More

    ಇನ್ನು ಫಾಸ್ಟ್ಯಾಗ್ ಅಳವಡಿಸಿದ ಸ್ಥಳೀಯ ವಾಹನಗಳಿಗೆ ಮಾತ್ರ ರಿಯಾಯಿತಿ

    ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್‌ಗೇಟ್‌ಗಳಲ್ಲಿ ರಿಯಾಯಿತಿ ಪಡೆಯಲು ಸ್ಥಳೀಯ ವಾಹನಗಳು ಫಾಸ್ಟ್ಯಾಗ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.
    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಧೀನದಲ್ಲಿರುವ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ನೋಂದಣಿ ಹೊಂದಿರುವ ವಾಣಿಜ್ಯ ಉದ್ದೇಶದ ವಾಹನಗಳಿಗೆ ರಿಯಾಯಿತಿ ಮುಂದುವರಿಯಲಿದೆ, ಆದರೆ ಫಾಸ್ಟ್ಯಾಗ್ ಕಡ್ಡಾಯ.

    ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಕೆಎ 19, ಕೆಎ 21 ಮತ್ತು ಕೆಎ 70 ನೋಂದಣಿ ಹೊಂದಿರುವ ವಾಹನಗಳು ಸುರತ್ಕಲ್ ಟೋಲ್‌ನಲ್ಲಿ ಕೆಎ 19 ನೋಂದಣಿ ಹೊಂದಿರುವ ವಾಣಿಜ್ಯ ಉದ್ದೇಶದ ವಾಹನಗಳು ರಿಯಾಯಿತಿ ಪಡೆಯುತ್ತಿವೆ. ಟೋಲ್‌ನ 20 ಕಿ.ಮೀ. ವ್ಯಾಪ್ತಿಯ ಖಾಸಗಿ ಕಾರುಗಳು ಮಾಸಿಕ 265 ರೂ. ಪಾಸ್ ಪಡೆದು ದಿನದಲ್ಲಿ ಎಷ್ಟು ಬಾರಿ ಬೇಕಾದರೂ ಟೋಲ್ ಮೂಲಕ ಪ್ರಯಾಣಿಸಲು ಅವಕಾಶವಿದೆ.

    ನವಯುಗ ಸಂಸ್ಥೆಯ ಆಧೀನದಲ್ಲಿರುವ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಸ್ಥಳೀಯ ನೋಂದಣಿಯ ವಾಣಿಜ್ಯ ವಾಹನಗಳಿಗೆ ರಿಯಾಯಿತಿ ಇರುವುದಿಲ್ಲ. ಆದರೆ ಖಾಸಗಿ ಕಾರುಗಳು ಮಾಸಿಕ ಪಾಸ್ ಪಡೆದು ಸಂಚರಿಸಲು ಅವಕಾಶವಿದೆ. ಟೋಲ್‌ನಲ್ಲಿ ನಗದು ಪಾವತಿಸಿ ಪ್ರಯಾಣಿಸುವವರು ಈಗಾಗಲೇ ಏಕಮುಖ ಸಂಚಾರದ ಟಿಕೆಟ್ ಮಾತ್ರ ಪಡೆಯಲು ಅವಕಾಶವಿದೆ. ಇದರಿಂದ 24 ಗಂಟೆ ಅವಧಿಯೊಳಗೆ ಬಂದು ಹೋಗುವ ಪ್ರಯಾಣಿಕರಿಗೆ ಸಿಗುವ ರಿಯಾಯಿತಿ ನಗದು ಪಾವತಿಸಿ ಟೋಲ್ ದಾಟುವ ವಾಹನಗಳಿಗೆ ದೊರೆಯುತ್ತಿಲ್ಲ.

    ಪ್ರಾಧಿಕಾರದ ಹೊಸ ಸುತ್ತೋಲೆಯ ಬಗ್ಗೆ ಹೇಳಿದರೂ ಕೆಲ ವಾಹನ ಚಾಲಕರಿಗೆ ಅರ್ಥವಾಗುತ್ತಿಲ್ಲ. ಸರ್ಕಾರದ ಆದೇಶದ ಕುರಿತು ತಿಳಿದುಕೊಂಡು ಎಲ್ಲರು ವ್ಯವಹರಿಸುವಂತೆ ಟೋಲ್ ನಿರ್ವಾಹಕರೋರ್ವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎನ್‌ಎಚ್‌ಎಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

     ತಲಪಾಡಿ ಬಸ್ ಹೋಗಲ್ಲ: ಸ್ಥಳೀಯ ನೋಂದಣಿಯ ವಾಣಿಜ್ಯ ವಾಹನಗಳಿಗೆ ರಿಯಾಯಿತಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ತಲಪಾಡಿ ತನಕ ಮಾತ್ರ ಸಂಚರಿಸುವ ಬಸ್‌ಗಳು ಟೋಲ್ ದಾಟಿ ಹಳೇ ತಲಪಾಡಿ ಬಸ್ ನಿಲ್ದಾಣ ತನಕ ಸಂಚರಿಸುತ್ತಿಲ್ಲ. ಟೋಲ್ ಹತ್ತಿರವೇ ಕರ್ನಾಟಕದ ಭಾಗದಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಳ್ಳುತ್ತಿವೆ. ಕೇರಳ ಮತ್ತು ಕರ್ನಾಟಕದ ಲೋಕಲ್ ಬಸ್‌ಗಳ ಪ್ರಯಾಣಿಕರು ಇಲ್ಲಿ ಉಭಯ ಕಡೆಗಳಲ್ಲಿ ಟೋಲ್‌ನಿಂದ ತುಸು ದೂರವೇ ಇಳಿದು ನಡೆದು ಟೋಲ್ ದಾಟಿ ಇನ್ನೊಂದು ರಾಜ್ಯದ ಲೋಕಲ್ ಬಸ್ ಹಿಡಿಯಲು ಆರಂಭಿಸಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts