More

    ಕಂಡಲ್ಲಿ ಕೆಟ್ಟು ನಿಲ್ಲುವ ಬಸ್!

    | ಮೋಹನ ಪಾಟಣಕರ ಕೊಕಟನೂರ

    ಉತ್ತಮವಾದ ಸಾರಿಗೆ ವ್ಯವಸ್ಥೆ ಇದ್ದಲ್ಲಿ ಗ್ರಾಮ ಅಭಿವೃದ್ಧಿಪಥದತ್ತ ಸಾಗುತ್ತದೆ. ಆದರೆ, ಗ್ರಾಮಾಂತರ ಭಾಗಕ್ಕೆ ಬರುವಾಗ ಅಥವಾ ಹೋಗುವಾಗಲೆಲ್ಲ ಕಂಡಕಂಡಲ್ಲಿ ಸರ್ಕಾರಿ ಬಸ್‌ಗಳು ಕೆಟ್ಟು ನಿಂತರೆ ಗ್ರಾಮಾಭಿವೃದ್ಧಿ ಹೇಗೆ ಸಾಧ್ಯ? ಗ್ರಾಮೀಣರಿಗೆ ಬಸ್ ಸೌಕರ್ಯ ಕೊಟ್ಟೂ ಏನು ಪ್ರಯೋಜನ?. ಗ್ರಾಮೀಣ ಭಾಗಗಳ ರಸ್ತೆಯಲ್ಲಿ ಸಂಚರಿಸುತ್ತಿರುವ ‘ಡಕೋಟಾ ಎಕ್ಸ್‌ಪ್ರೆಸ್’ ಬಸ್‌ಗಳಂತೂ ಆ ದೇವರಿಗೇ ಪ್ರೀತಿ. ಡಕೋಟಾ ಬಸ್‌ಗಳನ್ನೇ ಹೊಂದಿರುವ ಅಥಣಿ ಸಾರಿಗೆ ಘಟಕದಿಂದಾಗಿ ಗ್ರಾಮೀಣರು ಪರದಾಡುವಂತಾಗಿದೆ.

    ಅಥಣಿ ಸಾರಿಗೆ ಘಟಕದಲ್ಲಿರುವ ತೀರಾ ಹಳೆಯದಾದ ಬಸ್‌ಗಳಿಂದಾಗಿ ಚಾಲಕರು, ನಿರ್ವಾಹಕರೂ ಸಮಸ್ಯೆ ಅನುಭವಿಸುವಂತಾಗಿದೆ. ಅಥಣಿ ಸಾರಿಗೆ ಘಟಕ ವ್ಯಾಪ್ತಿಯಲ್ಲಿ 123 ಗ್ರಾಮಗಳಿವೆ. ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಹೋಗಿ ವಸತಿ ಮಾಡುವ ಬಸ್ ಒಳಗೊಂಡಂತೆ ಒಟ್ಟಾರೆ 122 ಬಸ್‌ಗಳಿವೆ. ಇವುಗಳಲ್ಲಿ ಅರ್ಧದಷ್ಟು ಹಳೆಯ ಬಸ್‌ಗಳೇ ಇವೆ. ಈ ಬಸ್‌ಗಳೇ ಹಳ್ಳಿಯ ರಸ್ತೆಗೆ ಇಳಿಯುವುದರಿಂದ ಒಂದಿಲ್ಲೊಂದು ಕಡೆ ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿವೆ. ಇದರಿಂದ ಜನ ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ಹೋಗುವಂತಾಗಿದೆ. ಇರುವ 122 ಬಸ್‌ಗಳಲ್ಲಿ ರಿಪೇರಿ, ನಿರ್ವಹಣೆಯ ಕಾರಣದಿಂದ ನಿತ್ಯ 5 ರಿಂದ 10 ಬಸ್‌ಗಳು ಘಟಕದಲ್ಲೇ ನಿಂತಿರುತ್ತವೆ.

    ವಿದ್ಯಾರ್ಥಿಗಳಿಗೆ ಪರದಾಟ: ಘಟಕ ವ್ಯಾಪ್ತಿಯ ಗ್ರಾಮಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದ್ದರಿಂದ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ವಿದ್ಯಾರ್ಥಿಗಳ ಸ್ಥಿತಿಯಂತೂ ಹೇಳತೀರಲಾಗದು. ಸಮಯಕ್ಕೆ ಸರಿಯಾಗಿ ಬಸ್ ಬಾರದ್ದರಿಂದ ಶಾಲೆ-ಕಾಲೇಜುಗಳಿಗೆ ಹೋಗಲು ದಿನವೂ ಹರಸಾಹಸ ಪಡುವಂತಾಗಿದೆ. ಹೀಗಾಗಿ ಗ್ರಾಮಕ್ಕೆ ಬರುವ 60 ಪ್ರಯಾಣಿಕರು ಸಂಚರಿಸಬಹುದಾದ ಬಸ್‌ಗಳಲ್ಲಿ ಜನರು, ವಿದ್ಯಾರ್ಥಿಗಳು ಎಲ್ಲರೂ ಸೇರಿ 120ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುವಂತಾಗಿದೆ. ಬಸ್‌ನ ಬಾಗಿಲಲ್ಲೂ ಜೋತುಬಿದ್ದು ಪ್ರಾಣ ಭಯದಲ್ಲೇ ಜನರು ಸಾಗುವಂತಾಗಿದೆ. ಇದರೊಟ್ಟಿಗೆ ಬಸ್ ಎಲ್ಲಿ ಕೆಟ್ಟು ನಿಲ್ಲುತ್ತದೋ ಎಂಬ ಆತಂಕವೂ ವಿದ್ಯಾರ್ಥಿಗಳಿಗಿರುತ್ತದೆ.

    ಪಾಲಕರಿಗೆ ನಿತ್ಯವೂ ಮಕ್ಕಳದ್ದೇ ಚಿಂತೆ

    ಶಾಲೆ ಮುಗಿದ ನಂತರವೂ ವೇಳೆಗೆ ಸರಿಯಾಗಿ ಬಸ್‌ಗಳು ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಮನೆಗೆ ತೆರಳು ತೊಂದರೆಯಾಗುತ್ತದೆ. ಹೀಗಾಗಿ ಅಥಣಿ ಘಟಕ ವ್ಯಾಪ್ತಿಯ ಅನಂತಪುರ, ಕಟಗೇರಿ, ಯಲ್ಲಮ್ಮನವಾಡಿ, ಚಮಕೇರಿ, ಸುಟ್ಟಟ್ಟಿ, ಅಡಹಳ್ಳಟ್ಟಿ, ಝುಂಜರವಾಡ, ಸವದಿ, ಘಟನಟ್ಟಿ ಸೇರಿ ಹಲವು ಗ್ರಾಮಗಳ ವಿದ್ಯಾರ್ಥಿಗಳ ಪಾಲಕರೂ ಚಿಂತೆಗೊಳಗಾಗವಂತಾಗಿದೆ. ರಾತ್ರಿಯಾಗುತ್ತಿದ್ದರೂ ಮಕ್ಕಳು ಮನೆಗೆ ಬಂದಿಲ್ಲವಲ್ಲ ಎಂದು ನಿತ್ಯವೂ ಪರಿತಪಿಸುವಂತಾಗಿದೆ.

    ಅಥಣಿ ಘಟಕದಲ್ಲಿ ಚಾಲಕ-ನಿರ್ವಾಕರ ಹಾಗೂ ಬಸ್‌ಗಳ ಕೊರತೆ ಇದೆ. ಹೀಗಾಗಿ ವೇಳೆಗೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಲು ಸಮಸ್ಯೆಯಾಗುತ್ತಿದೆ. ಸಿಬ್ಬಂದಿ ನೇಮಕ ಮತ್ತು ನೂತನ ಬಸ್ ನೀಡುವಂತೆ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಾರಿಗೆ ಸಮಸ್ಯೆ ಸರಿಪಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು.
    | ಪಾಂಡುರಂಗ ಕಿರಣಗಿ ಅಥಣಿ ಘಟಕ ವ್ಯವಸ್ಥಾಪಕ

    ಹೆಚ್ಚಿನ ಅಧ್ಯಯನಕ್ಕಾಗಿ ಅಥಣಿ ಪಟ್ಟಣಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ವೇಳೆಗೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಇದು ಶೈಕ್ಷಣಿಕ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಲಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೇ ಸಾರಿಗೆ ಸಚಿವರೂ ಆಗಿದ್ದಾರೆ. ಹೀಗಾಗಿ ಅವರ ತವರು ಪಟ್ಟಣವಾದ ಅಥಣಿ ಘಟಕದಲ್ಲಿಯೇ ಬಸ್‌ಗಳ ಕೊರತೆ ಹಾಗೂ ಸಮಸ್ಯೆಯಿದೆ. ಈ ಬಗ್ಗೆ ಸಚಿವರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
    | ಶಿವಾಜಿ ಚವ್ಹಾಣ ಯಲ್ಲಮ್ಮನವಾಡಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts