More

    ಹಿಮ ಕರಗಿ ದುರಂತ?; ವಿಜಯವಾಣಿ ಪ್ರತ್ಯಕ್ಷ ವರದಿ

    | ರಾಘವ ಶರ್ಮ ನಿಡ್ಲೆ ಜೋಶಿಮಠ (ಚಮೋಲಿ)

    ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತರಾಖಂಡದಲ್ಲಿ ಕಡಿಮೆ ಪ್ರಮಾಣದಲ್ಲಿ ಹಿಮ ಬಿದ್ದಿರುವುದೇ ನಂದಾದೇವಿ ಪರ್ವತದ ಹಿಮಸ್ಪೋಟಕ್ಕೆ ಕಾರಣವಿರಬಹುದೆಂಬ ಅನುಮಾನ ಮೂಡಿದೆ. ಐಟಿಬಿಪಿ ಯೋಧರು ಪ್ರತಿ ವರ್ಷ ಜೋಶಿಮಠದ ಮೇಲ್ಭಾಗದಲ್ಲಿರುವ ಔಲಿಯಲ್ಲಿ ಸ್ಕೀಯಿಂಗ್ ಚಟುವಟಿಕೆ ನಡೆಸುತ್ತಾರೆ. ಆದರೆ, ಈ ಬಾರಿ ಸ್ಕೀಯಿಂಗ್​ಗೆ ಅಗತ್ಯವಿರುವ ಪ್ರಮಾಣದಷ್ಟು ಹಿಮ ಬಿದ್ದಿಲ್ಲ. ಹೀಗಾಗಿ ಜಮ್ಮುವನ್ನು ಆಯ್ಕೆ ಮಾಡಿ, ಯೋಧರು ಅಲ್ಲಿಗೆ ತೆರಳಿದ್ದರು. ಪ್ರವಾಸಿ ತಾಣ ಔಲಿಯಲ್ಲಿ ಕೆಲವು ವರ್ಷಗಳಿಂದ ಹಿಮ ಪ್ರಮಾಣ ತಗ್ಗುತ್ತಿದೆ. ಜೋಶಿಮಠದಿಂದ ಔಲಿಯನ್ನು ರೋಪ್ ವೇ ಮೂಲಕವಷ್ಟೇ ತಲುಪಬಹುದು. ಇದು 3.5 ಕಿಮೀ ಉದ್ದ ಇದ್ದು, ಏಷ್ಯಾದಲ್ಲೇ ಉದ್ದದ ರೋಪ್ ವೇ ಎಂಬ ಹೆಗ್ಗಳಿಕೆ ಹೊಂದಿದೆ. ಒಂದೆರಡು ವರ್ಷದ ಹಿಂದೆ ಔಲಿಯಲ್ಲಿ ರಾಷ್ಟ್ರೀಯ ಸ್ಕೀಯಿಂಗ್ ಸ್ಪರ್ಧೆ ಏರ್ಪಡಿಸಲು ಉದ್ದೇಶಿಸಲಾಗಿತ್ತು. ಆದರೆ, ಹಿಮ ಬೀಳುವಿಕೆ ತಗ್ಗಿದ್ದರಿಂದ ಕೊನೇ ಕ್ಷಣದಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ‘ಹಿಮ ಬೀಳುವಿಕೆ ಕಡಿಮೆಯಾಗಿ, ಬಿಸಿಲಿನ ತಾಪಮಾನ ಹೆಚ್ಚಾದಾಗ ಹಿಮ ಕರಗಲಾರಂಭಿಸುತ್ತದೆ. ನಂದಾದೇವಿ ಪರ್ವತದಲ್ಲೂ ಹೀಗೇ ಆಗಿ ಹಿಮಶಿಖರದ ಒಂದು ಭಾಗ ತುಂಡಾಗಿ ನೆಲಕ್ಕಪ್ಪಳಿಸಿರಬಹುದು. ಆದರೆ, ಇದನ್ನು ಖಚಿತವಾಗಿ ಹೇಳಲಾರೆ’ ಎಂದು ತಪೋವನದಲ್ಲಿ ಸಿಕ್ಕ ಐಟಿಬಿಪಿಯ ಅಧಿಕಾರಿಯೊಬ್ಬರು ವಿಜಯವಾಣಿಗೆ ಹೇಳಿದರು.

    ತಜ್ಞರ ವಾದವೇನು?: ನಂದಾದೇವಿ ಪರ್ವತದಲ್ಲಿ ಹಿಮ ಪ್ರಮಾಣ ಕಡಿಮೆಯಾಗಿ, ತಾಪಮಾನ ಏರಿಕೆಯಿಂದ ಹಿಮದೊಳಗಿದ್ದ ನೀರು ಒತ್ತಡ ತಾಳಲಾರದೆ ಸ್ಪೋಟಗೊಂಡು ಹೊರಪ್ರವಹಿಸಿರಬಹುದು.

    ಚೀನಾ ಕೈವಾಡ ಖಚಿತತೆ ಇಲ್ಲ: ‘ದುರಂತದ ಹಿಂದೆ ಚೀನಾ ಕೈವಾಡದ ಬಗ್ಗೆಯೂ ಕೆಲವೆಡೆ ಚರ್ಚೆಯಾಗಿದೆ. ಆದರೆ ಆ ಬಗೆಗಿನ ಯಾವುದೇ ಖಚಿತತೆ ಇಲ್ಲ. ಚೀನಾ-ಭಾರತ ನಡುವೆ ಸಂಬಂಧ ಕೆಟ್ಟಿದೆ. ಹೀಗಾಗಿ, ಚೀನಾ ಒಳಸಂಚಿನ ಆಯಾಮವನ್ನೂ ತಳ್ಳಿಹಾಕಲಾಗದು. ಹಾಗಂತ ಅದೇ ನಿಜ ಎಂದೂ ಹೇಳಲಾಗದು’ ಎನ್ನುತ್ತಾರೆ ಬಾರ್ಡರ್ ರೋಡ್ ಆರ್ಗನೈಸೇಷನ್ ಋಷಿಕೇಶ ವಿಭಾಗದ ಎಂಜಿನಿಯರ್ ಸೂಪರಿಂಟೆಂಡೆಂಟ್ ಆರ್.ಎಸ್. ರಾವ್. ಇವರು ಹೈದರಾಬಾದ್ ಮೂಲದವರಾಗಿದ್ದು, 2018ರ ಕೊಡಗು ಪ್ರವಾಹದ ವೇಳೆ ರಾಜ್ಯಕ್ಕೆ ಬಂದಿದ್ದರು. ಈ ಮಧ್ಯೆ, ಹಿಮದೊಳಗಿನ ಕೊಳ್ಳಗಳು ಸ್ಪೋಟಗೊಂಡು ಈ ಘಟನೆ ಸಂಭವಿಸಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಹಿಮ ಕರಗಿದ ಪರಿಣಾಮ ದುರ್ಘಟನೆ ಸಂಭವಿಸಿರುವ ಸಾಧ್ಯತೆ ಹೆಚ್ಚಿದೆ ಎಂದು ಡೆಹರಾಡೂನ್ ಮೂಲದ ವಾಡಿಯಾ ಇನ್​ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ತಜ್ಞರು ಹೇಳುತ್ತಿದ್ದಾರೆ. ಹೆಚ್ಚುವರಿ ಅಧ್ಯಯನಕ್ಕಾಗಿ ಇಬ್ಬರು ವಿಜ್ಞಾನಿಗಳನ್ನು ಸಂಸ್ಥೆ ಕಳುಹಿಸಿಕೊಟ್ಟಿದೆ.

    ವಿವಾದಗಳು ಮಿಸ್ಸಿಂಗ್!; ಪೊಗರು ಹುಡುಗಿಯ ಬೆರಗು ಮಾತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts