More

    ಸೀತೆಬೆಟ್ಟದಲ್ಲಿ ಶಿಲಾಯುಗದ ಕುರುಹು!

    ಪಿರಿಯಾಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಸೀತೆಬೆಟ್ಟ ತನ್ನ ಐತಿಹಾಸಿಕ ಹಿನ್ನೆಲೆಯಿಂದ ಇತ್ತೀಚಿನ ದಿನಗಳಲ್ಲಿ ಸಂಶೋಧಕರನ್ನು ತನ್ನತ್ತ ಸೆಳೆಯುತ್ತಿದೆ…!

    ಬೆಟ್ಟದಪುರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಚಿಕ್ಕನೇರಳೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬ್ಯಾಡರಬಿಳಗುಲಿ ಗ್ರಾಮದ ಸಮೀಪವಿರುವ ಪುರಾಣ ಪ್ರಸಿದ್ಧ ಸೀತೆಕಲ್ಲು ಬೆಟ್ಟ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿದೆ. ಇತಿಹಾಸ ಸುಮಾರು ಕ್ರಿ.ಪೂ.2000 ವರ್ಷಗಳ ಹಿಂದಿನ ಕುರುಹುಗಳನ್ನು ಹೊಂದಿರುವ ಈ ಪ್ರದೇಶವು ಬೃಹತ್ ಶಿಲಾಯುಗದ ವಾಸಸ್ಥಳವಾಗಿತ್ತು ಎಂಬುದಕ್ಕೆ ಹಲವು ಸಾಕ್ಷಿಗಳು ದೊರತಿವೆ. ಕೊಡಗು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಉಪನ್ಯಾಸಕರಾಗಿರುವ ಡಾ.ಎಚ್.ಆರ್.ಅರುಣ್ ಕುಮಾರ್ ತಮ್ಮ ಸ್ನೇಹಿತರೊಂದಿಗೆ ಈ ಪ್ರದೇಶದಲ್ಲಿ ಸಂಶೋಧನೆ ನಡೆಸಿ ಐತಿಹಾಸಿಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

    ಶಿಲಾಯುಗದ ಮಂದಿ ಇಲ್ಲಿ ವಾಸವಾಗಿದ್ದರು ಎಂಬುದಕ್ಕೆ ಇಲ್ಲಿ ದೊರೆತಿರುವ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಮಾಡಿದ ಸುಟ್ಟ ಮಡಕೆಯ ಚೂರುಗಳು, ವೃತ್ತಾಕಾರದ ಸಮಾಧಿಗಳು ಸಾಕ್ಷಿಯಾಗಿ ದೊರೆತಿವೆ. ಸೀತೆಕಲ್ಲು ಬೆಟ್ಟದ ಸುತ್ತಮುತ್ತಲಿನ ಪ್ರದೇಶ ಹಾಗೂ ಹಾಗೂ ಬೆಟ್ಟದ ಮೇಲಿನ ಕೆಲವು ಭಾಗಗಳಲ್ಲಿ ಕೆಂಪು ಮತ್ತು ಕಪ್ಪು ಮಣ್ಣಿನ ಸುಟ್ಟ ಮಡಕೆಗಳ ಜತೆಗೆ ಕಲ್ಲಿನ ಗುಳಿಗಳು ಸಹ ಕಂಡುಬಂದಿವೆ. ‘ಇಂತಹ ಬೃಹತ್ ಶಿಲಾಯುಗದ ವಾಸ ಸ್ಥಳದ ಕುರುಹುಗಳು ಸಿಗುವುದು ತುಂಬಾ ಅಪರೂಪವಾಗಿದ್ದು, ಕರ್ನಾಟಕದಲ್ಲಿ ಕಂಡುಬಂದಿರುವುದು ಮತ್ತಷ್ಟು ವಿಶೇಷವಾಗಿದೆ’ ಎಂಬುದು ಅರುಣ್ ಕುಮಾರ್ ಅವರ ಅಭಿಪ್ರಾಯವಾಗಿದೆ.

    ಕೋಣೆಯಾಕೃತಿಯ ಗುಹೆಗಳು: ಈ ಬೆಟ್ಟದಲ್ಲಿ ಬಿಳಿ ಗ್ರಾನೈಟ್ ಶಿಲೆಗಳಿಂದ ನಿರ್ಮಿತಗೊಂಡಿರುವ ದೊಡ್ಡ ದೊಡ್ಡ ಕಲ್ಲುಬಂಡೆಗಳಿದ್ದು, ಬೆಟ್ಟದ ಕೆಳಗೆ ಕೆರೆಗಳನ್ನು ಹೋಲುವ ಪ್ರದೇಶಗಳು ಕಂಡುಬಂದಿವೆ. ಬೆಟ್ಟದ ಸುತ್ತಮುತ್ತಲಿನ ಪ್ರದೇಶವು ವ್ಯವಸಾಯಕ್ಕೆ ಯೋಗ್ಯವಾದ ಉತ್ತಮ ಕಪ್ಪು ಮತ್ತು ಕೆಂಪು ಮಣ್ಣಿನಿಂದ ಕೂಡಿದ್ದು, ಶಿಲಾಯುಗದ ಜನರು ವಾಸಿಸುವುದಕ್ಕೆ ಮತ್ತು ಪ್ರಾಣಿಗಳ ಬೇಟೆಗಾಗಿ ಯೋಗ್ಯ ಸ್ಥಳವೆಂದು ಈ ಜಾಗವನ್ನು ಆಯ್ಕೆಮಾಡಿಕೊಂಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಎಂಬುದಕ್ಕೆ ದೊಡ್ಡ ಕಲ್ಲು ಬಂಡೆಗಳ ಕೆಳಗೆ ನಿರ್ಮಿಸಿರುವ ಕೋಣೆಯಾಕೃತಿಯ ಗುಹೆಗಳು ಇಲ್ಲಿವೆ. ಸುಮಾರು 10 ಅಡಿ ಉದ್ದ, 15 ಅಡಿ ಅಗಲ ಹಾಗೂ 3 ಅಡಿ ಎತ್ತರವಿರುವ ಈ ಕೋಣೆಯಾಕೃತಿಯ ಗುಹೆಗಳ ಒಳಗೆ ಹೋಗಲು ಮತ್ತು ಹೊರಬರಲು ಎರಡು ಅಡಿ ಅಗಲದ ಬಾಗಿಲುಗಳ ಜತೆಗೆ ಮಳೆ, ಗಾಳಿ ಮತ್ತು ಕಾಡು ಪ್ರಾಣಿಗಳಿಂದ ತೊಂದರೆಯಾಗದಂತೆ ಶಿಲಾಯುಗದ ಮಂದಿ ತಮ್ಮ ವಾಸಸ್ಥಾನವನ್ನು ನಿರ್ಮಿಸಿಕೊಂಡ ಕುರುಹುಗಳನ್ನು ಕಾಣಬಹುದಾಗಿದೆ. ಸುಟ್ಟ ಮಣ್ಣಿನ ಮಡಿಕೆಯ ಚೂರುಗಳು, ಒರಳು ಕಲ್ಲಿನ ಮಾದರಿಯ ಕುಳಿಗಳು ಇಲ್ಲಿ ಕಾಣಸಿಗುತ್ತದೆ.

    ಬೆಟ್ಟದ ಕೆಳಭಾಗದ ಪ್ರದೇಶಗಳಲ್ಲಿ ಸುಮಾರು 20 ರಿಂದ 25 ಕ್ಕೂ ಹೆಚ್ಚು ಶಿಲಾಯುಗದ ಕಾಲದ ವೃತ್ತಾಕಾರದ ಸಮಾಧಿಗಳು ಕಂಡು ಬಂದಿದ್ದು, 18 ಅಡಿ ವೃತ್ತಾಕಾರ ವ್ಯಾಪ್ತಿಯಲ್ಲಿ ಗುಂಡಾಕಾರದ ಬೆಟ್ಟದ ಕಲ್ಲುಗಳನ್ನು ವೃತ್ತಾಕಾರವಾಗಿ ಜೋಡಿಸಿರುವುದನ್ನು ನೋಡಬಹುದಾಗಿದೆ. ವೃತ್ತಾಕಾರದ ಸಮಾಧಿ ಮೇಲೆ ದೊಡ್ಡ ದೊಡ್ಡ ಚಪ್ಪಡಿಯನ್ನು ಹಾಕಿರುವುದು ಕಾಣಬಹುದು. ಕರ್ನಾಟಕದಲ್ಲಿ ಬೃಹತ್ ಶಿಲಾಯುಗ ಕಾಲದ ಸಂಸ್ಕೃತಿಯನ್ನು ಹೋಲುವ ಕುರುಹುಗಳನ್ನು ಕೊಡಗು, ಮಂಡ್ಯ, ಚಿಕ್ಕಮಗಳೂರು, ಕಾರ್ಕಳ, ಉತ್ತರಕನ್ನಡ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕಾಣಬಹುದು. ಇದೀಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಸೀತೆಬೆಟ್ಟದಲ್ಲಿ ಕಾಣುವ ಮೂಲಕ ಇತಿಹಾಸ ಸಂಶೋಧಕರನ್ನು ತನ್ನತ್ತ ಸೆಳೆದಿದೆ.

    ರಾಮ, ಲಕ್ಷ್ಮಣ, ಸೀತೆ ವಾಸ: ರಾಮಾಯಣದ ಸಂದರ್ಭದಲ್ಲಿ ಶ್ರೀ ರಾಮನೊಂದಿಗೆ ವನವಾಸಕ್ಕೆ ಬಂದಿದ್ದ ಸೀತೆಯು ಕೆಲವು ಕಾಲ ಈ ಬೆಟ್ಟದಲ್ಲಿ ಶ್ರೀರಾಮನೊಂದಿಗೆ ತಂಗಿದ್ದಳು ಎಂಬುದು ಪೌರಾಣಿಕ ಹಿನ್ನೆಲೆಯಾಗಿದೆ. ಸ್ಥಳೀಯರು ಈ ಬೆಟ್ಟವನ್ನು ಸೀತೆಬೆಟ್ಟ ಎಂದು ಕರೆದು ಸೀತೆ, ರಾಮ, ಲಕ್ಷ್ಮಣರು ಬೆಟ್ಟದಲ್ಲಿ ವಾಸಿಸಿದ್ದರು ಎಂದು ಇಂದಿಗೂ ಪೂಜಿಸುತ್ತಾರೆ.

    ಕಲ್ಲು ಗಣಿಗಾರಿಕೆ: ಇತ್ತೀಚಿನ ವರ್ಷಗಳಲ್ಲಿ ಈ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಐತಿಹಾಸಿಕ ಬೆಟ್ಟವನ್ನು ನಾಶಪಡಿಸುತ್ತಿದ್ದಾರೆ ಎಂಬುದು ಪರಿಸರ ಹೋರಾಟಗಾರರ ಆಕ್ರೋಶವಾಗಿದೆ. ಈ ಬೃಹತ್ ಶಿಲಾಯುಗದ ಸಂಸ್ಕೃತಿಯ ಹಾಗೂ ಶಿಲಾಮಾನವರು ವಾಸಿಸುತ್ತಿದ್ದ ಸ್ಥಳವನ್ನು ‘ಸಂರಕ್ಷಿತ ಸ್ಥಳ’ವನ್ನಾಗಿ ಘೋಷಣೆ ಮಾಡಿ ಅಭಿವೃದ್ಧಿಪಡಿಸಬೇಕು ಎಂಬುದು ರೈತ ಮುಖಂಡ ಲೋಕೇಶ್, ಗ್ರಾಮಸ್ಥರಾದ ಕುಬೇರ್, ನಟರಾಜ್, ಚೇತನ, ಮರಿಗೌಡ, ಮುದ್ದೇಗೌಡ, ಕಾಳೇಗೌಡ, ಸೌಲೆಗೌಡ, ರಾಜು, ನಾಗಯ್ಯ, ಚೇತನ್ ಮತ್ತಿತರರ ಒತ್ತಾಸೆಯಾಗಿದೆ.

    ಸೀತೆಕಲ್ಲು ಬೆಟ್ಟದಲ್ಲಿ ಬೃಹತ್ ಶಿಲಾಯುಗ ಕಾಲದ ಮಾನವನ ವಾಸ ಸ್ಥಳ ಕುರುಹು ಪತ್ತೆಯಾಗಿದೆ. ಬೆಟ್ಟವು ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಕೂಡಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗಾಳಿ, ಮಳೆಯಿಂದ ಬೃಹತ್ ಗಾತ್ರದ ಬಂಡೆಗಳು ಸ್ವಲ್ಪಮಟ್ಟಿಗೆ ಹಾಳಾಗಿವೆ. ಬೃಹತ್ ಶಿಲಾಯುಗದ ಸಂಸ್ಕೃತಿಯ ಸಮಾಧಿಗಳು ಮತ್ತು ಅವರು ಬಳಸುತ್ತಿದ್ದಂತಹ ಉಪಕರಣಗಳು ಈ ಸ್ಥಳದಲ್ಲಿ ಕಾಣಬಹುದಾಗಿದೆ. ಆದರೆ ಅನಧಿಕೃತ ಕಲ್ಲು ಗಣಿಗಾರಿಕೆಯಿಂದ ಸೀತೆಕಲ್ಲು ಬೆಟ್ಟ ವಿನಾಶದ ಹಂತಕ್ಕೆ ತಲುಪುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
    ಡಾ.ಎಚ್.ಆರ್.ಅರುಣ್ ಕುಮಾರ್,
    ಇತಿಹಾಸ ಉಪನ್ಯಾಸಕ, ಕೊಡಗು ವಿಶ್ವವಿದ್ಯಾನಿಲಯ, ಚಿಕ್ಕಅಳುವಾರ.

    ಬೃಹತ್ ಶಿಲಾಯುಗ ಕಾಲದ ಅವಶೇಷಗಳು ನಮ್ಮ ತಾಲೂಕಿನಲ್ಲಿ ಪತ್ತೆಯಾಗಿರುವುದು ಇತಿಹಾಸ ಸಂಶೋಧಕರಿಗೆ ಸಂತಸದ ವಿಷಯ. ಬೃಹತ್ ಗಾತ್ರದ ಕಲ್ಲು ಬಂಡೆಯ ಅಡಿಯಲ್ಲಿ ನಿರ್ಮಿಸಿರುವ ಗುಹೆಯೊಳಗೆ ಚಿಕ್ಕ ಚಿಕ್ಕ ಕಲ್ಲು ಚಕ್ಕೆಗಳನ್ನು ಮತ್ತು ಕಲ್ಲುಗಳನ್ನು ಒಂದರ ಮೇಲೊಂದು ಹಂತಂತವಾಗಿ ಜೋಡಿಸಿ ಗೋಡೆ ರೀತಿ ಕಟ್ಟಿದ್ದಾರೆ. ಈ ಗುಹೆಯೊಳಗೆ ಸುಮಾರು ಹತ್ತು ಜನ ಮಲಗಬಹುದು. ಬೆಟ್ಟದ ಮೇಲೆ ಕಾಡು ಬಸವೇಶ್ವರ ದೇವಾಲಯವೂ ಇದೆ. ಆದರೆ ಅಕ್ರಮ ಗಣಿಗಾರಿಕೆಯಿಂದ ಸೀತೆಕಲ್ಲು ಬೆಟ್ಟವನ್ನು ರಕ್ಷಣೆ ಮಾಡುವ ಅಗತ್ಯವಿದೆ.
    ಲೋಕೇಶ್, ಜಿಲ್ಲಾಧ್ಯಕ್ಷ, ಕರ್ನಾಟಕ ರೈತ ಸಂಘ( ಹಸಿರು ಸೇನೆ) ವಾಸದೇವ ಮೇಟಿ ಬಣ. ಚಿಕ್ಕನೇರಳೆ ಗ್ರಾಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts