More

    ಟ್ರ್ಯಾಕ್ಟರ್ ಟ್ರ್ಯಾಕ್…

    ಇತ್ತೀಚಿನ ವರ್ಷಗಳಲ್ಲಿ ಟ್ರ್ಯಾಕ್ಟರ್​ಗಳು ಕೃಷಿಕರ ಜೀವನದ ಅವಿಭಾಜ್ಯ ಅಂಗಗಳೇ ಆಗಿಬಿಟ್ಟಿವೆ. ಹೊಲದಲ್ಲಿ ದುಡಿಯುವಾಗ, ಕೃಷ್ಯುತ್ಪನ್ನಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವಾಗ ಮಾತ್ರವಲ್ಲದೆ, ಇನ್ನೂ ಹತ್ತು-ಹಲವು ಕೆಲಸಗಳಿಗೆ ಈ ಟ್ರ್ಯಾಕ್ಟರ್​ಗಳು ರೈತರಿಗೆ ಉಪಯೋಗವಾಗುತ್ತಿವೆ.

    ಅನಾದಿ ಕಾಲದಿಂದಲೂ ಕೃಷಿಗೆ ಬಳಕೆಯಾಗುತ್ತಿರುವ ಜೋಡೆತ್ತುಗಳು ಎಲ್ಲ ರೈತರಿಗೂ ಕೈಟುಕದಂತಾಗಿರುವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಇಲ್ಲದೆ ಕೃಷಿ ಇಲ್ಲ ಎಂಬಂತಹ ಸ್ಥಿತಿ ಈಗ ಎಲ್ಲೆಡೆ ಇದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಸ್ತುಗಳನ್ನು ಸಾಗಿಸುವುದಕ್ಕೆ ಮಾತ್ರ ಟ್ರ್ಯಾಕ್ಟರ್ ಬಳಕೆಯಾಗುತ್ತದೆ ಎಂದು ಕೆಲವರು ಭಾವಿಸಬಹುದು. ಆದರೆ ಅದು ತಪ್ಪುಕಲ್ಪನೆ. ರೈತರ ಶ್ರಮವನ್ನು ತಗ್ಗಿಸಲು ಟ್ರ್ಯಾಕ್ಟರ್ ಬಹುಮುಖ ಕಾರ್ಯಗಳನ್ನು ಮಾಡಬಲ್ಲದು.

    ಮೊದಲನೆಯದಾಗಿ, ಅದನ್ನು ಹೊಲ ಸಮತಟ್ಟು ಮಾಡಲು ಬಳಸಬಹುದು. ಕೃಷಿ ಟ್ರ್ಯಾಕ್ಟರ್​ಗೆ ನೇಗಿಲು ಅಳವಡಿಸಿ ಜಮೀನಿನುದ್ದಕ್ಕೂ ಚಲಾಯಿಸಿದರೆ ಒಂದೇ ಒಪ್ಪತ್ತಿನಲ್ಲಿ ಇಡೀ ಜಮೀನು ಸಮತಟ್ಟಾಗುತ್ತದೆ. ದೊಡ್ಡ ದೊಡ್ಡ ಮಣ್ಣಿನ ಹೆಂಟೆಗಳನ್ನು ಸುಲಭವಾಗಿ ಪುಡಿಪುಡಿ ಮಾಡುತ್ತದೆ. ಮನುಷ್ಯನ ಶ್ರಮದಿಂದ ಈ ಕೆಲಸಗಳು ಆಗುವಂತಾದರೆ ಹಲವು ದಿನಗಳ ಸಮಯ ತಗಲುತ್ತದೆ. ಟ್ರ್ಯಾಕ್ಟರ್ ಬಳಸುವುದರಿಂದ ನೆಲವು ಕೆಲವೇ ಗಂಟೆಗಳಲ್ಲಿ ಹಸನಾಗಿ ಬಿತ್ತನೆ ಮಾಡಲು ಸಿದ್ಧಗೊಳ್ಳುತ್ತದೆ.

    ನಂತರ ನೇಗಿಲು ತೆಗೆದಿಟ್ಟು ಡ್ರಿಲ್ಲರ್ ಅಥವಾ ಪ್ಲಾಂಟರ್ ಉಪಕರಣಗಳನ್ನು ಟ್ರಾಕ್ಟರ್​ಗೆ ಅಳವಡಿಸಿ ಬಳಸಲು ಅನುಕೂಲವಾಗುವಂತೆಯೂ ಆಧುನಿಕ ಟ್ರ್ಯಾಕ್ಟರ್​ಗಳನ್ನು ಹಲವು ಕಂಪನಿಗಳು ರೂಪಿಸಿವೆ. ಅವುಗಳ ಸಹಾಯದೊಂದಿಗೆ ಸುಲಭವಾಗಿ ಮತ್ತು ಕ್ಷಿಪ್ರಗತಿಯಲ್ಲಿ ಬೀಜಗಳನ್ನು ಬಿತ್ತಬಹುದಾಗಿದೆ. ಒಂದು ಎಕರೆಯಲ್ಲಿ ಕೃಷಿ ಕಾರ್ವಿುಕರೇ ಪಾತಿ ಮಾಡಲು ಹಲವು ದಿನಗಳು ಬೇಕಾಗುತ್ತವೆ. ಆದರೆ ಒಂದು ಟ್ರ್ಯಾಕ್ಟರ್​ನಿಂದ ಅದನ್ನು ಒಂದೇ ದಿನದಲ್ಲಿ ಮುಗಿಸಬಹುದು.

    ಹನಿ ನೀರಾವರಿ ಇಲ್ಲದ ಕಡೆಗಳಲ್ಲಿ ಟ್ರ್ಯಾಕ್ಟರ್​ನ ಹಿಂಬದಿಯಲ್ಲಿ ಇಟ್ಟ ಬ್ರೌಸರ್​ಗಳಿಂದಲೇ ನೀರು ಹಾಯಿಸಬಹುದು. ಮರದ ದಿಮ್ಮಿಯಂತಹ ಅತಿ ಭಾರವಾದ ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ರೈತನ ಎರಡು ಕೈಗಳ ಶಕ್ತಿ ಸಾಲುವುದಿಲ್ಲ. ಅದಕ್ಕೆ ಟ್ರ್ಯಾಕ್ಟರ್​ನಂತಹ ಹೆವಿಡ್ಯೂಟಿ ವಾಹನವೇ ಬೇಕು. ಹೊಲದಲ್ಲಿ ಅಥವಾ ಸುತ್ತಮುತ್ತ ಬೆಳೆದ ಅನಗತ್ಯ ಪೊದೆಗಳನ್ನು ಕ್ಷಣಾರ್ಧದಲ್ಲಿ ಬೇರುಸಮೇತ ಎತ್ತಿ ದೂರ ಹಾಕಲು ಟ್ರ್ಯಾಕ್ಟರ್​ಗಳು ಅತ್ಯಂತ ಸಹಾಯಕ.

    ಜಗತ್ತಿನ ಮೊತ್ತಮೊದಲ ಟ್ರ್ಯಾಕ್ಟರ್ ರೂಪುಗೊಂಡಿದ್ದು ಅಮೆರಿಕದಲ್ಲಿ. ಅಲ್ಲಿನ ಅಯೋವಾದ ಕ್ಲೇಟೌನ್ ಕೌಂಟಿಯಲ್ಲಿ ಗ್ಯಾಸೋಲಿನ್/ಪೆಟ್ರೋಲ್​ನಿಂದ ನಡೆಯುವ ಟ್ರ್ಯಾಕ್ಟರನ್ನು ಜಾನ್ ಫ್ರೋಲಿಚ್ ಎಂಬಾತ 1892ರಲ್ಲಿ ರೂಪಿಸಿದ. ಅದು ಭಾರತಕ್ಕೆ ಬಂದಿದ್ದು ಸುಮಾರು 1940ರ ದಶಕದಲ್ಲಿ. ಭಾರತವು ಒಂದು ಕೃಷಿಪ್ರಧಾನ ರಾಷ್ಟ್ರವಾಗಿರುವುದರಿಂದ ಇಲ್ಲಿ ಅದರ ಬಳಕೆ ಹೆಚ್ಚಾಯಿತು. ಇಲ್ಲಿನ ಅಗತ್ಯಗಳಿಗೆ ತಕ್ಕಂತೆ ಅದರಲ್ಲಿ ಹತ್ತುಹಲವು ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳೂ ರೂಪುಗೊಂಡವು. ತತ್ಪರಿಣಾಮವಾಗಿ ಕೃಷಿ ಉತ್ಪಾದನೆ ಸುಲಭವೂ ಆಗಿದೆ, ಪ್ರಮಾಣದಲ್ಲಿ ಏರಿಕೆಯೂ ಆಗಿದೆ. ಭಾರತದಲ್ಲೇ ಟ್ರ್ಯಾಕ್ಟರ್ ಉತ್ಪಾದನೆ ಆರಂಭವಾಗಿದ್ದು 1960ರ ದಶಕದಲ್ಲಿ.

    ಬಿತ್ತನೆಗೆ ಟ್ರ್ಯಾಕ್ಟರ್ ಬಳಕೆ

    ದೇಶದ ಹಲವಾರು ಕಡೆ ಈಗ ಗ್ರಾಮ, ಪಟ್ಟಣಗಳ ರೈತರು ಜೋಡೆತ್ತಿನ ಬೇಸಾಯದ ಬದಲಿಗೆ ಟ್ರ್ಯಾಕ್ಟರ್​ಗೆ ಅಳವಡಿಸಿರುವ ಯಂತ್ರದ ಸಹಾಯದಿಂದ ಬಿತ್ತನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಬಿತ್ತನೆಗೆ ಜೋಡಿ ಎತ್ತುಗಳು ಲಭ್ಯವಾಗದ ಕಾರಣ ಟ್ರ್ಯಾಕ್ಟರ್ ನೆರವಿನಿಂದ ರೈತರು ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಜೋಡಿ ಎತ್ತಿನ ಬೇಸಾಯಕ್ಕೆ ವ್ಯಾಪಕ ಬೇಡಿಕೆ ಇದೆ. ಪ್ರತಿ ಎಕರೆಗೆ ಸುಮಾರು ಒಂದು ಸಾವಿರ ರೂ.ವರೆಗೆ ಬಾಡಿಗೆ ನೀಡಬೇಕಾಗುತ್ತದೆ. ಇದು ಕೃಷಿಕರಿಗೆ ದುಬಾರಿ ವ್ಯವಹಾರ. ನಿರ್ವಹಣೆಯೂ ಕಷ್ಟ. ಹಾಗಾಗಿ ರೈತರೀಗ ಟ್ರ್ಯಾಕ್ಟರ್ ನೆರವಿನಿಂದ ಬಿತ್ತನೆ ಮಾಡುತ್ತಿದ್ದಾರೆ. ಅಲ್ಲದೆ ತಕ್ಷಣವೇ ಬೇಕೆಂದರೆ ಜೋಡೆತ್ತುಗಳು ಎಲ್ಲಿಯೂ ಸಿಗುವುದಿಲ್ಲ. ಸಿಕ್ಕರೂ ಒಂದೇ ದಿನದಲ್ಲಿ ಬಿತ್ತನೆ ಆಗುವುದಿಲ್ಲ. ಆದರೂ ಅವುಗಳ ಬಾಡಿಗೆ ದುಬಾರಿ. ಟ್ರಾ್ಯಕ್ಟರ್ ಬಾಡಿಗೆ ಕಡಿಮೆ ಮತ್ತು ಕೆಲಸ ಬೇಗ ಆಗುತ್ತದೆ.

    ರೈತ ಸಾರಥಿ ಯೋಜನೆ

    ಟ್ರ್ಯಾಕ್ಟರ್ ಮತ್ತು ಟ್ರೖೆಲರ್ ಹೊಂದಿರುವ ರೈತರಿಗೆ ಚಾಲನಾ ಪರವಾನಗಿ ನೀಡುವ ಸಲುವಾಗಿ ರಾಜ್ಯ ಸರ್ಕಾರ ರೈತ ಸಾರಥಿ ಯೋಜನೆ ಜಾರಿಗೆ ತಂದಿದೆ. ಬಹುತೇಕ ರೈತರು ತಮ್ಮಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್ ಬಳಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆಯಿರುತ್ತದೆ. ಹಾಗಾಗಿ ಟ್ರ್ಯಾಕ್ಟರ್ ಮಾಲೀಕರು ಅಥವಾ ಚಾಲಕರಿಗೆ ಅನುಕೂಲ ಕಲ್ಪಿಸಲೆಂದು ರಾಜ್ಯ ಸರಕಾರ ರೈತ ಸಾರಥಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಕೃಷಿ ಬಳಕೆ ಟ್ರಾ್ಯಕ್ಟರ್, ಟ್ರೖೆಲರ್ ಹೊಂದಿರುವ ರೈತರಿಗೆ ಮೋಟಾರು ವಾಹನ ಕಾಯಿದೆ 1988ರ ನಿಯಮಾವಳಿ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ತರಬೇತಿಯನ್ನೂ ಸರ್ಕಾರ ಆಗಾಗ ನೀಡುತ್ತಿದೆ. ಜತೆಗೆ ಕಲಿಕಾ ಲೈಸೆನ್ಸ್ ಮತ್ತು ಚಾಲನಾ ಅನುಜ್ಞಾಪತ್ರ ನೀಡಲಾಗುತ್ತಿದೆ.

    ಕೊಳ್ಳುವಾಗಲೇ ಯೋಚಿಸಿ

    ಪ್ರತಿಯೊಬ್ಬರ ಅಗತ್ಯಗಳೂ ಬೇರೆಬೇರೆಯಾಗಿರುತ್ತವೆ. ಟ್ರ್ಯಾಕ್ಟರ್ ಖರೀದಿಸುವಾಗ ಅದರ ಅಶ್ವಶಕ್ತಿ ಸಾಮರ್ಥ್ಯ, ಗಾತ್ರ, ತೂಕ ಮುಂತಾದವುಗಳನ್ನು ಮೊದಲೇ ತಿಳಿದುಕೊಳ್ಳಬೇಕಾಗುತ್ತದೆ. ಗಾತ್ರ ದೊಡ್ಡದಾಗಿದೆ ಎಂದ ಮಾತ್ರಕ್ಕೆ ಟ್ರ್ಯಾಕ್ಟರ್​ನ ಶಕ್ತಿ ಕೂಡ ಜಾಸ್ತಿ ಇದೆ ಎಂದು ಅರ್ಥವಲ್ಲ. ಹೆಚ್ಚು ಅಶ್ವಶಕ್ತಿ ಹೊಂದಿರುವ ಸಣ್ಣ ಟ್ರ್ಯಾಕ್ಟರ್​ಗಳು ಕೂಡ ಕಡಿಮೆ ಅಶ್ವಶಕ್ತಿ ಹೊಂದಿರುವ ದೊಡ್ಡ ಟ್ರ್ಯಾಕ್ಟರ್​ಗಿಂತ ಜಾಸ್ತಿ ಕೆಲಸ ಮಾಡಬಲ್ಲವು. 35 ಅಶ್ವಶಕ್ತಿಗಿಂತ ಕಡಿಮೆ ಪವರ್ ಇರುವ ಟ್ರ್ಯಾಕ್ಟರ್​ಗಳು ಸಾಧಾರಣ ಕೆಲಸಗಳನ್ನು ಮಾಡಬಲ್ಲವು. ವಿವಿಧ ಸಲಕರಣೆಗಳನ್ನು ಹಾಕಿಕೊಂಡು ಶಕ್ತಿಯುತವಾಗಿ ಕೆಲಸ ಮಾಡಬೇಕೆಂದರೆ ಪವರ್ ಟೇಕಾಫ್ (ಪಿಟಿಒ) ಹಾರ್ಸ್​ಪವರ್ ಅತ್ಯಗತ್ಯ. ಇದು ಸಲಕರಣೆಗಳಿಗೆ ಎಷ್ಟು ಪವರ್ ಸಿಗುತ್ತದೆ ಎಂಬುದರ ಅಳತೆ. ಇಂಜಿನ್ ಹಾರ್ಸ್​ಪವರ್​ಗಿಂತ ಈ ಪಿಟಿಒ ಪವರ್​ನ ಅವಶ್ಯಕತೆಯೇ ಜಾಸ್ತಿ ಇರುತ್ತದೆ. ಕತ್ತರಿಸುವ ಸಾಧನ (ಶ್ರೆಡರ್) ಬಳಸಬೇಕೆಂದರೆ ಇಂಜಿನ್ ಹಾರ್ಸ್​ಪವರ್ ಬದಲಿಗೆ 20 ಪಿಟಿಒ ಹಾರ್ಸ್​ಪವರ್ ಬೇಕು. ಆರು ಅಡಿ ಕಟರ್ ಬಳಸಲು 30 ಪಿಟಿಒ ಹಾರ್ಸ್​ಪವರ್ ಅಗತ್ಯ. ಹೀಗೆ ಭಾರವಾದ ವಸ್ತುಗಳನ್ನು ಎತ್ತಲು, ಪೊದೆಗಳನ್ನು ಕತ್ತರಿಸಲು, ಸ್ಥಳಾಂತರಿಸಲು ಮುಂತಾದ ಕೆಲಸಗಳಿಗೆ ಅದಕ್ಕೆ ಅಗತ್ಯವಾದ ಹಾರ್ಸ್​ಪವರ್ ಬೇಕಾಗುತ್ತದೆ. ಅದೇ ರೀತಿ ಟ್ರ್ಯಾಕ್ಟರ್ ಭಾರವಾಗಿದ್ದರೆ ಒಳ್ಳೆಯದು ಎಂಬುದು ಕೆಲವು ರೈತರ ಭಾವನೆ. ತೂಕಕ್ಕೂ ಗುಣಮಟ್ಟಕ್ಕೂ ಸಂಬಂಧವೇ ಇಲ್ಲ. ಹಾಗೆಯೇ ಟ್ರ್ಯಾಕ್ಟರ್​ನ ಗಾತ್ರವೂ ಗುಣಮಟ್ಟವನ್ನು ನಿರ್ಧರಿಸುವುದಿಲ್ಲ. ನೋಡಲು ದೊಡ್ಡದಿದೆ ಎಂದ ಮಾತ್ರಕ್ಕೆ ಗುಣಮಟ್ಟ ಚೆನ್ನಾಗಿದೆ ಎಂದು ತೀರ್ವನಿಸಲು ಆಗುವುದಿಲ್ಲ

    ಟ್ರ್ಯಾಕ್ಟರ್​ನ ಬಾಳಿಕೆ ಹೆಚ್ಚಿಸುವ ಲೂಬ್ರಿಕಂಟ್​ಗಳು

    ಟ್ರ್ಯಾಕ್ಟರ್ ಸರಾಗವಾಗಿ ಓಡುವಂತೆ ಮಾಡಲು ಸಹಾಯ ಮಾಡುವ ಎಲ್ಲ ಆಯಿಲ್​ಗಳನ್ನು ನಿಯಮಿತವಾಗಿ ಚೆಕ್ ಮಾಡುವುದು ಅತ್ಯವಶ್ಯಕ. ಇಂಜಿನ್, ಹೈಡ್ರಾಲಿಕ್, ಟ್ರಾನ್ಸ್​ಮಿಷನ್ ಮತ್ತು ಬ್ರೇಕ್ ಆಯಿಲ್​ಗಳನ್ನು ನಿರ್ದಿಷ್ಟ ಅವಧಿಯಲ್ಲಿ ಬದಲಿಸಲೇಬೇಕಾಗುತ್ತದೆ. ಬಳಸಿ ಬಳಸಿ ಕರಕಲಾದ ಆಯಿಲ್​ನಿಂದ ಟ್ರ್ಯಾಕ್ಟರ್​ಗೆ ಹೆಚ್ಚಿನ ಹಾನಿಯಾಗುತ್ತದೆ. ಆಗಾಗ ಆಯಿಲ್ ತಪಾಸಣೆ ಮಾಡುತ್ತಿದ್ದರೆ ಅದು ಬೇಗ ಖಾಲಿಯಾಗುತ್ತಿದೆಯೋ, ನಿರ್ದಿಷ್ಟ ಸಮಯಕ್ಕೇ ಕಪ್ಪಗಾಗುತ್ತಿದೆಯೋ ಎಂಬುದೂ ಮನದಟ್ಟಾಗುತ್ತದೆ. ನಿಗದಿತ ಅವಧಿಗಿಂತ ಮೊದಲೇ ಖಾಲಿಯಾಗುತ್ತಿದ್ದರೆ ಎಲ್ಲಿಯೋ ಸೋರಿಕೆಯಾಗುತ್ತಿದೆ ಎಂಬುದು ಕೂಡ ಅರಿವಿಗೆ ಬರುತ್ತದೆ. ಸೂಕ್ತ ದುರಸ್ತಿ ಮಾಡಿಸಿ ಆ ಸೋರಿಕೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪ್ರತಿ ರೇಡಿಯೇಟರ್​ಗೂ ಇಂತಹುದೇ ಕಂಪನಿಯ ಕೂಲಂಟ್ ಹಾಕಬೇಕೆಂಬ ನಿಯಮ ಇರುತ್ತದೆ. ಮ್ಯಾನುಯಲ್ ನೋಡಿ ಅದನ್ನು ನಿರ್ಧರಿಸಬೇಕಾಗುತ್ತದೆ. ಬಹುತೇಕ ಟ್ರ್ಯಾಕ್ಟರ್​ಗಳಿಗೆ ಆಟೋಮೆಟಿಕ್ ಬ್ರೇಕ್​ಗಳಿರುತ್ತವೆ. ಅವು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಅವುಗಳಿಗೆ ಕಾಲಕಾಲಕ್ಕೆ ಸರಿಯಾಗಿ ಲ್ಯೂಬ್ರಿಕಂಟ್​ಗಳನ್ನು (ಆಯಿಲ್) ಹಾಕಬೇಕು. ಉತ್ತಮವಾಗಿ ಲ್ಯೂಬ್ರಿಕೇಟ್ ಆಗಿರುವ ಟ್ರ್ಯಾಕ್ಟರ್ ನಿಮಗೆ ಹೆಚ್ಚು ತಲೆನೋವು ಕೊಡುವುದೇ ಇಲ್ಲ. ಹಾಗಾಗಿ ಆಯಿಲ್ ಮಟ್ಟವನ್ನು ನಿರಂತರವಾಗಿ ಗಮನಿಸುತ್ತಿರಿ. ಯಾವಾಗಲೂ ಹೆವಿ ಡ್ಯೂಟಿ ಲ್ಯೂಬ್ರಿಕಂಟ್​ಗಳನ್ನೇ ಉಪಯೋಗಿಸಿ. ಕಾರು ಮತ್ತಿತರ ಹಗುರ ವಾಹನಗಳಿಗೆ ಬಳಸುವ ಲ್ಯೂಬ್ರಿಕಂಟ್​ಗಳನ್ನು ಟ್ರ್ಯಾಕ್ಟರ್​ಗಳಿಗೆ ಬಳಸದಿರಿ. ಕೆಲವು ಕಂಪನಿಗಳ ಟ್ರ್ಯಾಕ್ಟರ್​ಗಳಿಗೆ ನಿರ್ದಿಷ್ಟ ಲ್ಯೂಬ್ರಿಕಂಟ್​ಗಳನ್ನೇ ಬಳಸಬೇಕೆಂಬ ನಿಯಮವನ್ನು ಯೂಸರ್ಸ್ ಮ್ಯಾನುಯಲ್​ನಲ್ಲಿ ಸೂಚಿಸಿರುತ್ತಾರೆ. ಅದನ್ನೇ ಬಳಸುವುದು ವಿಹಿತ. ಬಿಡಿಭಾಗಗಳನ್ನು ಸರಿಯಾಗಿ ಪರೀಕ್ಷಿಸಿ. ಅವುಗಳಿಗೆ ಕ್ಲೀನಿಂಗ್ ಮತ್ತು ಗ್ರೀಸಿಂಗ್ ಅವಶ್ಯಕತೆ ಇದ್ದರೆ ಕೂಡಲೇ ಮಾಡಿಸಿ. ಬೇರೆ ಬೇರೆ ಟ್ರ್ಯಾಕ್ಟರ್​ಗಳ ವಿನ್ಯಾಸ ಬೇರೆಬೇರೆಯಾಗಿರುತ್ತದೆ. ಅವುಗಳ ಆಯಿಲ್ ಬದಲಾವಣೆಯ ಅವಧಿಯೂ ಭಿನ್ನವಾಗಿರುತ್ತದೆ. ಮ್ಯಾನುಯಲ್​ನಲ್ಲಿ ಸ್ಪಷ್ಟಪಡಿಸಿದ ಅವಧಿಗೆ ಸರಿಯಾಗಿ ಆಯಿಲ್ ಬದಲಿಸುವುದು ಜಾಣತನ. ಕೆಲವು ಟ್ರ್ಯಾಕ್ಟರ್​ಗಳಿಗೆ ಪ್ರತಿ ನೂರು ಗಂಟೆಗಳ ಕಾರ್ಯನಿರ್ವಹಣೆಯ ಬಳಿಕ ಆಯಿಲ್ ಬದಲಿಸುವುದು ಸೂಕ್ತವಾಗಿರುತ್ತದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts