More

    ವೈದ್ಯ ಪದವಿ ಕನಸು ಹೊತ್ತು ಯೂಕ್ರೇನ್​ನತ್ತ ಪಯಣ

    |ರಮೇಶ ದೊಡ್ಡಪುರ ಬೆಂಗಳೂರು

    ಜನಸಾಮಾನ್ಯರ ಜೀವ ಉಳಿಸುವ ಸೈನ್ಯವೆಂದೇ ಪರಿಗಣಿತವಾದ ವೈದ್ಯವೃತ್ತಿ ಕೈಗೊಳ್ಳಲು ಅಗತ್ಯವಾದ ಶಿಕ್ಷಣವು ಕರ್ನಾಟಕದಲ್ಲಿ ಹಾಗೂ ಒಟ್ಟಾರೆ ಭಾರತದಲ್ಲಿ ಬಡ ಹಾಗೂ ಮಧ್ಯಮ ವರ್ಗಕ್ಕೆ ಮರೀಚಿಕೆ ಎಂಬ ಕಹಿಸತ್ಯವನ್ನು ಇದೀಗ ನಡೆಯುತ್ತಿರುವ ರಷ್ಯಾ-ಯೂಕ್ರೇನ್ ಯುದ್ಧ ಮತ್ತೊಮ್ಮೆ ಬಹಿರಂಗಗೊಳಿಸಿದೆ. ವೈದ್ಯರಾಗುವ ಕನಸಿನ ನನಸಿಗಾಗಿ 5,200 ಕಿ.ಮೀ. ದೂರದ ಯೂಕ್ರೇನಿಗೆ ವಿದ್ಯಾರ್ಥಿಗಳು ತೆರಳುತ್ತಿರುವುದು ಇದಕ್ಕೆ ಸಾಕ್ಷಿ.

    ಯೂಕ್ರೇನ್ ಸೇರಿ ಪ್ರಸಿದ್ಧವಲ್ಲದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಭಾರತದಲ್ಲಿ ವೈದ್ಯವೃತ್ತಿ ಕೈಗೊಳ್ಳಲು ಎಫ್​ಎಂಜಿಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆಂಬ ನಿಯಮವಿದೆ. ಸರ್ಕಾರಿ ಹಾಗೂ ಖಾಸಗಿ ಸೇರಿ ದೇಶದಲ್ಲಿ ಎಂಬಿಬಿಎಸ್ ಶಿಕ್ಷಣ ನೀಡಲು 595 ಸಂಸ್ಥೆಗಳಿದ್ದು, ಅಂದಾಜು 83 ಸಾವಿರ ಸೀಟುಗಳಿವೆ. ಕರ್ನಾಟಕದಲ್ಲಿ 19 ಸರ್ಕಾರಿ, 30 ಖಾಸಗಿ ಮತ್ತು 12 ಡೀಮ್್ಡ ವಿವಿಗಳಿವೆ. ಇವುಗಳಲ್ಲಿ 2,900 ಸರ್ಕಾರಿ, 6,595 ಖಾಸಗಿ ಸೇರಿ ಒಟ್ಟು 9,345 ಎಂಬಿಬಿಎಸ್ ಸೀಟುಗಳಿವೆ. ದೇಶದಲ್ಲಿ ಲಭ್ಯವಿರುವ ಅಂದಾಜು 83 ಸಾವಿರ ಸೀಟುಗಳಿಗೆ 15-16 ಲಕ್ಷ ಆಕಾಂಕ್ಷಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ.

    ಅದೇ ರೀತಿ ಕರ್ನಾಟಕದ 9,345 ಸೀಟುಗಳಿಗೆ ದಾಖಲಾಗಲು 1 ಲಕ್ಷಕ್ಕಿಂತ ಹೆಚ್ಚಿನ ಆಕಾಂಕ್ಷಿಗಳಿರುತ್ತಾರೆ. ಇಷ್ಟು ಸ್ಪರ್ಧಾತ್ಮಕತೆಯಲ್ಲಿ ಉನ್ನತ ರ‍್ಯಾಂಕಿಂಗ್ ಪಡೆದವರಿಗೆ ಮಾತ್ರವೇ ಸರ್ಕಾರಿ ಕಾಲೇಜುಗಳಲ್ಲಿ ಸೀಟು ಸಿಗುತ್ತವೆ. ಇನ್ನು ಕೆಲವರು ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಲ್ಲಿ ಸೀಟು ಗಳಿಸಿ ಶೈಕ್ಷಣಿಕ ಸಾಲ ಪಡೆದು ಶಿಕ್ಷಣ ಪೂರೈಸುತ್ತಾರೆ. ಹಣವುಳ್ಳವರು ಮಾತ್ರ ಮ್ಯಾನೇಜ್​ವೆುಂಟ್ ಸೀಟು ಪಡೆಯುತ್ತಾರೆ, ಉಳಿದವರು ಯೂಕ್ರೇನ್​ನಂತಹ ದೇಶಗಳತ್ತ ಮುಖ ಮಾಡುತ್ತಾರೆ. ಯೂಕ್ರೇನ್​ನಲ್ಲಿ ಎಂಬಿಬಿಎಸ್ ವ್ಯಾಸಂಗಕ್ಕೆ ಹೆಚ್ಚಿನ ನಿರ್ಬಂಧಗಳಿಲ್ಲ. ಭಾರತದಲ್ಲಿ ನೀಟ್ ಪರೀಕ್ಷೆಗೆ ಅರ್ಹತೆ ಇದ್ದರೂ ಅಲ್ಲಿ ಕೋರ್ಸಿಗೆ ದಾಖಲಾಗಬಹುದು.

    ಯಾರಿಗೆ ಅನುಮತಿ: ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಎಂಬಿಬಿಎಸ್ ಪದವಿ ಪಡೆದವರಲ್ಲಿ ಎರಡು ವರ್ಗವನ್ನಾಗಿ ವಿಂಗಡಣೆ ಮಾಡಲಾಗಿದೆ. ಇವುಗಳಲ್ಲಿ, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಬ್ರಿಟನ್ ಹಾಗೂ ಅಮೆರಿಕ ಮೊದಲ ಗುಂಪಿನಲ್ಲಿವೆ. ಈ ದೇಶಗಳಲ್ಲಿ ಎಂಬಿಬಿಎಸ್ ಪಡೆದರೆ ಭಾರತದ ಯಾವುದೇ ಸಂಸ್ಥೆಯಲ್ಲಿ ನೇರವಾಗಿ ವೈದ್ಯವೃತ್ತಿ ಮಾಡಬಹುದು. ಎರಡನೇ ಗುಂಪು, ಯೂಕ್ರೇನ್ ಸೇರಿ ಹಿಂದಿನ ಸೋವಿಯೆತ್ ಒಕ್ಕೂಟದ ಭಾಗವಾಗಿದ್ದ ದೇಶಗಳು, ಪೂರ್ವ ಐರೋಪ್ಯ ದೇಶಗಳು, ಚೀನಾ, ನೇಪಾಳ, ಫಿಲಿಪ್ಪೀನ್ಸ್ ಹಾಗೂ ಕೆರೆಬಿಯನ್ ದೇಶಗಳಿವೆ. ಈ ದೇಶಗಳಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದವರು ಭಾರತೀಯ ವೈದ್ಯಕೀಯ ಪರಿಷತ್ತು(ಎಂಸಿಐ)ನಡೆಸುವ ಫಾರಿನ್ ಮೆಡಿಕಲ್ ಗ್ರಾಜುಯೇಟ್ಸ್ ಎಕ್ಸಾಮಿನೇಷನ್(ಎಫ್​ಎಂಜಿಇ) ಪರೀಕ್ಷೆ ಎದುರಿಸಬೇಕು. ಈ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ಅಂಕ ಪಡೆದು ತೇರ್ಗಡೆಯಾದರೆ ಮಾತ್ರ ಭಾರತದಲ್ಲಿ ವೈದ್ಯವೃತ್ತಿ ನಡೆಸಲು ಅನುಮತಿ ದೊರಕುತ್ತದೆ.

    ಬಡವರ ಕೈಗೆಟುಕದ ಎಂಬಿಬಿಎಸ್: ಒಟ್ಟು ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಸರ್ಕಾರಿ ಸಂಸ್ಥೆಗಳ ಸಂಖ್ಯೆ(302) ಇದ್ದು, ಖಾಸಗಿಯಲ್ಲಿ(218) ತುಸು ಕಡಿಮೆ ಇವೆ. 47 ಡೀಮ್್ಡ ವಿವಿಗಳು, 3 ಕೇಂದ್ರೀಯ ವಿವಿಗಳು ಹಾಗೂ 19 ಏಮ್ಸ್​ಗಳಲ್ಲಿ ಎಂಬಿಬಿಎಸ್ ಪದವಿ ನೀಡಲಾಗುತ್ತಿದೆ. ಕರ್ನಾಟಕದ ಸರ್ಕಾರಿ ಸಂಸ್ಥೆಗಳಲ್ಲಿ ಅಂದಾಜು ವಾರ್ಷಿಕ 1.5 ಲಕ್ಷ ರೂ. ಆಸುಪಾಸಿನಲ್ಲಿ ಶಿಕ್ಷಣ ಪೂರೈಸಬಹುದು. ನಾಲ್ಕು ವರ್ಷದ ಎಂಬಿಬಿಎಸ್ ಪೂರೈಸಲು 6-7 ಲಕ್ಷ ರೂ. ತಗಲುತ್ತದೆ. ಇನ್ನು ಸರ್ಕಾರಿ ಕೋಟಾದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಸೀಟು ಪಡೆದರೆ 45-50 ಲಕ್ಷ ರೂ. ತಗಲುತ್ತದೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ನೇರವಾಗಿ ಸೀಟು ಪಡೆಯಲು 4 ವರ್ಷಕ್ಕೆ ಒಂದು ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಬೇಕಾದ ಕಾಲೇಜುಗಳೂ ಇವೆ. ಈ ಸ್ಪರ್ಧಾತ್ಮಕತೆಯಲ್ಲಿ ಅನೇಕರು ಎಂಬಿಬಿಎಸ್ ಕನಸು ಈಡೇರಿಸಿಕೊಳ್ಳಲಾಗದೆ ಯೂಕ್ರೇನ್​ನಂತಹ ದೇಶಕ್ಕೆ ತೆರಳುತ್ತಾರೆ. ಅಂದಾಜು 19 ಸಾವಿರ ವಿದ್ಯಾರ್ಥಿಗಳು ಭಾರತದಿಂದ ವಿವಿಧ ಪದವಿ ವ್ಯಾಸಂಗಕ್ಕೆ ಯೂಕ್ರೇನ್​ಗೆ ತೆರಳಿದ್ದಾರೆ. ಎಂಬಿಬಿಎಸ್​ಗೆ ದಾಖಲಾದವರೇ ಹೆಚ್ಚು. ಇವರಲ್ಲಿ ಹರ್ಯಾಣ ಮತ್ತು ಪಂಜಾಬ್​ನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    ಕಡಿಮೆ ವೆಚ್ಚ…

    ಎಫ್​ಎಂಜಿಇ ಪರೀಕ್ಷೆಯನ್ನು ಪ್ರತಿವರ್ಷ ಜೂನ್ ಹಾಗೂ ಡಿಸೆಂಬರ್​ನಲ್ಲಿ ನಡೆಸಲಾಗುತ್ತದೆ. 2021ರ ಡಿಸೆಂಬರ್​ನಲ್ಲಿ, ಎರಡನೇ ವರ್ಗದ ದೇಶಗಳಲ್ಲಿ ಎಂಬಿಬಿಎಸ್ ಪೂರೈಸಿದ 23,691 ಪದವೀಧರರು ಪರೀಕ್ಷೆ ಎದುರಿಸಿದ್ದರು. ಆದರೆ 5,665 ಅಂದರೆ ಶೇ.23 ಜನರು ಮಾತ್ರ ತೇರ್ಗಡೆ ಹೊಂದಿದರು. ‘ಯೂಕ್ರೇನ್ ಇತ್ಯಾದಿ ದೇಶಗಳಲ್ಲಿ ಎಂಬಿಬಿಎಸ್ ಶಿಕ್ಷಣ ಗುಣಮಟ್ಟ ಅಷ್ಟು ಉತ್ತಮವಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಕ್ಷೇತ್ರದ ಪ್ರಮುಖರೊಬ್ಬರು ತಿಳಿಸಿದ್ದಾರೆ. ಆದರೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಲಭಿಸುವುದರಿಂದ ಬಡವರು, ಮಧ್ಯಮವರ್ಗದವರು ಶಿಕ್ಷಣ ಪಡೆದು ಎಫ್​ಎಂಜಿಇ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಅತ್ಯಂತ ಕಡಿಮೆ ಹಣದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ಅವಕಾಶವಂತೂ ಲಭಿಸುತ್ತದೆ.

    ಫೇಸ್​​ಬುಕ್​​ ಗೆಳತಿಗೆ ಸಿನಿಮಾ ನಟಿ ಮಾಡುವ ಆಮಿಷ: ಹಣ, ಚಿನ್ನಾಭರಣ ದೋಚಿದ್ದ ನಕಲಿ ಫೋಟೋಗ್ರಾಫರ್ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts