More

    ಈ ರಸ್ತೆಯಲ್ಲಿ ಸಂಚಾರ ಜೀವಕ್ಕೆ ಸಂಚಕಾರ!

    ಹುಬ್ಬಳ್ಳಿ: ಇದು ಕೆಸರುಗದ್ದೆ ಓಟಕ್ಕೆ ಸಿದ್ಧಪಡಿಸಿದ ಜಮೀನು ಅಲ್ಲ, ಹುಬ್ಬಳ್ಳಿ ಮಹಾನಗರದ ಬಡಾವಣೆಯೊಂದರ ರಸ್ತೆ! ಒಂದಿಷ್ಟು ಮಳೆ ಬಂದರೂ ಸಾಕು, ಇದು ಕೆಸರುಗದ್ದೆಯಂತಾಗುತ್ತದೆ ಅಷ್ಟೆ!!

    ಇಲ್ಲಿಯ ಗೋಕುಲ ರಸ್ತೆ ಕೋಟಿಲಿಂಗ ನಗರದ ಬಸವೇಶ್ವರ ಪಾರ್ಕ್ ಪಕ್ಕದ ಈ ರಸ್ತೆಯಲ್ಲಿ ಹಲವು ವರ್ಷಗಳಿಂದ ಜನರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ಸದ್ಯ ಸುರಿಯುತ್ತಿರುವ ಮಳೆಯಲ್ಲಂತೂ ಇಲ್ಲಿನ ಜನ ಪಡುತ್ತಿರುವ ಪಾಡು ಅಂತಿಂಥದಲ್ಲ. ಅಡಿಗಟ್ಟಲೆ ಆಳದ ತಗ್ಗು- ಗುಂಡಿಗಳಿರುವ ಈ ರಸ್ತೆಯಲ್ಲಿ ಇದೀಗ ಮಳೆ ನೀರು ನಿಂತಿದೆ. ಬೈಕ್ ಸವಾರರು ಹಾಗೂ ಪಾದಚಾರಿಗಳು ನಿತ್ಯವೂ ಸರ್ಕಸ್ ಮಾಡುತ್ತ ಸಾಗಬೇಕಾಗಿದೆ.

    ಮಕ್ಕಳು, ವೃದ್ಧರು ಈ ರಸ್ತೆಯಲ್ಲಿ ಯಾರದಾದರೂ ಸಹಾಯ ಪಡೆದು ಕೊಂಡು ಹೋಗುವ ಪ್ರಸಂಗ ಬಂದಿದೆ. ಒಬ್ಬರೇ ಬಂದರೆ ಜಾರಿ ಬೀಳುವ ಅಪಾಯ ಇದೆ. ದೊಡ್ಡ ವಾಹನಗಳು ಬಂದು ಹೋದರೆ ರಾಡಿ ಚಿಮ್ಮಿ ಅಕ್ಕ ಪಕ್ಕದ ಮನೆಗಳಿಗೆ ರಾಡಿ ಬಳಿದಂತಾಗುತ್ತದೆ. ಭಾರಿ ವಾಹನಗಳಿಂದ ಗುಂಡಿಗಳು ಮತ್ತಷ್ಟು ಆಳವಾಗಿ ವಾಹನ ಸವಾರರಿಗೆ ಇನ್ನಿಲ್ಲದ ಕಿರಿಕಿರಿ ಉಂಟಾಗುತ್ತಿದೆ. ಇದರ ಮಧ್ಯೆ ಸಣ್ಣ ವಾಹನಗಳು, ಬೈಕ್​ಗಳು ಓಡಾಡುವುದೇ ಕಷ್ಟಕರವಾಗಿದೆ ಎಂದು ಸ್ಥಳೀಯರಾದ ಕೃಷ್ಣಾ ಶೆಟ್ಟಿ, ಕೀರ್ತನಾ ಶೆಟ್ಟಿ, ಗಾಯತ್ರಿ ಸಜ್ಜನ, ಡಾ. ಕುಬಸದ, ಶ್ರೇಯಾ ಗೌಡ, ದೀಪಕ ಕಾಟವೆ ಇತರರು ದೂರಿದ್ದಾರೆ.

    ಈ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಾಗಿದೆ. ಆದಷ್ಟು ಶೀಘ್ರ ಸುಧಾರಣೆಯಾಗಲಿದೆ ಎಂಬ ಭರವಸೆಯ ಮಾತುಗಳನ್ನು ಕೇಳುವುದೇ ನಮ್ಮ ಕೆಲಸ ಆಗಿದೆ ಎಂದು ನಿವಾಸಿಗಳು ಅಲವತ್ತುಕೊಳ್ಳುತ್ತಾರೆ.

    ಬೀದಿ ದೀಪ ಇಲ್ಲ: ಕೋಟಿಲಿಂಗ ನಗರದ ಕೆಲ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ. ಬಸವೇಶ್ವರ ಪಾರ್ಕ್ ಬಳಿಯ ಈ ರಸ್ತೆಯಲ್ಲೂ ಹಲವು ವರ್ಷಗಳಿಂದ ಬೀದಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆ ಓಡಾಟ ಇನ್ನೂ ಆತಂಕಕಾರಿಯಾಗುತ್ತಿದೆ. ಇದಲ್ಲದೇ, ಕತ್ತಲು ಆವರಿಸುತ್ತಲೇ ಬಸವೇಶ್ವರ ಪಾರ್ಕ್ ಕುಡುಕರ ಅಡ್ಡೆಯಾಗುತ್ತಿದೆ. ಇದು ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ ಮಾಡುತ್ತಿದೆ. ಕುಡುಕರ ಹಾವಳಿ ತಪ್ಪಿಸಲು ಎಲ್ಲ ಕಡೆ ಬೀದಿದೀಪ ಹಾಕಿಸುವುದು ಉತ್ತಮ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

    ಡಾಂಬರೀಕರಣವೇ ಆಗಿಲ್ಲ: ಕ್ಷೇತ್ರದ ಶಾಸಕ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಹಲವು ಬಾರಿ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ಕೋಟಿಲಿಂಗ ನಗರದ ಹಲವಾರು ರಸ್ತೆಗಳು ಕಾಂಕ್ರೀಟ್ ಆಗಿವೆ. ಆದರೆ, ಬಸವೇಶ್ವರ ಪಾರ್ಕ್ ಪಕ್ಕದ ಇದೊಂದೇ ರಸ್ತೆಯನ್ನು ಡಾಂಬರೀಕರಣ ಕೂಡ ಮಾಡಿಲ್ಲ.ಈ ತಾರತಮ್ಯವೇಕೆ ಎಂದು ಮಹಿಳೆಯರು ಸೇರಿ ನಿವಾಸಿಗಳು ಶೆಟ್ಟರ್ ಅವರನ್ನು ಪ್ರಶ್ನಿಸಿದ್ದಾರೆ.

    ನಾನು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಸಂಬಂಧಪಟ್ಟ ರಸ್ತೆ ಟೆಂಡರ್ ಆಗಿದೆಯೇ ಎಂದು ದಾಖಲೆ ಪರಿಶೀಲಿಸಲಾಗುವುದು, ರಸ್ತೆ ಸ್ಥಿತಿಗತಿ ತಿಳಿದುಕೊಂಡು ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

    | ಪಿ.ಡಿ. ಗಾಳೆಮ್ಮನವರ ವಲಯ ಕಚೇರಿ 7ರ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts