More

    ಕೊಕಟನೂರಿಗೆ ಸಂಚಾರ ಬಲು ದುಸ್ತರ

    ಕೊಕಟನೂರ: ಅಥಣಿ ತಾಲೂಕಿನ ಖೋತನಹಟ್ಟಿ ಗ್ರಾಮದಿಂದ ಕೊಕಟನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಕೆಸರುಗದ್ದೆಯಂತಾಗಿದೆ. ಪರಿಣಾಮ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

    ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಖೋತನಹಟ್ಟಿಯಿಂದ ಕೊಕಟನೂರ ಗ್ರಾಮದವರೆಗಿನ 7 ಕಿ.ಮೀ ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣ ಆಗಿವೆ. ಅಲ್ಲದೆ ಪಕ್ಕದಲ್ಲಿ ಮುಳ್ಳಿನ ಗಿಡಗಂಟಿಗಳು ಬೆಳೆದು ರಸ್ತೆಯ ವರೆಗೂ ವ್ಯಾಪಿಸಿದೆ.
    ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀರೆಲ್ಲ ಗುಂಡಿಯಲ್ಲಿ ಸಂಗ್ರಹವಾಗಿದೆ. ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ ಟ್ರ್ಯಾಕ್ಟರ್, ಕಾರ್ ಚಾಲಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಆದರೆ ದ್ವಿಚಕ್ರ ವಾಹನ ಸವಾರರು ಮಾತ್ರ ತಮ್ಮ ದೈನಂದಿನ ಕಾರ್ಯದ ನಿಮಿತ್ತ ಹಾಗೂ ಕಾಯಿಪಲ್ಲೆ ಮಾರಾಟಕ್ಕೆ ಸಂಚರಿಸಬೇಕಾದರೆ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಿವೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡೆ ಅನಿವಾರ್ಯವಾಗಿ ಸ್ಥಳೀಯ ಜನರು ಸಂಚರಿಸುತ್ತಿದ್ದಾರೆ.

    ಈ ರಸ್ತೆ ಹದಗೆಟ್ಟು ವರ್ಷವಾಗಿದೆ, ಆಗಿನಿಂದ ದುರಸ್ತಿ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಹೇಳಿದರೂ ಇಲ್ಲಿಯವರೆಗೆ ಇತ್ತ ಯಾರೂ ಗಮನಹರಿಸದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

    ಹಾಳಾಗಿರುವ ರಸ್ತೆ ಸುಧಾರಣೆಗೆ ಯೋಜನಾ ವರದಿ ತಯಾರಿಸಲಾಗಿದೆ. ಜಿಪಂ ಅನುದಾನ ಅಥವಾ ನರೇಗಾ ಯೋಜನೆಯಡಿ ಶೀಘ್ರ ಕಾಮಗಾರಿ ಕೈಗೊಂಡು ದುರಸ್ತಿಗೊಳಿಸಲಾಗುವುದು.
    |ಈರಣ್ಣ ವಾಲಿ ಜಿಪಂ ಎಇಇ, ಅಥಣಿ

    ಆಸ್ಪತ್ರೆ ಹಾಗೂ ದೈನಂದಿನ ಕಾರ್ಯದ ನಿಮಿತ್ತ ದ್ವಿಚಕ್ರ ವಾಹನದ ಮೇಲೆ ಈ ರಸ್ತೆಯಲ್ಲಿ ತೆರಳುವಾಗ ಆಯ ತಪ್ಪಿ ಬಿದ್ದು ಗ್ರಾಮಸ್ಥರು ಹಾಗೂ ತೋಟದ ವಸತಿ ಜನರು ಗಾಯಗೊಳ್ಳುತ್ತಿದ್ದಾರೆ, ಕೂಡಲೇ ರಸ್ತೆ ದುರಸ್ತಿ ಮಾಡಬೇಕು. ಇದಕ್ಕೆ ಸ್ಪಂದಿಸದಿದ್ದರೆ ಕೊಕಟನೂರ ಹಾಗೂ ಖೋತನಹಟ್ಟಿ ಗ್ರಾಮಸ್ಥರು ಸೇರಿದಂತೆ ತೋಟದ ವಸತಿ ಜನರು ಸೇರಿ ಉಗ್ರ ಹೋರಾಟ ನಡೆಸುತ್ತೇವೆ.
    | ನಾನಾಸಾಹೇಬ ಖೋತ ಖೋತನಹಟ್ಟಿ

    | ಮೋಹನ ಪಾಟಣಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts