More

    5 ಹಂತದ ಮಾರ್ಗಕ್ಕಾಗಿ ಮೇಲ್ಸೇತುವೆ ತೆರವು ಜಯದೇವ ಜಂಕ್ಷನ್​ನಲ್ಲಿ ಸಂಚಾರದಟ್ಟಣೆ; ಮೆಜೆಸ್ಟಿಕ್ ಬಳಿಕ ಮತ್ತೊಂದು ಮಹತ್ವದ ಕಾಮಗಾರಿ 

    ಮೆಜೆಸ್ಟಿಕ್​ನಲ್ಲಿ 83 ಅಡಿ ಆಳದಲ್ಲಿ 2 ಮೆಟ್ರೋ ನಿಲ್ದಾಣ ನಿರ್ವಿುಸಿ ಯಶಸ್ವಿಯಾಗಿರುವ ಬಿಎಂಆರ್​ಸಿಎಲ್, ಇದೀಗ ಮೂರು ಹಂತದ ಡಬಲ್ ಡೆಕ್ಕರ್ ರಸ್ತೆ ಕಂ ಮೆಟ್ರೋ ಮಾರ್ಗ ನಿರ್ಮಾಣ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಜಯದೇವ ಮೇಲ್ಸೇತುವೆ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಆ ಭಾಗದಲ್ಲಿ ಸಂಚಾರದಟ್ಟಣೆಗೆ ಕಾರಣವಾಗಿದೆ.

    ನಮ್ಮ ಮೆಟ್ರೋ ಮೊದಲ ಹಂತದಲ್ಲಿನ ಅತಿ ದುಬಾರಿ ಮತ್ತು ವಿಸ್ತೀರ್ಣದ ಮೆಟ್ರೋ ನಿಲ್ದಾಣವನ್ನು ಮೆಜೆಸ್ಟಿಕ್​ನಲ್ಲಿ ನಿರ್ವಿುಸಲಾಗಿದೆ. 83 ಅಡಿ ಆಳ ಮತ್ತು 6 ಫುಟ್ಬಾಲ್ ಸ್ಟೇಡಿಯಂನಷ್ಟಿರುವ (20 ಎಕರೆ) ಜಾಗದಲ್ಲಿ 272 ಕೋಟಿ ರೂ. ವೆಚ್ಚ ಮಾಡಿ ಮೆಜೆಸ್ಟಿಕ್ ಇಂಟರ್​ಚೇಂಜ್ ನಿಲ್ದಾಣ ನಿರ್ವಿುಸಲಾಗಿದೆ. ಇದೀಗ ದೇಶದ ಮೆಟ್ರೋ ಯೋಜನೆಗಳಲ್ಲೇ ಮೊದಲ ಬಾರಿಗೆ ಮೂರು ಹಂತದ ಎಲಿವೇಟೆಡ್ ರಸ್ತೆ ಮತ್ತು ಮೆಟ್ರೋ ಮಾರ್ಗಗಳನ್ನು ನಿರ್ವಿುಸಲಾಗುತ್ತಿದೆ. ಆ ಮೂಲಕ ಮತ್ತೊಂದು ಅಚ್ಚರಿ ಮೂಡಿಸಲು ಬಿಎಂಆರ್​ಸಿಎಲ್ ಮುಂದಾಗಿದೆ.

    ಜಯದೇವ ಮೇಲ್ಸೇತುವೆ ತೆರವು: ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಆರ್.ವಿ. ರಸ್ತೆ- ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ- ನಾಗವಾರ ಮಾರ್ಗಗಳ ಇಂಟರ್​ಚೇಂಜ್ ನಿಲ್ದಾಣಗಳು ಜಯದೇವ ಆಸ್ಪತ್ರೆ ಬಳಿ ನಿರ್ವಣವಾಗಲಿದೆ. ಅದಕ್ಕಾಗಿ ಜಯದೇವ ಆಸ್ಪತ್ರೆ ಎದುರಿನ ಮೇಲ್ಸೇತುವೆಯನ್ನು ಕೆಡವಲಾಗುತ್ತಿದೆ. ಎರಡು ಹಂತದಲ್ಲಿ ಮೇಲ್ಸೇತುವೆ ಕೆಡವಲಾಗುತ್ತಿದೆ. ಈ ಹಿಂದೆಯೇ ಮೇಲ್ಸೇತುವೆಯ ಒಂದು ಭಾಗವಾದ 150 ಮೀಟರ್ ಉದ್ದದ ಲೂಪ್ ತೆರವು ಕಾಮಗಾರಿ ಕೈಗೊಳ್ಳಲಾಗಿತ್ತು. ಇದೀಗ ಉಳಿದ ಮೇಲ್ಸೇತುವೆ ಭಾಗದ ತೆರವು ಕಾರ್ಯಾಚರಣೆಯನ್ನು ಜ.20ರಿಂದ ಆರಂಭಿಸಲಾಗಿದೆ.

    ರಸ್ತೆ ಜತೆಗೆ ಮೆಟ್ರೋ

    ಬಿಎಂಆರ್​ಸಿಎಲ್ ರೂಪಿಸಿರುವ ಯೋಜನೆ ಪ್ರಕಾರ ಜಯದೇವ ಆಸ್ಪತ್ರೆ ಬಳಿ ರಸ್ತೆ ಮತ್ತು ಮೆಟ್ರೋ ಮಾರ್ಗ 5 ಹಂತದಲ್ಲಿರಲಿದೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮಾರ್ಗ ಮತ್ತು ರಸ್ತೆ ಮೇಲ್ಸೇತುವೆ (ಡಬಲ್ ಡೆಕ್ಕರ್) ಒಟ್ಟಿಗೆ ನಿರ್ವಣವಾಗುತ್ತಿದೆ. ಅದು ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್​ಬೋರ್ಡ್ ವರೆಗೆ ಇರಲಿದೆ. ರಸ್ತೆ ಮೇಲ್ಸೇತುವೆ ಒಟ್ಟು 14 ಮೀ. ಅಗಲವಿರಲಿದೆ.

    ಅದರ ಮೇಲ್ಭಾಗದಲ್ಲಿ ಅಂದರೆ ಜಂಕ್ಷನ್​ನ ನೆಲದಿಂದ 70 ಅಡಿ ಎತ್ತರದಲ್ಲಿ ಗೊಟ್ಟಿಗೆರೆ- ನಾಗವಾರ ಮಾರ್ಗ ಹಾದು ಹೋಗಲಿದೆ. ಈ ಎಲಿವೇಟೆಡ್ ಮಾರ್ಗಗಳ ಕೆಳಭಾಗದಲ್ಲಿ ಮಾಮೂಲಿ ರಸ್ತೆಯಿದೆ. ಅದರ ಕೆಳಗೆ ಬನ್ನೇರಘಟ್ಟ ರಸ್ತೆಗೆ ಸಂರ್ಪಸುವ ಕೆಳಸೇತುವೆಯಿದೆ. ಹೀಗಾಗಿ ಯೋಜನೆ ಪೂರ್ಣಗೊಂಡ ನಂತರ ಒಂದೇ ಭಾಗದಲ್ಲಿ 5 ಹಂತದ ರಸ್ತೆ ಕಂ ಮೆಟ್ರೋ ಮಾರ್ಗ ಇದ್ದಂತಾಗಲಿದೆ. ಈ ಒಟ್ಟು ಯೋಜನೆಗೆ 792 ಕೋಟಿ ರೂ. ವ್ಯಯಿಸಲಾಗುತ್ತಿದೆ. ಮೇಲ್ಭಾಗದಲ್ಲಿ ತಲೆಯೆತ್ತಲಿದೆ

    ಇಂಟರ್​ಚೇಂಜ್ ನಿಲ್ದಾಣ!

    ಆರ್.ವಿ.ರಸ್ತೆ- ಬೊಮ್ಮಸಂದ್ರ ಮತ್ತು ಗೊಟ್ಟಿಗೆರೆ- ನಾಗವಾರ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಮಾರ್ಗ ಬದಲಿಸಲು ಅನುಕೂಲವಾಗುವಂತೆ ಮೇಲ್ಭಾಗ ದಲ್ಲೇ ಇಂಟರ್​ಚೇಂಜ್ ನಿಲ್ದಾಣ ನಿರ್ವಿುಸಲಾಗುತ್ತಿದೆ. ಜಂಕ್ಷನ್​ನಿಂದ 50ರಿಂದ 70 ಅಡಿ ಎತ್ತರದಲ್ಲಿರಲಿದೆ.

    ಪಾದಚಾರಿಗಳಿಗೆ ಸಮಸ್ಯೆ

    ಜಯನಗರ ಈಸ್ಟ್ ಎಂಡ್ ವೃತ್ತದಿಂದ ಬಿಟಿಎಂ ಲೇಔಟ್ ಸಂರ್ಪಸುವ ಮೇಲ್ಸೇತುವೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ತೆರವು ಕಾರ್ಯಾ ಚರಣೆ ರಾತ್ರಿ 11ರಿಂದ 6 ಗಂಟೆವರೆಗೆ ನಡೆಸಲಾಗುತ್ತಿದೆ. (ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ) ತೆರವು ಮಾಡಲಾಗುತ್ತಿರುವ ಮೇಲ್ಸೇತುವೆ ಕೆಳಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಬಿಟಿಎಂ ಲೇಔಟ್ ಕಡೆಗೆ ಸಂಚರಿಸುವ ವಾಹನಗಳು ಸಮಸ್ಯೆ ಅನುಭವಿಸುವಂತಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ.

    ವಾಹನಗಳಿಗಷ್ಟೇ ಅಲ್ಲದೆ, ಪಾದಚಾರಿಗಳಿಗೂ ಸಮಸ್ಯೆಯಾಗಿದೆ. ಜಯದೇವ ಮೇಲ್ಸೇತುವೆ ಸುತ್ತಲಿನ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲದಂತಾಗಿದೆ. ಅದರಿಂದಾಗಿ ಪಾದಚಾರಿಗಳು ಸಂದಿ-ಗೊಂದಿಗಳಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಜತೆಗೆ ಜಯದೇವ ಆಸ್ಪತ್ರೆಗೆ ಬರುವವರಿಗೂ ಸಮರ್ಪಕ ದಾರಿಯಿಲ್ಲದಂತಾಗಿದ್ದು, ಸಮಸ್ಯೆ ಉಂಟಾಗುವಂತಾಗಿದೆ.

    ಮೇಲ್ಸೇತುವೆ ತೆರವು ಕಾರ್ಯಾಚರಣೆಯಿಂದಾಗಿ ಸಂಚಾರದಟ್ಟಣೆ ಉಂಟಾಗುತ್ತಿದೆ. ಆದರೂ, ಹಗಲು ಹೊತ್ತಿನಲ್ಲಿ ಮೇಲ್ಸೇತುವೆ ಕೆಳಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರು ವುದು ಸಹಕಾರಿಯಾಗುತ್ತಿದೆ. ಆದರೆ, ಪಾದಚಾರಿಗಳಿಗೆ ಮಾರ್ಗವೇ ಇಲ್ಲದಂತಾಗಿದೆ.

    | ಗೌತಮ್ ಸ್ಥಳೀಯ ನಿವಾಸಿ

    ರಾತ್ರಿ ವೇಳೆಯಲ್ಲಿ ಮಾತ್ರ ಕಾಮಗಾರಿ ಮಾಡಲಾಗುತ್ತಿದೆ. ಮುಂದಿನ 3 ತಿಂಗಳವರೆಗೆ ಕಾಮಗಾರಿ ನಡೆಯಲಿದೆ. ಜನರಿಗೆ ತೊಂದರೆಯಾಗದಂತೆ ಕೆಲಸ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ.

    | ಉಪೇಂದ್ರಕುಮಾರ್ ಬಿಎಂಆರ್​ಸಿಎಲ್ ನೌಕರ  

    | ಗಿರೀಶ್ ಗರಗ ಬೆಂಗಳೂರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts