತ್ಖನನದ ಮೂಲಕ ಅವುಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ಇತಿಹಾಸಕ್ತ ಜಿ.ವಿ.ಸತ್ಯನಾರಾಯಣ ಹೇಳುತ್ತಾರೆ.

    ಆರಗ ಹಾಗೂ ಸುತ್ತಲಿನ ಪ್ರದೇಶ ಇತಿಹಾಸ ಪ್ರಸಿದ್ದವಾದ ಸ್ಥಳವಾಗಿದ್ದು ಹಲವಾರು ಪುರಾತನ ದೇವಾಲಯ ಸ್ಮಾರಕಗಳನ್ನು ಇಂದಿಗೂ ಕಾಣಬಹುದು. ವಿಜಯನಗರ ಸಾಮ್ರಾಜ್ಯ ಆಡಳಿತ ಕಾಲದ ಸಂಬಂಧವನ್ನು ಕೂಡ ಹೊಂದಿತ್ತು ಎಂಬುದಕ್ಕೆ ಇತಿಹಾಸದಲ್ಲೂ ಆಧಾರವಿದೆ. ಇದೇ ಪರಿಸರದಲ್ಲಿರುವ ವಿಠಲನಗುಂಡಿಯಲ್ಲಿ ದಾಸಶ್ರೇಷ್ಠರಾದ ಪುರಂದರದಾಸರು ಜನ್ಮ ತಾಳಿದ್ದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಹಂಪಿ ವಿವಿ ಮಟ್ಟದಲ್ಲಿ ಸಂಶೋಧನೆ ಕೈಗೊಳ್ಳುವ ಸಿದ್ಧತೆ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts