More

    ‘ನಾಳೆ’ ಎಂದಿಗೂ ಬರುವುದಿಲ್ಲ!: ಸದ್ಗುರು ಅಂಕಣ ಬರಹ

    ‘ನಾಳೆ’ ಎಂದಿಗೂ ಬರುವುದಿಲ್ಲ!: ಸದ್ಗುರು ಅಂಕಣ ಬರಹಇದನ್ನು ಅರ್ಥಮಾಡಿಕೊಳ್ಳಿ. ‘ನಾಳೆ’ ಎಂಬುದನ್ನು ನಾವು ಭೇಟಿ ಮಾಡುವುದೇ ಇಲ್ಲ. ‘ಇವತ್ತ’ನ್ನು ಮಾತ್ರ ನಾವು ನೋಡುವುದು. ಈ ದಿನ ಎಂಬುದನ್ನು ಬಿಟ್ಟು ‘ನಾಳೆ’ ಎಂಬುದು ನಮ್ಮ ಜೀವನದಲ್ಲಿ ಎಂದಿಗೂ ಇಲ್ಲ.

    ಶಂಕರನ್ ಪಿಳ್ಳೆಯ ಹೆಂಡತಿ ದೇಹವೆಲ್ಲಾ ನೋಯುತ್ತಿದೆಯೆಂದು ಡಾಕ್ಟರ್ ಬಳಿ ಬಂದಳು. ‘ನೋಯುವುದು ಎಲ್ಲಿ?’ ಡಾಕ್ಟರು ಕೇಳಿದರು. ‘ಇಲ್ಲಿ’ ಎಂದು ಆಕೆ ತನ್ನ ಬೆರಳಿನಿಂದ ಮೊಳಕಾಲನ್ನು ತಡವಿ ತೋರಿಸಿದಳು, ನೋವಿನಿಂದ ‘ಅಯ್ಯೋ’ ಎಂದಳು. ಅನಂತರ ತನ್ನ ತೋಳನ್ನು ಮುಟ್ಟಿ ‘ಇಲ್ಲಿಯೂ’ ಎಂದು ನರಳಿದಳು. ಹೀಗೆ ದೇಹದ ಬೇರೆ ಬೇರೆ ಭಾಗಗಳನ್ನು ಅದೇ ಬೆರಳಿನಿಂದ ಮುಟ್ಟಿ ತೋರಿಸುತ್ತ ನೋವನ್ನು ತಾಳಲಾರದೆ ಅರಚಿದಳು.

    ಡಾಕ್ಟರು ತಲೆ ಚಚ್ಚಿಕೊಂಡರು. ‘ನೋವು ನಿಮ್ಮ ಶರೀರದಲ್ಲೆಲ್ಲೂ ಇಲ್ಲ. ಪ್ರತಿಯೊಂದು ಭಾಗವನ್ನು ಮುಟ್ಟಿ ತೋರಿಸಲು ಬಳಸಿಕೊಂಡಿರಲ್ಲ, ಆ ಬೆರಳಿನಲ್ಲಿದೆ’ ಎಂದರು. ನೋಯುವ ಬೆರಳನ್ನು ಬಳಸಿಕೊಂಡು ಯಾವುದನ್ನು ಮುಟ್ಟಿದರೂ ಅದು ನೋಯುವಂತೆ ತೋರುತ್ತದೆ. ವಯಸ್ಸಾಗಿದೆಯೆಂದು ಭಾವಿಸಿ ಯಾವುದನ್ನು ಮಾಡಿದರೂ ಅದು ಕಳೆದುಕೊಂಡಂತೆಯೇ ತೋರುತ್ತದೆ.

    ವಯಸ್ಸಾಗದೆ ಯೌವ್ವನದಲ್ಲಿಯೇ ಇರುವುದು ಹೇಗೆ?

    ನೀವು ಉಸಿರಾಡಿದ ಗಾಳಿ, ಕುಡಿದ ನೀರು, ಸೇವಿಸಿದ ಆಹಾರ ಇವುಗಳ ಸಂಗ್ರಹವೇ ದೇಹ. ಅಗತ್ಯವಿಲ್ಲವೆಂದು ಒಂದು ದಿನವೂ, ಶೇಖರಿಸುವುದನ್ನು ನೀವು ನಿಲ್ಲಿಸಲಾರಿರಿ. ಆದ್ದರಿಂದ ದಿನವೊಂದು ಕಳೆದರೆ ಅದರ ವಯಸ್ಸಿನಲ್ಲಿ ಒಂದು ದಿನ ಸೇರುತ್ತದೆ. ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದೇ ಹೊರತು ಅದರ ವಯಸ್ಸಿನಲ್ಲಿ ಒಂದು ದಿನವನ್ನು ಸಹ ಸೆಳೆದುಕೊಳ್ಳಲಾಗುವುದಿಲ್ಲ.

    ಅಗತ್ಯವಿಲ್ಲದ್ದನ್ನು ತೊರೆದು ಮನಸ್ಸನ್ನು ಪ್ರತಿದಿನವೂ ಹೊಸದಾಗಿ ಹುಟ್ಟುವಂತೆ ಮಾಡುವ ಸ್ವಾತಂತ್ರ್ಯವನ್ನು, ಅದರ ವಯಸ್ಸು ಏರದಂತೆ ಎಂದೆಂದಿಗೂ ಯೌವ್ವನದಿಂದ ಇರಿಸಿಕೊಳ್ಳುವಂತಹ ಅವಕಾಶವನ್ನು ನಿಮಗೆ ನೀಡಲಾಗಿದೆ.

    ಮನಸ್ಸನ್ನು ಎಲ್ಲಿಂದ ಪಡೆದಿರಿ? ಹುಟ್ಟಿದಂದಿನಿಂದ ನಿಮ್ಮ ಮೇಲೆ ಬೀಸಿಬಂದು ಬಿದ್ದ ಸುತ್ತಲಿನ ವಿಷಯಗಳು, ನೀವು ಕಲಿತ ಪಾಠಗಳು, ತಿಳಿದುಕೊಂಡ ವಿಚಾರಗಳು, ಪಡೆದ ಅನುಭವಗಳು, ಸಮಾಜದಿಂದ ಹೊರಿಸಲಾದ ವಿಚಾರಗಳು, ಎಲ್ಲವನ್ನೂ ಶೇಖರಿಸಿದ ಕಸದ ತೊಟ್ಟಿಯಾಗಿದೆ ಮನಸ್ಸು. ಎಲ್ಲವನ್ನೂ ಇರಿಸಿಕೊಂಡೇ ತೀರಬೇಕೆಂಬ ನಿರ್ಬಂಧವೇನೂ ನಿಮಗಿಲ್ಲ. ಯಾವುದನ್ನು ಬಿಟ್ಟುಬಿಡಬಹುದೆಂಬುದು ನಿಮ್ಮ ಕೈಯಲ್ಲಿಯೇ ಇದೆ. ಶೇಖರಿಸಿರುವ ಎಲ್ಲವನ್ನೂ ಒಂದೇ ಕ್ಷಣದಲ್ಲಿ ಬೇಕಾದರೆ ಉದುರಿಸಿಬಿಡಬಹುದು.

    ಅಗತ್ಯವಿಲ್ಲದ್ದನ್ನು ತೊರೆದು ಮನಸ್ಸನ್ನು ಪ್ರತಿದಿನವೂ ಹೊಸದಾಗಿ ಹುಟ್ಟುವಂತೆ ಮಾಡುವ ಸ್ವಾತಂತ್ರ್ಯವನ್ನು, ಅದರ ವಯಸ್ಸು ಏರದಂತೆ ಎಂದೆಂದಿಗೂ ಯೌವ್ವನದಿಂದ ಇರಿಸಿಕೊಳ್ಳುವಂತಹ ಅವಕಾಶವನ್ನು ನಿಮಗೆ ನೀಡಲಾಗಿದೆ.

    ಕ್ರಮಬದ್ಧವಾದ ಯೋಗದಿಂದ ಇದು ಸಾಧ್ಯ, ಮರೆಯದಿರಿ. ಆದರೆ ಗಮನವಿರಿಸಿಕೊಂಡು, ಹಳೆಯ ಕಸವನ್ನು ಆಗಾಗ ಬಿಸಾಡುತ್ತಿರುವವರಿಗೆ, ತಮ್ಮನ್ನು ಸದಾ ಭಾರವಿಲ್ಲದವರಂತೆ ಭಾವಿಸಿಕೊಳ್ಳುವವರಿಗೆ ವಯಸ್ಸು ಹೆಚ್ಚುತ್ತಿರುವಂತೆ ಕಂಡುಬರುವುದಿಲ್ಲ. ಹೊರೆಗಳು ಏತಕ್ಕಾಗಿ ಹೆಚ್ಚಾಗುತ್ತವೆ? ಒಂದನ್ನು ಕೊಟ್ಟು ಅದಕ್ಕಿಂತಲೂ ಚೆನ್ನಾಗಿರುವುದೊಂದನ್ನು ಪಡೆಯುವುದು ಹೇಗೆ ಎಂದು ಮನಸ್ಸು ಯಾವಾಗಲೂ ಲೆಕ್ಕ ಹಾಕುತ್ತಿರುತ್ತದೆ.

    ಇದಕ್ಕಾಗಿ ದೇವರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆಯೆ? ಇಲ್ಲ. ದೇವರ ಸ್ನೇಹಿತನಾಗಿ ಬಾಳುವಂತೆ ಹೇಳಿ ಭೂಮಿಯಲ್ಲಿ ಜನಿಸಲು ಹೇಳಿದರೆ, ಲೆಕ್ಕ ಹಾಕುತ್ತಾ ಹಾಕುತ್ತಾ ಸೈತಾನನ ಶಿಷ್ಯರಾಗಿಬಿಟ್ಟಿದ್ದೀರಿ. ಜೀವನವನ್ನೇ ಚೌಕಾಸಿ ವ್ಯಾಪಾರವನ್ನಾಗಿ ಮಾಡಿಕೊಂಡಿದ್ದೀರಿ. ನೀವು ನೆನೆದಂತೆಯೇ ನಡೆದರೆ ಒಳ್ಳೆಯವರಾಗಿ ನಾಗರಿಕರಾಗಿ ನಡೆದುಕೊಳ್ಳುತ್ತೀರಿ. ನಿಮ್ಮ ಲೆಕ್ಕ ತಪ್ಪಾಗಿ ಹೋದರೆ ಒಳಗಿರುವ ಮೃಗಗಳೆಲ್ಲವೂ ಎಚ್ಚರಗೊಳ್ಳುತ್ತವೆ.

    ನಿಮ್ಮ ತಾತನ ತಾತ ಅವರ ಕಾಲದಿಂದಲೂ ದೇವರು ಇದೇ ವಯಸ್ಸಿನಲ್ಲಿದ್ದಾನಲ್ಲ… ಅದು ಹೇಗೆ? ಅವನು ಜೀವನವನ್ನು ವ್ಯಾಪಾರವಾಗಿ ಪರಿಗಣಿಸಲಿಲ್ಲ. ಅದನ್ನು ಕೊಡು, ಇದನ್ನು ನಾನು ಕೊಡುತ್ತೇನೆ ಎಂದು ಯಾವುದೇ ಚೌಕಾಸಿಯನ್ನು ಮಾಡಲಿಲ್ಲ. ಯಾರನ್ನೂ ಸ್ನೇಹಿತನನ್ನಾಗಿ ಮಾಡಿಕೊಳ್ಳಲಿಲ್ಲ. ಶತ್ರುವನ್ನಾಗಿ ಕಾಣಲಿಲ್ಲ. ಮಳೆ ಸುರಿದರೆ ಅದು ಆಸ್ತಿಕನ ತೋಟವನ್ನು ನೆನೆಸುತ್ತದೆ, ನಾಸ್ತಿಕನ ತೋಟವನ್ನೂ ನೆನೆಸುತ್ತದೆ.

    ಯಾರನ್ನೇ ಕುರಿತು ಯಾವುದೇ ಹೊರೆಯನ್ನು ಹೊರದಿರುವುದರಿಂದಲೇ ವಯಸ್ಸು ಹೆಚ್ಚಾಗಲೇ ಇಲ್ಲ. ಈ ಒಂದು ಕಾರಣಕ್ಕಾಗಿಯಾದರೂ ದೇವರನ್ನು ಅನುಕರಣೆ ಮಾಡಿ ನೋಡಿ. ಜೀವನವನ್ನು ಹೊರಗಡೆಯಿಂದ ವೇದನೆಯೊಂದಿಗೆ ನೋಡುವುದನ್ನು ನಿಲ್ಲಿಸಿ. ಹೊರೆಗಳನ್ನು ತ್ಯಜಿಸಿ ಜೀವನವನ್ನು ಪ್ರೀತಿಯಿಂದ ರುಚಿಸಿ ಬದುಕಿ ನೋಡಿ. ಅನಂತರ ಜೀವನ ತಾನಾಗಿಯೇ ನಿಮ್ಮನ್ನು ಎಳೆತನದಲ್ಲಿ, ಕೋಮಲವಾಗಿ, ಮಧುರವಾಗಿ ಇರಿಸುತ್ತದೆ.

    ದೇಹವನ್ನು ಚೆನ್ನಾಗಿರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕೆಲವರು ಯೋಗವನ್ನು ಕಲಿಯಲು ಬರುತ್ತಾರೆ. ಕೆಲವರು ಬೆಳಗ್ಗೆ ವಾಕ್ ಮಾಡಲು ಮುಂದಾಗುತ್ತಾರೆ. ಮತ್ತೆ ಕೆಲವರು ಬೇರೆ ರೀತಿಯಲ್ಲಿ ದೇಹಕ್ಕೆ ವ್ಯಾಯಾಮ ಕೊಡಲು ಬಯಸುತ್ತಾರೆ. ಆದರೆ, ಕಲಿತದ್ದನ್ನು ಸರಿಯಾಗಿ ತಪ್ಪದೆ ಮಾಡುತ್ತಾರೆಯೆ ಎಂಬುದನ್ನು ನೋಡಿದಾಗ, ಅದು ಹಾಗಿರುವುದಿಲ್ಲ. ಅವರನ್ನೇ ಕೇಳಿ ನೋಡಿ: ’ಈವತ್ತು ಸುಸ್ತಾಗಿತ್ತು. ನಾಳೆಯಿಂದ ತಪ್ಪದೆ ಮಾಡುತ್ತೇನೆ’ ಎಂದು ಹೇಳುತ್ತಾರೆ.

    ನಿಜವಾಗಿಯೂ ನಾಳೆ ಇವರು ವಾಕಿಂಗ್ ಹೋಗುತ್ತಾರೆಯೆ? ಯೋಗಾಭ್ಯಾಸ ಮಾಡುತ್ತಾರೆಯೆ? ಅಂತಹ ಅವಕಾಶವೇ ಇರುವುದಿಲ್ಲ.

    ನೀವು ಭಾವಿಸಿದಂತೆ ಏನನ್ನೂ ಮಾಡದೆ ಸೋಮಾರಿತನದಿಂದ ಕುಳಿತುಕೊಂಡಿದ್ದರೆ ‘ಅದೇನು ಸೋಮಾರಿತನದಿಂದ ಕುಳಿತಿದ್ದೀಯೆ? ಎದ್ದೇಳು’ ಎಂದು ನಿಮ್ಮ ಮನಸ್ಸೇ ತಪ್ಪು ಭಾವನೆ, ಪಾಪಪ್ರಜ್ಞೆಯೊಂದಿಗೆ ನಿಮ್ಮನ್ನು ಕೇಳುತ್ತದೆ, ಮುಂದೆ ಹೋಗಲು ಅಟ್ಟುತ್ತದೆ.

    ‘ಜವಾಬ್ದಾರಿಯಿಲ್ಲದೆ ಇದ್ದೇನೆ’ ಎಂದು ಒಪ್ಪಿಕೊಳ್ಳಲು ನಿಮ್ಮ ಅಹಂಕಾರ ಎಂದಿಗೂ ಅವಕಾಶವನ್ನು ನೀಡುವುದಿಲ್ಲ. ’ನಾನೇನು ಸೋಮಾರಿಯಲ್ಲ. ನಾಳೆಯಿಂದ ಶುರು ಮಾಡೋಣ ಎಂದುಕೊಂಡಿದ್ದೇನೆ’ ಎಂದು ಸ್ವಪ್ರತಿಷ್ಠೆಯನ್ನು ಮುಂದು ಮಾಡಿಕೊಂಡು ಸಮಾಧಾನಗೊಳ್ಳುತ್ತೀರ.

    ನಮ್ಮ ರಾಜ್ಯದ ಕೆಲವು ಹಳ್ಳಿಗಳಲ್ಲಿ ಒಂದು ನಂಬಿಕೆಯಿದೆ. ಸೂರ್ಯ ಮುಳುಗಿದ ನಂತರ ಆ ಭಾಗದಲ್ಲಿರುವ ದೆವ್ವ, ಪಿಶಾಚಿಗಳು ಮನೆಗಳೊಳಗೆ ನುಗ್ಗುವ ಸನ್ನಾಹದಲ್ಲಿರುತ್ತವಂತೆ. ಈ ದೆವ್ವಗಳನ್ನು ಹೊಡೆದೋಡಿಸಲು ಪ್ರಯತ್ನಿಸಿದರೆ ಅವುಗಳಿಗೆ ಕೋಪ ಬಂದು, ಅತ್ಯಂತ ಕಷ್ಟಕರವಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಜನರಿಗೆ ಭಯ. ಅದಕ್ಕೆ ಅವರು ಒಂದು ಉಪಾಯ ಮಾಡಿದ್ದಾರೆ. ದೆವ್ವಗಳಿಗೆ ರಕ್ತದ ಬಣ್ಣ ಹಿಡಿಸುತ್ತದೆಂದು ಒಂದು ನಂಬಿಕೆಯಿರುವುದರಿಂದ, ಅಂತಹ ಕೆಂಪು ಬಣ್ಣದಲ್ಲಿ ಪ್ರತಿಯೊಂದು ಮನೆಯ ಬಾಗಿಲಿನ ಮೇಲೆ ’ನಾಳೆ ಬಾ’ ಎಂದು ಬರೆದು ಬಿಡುತ್ತಾರೆ.

    ಏಕೆಂದು ಕೇಳಿದರೆ ‘ದೆವ್ವಗಳು, ಪಿಶಾಚಿಗಳು ಯಾವಾಗಲೇ ಬರಲಿ, ಬಾಗಿಲಲ್ಲಿರುವ ಈ ಮಾತನ್ನು ಓದಿಕೊಂಡು ಹಿಂತಿರುಗಿ ಬಿಡುತ್ತವೆ’ ಎನ್ನುತ್ತಾರೆ. ಈ ದಿನ ಎಂದಾಗಲೀ, ಈಗ ಎಂದಾಗಲೀ ಹೇಳಿದರೆ ಅದನ್ನು ಕೂಡಲೆ ಮಾಡಬೇಕಾದ ಅಗತ್ಯ ಬರುತ್ತದೆ.’ನಾಳೆ’ ಎಂಬುದು ವಾಸ್ತವವಾಗಿ ಎಂದೂ ಬಾರದಂತಹ ದಿನ, ಅಲ್ಲವೇ? ದೇಹಾರೋಗ್ಯವನ್ನು, ಗೆಲುವನ್ನು, ಆನಂದವನ್ನು ನಿಮ್ಮ ಜೀವನಕ್ಕೆ ಬೇಕಾಗಿರುವುದನ್ನು ’ನಾಳೆ ಬಾ’ ಎಂದು ಹೇಳಿದರೆ ಅವು ಸಂತೋಷವಾಗಿ ಮುಂದಕ್ಕೆ ಹೋಗಿಬಿಡುತ್ತವೆ. ಎಚ್ಚರದಿಂದಿರಿ.

    ‘ನಾಳೆಯಿಂದ’……. ಎಂಬುದು ಮನಸ್ಸಿನೊಳಗೆ ಹರಿದಾಡುವ ಬಹಳ ಆಳವಾದ ಒಂದು ತಂತ್ರ. ನಿಮ್ಮ ಜೀವನದ ಹಲವು ಘಟ್ಟಗಳಲ್ಲಿ ಈ ಮಾಯಾತಂತ್ರಕ್ಕೆ ನೀವಾಗಿಯೇ ಅವಕಾಶವನ್ನು ಕೊಟ್ಟುಬಿಟ್ಟಿದ್ದೀರಿ. ಮಾಡಬೇಕಾಗಿರುವುದನ್ನು ಮಾಡದೆ ಇರುವಂತಹವರಿಗೆ, ನಾಳೆ ಎಂಬುದು ಯಾವಾಗಲೂ ಒಳ್ಳೆಯ ದಿನ. ನಾಳೆ ಎಂದು ಹೇಳಿದರೆ ಅಲ್ಲಿಗೆ ಅಂದಿನ ಜವಾಬ್ದಾರಿ ಮುಗಿಯುತ್ತದೆ. ಹೀಗೆ ಪ್ರಾರಂಭಿಸಿದ ಕೆಲಸಗಳನ್ನು ಮುಂದೂಡುವುದು ಒಂದು ಬಗೆಯ ತೀರ್ವನವೆಂದು ಲೋಕಸಭೆಯವರೆಗೂ ಅಭ್ಯಾಸವಾಗಿ ಹೋಗಿರುವುದೇ ಒಂದು ದುಃಖಕರವಾದ ಸಂಗತಿ.

    ಇದನ್ನು ಅರ್ಥಮಾಡಿಕೊಳ್ಳಿ. ‘ನಾಳೆ’ ಎಂಬುದನ್ನು ನಾವು ಭೇಟಿ ಮಾಡುವುದೇ ಇಲ್ಲ. ಈ ದಿನವನ್ನು ಮಾತ್ರ ನಾವು ನೋಡುವುದು. ಈ ದಿನ ಎಂಬುದನ್ನು ಬಿಟ್ಟು ’ನಾಳೆ’ ಎಂಬುದು ನಮ್ಮ ಜೀವನದಲ್ಲಿ ಎಂದಿಗೂ ಇಲ್ಲ.

    ಶಂಕರನ್ ಪಿಳ್ಳೆ ಕಾರ್ ಮೆಕ್ಯಾನಿಕ್ ಬಳಿಗೆ ಹೋದರು. ‘ನನ್ನ ಕಾರಿನ ಹಾರ್ನ್ ಮತ್ತಷ್ಟು ಏರು ಧ್ವನಿಯಲ್ಲಿ ಜೋರಾಗಿ ಬರುವಂತೆ ಬದಲಾಯಿಸಿಕೊಡಲು ಸಾಧ್ಯವೆ?’ ಎಂದು ಕೇಳಿದರು. ’ಹಾರ್ನ್ ಸರಿಯಾಗಿದೆಯಲ್ಲವೆ?’ ಎಂದನು ಮೆಕ್ಯಾನಿಕ್. ‘ಬ್ರೇಕ್ ಹಿಡಿಯುತ್ತಿಲ್ಲ. ಅದನ್ನು ರಿಪೇರಿ ಮಾಡುವುದಕ್ಕಿಂತ ಹಾರ್ನ್ ಶಬ್ದವನ್ನು ಜಾಸ್ತಿ ಮಾಡಲು, ಕಡಿಮೆ ಚಾರ್ಜು ತಾನೆ ಆಗುತ್ತದೆ? ಆದ್ದರಿಂದ ಕೇಳಿದೆ’ ಎಂದರು ಶಂಕರನ್ ಪಿಳ್ಳೆ.

    ನಾಳೆ ಎಂಬುದು – ಬ್ರೇಕ್ ಸರಿ ಮಾಡಬೇಕಾದ ಸಂದರ್ಭದಲ್ಲಿ ಅದನ್ನು ಬಿಟ್ಟು ಹಾರ್ನ್ ಶಬ್ದ ಮಾಡಿ ಜನರನ್ನು ಪಕ್ಕಕ್ಕೆ ಸರಿಯಿರಿ ಎಂದು ಜನರಿಗೆ ಹೇಳಿದಂತಾಗುತ್ತದೆ. ಅಪಘಾತವನ್ನು ಯಾವಾಗ ಬೇಕಾದರೂ ಭೇಟಿ ಮಾಡಲು ಸಾಧ್ಯವಾಗುತ್ತದೆ.

    ಇಂತಹ ಪರಿಸ್ಥಿತಿಯನ್ನು ಹೇಗೆ ಬದಲಾಯಿಸುವುದು?

    ಮನೆ ಕೆಲಸವಾದರೂ ಸರಿಯೆ, ಒಂದು ಉದ್ದಿಮೆಯನ್ನು ನಡೆಸುವುದಾದರೂ ಸರಿಯೆ, ನಮ್ಮ ಆರೋಗ್ಯಕ್ಕಾಗಿ ಮಾಡುವ ದೈಹಿಕ ವ್ಯಾಯಾಮಗಳಾದರೂ ಸರಿಯೆ, ಅದಕ್ಕೆ ಸಾಧಕವಾದ ಸನ್ನಿವೇಶವನ್ನು ಮೊದಲು ಸೃಷ್ಟಿಸಿಕೊಳ್ಳಬೇಕು. ರಾತ್ರಿ ಹತ್ತು ಗಂಟೆಯಾದನಂತರ ಹೊಟ್ಟೆ ತುಂಬಿಸಿಕೊಳ್ಳಲು ದೋಸೆಯನ್ನು ತಿಂದಿರಿ. ಬೆಳಗ್ಗೆ ಆರು – ಏಳು ಗಂಟೆಗೆ ಯೋಗವನ್ನು ಮಾಡಬೇಕು. ವಾಕ್ ಹೋಗಬೇಕೆಂದರೆ ದೇಹ ಹೇಗೆ ತಾನೆ ಹೊಂದಿಕೊಳ್ಳುತ್ತದೆ?

    ಬೆಳಗ್ಗೆ ನಾಲ್ಕು ಗಂಟೆಗೆ ಎಚ್ಚರಿಕೆಯಾಗುವಂತೆ ಕಡಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿ ನೋಡಿ, ನಿಮಗೆ ಆಗ ತಾನಾಗಿಯೇ ಎಚ್ಚರವಾಗುವುದು. ಯೋಗವನ್ನು ಮಾಡಬಹುದು. ವಾಕ್ ಹೋಗಲು ದೇಹವೇ ಹೇಳುತ್ತದೆ. ಕೆಲವು ದಿನಗಳು ಹೀಗೆಯೇ ಮಾಡುತ್ತಾ ಬಂದರೆ ಅದರ ಪ್ರತಿಫಲ ನಿಮಗೆ ತಿಳಿಯುತ್ತದೆ. ಅನಂತರ ನಿಮಗೆ ಯಾರೂ ಅದನ್ನು ಒತ್ತಿ ಹೇಳಬೇಕಾದ ಪ್ರಮೇಯವೇ ಇರುವುದಿಲ್ಲ.

    ಒಳಗೆ ಮನೋನಿಶ್ಚಯ, ಹೊರಗೆ ಸೂಕ್ತ ಸನ್ನಿವೇಶ ಇವೆರಡನ್ನು ಸೃಷ್ಟಿಸಿಕೊಂಡರೆ ಆಸೆಪಟ್ಟು ಬಯಸಿದ್ದನ್ನು ಮುಂದಕ್ಕೆ ಹಾಕದೆ ಪೂರ್ತಿಗೊಳಿಸುವ ಮನೋಬಲ ನಮಗೆ ತಾನೇತಾನಾಗಿ ಲಭಿಸುತ್ತದೆ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org) )

    ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ

    ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts