More

    ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿಲ್ಲ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಗೆ 2023-24ನೇ ಸಾಲಿನಲ್ಲಿ 36 ಸಾವಿರ ಕೋಟಿ ರೂ. ಹಂಚಿಕೆ ಮಾಡಿದರೂ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿಲ್ಲ. ಇದನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

    ಹುಬ್ಬಳ್ಳಿಯ ಹೆಗ್ಗೇರಿ ಮೈದಾನದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಬಿಜೆಪಿಯವರು ಹಸಿ ಸುಳ್ಳು ಹೇಳುತ್ತಿದ್ದಾರೆ. ಎಲ್ಲ ಪಂಚ ಗ್ಯಾರಂಟಿ ಯೋಜನೆಗಳು ಐದು ವರ್ಷಗಳ ಕಾಲ ಜಾರಿಯಲ್ಲಿ ಇರಲಿದೆ. ದಾರಿ ತಪ್ಪಿಸುವ ಬಿಜೆಪಿಯವರ ಮಾತಿಗೆ ಯಾರೂ ಮರುಳಾಗಬಾರದು ಎಂದರು.

    ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗ ಚಿನ್ನಪ್ಪ ರೆಡ್ಡಿ ಆಯೋಗವೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸ್ಲಿಮ್​ಗೆ ಶ. 4ರಷ್ಟು ಮೀಸಲಾತಿಗೆ ಶಿಫಾರಸ್ಸು ಮಾಡಿತ್ತು. ಅದನ್ನೇ ನಾವು ಮುಂದುವರಿಸುವ ಕೆಲಸ ಮಾಡುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಇದನ್ನು ರದ್ದು ಪಡಿಸುವ ನಿರ್ಧಾರ ಮಾಡಿದ್ದರು. ಬಳಿಕ ಅವರ ಸರ್ಕಾರವೇ ಸವೋಚ್ಛ ನ್ಯಾಯಾಲಯದಲ್ಲಿ ಯಥಾಸ್ಥಿತಿ ಮುಂದುವರಿಸುವುದಾಗಿ ಅಫಿಡೆವಿಟ್ ಕೊಟ್ಟಿದೆ ಎಂದು ಹೇಳಿದರು.

    ಪ್ರಜಾಪ್ರಭುತ್ವ ರಕ್ಷಣೆಯ ಚುನಾವಣೆ

    ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ಚುನಾವಣೆ. ಕಾಂಗ್ರೆಸ್​ನ ಪಂಚ ಗ್ಯಾರಂಟಿ ಹಾಗೂ ಬಿಜೆಪಿಯ ಭಾವನಾತ್ಮಕ ವಿಷಯಗಳ ನಡುವಿನ ಚುನಾವಣೆ. ಉತ್ತರ ಕರ್ನಾಟಕದಲ್ಲಿ ನಾವು 12 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೋಟಿ, ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಡಂಗನವರ, ರಜತ್ ಉಳ್ಳಾಗಡ್ಡಿಮಠ, ಅಲ್ತಾಫ್ ಕಿತ್ತೂರ, ಮಾಜಿ ಸಂಸದ ಐ.ಜಿ. ಸನದಿ, ಅನಿಲಕುಮಾರ ಪಾಟೀಲ, ಬಸವರಾಜ ಗುರಿಕಾರ, ಮಾಜಿ ಎಂಎಲ್​ಸಿ ಮೋಹನ ಲಿಂಬಿಕಾಯಿ, ಶಾಸಕ ಎನ್.ಎಚ್. ಕೋನರಡ್ಡಿ, ಎಫ್.ಎಚ್. ಜಕ್ಕಪ್ಪನವರ್, ಅಜ್ಜಂಪೀರ ಖಾದ್ರಿ, ಯಾಸೀರ ಖಾನ್ ಪಠಾಣ, ಇತರರು ಇದ್ದರು. ಅಲ್ತಾಫ್ ಹಳ್ಳೂರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts