More

    ಪ್ರಯಾಣಿಕರಿಗೆ ತಂಗುದಾಣಗಳ ಭಯ!

    ಬೆಳಗಾವಿ: ನಗರದ ಕೇಂದ್ರೀಯ ಬಸ್ ನಿಲ್ದಾಣ ವರ್ಷಗಳಿಂದ ನಿರ್ಮಾಣಗೊಳ್ಳುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಇದಲ್ಲದೆ, ನಗರದಲ್ಲಿ ಬಸ್ ಸಂಚರಿಸುವ ಮಾರ್ಗದಲ್ಲಿ 100ಕ್ಕೂ ಅಧಿಕ ಬಸ್ ತಂಗುದಾಣಗಳಿದ್ದು, ಅವು ಪ್ರಯಾಣಿಕರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.

    ಈ ನಿಲ್ದಾಣಗಳ ಬಳಿ ರಾತ್ರಿವೇಳೆ ದೀಪವೂ ಇಲ್ಲದಾಗಿದೆ. ತಂಗುದಾಣಗಳು ಮೂಲ ಸೌಕರ್ಯದಿಂದ ವಂಚಿತವಾಗಿದ್ದು, ಪಾಳು ಕೊಂಪೆಯಂತಾಗಿದೆ. ಇಲ್ಲಿ ನಿಂತುಕೊಳ್ಳಲೂ ಪ್ರಯಾಣಿಕರು ಭಯಪಡುವಂತಾಗಿದೆ.

    ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ), ಮಹಾನಗರ ಪಾಲಿಕೆಯು ವಿವಿಧ ನಗರ ಅಭಿವೃದ್ಧಿ ಯೋಜನೆಯಡಿ ಲಕ್ಷಾಂತರ ರೂ. ಅನುದಾನ ವ್ಯಯಿಸಿ ಬಸ್ ತಂಗುದಾಣ ನಿರ್ಮಿಸಿದೆ. ಒಂದು ತಂಗುದಾಣಕ್ಕೆ ಅಂದಾಜು 2.50ರಿಂದ 3 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ, ನಿರ್ಮಾಣಗೊಂಡ ನಾಲ್ಕೈದು ತಿಂಗಳಲ್ಲಿ ಅವುಗಳು ಪಾಳು ಬಿದ್ದಿದ್ದು ಪ್ರಯಾಣಿಕರು ತಂಗುದಾಣಗಳಿಂದ ದೂರ ನಿಲ್ಲುವಂತಾಗಿದೆ.

    ಸಾರ್ವಜನಿಕರ ಅಸಮಾಧಾನ: ನಗರದಲ್ಲಿ ವಿವಿಧ ಇಲಾಖೆಗಳು ಒಂದೊಂದು ದಿಕ್ಕಿನಲ್ಲಿ ಇದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಬಸ್ ಅವಲಂಬಿಸಬೇಕಾಗಿದೆ. ಅದಕ್ಕೆ ನಗರ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ನಗರದ ಕೋಟೆ ಕೆರೆ, ಕಾಲೇಜು ರಸ್ತೆ, ಕೋರ್ಟ್ ರಸ್ತೆ, ಜಿಲ್ಲಾಸ್ಪತ್ರೆ, ಕಣಬರ್ಗಿ ರಸ್ತೆ, ಮಹಾಂತೇಶ ನಗರ ರಸ್ತೆ, ಹಳೇ ಪಿಬಿ ರಸ್ತೆಗಳಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಆದರೆ, ಈ ಬಸ್ ತಂಗುದಾಣಗಳ ಮುಂದೆ ಯಾವುದೇ ಬಸ್‌ಗಳೂ ನಿಲ್ಲುತ್ತಿಲ್ಲ. ಬಸ್ ತಂಗುದಾಣದಿಂದ 100 ಮೀಟರ್ ದೂರು ನಿಲ್ಲುತ್ತಿವೆ. ಹಾಗಾಗಿ ಪ್ರಯಾಣಿಕರು ತಂಗುದಾಣ ಬಿಟ್ಟು ರಸ್ತೆ ಮೇಲೆ ಬಂದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಧೂಮಪಾನಿಗಳ, ಕುಡುಕರ ತಾಣ!

    ನಗರದ ಹಳೇ ಪಿಬಿ ರಸ್ತೆ, ಕಾಲೇಜು ರಸ್ತೆ, ರಾಮತೀರ್ಥ ನಗರ, ಆಟೋನಗರ, ಉದ್ಯಮ ಭಾಗ, ಶಹಾಪುರ, ಅನಗೋಳ, ಟಿಳಕವಾಡಿ, ಹನುಮಾನ ನಗರ, ಎಪಿಎಂಸಿ ರಸ್ತೆ, ವಿಶ್ವೇಶ್ವರಯ್ಯ ನಗರ ಸೇರಿ ವಿವಿಧ ಕಡೆ ಕೆಲವು ಬಸ್ ತಂಗುದಾಣಗಳು ಕುಡುಕರು, ಧೂಮಪಾನಿಗಳ ವಿಶ್ರಾಂತಿ ತಾಣವಾಗಿವೆ. ಕೆಲವೆಡೆ ಜೂಜಾಟ ನಡೆಯುತ್ತವೆ ಎಂಬ ದೂರುಗಳಿವೆ. ಹೀಗಾಗಿ ಮಕ್ಕಳು ಹಾಗೂ ಮಹಿಳೆಯರು ಅತ್ತ ತೆರಳಲು ಹಿಂಜರಿಯುತ್ತಿದ್ದಾರೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಪ್ರಯಾಣಿಕರು ಬಸ್ ತಂಗುದಾಣ ಆಶ್ರಯ ಅವಶ್ಯವಾಗಿರುತ್ತದೆ. ತಂಗುದಾಣದಲ್ಲಿರುವ ಆಸನಗಳು ಮುರಿದು ಹೋಗಿವೆ. ಆಸನಗಳ ಕೆಳಗೆ ಕಲ್ಲು ಇಟ್ಟು ಜೋಡಿಸಲಾಗಿದೆ. ಇಲ್ಲಿಯ ಈ ಅವ್ಯವಸ್ಥೆ ಕಂಡು ಗಿಡ- ಮರ ಹಾಗೂ ಇತರೆ ಅಂಗಡಿ ಮುಂದೆ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

    ಬೆಳಗಾವಿ ನಗರದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿರುವ ಬಸ್ ತಂಗುದಾಣಗಳ ಅವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ ದುರಸ್ತಿ ಮಾಡಲಾಗುವುದು. ಸಾರಿಗೆ ಸಿಬ್ಬಂದಿ ಬಸ್‌ಗಳನ್ನು ತಂಗುದಾಣದ ಮುಂಭಾಗದಲ್ಲಿಯೇ ನಿಲ್ಲಿಸಬೇಕು.
    | ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts