More

    ತ್ಯಾಜ್ಯ ನಿರ್ವಹಣೆಗೆ ಸಹಕಾರ ಅತ್ಯಗತ್ಯ: ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮನವಿ

    ಮಂಡ್ಯ: ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಯಾವುದೇ ಕೀಳು ಮನೋಭಾವನೆ ಇಲ್ಲದೆ ಸ್ವ-ಸಹಾಯ ಸಂಘಗಳ ಮಹಿಳೆಯರು ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಯಿಂದ ಘನ ತ್ಯಾಜ್ಯ ಸಂಗ್ರಹ ಹಾಗೂ ತ್ಯಾಜ್ಯ ನಿರ್ವಹಣಾ ವಾಹನಗಳ ಚಾಲನೆ ಕುರಿತಂತೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತ್ಯಾಜ್ಯ ನಿರ್ವಹಣೆಯನ್ನು ಉದ್ಯೋಗವೆಂದು ಭಾವಿಸದೆ, ಉದ್ಯಮವಾಗಿ ಬೆಳೆಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.
    ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ತ್ವರಿತವಾಗಿ ತ್ಯಾಜ್ಯ ನಿರ್ವಹಣೆಗಾಗಿ 231 ಗ್ರಾಪಂ ಒಕ್ಕೂಟಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 233 ಗ್ರಾಪಂಗೆ ತ್ಯಾಜ್ಯ ನಿರ್ವಹಣೆಗಾಗಿ ವಾಹನ, ಹಸಿ ಮತ್ತು ಒಣ ಕಸ ಸಂಗ್ರಹಣೆಗಾಗಿ ಪ್ರತಿ ಕುಟುಂಬಕ್ಕೂ ಕಸದಬುಟ್ಟಿ ವಿತರಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 85 ತ್ಯಾಜ್ಯ ನಿರ್ವಹಣಾ ಘಟಕಗಳು ಪೂರ್ಣಗೊಂಡಿರುತ್ತವೆ. ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದು ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕೆಂದು ತಿಳಿಸಿದರು.
    ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಮಾಲೋಚಕಿ ಡಾ.ಸಿ.ಎಚ್.ವಸುಂದರಾದೇವಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಲಹೆಗಾರ ಕೆಂಪೇಗೌಡ, ಬೆಂಗಳೂರಿನ ಸಂಜೀವಿನಿ ವ್ಯವಸ್ಥಾಪಕ ಬೆಳ್ಳೆಗೌಡ, ಡಿಎಸ್‌ಐಆರ್ ನಿರ್ದೇಶಕಿ ಲಕ್ಷ್ಮೀಪ್ರಿಯಾ ಇತರರಿದ್ದರು.
    ಇದೇ ವೇಳೆ ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಒಕ್ಕೂಟಗಳ ಸ್ವ-ಸಹಾಯ ಸಂಘಗಳ ಮಹಿಳೆಯರ ಪಾತ್ರ ಮತ್ತು ಜವಾಬ್ದಾರಿ, ಮಹಿಳೆಯರಿಗೆ ತ್ಯಾಜ್ಯ ನಿರ್ವಹಣಾ ವಾಹನದ ಚಾಲನಾ ತರಬೇತಿ, ಸಂಜೀವಿನಿ ಒಕ್ಕೂಟ ಮತ್ತು ಗ್ರಾಮ ಪಂಚಾಯಿತಿ ನಡುವೆ ಘನ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts