More

    ನಾಕಲಗೋಡು-ಕಣಗಾಲು ಮಾರ್ಗದಲ್ಲಿ ಸಂಚಾರ ಅಸಾಧ್ಯ

    ಶನಿವಾರಸಂತೆ: ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಕಲಗೋಡು-ಕಣಗಾಲು ಅವಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 2 ಕಿ.ಮೀ. ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

    ಮೂವತ್ತು ವರ್ಷಗಳ ಹಿಂದೆ ಈ ರಸ್ತೆಯನ್ನು ಡಾಂಬರಿಕರಣಗೊಳಿಸಲಾಗಿತ್ತು. ಗ್ರಾಮದಲ್ಲಿ 50ಕ್ಕಿಂತ ಹೆಚ್ಚಿನ ಮನೆಗಳಿದ್ದು, ಸುಮಾರು 500 ಜನಸಂಖ್ಯೆ ಇದೆ. ಶನಿವಾರಸಂತೆ, ಕೊಡ್ಲಿಪೇಟೆ ಮುಂತಾದ ಕಡೆಗಳಿಗೆ ಇದೇ ಮಾರ್ಗದಲ್ಲಿ ತೆರಳಬೇಕಿದೆ. ಆದರೆ ಈ ರಸ್ತೆಯ ಡಾಂಬರು ಕಿತ್ತು ಬಂದಿರುವುದರಿಂದ ಹಿಂದೆ ಇಲ್ಲಿ ರಸ್ತೆ ಇತ್ತೆಂಬ ಕುರುಹು ಇಲ್ಲದಂತಾಗಿದೆ.

    ರಸ್ತೆಯಲ್ಲಿ ಹೊಂಡಗಳು ಹೆಚ್ಚಾಗಿದ್ದು, ಈ ಸಂದರ್ಭ ವಾಹನಗಳಲ್ಲಿ ಸಂಚರಿಸಬೇಕಾದರೆ ಹರಸಹಾಸ ಪಡಬೇಕಾಗುತ್ತದೆ. ಶಾಲಾ-ಕಾಲೇಜು ಸೇರಿದಂತೆ ಹತ್ತಿರದ ಪಟ್ಟಣಗಳಿಗೆ ಹೋಗಿ ಮನೆಗೆ ಬರಲು ಬಾಡಿಗೆ ವಾಹನದಲ್ಲಿ ದುಬಾರಿ ಹಣ ನೀಡಬೇಕಿದೆ. ಒಮ್ಮೆ ಈ ಗ್ರಾಮಕ್ಕೆ ಬಾಡಿಗೆ ವಾಹನದಲ್ಲಿ ಬಂದವರು ರಸ್ತೆಯ ದುಸ್ಥಿತಿ ನೋಡಿ ಮತ್ತೆ ಬಾಡಿಗೆಗೆ ಬರುವುದಿಲ್ಲ.

    ರಸ್ತೆ ದುಸ್ಥಿತಿ ಸಂಬಂಧ ಅವಳಿ ಗ್ರಾಮಸ್ಥರು ಹಲವಾರು ವರ್ಷದಿಂದಲೂ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಅಧಿಕಾರಿಗಳಿಗೆ ಮನವಿ ಪತ್ರ ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಗ್ರಾಮಕ್ಕೆ ಬಂದು ಸುಳ್ಳು ಆಶ್ವಾಸನೆ ಕೊಟ್ಟು ಹೋಗುತ್ತಾರೆಯೇ ಹೊರತು ಸರಿಪಡಿಸುವ ಗೋಜಿಗೆ ಹೋಗಿಲ್ಲ.

    ನಮ್ಮ ಗ್ರಾಮದ ರಸ್ತೆಯ ಸ್ಥಿತಿ ನೋಡಿ ಬಾಡಿಗೆ ವಾಹನದವರು ದುಬಾರಿ ಹಣ ಕೇಳುತ್ತಾರೆ. ಮಳೆಗಾಲದಲ್ಲಂತೂ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಈ ರಸ್ತೆಯಲ್ಲಿ ಹೋಗಲು ಹರಸಹಾಸ ಪಡಬೇಕು. ಮಳೆಗಾಲದಲ್ಲಿ ಕೆಸರುಮಯವಾದರೆ, ಬೇಸಿಗೆಯಲ್ಲಿ ಧೂಳುಮಯ.
    ಕುಮಾರ್ ಶಿಕ್ಷಕ, ನಾಕಲಗೋಡು

    ನಮ್ಮೂರಿನ ರಸ್ತೆಯನ್ನು ತುಂಬ ವರ್ಷಗಳ ಹಿಂದೆ ಡಾಂಬರೀಕರಣಗೊಳಿಸಲಾಗಿತ್ತು. ಮಳೆ ಹೆಚ್ಚಾಗಿ ಬೀಳುತ್ತಿರುವುದರಿಂದ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಭರವಸೆ ಕೊಡುತ್ತಾರೆಯೇ ಹೊರತು ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಇದರಿಂದ ನಿತ್ಯ ತೊಂದರೆ ಎದುರಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಈ ರಸ್ತೆಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲಿ.
    ದುರ್ಗೇಶ್ ನಾಕಲಗೋಡು ಗ್ರಾಮಸ್ಥ

    ಸುಮಾರು 3 ಕಿ.ಮೀ. ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಬಗ್ಗೆ ಗ್ರಾಮಸಭೆಯಲ್ಲಿ ಸಂಬಂಧಪಟ್ಟ ಶಾಸಕರ ಗಮನಕ್ಕೆ ತರಲಾಗಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದು, ಅನುದಾನ ಬಿಡುಗಡೆಯಾದ ತಕ್ಷಣ ರಸ್ತೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ.
    ಬಸವರಾಜು ಸದಸ್ಯ, ಹಂಡ್ಲಿ ಗ್ರಾಪಂ

    ಹಂಡ್ಲಿ ಗ್ರಾಪಂ ವ್ಯಾಪ್ತಿಗೆ ಸೇರಿದ ನಾಕಲಗೋಡು-ಕಣಗಾಲು ರಸ್ತೆ ಜಿಪಂ ಅಧೀನದಲ್ಲಿದೆ. ರಸ್ತೆ ಹದಗೆಟ್ಟಿರುವ ಬಗ್ಗೆ ಗಮನಕ್ಕೆ ಬಂದಿದ್ದು, ರಸ್ತೆ ಅಭಿವೃದ್ಧಿಯಾಗಲಿ ಅಥವಾ ದುರಸ್ತಿ ಕಾಮಗಾರಿಯಾಗಲಿ ಗ್ರಾಪಂ ಅಧೀನಕ್ಕೆ ಬರುವುದಿಲ್ಲ. ಆದರೂ 2 ವರ್ಷದ ಹಿಂದೆ ಗ್ರಾಪಂ ಮೂಲಕ ನಾಕಲಗೋಡು ರಸ್ತೆ ದುರಸ್ತಿ ಸೇರಿದಂತೆ ಇತರ ರಸ್ತೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಪಂಗೆ ಕಳುಹಿಸಲಾಗಿತ್ತು. ಶಾಸಕರ ಗಮನಕ್ಕೆ ತಂದು ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.
    ಸುಧಾ ಈರೇಶ್ ಅಧ್ಯಕ್ಷೆ, ಹಂಡ್ಲಿ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts