More

    ಹೋಂ ಸ್ಟೇಗಳಲ್ಲಿ ಮಾದಕ ವಸ್ತು ಪತ್ತೆಯಾದರೆ ಮಾಲೀಕರೇ ಹೊಣೆ

    ಚಿಕ್ಕಮಗಳೂರು: ಪ್ರವಾಸಿ ತಾಣಗಳು ಹೆಚ್ಚಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾದಕ ವಸ್ತು ಜಾಲದ ಬಗ್ಗೆ ನಿಗಾ ಇಡಲಾಗಿದೆ. ಹೋಂ ಸ್ಟೇಗಳಲ್ಲಿ ಮಾದಕ ವಸ್ತು ಪತ್ತೆಯಾದರೆ ಮಾಲೀಕರನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಸಿದರು.

    ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಾನೂನು ಸುವ್ಯವಸ್ಥೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿ ಪ್ರವಾಸಿಗರು ಬಂದು ಉಳಿದುಕೊಳ್ಳುತ್ತಾರೆ. ಒಂದು ವೇಳೆ ಡ್ರಗ್ಸ್ ಇರುವ ಬಗ್ಗೆ ಅವರೇ ಮಾಹಿತಿ ನೀಡಿದಲ್ಲಿ ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

    ಡ್ರಗ್ಸ್ ಜಾಲ ಪತ್ತೆ ವಿಚಾರದಲ್ಲಿ ಪ್ರತಿ ಪೊಲೀಸ್ ಠಾಣೆಗಳದ್ದೂ ಹೊಣೆಗಾರಿಕೆ ಇದೆ. ಅದಕ್ಕೆ ಪ್ರತ್ಯೇಕ ತಂಡ ರಚನೆ ಮಾಡಿಲ್ಲ. ಬೆಂಗಳೂರು ಮಾತ್ರವಲ್ಲ ರಾಜ್ಯದ ಇತರ ಜಿಲ್ಲೆಗಳಲ್ಲೂ ಮಾದಕ ವಸ್ತುಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದರು.

    55 ಪೊಲೀಸರಿಗೆ 30 ಲಕ್ಷ ರೂ. ಪರಿಹಾರ: ಕರೊನಾ ನಿರ್ವಹಣೆಯನ್ನು ಜಿಲ್ಲೆಯ ಪೊಲೀಸರು ಉತ್ತಮವಾಗಿ ಮಾಡಿದ್ದಾರೆ. ಇತ್ತೀಚೆಗೆ ಲಾಕ್​ಡೌನ್ ಅವಧಿ ಕಳೆದ ಬಳಿಕ ಪ್ರಕರಣದ ಪ್ರಮಾಣ ಹೆಚ್ಚಿರಬಹುದು. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬ ಸಿಬ್ಬಂದಿ ಮಾತ್ರ ಸೋಂಕಿಗೆ ಒಳಗಾಗಿದ್ದಾರೆ. ಅದೇ ರಾಜ್ಯದಲ್ಲಿ 7 ಸಾವಿರ ಪೊಲೀಸರಿಗೆ ಸೋಂಕು ತಗುಲಿದ್ದು, 55 ಮಂದಿ ಸಾವಿಗೀಡಾಗಿದ್ದಾರೆ. ಕರೊನಾದಿಂದ ಮೃತಪಟ್ಟ ಪೊಲೀಸರ ಕುಟುಂಬಕ್ಕೆ ಸರ್ಕಾರ 48 ಗಂಟೆಯೊಳಗೆ 30 ಲಕ್ಷ ರೂ. ಪರಿಹಾರ ನೀಡಿದೆ ಎಂದು ಪ್ರವೀಣ್ ಸೂದ್ ಮಾಹಿತಿ ನೀಡಿದರು.

    ಕರೊನಾ ಜತೆ ಕಾರ್ಯನಿರ್ವಹಣೆ: ಪ್ರತಿಭಟನೆ, ಧರಣಿ, ಸಣ್ಣ ಕಾರ್ಯಕ್ರಮಗಳು ಇದೀಗ ಆರಂಭವಾಗಿರುವುದರಿಂದ ಪೊಲೀಸರ ಕೆಲಸ ಕರೊನಾ ಜತೆಗೇ ಸಾಗಬೇಕಿದೆ. ತಾಂತ್ರಿಕತೆ ಬಳಸಿಕೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಪ್ರವೀಣ್ ಸೂದ್ ಹೇಳಿದರು.

    ಈ ಹಿಂದೆ ಯಾವುದೇ ಪ್ರಕರಣಗಳ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಈಗ ಹಾಗಿಲ್ಲ. ಆ ಕಾರ್ಯ ವಿಡಿಯೋ ಸಂವಾದದ ಮೂಲಕ ನಡೆಯುತ್ತಿದೆ. ಸಾಕ್ಷ್ಯಾಧಾರ, ಪ್ರಮಾಣಪತ್ರ ನೀಡುವ ಕೆಲಸ ಕೂಡ ಆನ್​ಲೈನ್​ನಲ್ಲೇ ನಡೆಯುತ್ತಿದೆ ಎಂದು ತಿಳಿಸಿದರು.

    ಅಪಾಯದ ಸನ್ನಿವೇಶಗಳಲ್ಲಿ ಸಿಲುಕಿದವರು ಇಲಾಖೆ ನೆರವು ಪಡೆಯಲು ಅವಕಾಶವಿದ್ದು, ದೂರವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದರೆ ತೊಂದರೆಗೆ ಒಳಗಾದವರಿಗೆ ಪೊಲೀಸರು ನೆರವು ನೀಡಲಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts