More

    ಟೊಮ್ಯಾಟೊ ದರ ಕುಸಿತ

    ರಾಣೆಬೆನ್ನೂರ: ತಾಲೂಕಿನಲ್ಲಿ ನಿರಂತರ ಅತಿವೃಷ್ಟಿಗೆ ಸಿಲುಕಿ ನಲುಗಿದ್ದ ರೈತರು, ಭವಿಷ್ಯದಲ್ಲಿ ಉತ್ತಮ ಬೆಲೆ ನಿರೀಕ್ಷೆಯೊಂದಿಗೆ ಟೊಮ್ಯಾಟೊ ಬೆಳೆದಿದ್ದಾರೆ. ಫಸಲು ಕೈಗೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ಏಕಾಏಕಿ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

    ಕಳೆದ ಎರಡ್ಮೂರು ತಿಂಗಳ ಹಿಂದೆ ಇಲ್ಲಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮ್ಯಾಟೊ 25ರಿಂದ 30 ರೂ. ವರೆಗೆ ಮಾರಾಟವಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. ಒಂದು ಕೆಜಿಗೆ 2ರಿಂದ 3 ರೂ.ಗೆ ಮಾರಾಟವಾಗುತ್ತಿದೆ. ಬೆಲೆ ಕುಸಿದರೂ ಕೊಳ್ಳುವವರು ಇಲ್ಲದಂತಾಗಿದೆ. ಇದರಿಂದ ಬೇಸತ್ತ ರೈತರು, ಮಾರಾಟವಾಗದೇ ಉಳಿದ ಟೊಮ್ಯಾಟೊ ಹಣ್ಣುಗಳನ್ನು ತಿಪ್ಪೆಗೆ, ಚರಂಡಿಗೆ ಎಸೆದು ಹೋಗುತ್ತಿದ್ದಾರೆ.

    ಖರ್ಚು ಮಾಡಿದ ಹಣ ಮರಳುತ್ತಿಲ್ಲ…

    1 ಎಕರೆ ಟೊಮ್ಯಾಟೊ ಬೆಳೆಯಲು ಬೀಜ, ಗೊಬ್ಬರ, ಕೂಲಿ ಸೇರಿ 30 ಸಾವಿರ ರೂ. ವರೆಗೂ ಖರ್ಚು ಬರುತ್ತದೆ. ಅಲ್ಲದೆ, ನಿತ್ಯ ನೀರು ಹಾಯಿಸುವುದು ಸೇರಿ ಕಷ್ಟಪಟ್ಟು ಬೆಳೆ ರಕ್ಷಿಸಿಕೊಳ್ಳಬೇಕು. ಬೆಳೆ ಬಂದ ಮೇಲೆ ಕಿತ್ತು ಮಾರುಕಟ್ಟೆಗೆ ಸಾಗಿಸಲು 1 ಬಾಕ್ಸ್​ಗೆ 20 ರೂ. ಕೊಡಬೇಕು. ಹರಾಜಿನಲ್ಲಿ ದಲಾಲಿ ಹಾಗೂ ಹಮಾಲಿ ಎಂದು 100 ರೂ.ಗೆ 10 ರೂ. ಮುರಿದುಕೊಳ್ಳುತ್ತಾರೆ. ಖಾಲಿ ಬಾಕ್ಸ್ ತೆಗೆದುಕೊಂಡು ಹೋಗಲು 5 ರೂ. ಕೊಡಬೇಕು. 1 ಎಕರೆಗೆ 8ರಿಂದ 10 ಸಾವಿರ ಕ್ವಿಂಟಾಲ್​ನಷ್ಟು ಇಳುವರಿ ಬಂದರೂ ಈಗಿರುವ 2 ರೂ. ಬೆಲೆಗೆ ಮಾರಾಟ ಮಾಡಿದರೆ, ಟೊಮ್ಯಾಟೊ ಬೆಳೆಯಲು ಮಾಡಿದ ಖರ್ಚು ಸಹ ಮರಳಲ್ಲ ಎಂಬುದು ರೈತರ ಅಳಲು.

    ತಾಲೂಕಿನಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆಯಲು ಮುಂದಾಗಿದ್ದಾರೆ. 500ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದೆ. ಇಲ್ಲಿಯ ಎಪಿಎಂಸಿ ಮಾರುಕಟ್ಟೆಗೆ ಈ ಹಿಂದೆ 500 ರಿಂದ 1 ಸಾವಿರ ಬಾಕ್ಸ್​ನಷ್ಟು ಬರುತ್ತಿದ್ದ ಟೊಮ್ಯಾಟೊ ಇದೀಗ 2 ಸಾವಿರದಿಂದ 3 ಸಾವಿರದವರೆಗೆ ಬರತೊಡಗಿವೆ. ಹೀಗಾಗಿ ಬೆಲೆ ಕೂಡ ಕುಸಿತ ಕಂಡಿದೆ ಎಂಬುದು ಎಪಿಎಂಸಿ ಅಧಿಕಾರಿಗಳ ಅಭಿಪ್ರಾಯ.

    ಜಮೀನಿನಲ್ಲಿ ಬಿಟ್ಟ ರೈತರು…

    ಬೆಲೆ ಕುಸಿತದ ಸುದ್ದಿ ತಿಳಿದ ರೈತರು ಟೊಮ್ಯಾಟೊ ಕೀಳದೇ ಜಮೀನಿನಲ್ಲಿಯೇ ಬಿಟ್ಟಿದ್ದಾರೆ. ಹೀಗಾಗಿ ಅದು ಅಲ್ಲಿಯೇ ಕೊಳೆಯುತ್ತಿದೆ. ಮಾರುಕಟ್ಟೆಗೆ ತಂದರೂ ಸಾಗಣೆ ವೆಚ್ಚ ಭರಿಸುವುದು ಕಷ್ಟ ಎಂಬ ಸಂಕಟ ರೈತರದ್ದು.

    ಆಗಸ್ಟ್, ಅಕ್ಟೋಬರ್​ನಲ್ಲಿ ಬೆಳೆದ ಟೊಮ್ಯಾಮೊ ಮಳೆ ಪಾಲಾಗಿ ಬಹಳಷ್ಟು ನಷ್ಟ ಅನುಭವಿಸಿದ್ದೇವೆ. ಇದೀಗ ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ. ತಾಲೂಕಿನಲ್ಲಿ ನೀರಾವರಿ ಅನುಕೂಲ ಇರುವುದರಿಂದ ತರಕಾರಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ದರ ಕುಸಿತ ಸಂದರ್ಭದಲ್ಲಿ ಸಂರಕ್ಷಿಸಲು ಸರ್ಕಾರ ಕೋಲ್ಡ್ ಸ್ಟೋರೆಜ್ ವ್ಯವಸ್ಥೆಯನ್ನಾದರೂ ಮಾಡಿಕೊಡಬೇಕು.

    | ಮಹೇಶಪ್ಪ ಗಾಣಗೇರ, ಟೊಮ್ಯಾಟೊ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts