More

    ಕದರಮಂಡಲಗಿ ಶಾಲೆ ಮುಖ್ಯ ಶಿಕ್ಷಕಿ ವರ್ಗಾವಣೆಗೊಳಿಸಿ

    ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ವರ್ಗಾಯಿಸುವಂತೆ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ. ರುದ್ರಮುನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಹಳೆಯ ವಿದ್ಯಾರ್ಥಿ ಸಂಘದ ಮುಖಂಡ ಶಂಕರಗೌಡ್ರ ಹೊಸಗೌಡ್ರ ಮಾತನಾಡಿ, ಹೊಸದಾಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕಿ, ಮಕ್ಕಳ ಪಾಲಕರು, ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಈ ಕುರಿತು ಸಾರ್ವಜನಿಕರು ಹಾಗೂ ಪಾಲಕರು ಅರ್ಜಿ ಸಲ್ಲಿಸಿದ್ದರು. ಪುನಃ ಅವರನ್ನೆ ಮುಖ್ಯಶಿಕ್ಷಕಿಯಾಗಿ ನೇಮಿಸಿರುವುದು ಶಿಕ್ಷಣ ಪ್ರೇಮಿಗಳಿಗೆ ಬೇಸರ ತಂದಿದೆ. ಇವರಿಂದ ಶೈಕ್ಷಣಿಕ ಅಭಿವೃದ್ಧಿ, ಪಠ್ಯೇತರ ಚಟುವಟಿಕೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಆದ್ದರಿಂದ ಶಾಲೆಯಿಂದ ಅವರನ್ನು ಬಿಡುಗಡೆಗೊಳಿಸಿ, ಬೇರೆಯವರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.

    ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ. ರುದ್ರಮುನಿ ಮಾತನಾಡಿ, ಈ ಕುರಿತು ಹಿಂದೆ ಗ್ರಾಮಸ್ಥರು ಮೌಖಿಕವಾಗಿ ತಿಳಿಸಿದ್ದರು. ಆದರೆ, ಇಲಾಖೆ ನಿಯಮದಂತೆ ಸಹಶಿಕ್ಷಕಿಯರನ್ನು ಬಡ್ತಿ ಮಾಡಬೇಕಿದೆ. ಪುನಃ ಗ್ರಾಮದ ಹಳೆಯ ವಿದ್ಯಾರ್ಥಿಗಳ ನೀಡಿದ ದೂರಿನ ಮೇರೆಗೆ ಎಸ್​ಡಿಎಂಸಿ ಹಾಗೂ ಪಾಲಕರ ಸಭೆ ನಡೆಸಿ, ಸೂಚನೆ ನೀಡಲಾಗುವುದು. ಬಳಿಕವೂ ಇದೇ ಪರಿಸ್ಥಿತಿ ಮುಂದುವರಿದಲ್ಲಿ ನಿಯೋಜನೆ ವಿಚಾರ ಮಾಡಲಾಗುವುದು ಎಂದರು.

    ತಾ.ಪಂ. ಸದಸ್ಯ ಗುಡ್ಡಪ್ಪ ಕೊಳೂರು, ಹಳೆಯ ವಿದ್ಯಾರ್ಥಿಗಳಾದ ಮಾಲತೇಶ ಬಡಿಗೇರ, ನಾಗರಾಜ ಬಗಾಡೆ ಇದ್ದರು.

    ಕೊಠಡಿ ನಿರ್ವಣಕ್ಕೆ ಅನುಮತಿ ನೀಡಿ: ಸರ್ಕಾರಿ ಶಾಲೆಯ ಗುಣಮಟ್ಟ ಹಾಗೂ ಶಾಲಾಭಿವೃದ್ಧಿ ದೃಷ್ಟಿಯಿಂದ ಗ್ರಾಮದ ನೂರಾರು ಹಳೆಯ ವಿದ್ಯಾರ್ಥಿಗಳು ಸಂಘ ಮಾಡಿಕೊಂಡು ಶಾಲೆಯ ಅಭಿವೃದ್ಧಿಗೆ ಧನಸಹಾಯ ಸೇರಿ ಇತರ ಕಾರ್ಯಕ್ರಮ ಹಾಕಿಕೊಳ್ಳಲು ನಿರ್ಧರಿಸಿದೆ. ಮೊದಲ ಹಂತವಾಗಿ ಶಾಲೆಗೆ ಕೊರತೆಯಿರುವ 4 ಕೊಠಡಿಗಳನ್ನು ನಿರ್ವಿುಸಲು ಯೋಜನೆ ರೂಪಿಸಿಕೊಂಡಿದ್ದೇವೆ. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮಗೆ ಮಾರ್ಗದರ್ಶನ ಹಾಗೂ ಕಟ್ಟಡ ಪರವಾನಗಿ ನೀಡುವಂತೆ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಉದ್ಯಮಿ ಪ್ರಕಾಶ ಪಟ್ಟಣಶೆಟ್ಟಿ ಪತ್ರದ ಮೂಲಕ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts