More

    ಅಡ್ಡಾದಿಡ್ಡಿ ನಿಂತ ವಾಹನಗಳಿಗೆ ಬಿತ್ತು ದಂಡ

    ದೇವದುರ್ಗ: ಪಟ್ಟಣದ ಮಿನಿವಿಧಾನಸೌಧ ಮುಂಭಾಗ ಹಾಗೂ ಒಳ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿದ ಬೈಕ್ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ತಹಸೀಲ್ದಾರ್ ಮಧುರಾಜ್ ಯಾಳಗಿ ಸೂಚನೆ ಹಿನ್ನೆಲೆಯಲ್ಲಿ 26ಕ್ಕೂ ಹೆಚ್ಚು ವಾಹನಗಳ ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ. ಅಡ್ಡಾದಿಡ್ಡಿ ವಾಹನ ನಿಲುಗಡೆ, ನಿಯಮ ಉಲ್ಲಂಘನೆಯಿಂದ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಶನಿವಾರದ ಸಂಜೆ ಬಂದರೆ, ಸಾಕು ಮಿನಿವಿಧಾನಸೌಧ ಸೇರಿ ಈ ರಸ್ತೆಯಲ್ಲಿ ಪ್ರಮುಖ ಕಚೇರಿಗೆ ಸಂಪರ್ಕಿಸಲು ಬಂದವರು ಹೆಣಗಾಡಬೇಕು. ಪಟ್ಟಣದಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳು ಉಲ್ಲಂಘಿಸುವುದು ಮಾಮೂಲಿ ಎನ್ನುವಂತಾಗಿದೆ. ಪೊಲೀಸರು ಬೆಳಗ್ಗೆ ದಂಡ ವಸೂಲಿ ಮಾಡಿದರೂ, ಜಗ್ಗದ ಸವಾರರು ಅವರು ಹೋದ ಬಳಿಕ ಮತ್ತೆ ಮುಖ್ಯರಸ್ತೆ, ಕಚೇರಿ ಮುಂಭಾಗ ಹಾಗೂ ಆವರಣದೊಳಗೆ ನೂರಾರು ವಾಹನಗಳನ್ನು ನಿಲ್ಲಿಸುವುದು ಇಲ್ಲಿ ಸಾಮಾನ್ಯವಾಗಿದೆ.

    ಮಿನಿವಿಧಾನಸೌಧದ ಎರಡೂ ಗೇಟ್‌ಗಳ ಮುಂದೆ ಹಾಗೂ ಆವರಣದಲ್ಲಿ ನೂರಾರು ಬೈಕ್, ಐದಾರು ಕಾರುಗಳು ನಿಲ್ಲುತ್ತಿವೆ. ಇದರಿಂದ ತಹಸೀಲ್ದಾರ್ ಸೇರಿ ಅಧಿಕಾರಿಗಳು, ಸಿಬ್ಬಂದಿ ಒಳಹೋಗಲು ಕಷ್ಟಪಡಬೇಕು. ಪೊಲೀಸರು ಹಿಡಿದು ಫೈನ್ ವಿಧಿಸಿದರೆ ಕೆಲ ಸವಾರರು ಜನಪ್ರತಿನಿಧಿಗಳಿಗೆ ಫೋನ್ ಮಾಡಿ, ಅವರಿಂದ ಪೊಲೀಸರಿಗೆ ಹೇಳಿಸುವ ಪ್ರಕ್ರಿಯೆ ಶುರು ಮಾಡಿದ್ದಾರೆ. ದಂಡ ಹಾಕಲೂ ಪೊಲೀಸರು ಹಿಂದೆ-ಮುಂದೆ ನೋಡುಂತಾಗಿದೆ.

    ಸಂತೆ ದಿನ ಮಾಡಬೇಕು ಸರ್ಕಸ್
    ದೇವದುರ್ಗದ ಹಳೇ ಬಸ್ ನಿಲ್ದಾಣ ಏರಿಯಾದಲ್ಲಿ 10ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿವೆ. ಶನಿವಾರದ ಸಂತೆಗೆ ಬಂದವರು ಹೊರ ಹೋಗಲು ಸರ್ಕಸ್ ಮಾಡಿದಂತಾಗುತ್ತದೆ. ರಸ್ತೆ ಮೇಲೆ ಸಂತೆ ನಡೆಯುವ ಕಾರಣ ಟ್ರಾಫಿಕ್‌ಜಾಮ್ ಆಗುತ್ತದೆ. ಮಿನಿ ವಿಧಾನಸೌಧ, ಪಶು ಇಲಾಖೆ, ಪಿಎಲ್‌ಡಿ ಬ್ಯಾಂಕ್, ಅಂಚೆ ಕಚೇರಿ, ಎಸ್‌ಬಿಐ ಶಾಖೆ, ಆರ್‌ಡಿಸಿಸಿ ಬ್ಯಾಂಕ್, ಶಾಖಾ ಗ್ರಂಥಾಲಯ, ತಾಲೂಕು ಸಿವಿಲ್ ಕೋರ್ಟ್, ಪುರಸಭೆ, ಸಿಪಿಐ, ಪಿಐ ಹಾಗೂ ಸಂಚಾರಿ ಠಾಣೆ, ಸಾರ್ವಜನಿಕ ಆಸ್ಪತ್ರೆ ಇದ್ದು, ಇಲ್ಲಿ ರಸ್ತೆಯನ್ನು ದಾಟಲು ಸರ್ಕಸ್ ಮಾಡಬೇಕು.

    ದೇವದುರ್ಗ ತಹಸೀಲ್ದಾರ್ ಸೂಚನೆ ಮೇರೆಗೆ ಮಿನಿವಿಧಾನಸೌಧ ಮುಂಭಾಗ, ಆವರಣದಲ್ಲಿ ನಿಲ್ಲಿಸಿದ್ದ 26 ವಾಹನಗಳ ಸವಾರರಿಗೆ ತಲಾ 200 ರೂ.ಯಂತೆ ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಪ್ರಯೋಗ ಮಾಡಲಾಗುವುದು.
    | ಮಂಗಮ್ಮಸಂಚಾರಿ ಠಾಣೆ ಪಿಎಸ್‌ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts