More

    149 ಮನೆಗಿಲ್ಲ ಶೌಚಗುಂಡಿ!, ಕಲ್ಮಾಡಿ ಹೊಳೆ ಸೇರುತ್ತಿದೆ ಕೊಳಚೆ ನೀರು

    ಅವಿನ್ ಶೆಟ್ಟಿ ಉಡುಪಿ

    ಶೈಕ್ಷಣಿಕ, ಆರೋಗ್ಯ, ಜೀವನ ಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲೇ ಖ್ಯಾತಿ ಪಡೆದಿರುವ ಉಡುಪಿ ನಗರದ ಶೋಚನೀಯ, ಅವ್ಯವಸ್ಥೆಯ ಕಥೆ ಇದು. ಕಲ್ಮಾಡಿಯ 149 ಮನೆಗಳಲ್ಲಿ ಶೌಚಗುಂಡಿಗಳೇ ಇಲ್ಲ. ಈ ಭಾಗದ ಶೌಚ ನೀರು ಸೇರುತ್ತಿರುವುದು ಕಲ್ಮಾಡಿ ಹೊಳೆಗೆ!

    ಇಷ್ಟೆಲ್ಲ ಸಮಸ್ಯೆ, ಅವಾಂತರಗಳನ್ನು ಇರಿಸಿಕೊಂಡ ಉಡುಪಿ ನಗರಸಭೆ ಬಯಲು ಶೌಚಮುಕ್ತ ಕಿರೀಟ ಪಡೆಯಲು ಸಜ್ಜಾಗಿತ್ತು. ಇದಕ್ಕೆ ಇತ್ತೀಚೆಗೆ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಮೊದಲು ಅವ್ಯವಸ್ಥೆ ಸರಿಪಡಿಸಿ ಬಳಿಕ ಬಯಲು ಶೌಚಮುಕ್ತ ನಗರ ಎಂದು ಘೋಷಿಸಿ ಎಂದು ಹೇಳಿದ್ದರು.

    ಕಲ್ಮಾಡಿ ಭಾಗದಲ್ಲಿ ನೆಲೆಸಿರುವುದು ಮೀನುಗಾರಿಕೆ ವೃತ್ತಿ ನಡೆಸುವ ಐದು-ಹತ್ತು ಸೆನ್ಸ್‌ನಲ್ಲಿ ವಾಸವಿರುವ ಬಡವರ್ಗದ ಜನ. ಈ ಹಿಂದೆ ಇಲ್ಲಿ ವ್ಯವಸ್ಥೆ ಸರಿಯಾಗಿ ಇಲ್ಲದಾಗ ಸಾಕಷ್ಟು ಜಾಗೃತಿ ಮೂಡಿಸಿದ ಬಳಿಕ ಶೌಚಗೃಹ ನಿರ್ಮಾಣಗೊಂಡಿತು. ಆದರೂ ಸದ್ಯದ ನಗರಸಭೆ ಸಮೀಕ್ಷೆಯಂತೆ ಇಲ್ಲಿನ 149 ಮನೆಗಳಿಗೆ ಶೌಚಗುಂಡಿ ಇಲ್ಲ. ಶೌಚಗೃಹದಿಂದ ಪೈಪ್ ಸಂಪರ್ಕವನ್ನು ನೇರವಾಗಿ ಕಲ್ಮಾಡಿ ಹೊಳೆಗೆ ನೀಡಲಾಗಿದೆ. ಇಷ್ಟು ವರ್ಷದವರೆಗೆ ಈ ವ್ಯವಸ್ಥೆ ಸರಿಪಡಿಸುವ ಬಗ್ಗೆ ನಗರಸಭೆ ವ್ಯವಸ್ಥಿತ ಯೋಜನೆ ರೂಪಿಸಲು ಕ್ರಮ ಕೈಗೊಂಡಿಲ್ಲ. ಈಗ ನಗರಸಭೆ ವತಿಯಿಂದಲೇ ನೋಟಿಸ್ ಜಾರಿ ಮಾಡಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪರಿಸರ ಕಲುಷಿತ
    ಕಲ್ಮಾಡಿ ಹೊಳೆಗೆ ಶೌಚನೀರು ಸೇರುತ್ತಿರುವ ಕಾರಣ ಸಂಪೂರ್ಣ ಪರಿಸರ ಕಲುಷಿತಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು. ಸಾಕಷ್ಟು ದೂರದವರೆಗೂ ಇಲ್ಲಿ ದುರ್ವಾಸನೆ ಬೀರುತ್ತಿದೆ. ಪರಿಸರದಲ್ಲಿ ಸೊಳ್ಳೆ ಕಾಟ ತೀವ್ರವಾಗಿದ್ದು, ಅನಾರೋಗ್ಯ ಭೀತಿಯೂ ಹೆಚ್ಚಳವಾಗಿದೆ. ನಗರಸಭೆ ಈ ಮನೆಗಳಿಗೆ ಶೌಚಗುಂಡಿ ನಿರ್ಮಿಸುವ ಬಗ್ಗೆ ವಿಶೇಷ ಯೋಜನೆ ರೂಪಿಸಬೇಕು ಎಂಬುದು ಜನರ ಆಗ್ರಹ.

    ಕೊಳಚೆ ನೀರು ಕಲ್ಮಾಡಿ ಹೊಳೆಗೆ
    ಹಲವು ವರ್ಷಗಳಿಂದ ಕಲ್ಮಾಡಿ ಪರಿಸರದಲ್ಲಿ ಹರಿಯುವ ಹೊಳೆಯ ಕೊಳಚೆ ನೀರಿಗೆ ಮುಕ್ತಿ ಇಲ್ಲವಾಗಿದೆ. ಉಡುಪಿ ನಗರದ ಕೊಳಚೆ ನೀರು ಶುದ್ಧೀಕರಣ ಘಟಕ ಸೇರುವ ಬದಲು ಇಂದ್ರಾಣಿ ನದಿಯಲ್ಲಿ ಹರಿದು ಕೊನೆಗೆ ಕಲ್ಮಾಡಿ ಸಸಿತೋಟದ ಪರಿಸರ ಸೇರುತ್ತಿದೆ. ಈ ಪ್ರದೇಶದಲ್ಲಿ ನೆಲೆಸಿರುವ 500ಕ್ಕೂ ಅಧಿಕ ಮನೆಗಳಿಗೆ ಪ್ರತಿದಿನ ನರಕ ದರ್ಶನವಾಗುತ್ತಿದೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದುರ್ವಾಸನೆಯ ಕೊಳಚೆ ನೀರಿನಿಂದ ಪರಿಸರದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ವಿಪರೀತ ಸೊಳ್ಳೆ ಕಾಟದಿಂದ ಅನಾರೋಗ್ಯದ ಆತಂಕವೂ ಕಾಡುತ್ತಿದೆ ಎಂದು ಸ್ಥಳೀಯ ನಿವಾಸಿ ಜಯಕರ ಸುವರ್ಣ ಹೇಳುತ್ತಾರೆ.

    ಕಳೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಲ್ಮಾಡಿ ಪರಿಸರದಲ್ಲಿ ಶೌಚಗುಂಡಿ ಇಲ್ಲದ ವಿಚಾರ ಪ್ರಸ್ತಾಪಗೊಂಡ ಬಳಿಕ ಅಲ್ಲಿ ಸರಿಯಾಗಿ ಪರಿಶೀಲಿಸಿ ವರದಿ ನೀಡಲು ಹಾಗೂ ಸಮಸ್ಯೆ ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಸ್ತುತ ಶಾಲೆ ಬಿಟ್ಟ ಮಕ್ಕಳ ಗಣತಿಯೂ ನಡೆಯುತ್ತಿದೆ. ಅಧಿಕಾರಿ, ಸಿಬ್ಬಂದಿ ಸಹಿತ ಎಲ್ಲರೂ ಆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಮುಗಿದ ಬಳಿಕ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ತಿಳಿಸಲಾಗುವುದು.
    ಸುಮಿತ್ರಾ ನಾಯಕ್, ಅಧ್ಯಕ್ಷೆ, ಉಡುಪಿ ನಗರಸಭೆ

    ಆರ್ಥಿಕವಾಗಿ ಹಿಂದುಳಿದ, ಮೀನುಗಾರಿಕೆ ಕೆಲಸ ಮಾಡಿಕೊಂಡಿರುವ ಕುಟುಂಬಗಳು ಈ ಭಾಗದಲ್ಲಿ ನೆಲೆಸಿವೆ. ಇಲ್ಲಿನ ಜನರ ಆರೋಗ್ಯದ ಹಿತದೃಷ್ಟಿಯಿಂದ 149 ಮನೆಗಳಲ್ಲಿ ಶೌಚಗುಂಡಿ ಅಗತ್ಯಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಇದು ಗಂಭೀರ ಸ್ವರೂಪ ಪಡೆಯುವ ಮೊದಲು ಎಚ್ಚೆತ್ತುಕೊಳ್ಳಬೇಕು. ಜಿಲ್ಲಾಡಳಿತ ಸ್ವಚ್ಛ ಭಾರತ್ ಅನುದಾನ ಮತ್ತು ನಗರಸಭೆ ವಿಶೇಷ ಅನುದಾನ ಬಳಸಿ ಶೌಚಗುಂಡಿ ನಿರ್ಮಿಸಬೇಕು.
    ಸುಂದರ್ ಜೆ.ಕಲ್ಮಾಡಿ, ಕಲ್ಮಾಡಿ ವಾರ್ಡ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts