More

    ಬಸವ ವನ ಉದ್ಯಾನದ ಬಳಿ ಸಂಚಾರ ಅಧ್ವಾನ

    ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡ ನಡುವೆ ಬಿಆರ್​ಟಿಎಸ್ ಕಾಮಗಾರಿ ಆರಂಭವಾದಾಗಿನಿಂದ ಉಂಟಾಗಿರುವ ಎಡವಟ್ಟು ಒಂದಲ್ಲ ಎರಡಲ್ಲ. ಹಿಂದೆ ಕಾಮಗಾರಿ ಅನುಕೂಲಕ್ಕಾಗಿ ಇಲ್ಲಿಯ ಹಳೇ ಬಸ್ ನಿಲ್ದಾಣದ ಬಳಿಯ ಬಸವ ವನ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲಾಗಿತ್ತು. ಅದು ಕ್ರಮೇಣ ಅಧ್ವಾನಗೊಂಡಿದೆ.

    ಸಂಚಾರ ಬದಲಾವಣೆಗೆ ಮಾಡಿದ ವ್ಯವಸ್ಥೆಯು ಹೆಚ್ಚು ಅನುಕೂಲಕರವಾಗಿಲ್ಲದ್ದರಿಂದ ಮತ್ತು ನಿಯಮ ಪಾಲನೆಯ ಮೇಲ್ದೇಖರಿಕೆ ಬಿಗಿಯಾಗಿ ಇಲ್ಲದಿರುವುದರಿಂದ ಇಲ್ಲಿ ಹಲವರು ಯದ್ವಾತದ್ವಾ ಸಂಚರಿಸುತ್ತಾರೆ. ಹೀಗಾಗಿ, ಅಪಘಾತ ಸ್ಥಳವಾಗಿ ಮಾರ್ಪಡುತ್ತಿದೆ.

    ಗಾಜಿನ ಮನೆ ಭಾಗದಿಂದ ನ್ಯೂ ಕಾಟನ್ ಮಾರ್ಕೆಟ್ ಮತ್ತು ಚನ್ನಮ್ಮ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಮೊದಲು ಹುಬ್ಬಳ್ಳಿ-ಧಾರವಾಡ ರಸ್ತೆ ದಾಟಿ ಬಸವ ವನ ಪಕ್ಕದಿಂದ ಸಂಚರಿಸುತ್ತಿದ್ದವು. ಬದಲಾವಣೆ ಅಂಗವಾಗಿ ಹು-ಧಾ ರಸ್ತೆಯಲ್ಲಿ ಬಸವ ವನ ಸಮೀಪದಲ್ಲಿ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧಿಸಿ, ವಾಹನಗಳು ಗಾಳಿ ದುರ್ಗಮ್ಮ ದೇವಸ್ಥಾನದ ಬಳಿ ಬಲಕ್ಕೆ ಯು ಟರ್ನ್ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

    ಈ ದ್ರಾವಿಡ ಪ್ರಾಣಾಯಾಮ ಮಾಡಲು ಹಲವು ವಾಹನ ಸವಾರರು, ಆಟೋದವರು ಸಿದ್ಧರಿಲ್ಲ. ಗಾಜಿನ ಮನೆ ಕಡೆಯಿಂದ ಬಂದವರು, ನಿಷೇಧಿತ ಮಾರ್ಗದಲ್ಲೇ ಸಂಚಾರ ದಟ್ಟಣೆ ಭೇದಿಸಿ ಬಸವ ವನದ ಕಡೆಗೆ ನುಗ್ಗುವುದು ಇಲ್ಲಿ ಸರ್ವೆಸಾಮಾನ್ಯವಾಗಿದೆ. ಇದರಿಂದ ಹಲವು ಬಾರಿ ಅಪಘಾತಗಳೂ ಸಂಭವಿಸಿವೆ. ಹಳೆ ಬಸ್ ನಿಲ್ದಾಣ ಕಡೆಯಿಂದ ಬರುವ ಭಾರಿ ವಾಹನಗಳಿಗೆ ಬಸವ ವನ ಕಡೆಗೆ ತಿರುವು ನಿರ್ಬಂಧಿಸಿದ್ದರೂ ಇದೇ ಮಾರ್ಗವಾಗಿ ಬಸ್, ಲಾರಿಗಳು ಸಂಚರಿಸುತ್ತವೆ. ಇತ್ತೀಚೆಗೆ ಲಾರಿಯೊಂದು ಆಯತಪ್ಪಿ ಉದ್ಯಾನವನದ ಗುಂಡಿಯಲ್ಲಿ ಬಿದ್ದಿತ್ತು.

    ಬಿಆರ್​ಟಿಎಸ್ ಕಾಮಗಾರಿಗೂ ಮೊದಲು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದವರಿಗೆ ಈಗ ಸುತ್ತುವರಿದು ಬರುವಷ್ಟು ಪುರಸೊತ್ತು ಇಲ್ಲದಾಗಿದೆ. ನಿಮಿಷಕ್ಕೆ 30ರಿಂದ 70ರವರೆಗೆ ವಾಹನಗಳು ಇಲ್ಲಿ ಸಂಚರಿಸಿದರೂ ಸಂಚಾರ ಪೊಲೀಸರು ಈ ಸ್ಥಳವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ.

    ಅನುಕೂಲಕರವಲ್ಲದ ನಿಯಮಗಳನ್ನು ಮಾಡುವುದಕ್ಕಿಂತಲೂ ಹಿಂದೆ ಇದ್ದಂತೆ ವಾಹನಗಳು ಅಲ್ಲೇ ರಸ್ತೆ ದಾಟಲು ದಾರಿ ಮಾಡಿಕೊಡುವುದು ಒಳಿತು. ಹೇಗೂ ಅಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇದ್ದೇ ಇದೆ. ಹಾಗೆ ಮಾಡುವುದರಿಂದ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು. ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳಲಿ ಎನ್ನುವುದು ಜನರ ಸಾಮಾನ್ಯ ಬೇಡಿಕೆಯಾಗಿದೆ.

    ಐಟಿ ಪಾರ್ಕ್ ಬಳಿ ಯು ಟರ್ನ್: ಇದೇ ರೀತಿ ನ್ಯೂ ಕಾಟನ್ ಮಾರ್ಕೆಟ್ ಭಾಗದಿಂದ ಗ್ಲಾಸ್​ಹೌಸ್, ಕಾರವಾರ ರಸ್ತೆ ಕಡೆಗೆ ಹೋಗುವ ವಾಹನಗಳು ಐಟಿ ಪಾರ್ಕ್, ಜೋಶಿ ಕಣ್ಣಿನ ಆಸ್ಪತ್ರೆ, ಹೊಸೂರು ಮಾರುತಿ ಮಂದಿರ ಎದುರಿನಿಂದ ವಿಕಾಸ ನಗರ ಬಳಿಯಿಂದ ಹಾದು ಹೋಗುವಂತೆ ಮಾರ್ಗ ಸೂಚಿಸಲಾಗಿದೆ. ಹಲವು ದ್ವಿಚಕ್ರ ವಾಹನದವರು, ಆಟೋದವರು ಐಟಿ ಪಾರ್ಕ್ ಬಳಿಯಲ್ಲೇ ಎಡಕ್ಕೆ ಯು ಟರ್ನ್ ತೆಗೆದುಕೊಳ್ಳುವುದು ಕಂಡುಬರುತ್ತದೆ. ಇದು ಅತ್ಯಂತ ಅಪಾಯಕಾರಿ. ಹೀಗಾಗಿ, ಕಾಟನ್ ಮಾರ್ಕೆಟ್ ಕಡೆಯಿಂದ ಗಾಜಿನಮನೆ, ಗಿರಣಿ ಚಾಳದತ್ತ ಹೋಗುವವರು ಅಲ್ಲೇ ಸಿಗ್ನಲ್ ನೋಡಿಕೊಂಡು ರಸ್ತೆ ದಾಟುವಂತೆ ಈ ಹಿಂದೆ ಇದ್ದ ವ್ಯವಸ್ಥೆಯನ್ನೇ ಮತ್ತೆ ಜಾರಿ ಮಾಡಲಿ ಎನ್ನುತ್ತಾರೆ ಅನೇಕರು.

    ಗಾಜಿನ ಮನೆ ಕಡೆಯಿಂದ ಚನ್ನಮ್ಮ ವೃತ್ತದ ಕಡೆಗೆ ಹೋಗುವ ಹಲವು ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಬಸವ ವನ ಪಕ್ಕದಿಂದ ಹೋಗುತ್ತವೆ. ಇಲ್ಲಿ ಹಲವು ಸಲ ಅಪಘಾತಗಳು ಉಂಟಾಗಿವೆ. ಸಂಚಾರ ಪೊಲೀಸರು ಶೀಘ್ರವಾಗಿ ಸಮಸ್ಯೆ ಬಗೆಹರಿಸಬೇಕು.

    | ವಿಠ್ಠಲ ಗಲಗಲಿ, ವಾಹನ ಸವಾರ

    ಬಸವ ವನ ಬಳಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಮಸ್ಯೆ ಪರಿಹಾರದ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರವೇ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.

    | ಎಂ.ಎಸ್. ಹೊಸಮನಿ, ಎಸಿಪಿ (ಹು-ಧಾ ಸಂಚಾರ ವಿಭಾಗ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts