ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಸುಳ್ಳು ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಅವರ ಯಾವುದೇ ಗ್ಯಾರಂಟಿಗಳು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬರುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಅಕ್ಕಿ ಉಚಿತವಾಗಿ ಕೊಡುತ್ತಿದ್ದರು. ಇದೇ ಅಕ್ಕಿಯನ್ನು ನಾವು ಕೊಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. 200 ಯುನಿಟ್ ವಿದ್ಯುತ್ ಉಚಿತ ಎಂದು ಪ್ರಣಾಳಿಕೆಯಲ್ಲಿ ಹೇಳಿ ಈಗ ಕೇವಲ 50& 60 ಯುನಿಟ್ಗೆ ಸೀಮಿತಗೊಳಿಸಿದ್ದಾರೆ.
ಯುವನಿಧಿಯನ್ನು ಅಧಿಕಾರಕ್ಕೆ ಬಂದು ಏಳೆಂಟು ತಿಂಗಳ ನಂತರ ಕೊಡಲು ಆರಂಭಿಸಿದ್ದಾರೆ. ಅದು ಕೂಡ ಈ ವರ್ಷ ಪದವಿ ಮುಗಿಸಿದವರಿಗೆ ಎಂಬ ಷರತ್ತು ಹಾಕಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಅಸ್ತ್ರವಾಗಬೇಕಿತ್ತು. ಆದರೆ, ಅವುಗಳ ಬಗ್ಗೆ ಅವರಿಗೇ ಗ್ಯಾರಂಟಿ ಇಲ್ಲ. ಹಾಗಾಗಿ ಕೇಂದ್ರ ಸರ್ಕಾರದ ವಿರುದ್ಧ ಚೊಂಬು ಹಿಡಿದು ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮೊದಲು ಬರಗಾಲ ನಿರ್ವಹಣೆಗೆ ಹಣ ಖರ್ಚು ಮಾಡಿ ಆನಂತರ ಕೇಂದ್ರ ಸರ್ಕಾರಕ್ಕೆ ಕೇಳಬೇಕು. ಇದನ್ನು ಜೆಡಿಎಸ್ ಆಡಳಿತ ಇದ್ದಾಗ ಮಾಡಿದ್ದೇವೆ. ಆದರೆ, ಕಾಂಗ್ರೆಸ್ನವರು ಹೀಗೆ ಮಾಡುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ನ ಐದು ಗ್ಯಾರಂಟಿಗಳಲ್ಲಿ ರೈತರ ಪರ ಯಾವುದೂ ಇಲ್ಲ. ಇದೀಗ ಮಳೆಯಾಗುತ್ತಿದ್ದು, ಬೀಜ, ಗೊಬ್ಬರ ಸಿಗುವ ಗ್ಯಾರಂಟಿಯೇ ಸಿಗುತ್ತಿಲ್ಲ. ಬರೀ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಆಥಿರ್ಕ ದಿವಾಳಿಯಾಗಿದೆ. ಅಭಿವೃದ್ಧಿಗೆ ಇವರ ಬಳಿ ಹಣ ಇಲ್ಲ. ನೇಹಾ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಬಹಳ ವಿಳಂಬ ಮಾಡಿದೆ. ಯಾರೊಬ್ಬರೂ ಇಂತಹ ಕೃತ್ಯಕ್ಕೆ ಕೈ ಹಾಕದಂತೆ ಪ್ರಕರಣ ನಿಭಾಯಿಸಬಹುದಿತ್ತು ಎಂದು ಹೇಳಿದರು.
ಕೇಂದ್ರದ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಮತ್ತೊಂದು ಬಾರಿ ಮೋದಿ ಅವರನ್ನು ಬೆಂಬಲಿಸಬೇಕು. ಧಾರವಾಡದಲ್ಲಿ ಪ್ರಲ್ಹಾದ ಜೋಶಿ ಅವರಿಗೆ ಶಕ್ತಿ ನೀಡಬೇಕು. ಕುರುಬ ಸಮಾಜವು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಕೆ.ಎಸ್. ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಅಗ್ರ ಸ್ಥಾನ ಇತ್ತು. ಟಿಕೆಟ್ ವಿಷಯವನ್ನು ಬಹಳ ಸಿರಿಯಸ್ ತಗೊಂಡು ದುಡುಕಿನ ನಿರ್ಧಾರ ಮಾಡಿದರು ಎಂದು ಕಾಶಂಪುರ ಅಭಿಪ್ರಾಯಪಟ್ಟರು.
ಮೋದಿ ಒಬ್ಬರೇ ಪ್ರಧಾನಿಯಾಗಲು ಅರ್ಹರು ಎಂಬುದನ್ನು ಅರಿತುಕೊಂಡೇ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿಗೆ ಸೈ ಎಂದಿದ್ದಾರೆ. ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಮಹಾನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಗುರುರಾಜ ಹುಣಸಿಮರದ, ಗ್ರಾಮೀಣ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಇತರರು ಗೋಷ್ಠಿಯಲ್ಲಿದ್ದರು.