More

    ನ್ಯುಮೋನಿಯಾ: ತಿಳಿದುಕೊಳ್ಳಬೇಕಾದ ವಿಷಯ, ಗುಣಲಕ್ಷಣ ಹಾಗೂ ಚಿಕಿತ್ಸೆ

    ಇಂದು ವಿಶ್ವ ನ್ಯುಮೋನಿಯಾ ದಿನ

    ಬೆಂಗಳೂರು: ನ್ಯುಮೋನಿಯಾ ಎಂಬುದು ತೀವ್ರ ಸ್ವರೂಪ ಹೊಂದಿರುವ, ಶ್ವಾಸಕೋಶಕ್ಕೆ ತಗಲುವ, ಹಲವಾರು ಕಾರಣದಿಂದ ವ್ಯಾಪಿಸುವ ಒಂದು ಸೋಂಕು. ಇದು ಅತ್ಯಂತ ಗಂಭೀರ ಸ್ಥಿತಿಗೆ ತಲುಪಿ ಮಾರಣಾಂತಿಕ ಕಾಯಿಲೆಯೂ ಆಗಬಹುದು. ಸಾಮಾನ್ಯವಾಗಿ ಇದು ಬ್ಯಾಕ್ಟೀರಿಯಾ, ಫಂಗಸ್ ಹಾಗೂ ವೈರಸ್‍ನಿಂದ ಪ್ರಾರಂಭವಾಗುತ್ತದೆ. ಇದು ಶ್ವಾಸಕೋಶದಲ್ಲಿ ಉರಿಯುವ ಅನುಭವ ಉಂಟುಮಾಡಿ, ಶ್ವಾಸಕೋಶದ ಅತಿಸಣ್ಣದಾದ ಗಾಳಿಚೀಲದಲ್ಲಿ (ಅಲ್ವಿಯೋಲಿ) ದ್ರವದಿಂದ ಹಾಗು ಕೀವಿನಿಂದ ತುಂಬುವಂತೆ ಮಾಡುತ್ತದೆ. ಇದರಿಂದಾಗಿ ವ್ಯಕ್ತಿ ಸಲೀಸಾಗಿ ಉಸಿರಾಡಲು ಕಷ್ಟಪಡುತ್ತಾನೆ ಹಾಗು ಆಮ್ಲಜನಕದ ಸೇವನೆಯನ್ನೂ ಮಿತಿಗೊಳಿಸುತ್ತದೆ. ನ್ಯುಮೋನಿಯಾ ಕಿರಿಯ ಹಾಗೂ ಆರೋಗ್ಯವಂತ ವ್ಯಕ್ತಿಯಲ್ಲಿ ಸಹ ಕಂಡುಬರುತ್ತದೆ, ಆದರೆ ಇದು ಹಿರಿಯರಲ್ಲಿ, ಶಿಶುವಿನಲ್ಲಿ ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿರುವ ಜನರಲ್ಲಿ ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿರುವವರಲ್ಲಿ ಅತ್ಯಂತ ಅಪಾಯಕಾರಿ.
    ವಿಶ್ವದಾದ್ಯಂತ ಮಕ್ಕಳ ಸಾವಿಗೆ ಅತಿಹೆಚ್ಚು ಕಾರಣವಾಗುವ ಏಕೈಕ ರೋಗ ನ್ಯುಮೋನಿಯಾ. ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆ ಪ್ರಕಾರ 2017ರಲ್ಲಿ ನ್ಯುಮೋನಿಯಾದಿಂದಾದ ಒಟ್ಟಾರೆ ಸಾವಿನ ಸಂಖ್ಯೆ 8,08,694 ಆಗಿದ್ದು, ಅದರಲ್ಲಿ ಶೇ. 15 ಮಂದಿ ಮಕ್ಕಳು. ಆದರೆ ಮಕ್ಕಳನ್ನು ನ್ಯುಮೋನಿಯಾದಿಂದ ಪಾರು ಮಾಡಬಹುದು, ಸರಳ ಮಾರ್ಗದಿಂದ ಇದನ್ನು ತಡೆಯಬಹುದು ಮತ್ತು ಕಡಿಮೆ ವೆಚ್ಚದಲ್ಲಿ, ಸರಳ-ತಂತ್ರಜ್ಞಾನದ ಔಷಧ ಹಾಗೂ ಆರೈಕೆಯಿಂದ ಗುಣಪಡಿಸಬಹುದು.
    ಎರಡೂ ಸಾಂಕ್ರಾಮಿಕ: ಬ್ಯಾಕ್ಟೀರಿಯಲ್ ಹಾಗು ವೈರಲ್ ನ್ಯುಮೋನಿಯಾ ಎರಡೂ ಸಾಂಕ್ರಾಮಿಕ ರೋಗವಾಗಿದ್ದು, ಅದು ಸೀನು ಅಥವಾ ಕೆಮ್ಮಿನಿಂದ ಹೊರಹೊಮ್ಮುವ ಹನಿಗಳನ್ನು ಉಸಿರಾಡುವ ಮೂಲಕ ಹರಡುತ್ತದೆ. ಒಬ್ಬ ವ್ಯಕ್ತಿಗೆ ನ್ಯುಮೋನಿಯಾ ಉಂಟುಮಾಡುವ ಬ್ಯಾಕ್ಟೀರಿಯಾ ಹಾಗೂ ವೈರಸ್ ಕಲುಷಿತವಾಗಿರುವ ಮೇಲ್ಮೈ ಹೊಂದಿರುವ ವಸ್ತುಗಳೊಂದಿಗೆ ಸಂಪರ್ಕ ಹೊಂದಿದಾಗಲೂ ಸುಲಭವಾಗಿ ಬರುತ್ತದೆ.

    ನ್ಯುಮೋನಿಯಾದ ಗುಣಲಕ್ಷಣಗಳು

    · ಕೆಮ್ಮು, ಲೋಳೆ ಉತ್ಪತ್ತಿ ಮಾಡುವ ಕೆಮ್ಮು
    · ಜ್ವರ
    · ವಿಪರೀತ ಬೆವರುವುದು ಅಥವಾ ಅತಿಯಾದ ಚಳಿ
    · ಕೆಲಸ ಕಾರ್ಯದಲ್ಲಿ ತೊಡಗಿದಾಗ ಅಥವಾ ವಿಶ್ರಮಿಸುವಾಗ ಉಸಿರಾಟದ ತೊಂದರೆ
    · ಎದೆ ಭಾಗದಲ್ಲಿ ನೋವು. ಉಸಿರಾಡಿದಾಗ ಅಥವಾ ಕೆಮ್ಮಿದಾಗ ಇನ್ನೂ ಹೆಚ್ಚಿನ ನೋವು ಉಂಟಾಗುವುದು
    · ದಣಿವು ಅಥವಾ ಆಯಾಸದ ಅನುಭವ
    · ಹಸಿವಾಗದಿರುವುದು
    · ತೀವ್ರ ತಲೆನೋವು
    · ವಾಕರಿಕೆ ಅಥವಾ ವಾಂತಿಯಾಗುವುದು
    ಇನ್ನೂ ಹಲವಾರು ಗುಣಲಕ್ಷಣಗಳಿದ್ದು, ಅವು ವಯಸ್ಸಿಗೆ ಹಾಗೂ ಸಾಮಾನ್ಯ ಆರೋಗ್ಯಕ್ಕೆ ತಕ್ಕಂತೆ ಬದಲಾಗುತ್ತದೆ.
    · ಐದು ವರ್ಷದೊಳಗಿನ ಮಕ್ಕಳಲ್ಲಿ ವೇಗವಾದ ಉಸಿರಾಟ ಅಥವಾ ಉಬ್ಬಸ ಉಂಟಾಗುವುದು
    · ಶಿಶುಗಳು ಯಾವುದೇ ರೀತಿಯ ಗುಣಲಕ್ಷಣಗಳನ್ನು ತೋರದಿರಬಹುದು, ಆದರೆ ಕೆಲವೊಮ್ಮೆ ವಾಂತಿ, ಶಕ್ತಿ ಕುಂದುವುದು ಅಥವಾ ತಿನ್ನುವುದರಲ್ಲಿ ಹಾಗೂ ಕುಡಿಯುವುದರಲ್ಲಿ ಸಮಸ್ಯೆ ಕಾಣಬಹುದು

    ನ್ಯುಮೋನಿಯಾದ ಕಾರಣಗಳು: ನ್ಯುಮೋನಿಯಾ ವೈರಸ್​ ಹಾಗೂ ಬ್ಯಾಕ್ಟೀರಿಯಾದಿಂದಲೂ ಬರುತ್ತದೆ. ವೈರಲ್ ನ್ಯುಮೋನಿಯಾ ಸಾಮಾನ್ಯವಾಗಿ ಸೌಮ್ಯವಾಗಿದ್ದು ಹಾಗೂ 1 ರಿಂದ 3 ವಾರಗಳಲ್ಲಿ ಚಿಕಿತ್ಸೆಯಿಲ್ಲದೆ ಕಡಿಮೆಯಾಗುವುದು. ಇನ್ನು ಮಣ್ಣಿನಿಂದ ಅಥವಾ ಹಕ್ಕಿ ಹಿಕ್ಕೆಗಳಿಂದ ಶಿಲೀಂಧ್ರ ನ್ಯುಮೋನಿಯಾ ಉಂಟಾಗುತ್ತದೆ. ಅವು ಹೆಚ್ಚಿನದಾಗಿ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದ ವ್ಯಕ್ತಿಯನ್ನು ಅತಿಯಾಗಿ ಬಾಧಿಸುತ್ತದೆ.

    ನ್ಯುಮೋನಿಯಾದ ವಿಧಗಳು: ಎಲ್ಲಿ ಹಾಗೂ ಹೇಗೆ ದೇಹಕ್ಕೆ ವ್ಯಾಪಿಸಿತು ಎಂಬುದರ ಪ್ರಕಾರ ನ್ಯುಮೋನಿಯಾವನ್ನು 3 ರೀತಿ ವಿಂಗಡಿಸಲಾಗುತ್ತದೆ. ಆಸ್ಪತ್ರೆ ವಾಸ್ತವ್ಯದಿಂದ ಬರುವ ನ್ಯುಮೋನಿಯಾ. ಇದನ್ನು ಹಾಸ್ಪಿಟಲ್​ ಆ್ಯಕ್ವೈರ್ಡ್​ ನ್ಯುಮೋನಿಯಾ ಎನ್ನುತ್ತಾರೆ. ಇದು ಬೇರೆ ಥರದ ನ್ಯುಮೋನಿಯಾಗಿಂತಲೂ ಗಂಭೀರವಾದುದು. ಏಕೆಂದರೆ ರೋಗ ಉಂಟುಮಾಡುವ ಬ್ಯಾಕ್ಟೀರಿಯಾ ಪ್ರತಿಜೀವಕಗಳಿಗೆ ನಿರೋಧಕವಾಗಿರುತ್ತದೆ. ಇನ್ನು ಸಮುದಾಯದ ಮೂಲಕ ಬರುವಂಥದ್ದನ್ನು ಕಮ್ಯುನಿಟಿ ಆ್ಯಕ್ವೈರ್ಡ್​ ನ್ಯುಮೋನಿಯಾ, ವೆಂಟಿಲೇಟರ್​ ಮೂಲಕ ಹರಡುವಂಥದ್ದನ್ನು ವೆಂಟಿಲೇಟರ್ ಆ್ಯಕ್ವೈರ್ಡ್​ ನ್ಯುಮೋನಿಯಾ ಎನ್ನುತ್ತಾರೆ.

    ನ್ಯುಮೋನಿಯಾದ ಚಿಕಿತ್ಸೆ: ನ್ಯುಮೋನಿಯಾ ಯಾವ ಕಾರಣದಿಂದ ಬಂದಿದೆ, ನ್ಯುಮೋನಿಯಾ ಎಷ್ಟು ತೀವ್ರವಾಗಿದೆ, ರೋಗಿಯ ಸಾಮಾನ್ಯ ಆರೋಗ್ಯವನ್ನು ಪರಿಗಣಿಸಿ ನ್ಯುಮೋನಿಯಾಗೆ ಚಿಕಿತ್ಸೆ ನೀಡಲಾಗುತ್ತದೆ. ಬಾಯಿ ಮೂಲಕ ತೆಗೆದುಕೊಳ್ಳುವ ಪ್ರತಿಜೀವಕಗಳು ಹೆಚ್ಚಿನ ಪ್ರಮಾಣದಲ್ಲಿ ನ್ಯುಮೋನಿಯಾ ಹೋಗಲಾಡಿಸುತ್ತವೆ. ಹಾಗಾಗಿ ವೈದ್ಯರು ಸೂಚಿಸುವ ಕೋರ್ಸ್‍ ಪೂರ್ಣಗೊಳಿಸಿ. ಕೋರ್ಸ್ ಸಂಪೂರ್ಣ ಮಾಡದಿರುವುದರಿಂದ ಸೋಂಕನ್ನು ನಿವಾರಿಸಲು ತಡೆಯುಂಟಾಗಬಹುದು ಮತ್ತು ಭವಿಷ್ಯದಲ್ಲಿ ಚಿಕಿತ್ಸೆ ನೀಡುವುದು ಕಷ್ಟವಾಗಬಹುದು. ಕೆಲವು ಪ್ರಕರಣಗಳಲ್ಲಿ ವೈದ್ಯರು ಆಂಟಿವೈರಲ್‍ ಸೂಚಿಸಬಹುದು. ಹಲವು ಬಾರಿ ವೈರಲ್ ನ್ಯುಮೋನಿಯಾ ಮನೆಯಲ್ಲೇ ಆರೈಕೆ ಮಾಡುವುದರಿಂದ ಅದಾಗಿಯೇ ಕಡಿಮೆಯಾಗುತ್ತದೆ. ಆ್ಯಂಟಿ ಫಂಗಲ್​ ಔಷಗಿಗಳು ಫಂಗಲ್ ನ್ಯುಮೋನಿಯಾ ವಿರುದ್ಧ ಹೋರಾಡುತ್ತವೆ, ಇದನ್ನು ಹಲವು ವಾರಗಳ ತನಕ ತೆಗೆದುಕೊಳ್ಳಬೇಕಾಗುತ್ತದೆ.

    ಆಸ್ಪತ್ರೆಗೆ ದಾಖಲಾಗುವುದು ಯಾವಾಗ?: ರೋಗಲಕ್ಷಣಗಳು ತುಂಬಾ ತೀವ್ರವಿದ್ದಾಗ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳಿದ್ದರೆ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ಸೇರಬಹುದು.

    ನ್ಯುಮೋನಿಯಾ ತಡೆಗಟ್ಟುವಿಕೆ

    ವ್ಯಾಕ್ಸಿನೇಷನ್: ನ್ಯುಮೋನಿಯಾ ತಡೆಗಟ್ಟುವ ಮೊದಲ ಉಪಾಯವೇ ವ್ಯಾಕ್ಸಿನೇಷನ್. ನ್ಯುಮೋನಿಯಾ ತಡೆಗಟ್ಟಲು ಹಲವಾರು ಲಸಿಕೆಗಳಿವೆ. ಪ್ರೆವ್ನರ್-13 ಮತ್ತು ನ್ಯುಮೋವ್ಯಾಕ್ಸ್-23 ಪ್ರಮುಖವಾದದ್ದು. “ಪ್ರೆವ್ನರ್-13” 13 ವಿಧದ ನ್ಯುಮೋಕೊಕಲ್ ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿ. ಇದನ್ನು 2 ವರ್ಷದೊಳಗಿನ ಮಕ್ಕಳಿಗೆ, 65 ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಹಾಗೂ 2 ರಿಂದ 64 ವರ್ಷದೊಳಗಿನವರಿಗೆ ದೀರ್ಘಕಾಲದ ಅಪಾಯ ಹೆಚ್ಚಿಸುವ ನ್ಯುಮೋನಿಯಾದ ಪರಿಸ್ಥಿತಿಯಲ್ಲಿ ನೀಡುತ್ತಾರೆ.
    “ನ್ಯುಮೋವ್ಯಾಕ್ಸ್-23” 23 ವಿಧದ ನ್ಯುಮೋಕೊಕಲ್ ಬ್ಯಾಕ್ಟೀರಿಯಾಗಳ ವಿರುದ್ದ ಪರಿಣಾಮಕಾರಿ. ಇದನ್ನು 65 ವರ್ಷ ಮೇಲ್ಪಟ್ಟವರಿಗೆ, 19ರಿಂದ 64 ವರ್ಷದ ಧೂಮಪಾನಿಗಳಿಗೆ ನೀಡುತ್ತಾರೆ.
    ಫ್ಲೂ ಲಸಿಕೆ: ನ್ಯುಮೋನಿಯ ಮರುಕಳಿಸುವ ಜ್ವರದ ಸಂಯುಕ್ತತೆಯಿಂದಿರಬಹುದು. ಆದ್ದರಿಂದ 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮೇಲ್ಪಟ್ಟ ಪ್ರತಿಯೊಬ್ಬರೂ ವಿಶೇಷವಾಗಿ ಜ್ವರ ಸಮಸ್ಯೆಯ ಅಪಾಯದಲ್ಲಿರುವವರು ಲಸಿಕೆ ಕಡ್ಡಾಯವಾಗಿ ಪಡೆಯಬೇಕು.
    ಎಚ್.ಐ.ಬಿ. ವ್ಯಾಕ್ಸಿನ್: ಈ ಲಸಿಕೆ ಹೀಮೋಫಿಲಸ್ ಇನ್‍ಫ್ಲೂಯೆಂಜಾ ಟೈಪ್ ಬಿ ವಿರುದ್ಧ ಹೋರಾಡಿ ನಮ್ಮನ್ನು ನ್ಯುಮೋನಿಯಾ ಹಾಗೂ ಮೆನಿಂಜೈಟಿಸ್ ರೋಗದಿಂದ ಪಾರುಮಾಡುತ್ತದೆ.

    ತಡೆಯುವ ಮಾರ್ಗಗಳು

    · ನೀವು ಧೂಮಪಾನ ಮಾಡುವವರಾಗಿದ್ದರೆ, ಅದನ್ನು ಬಿಡಲು ಪ್ರಯತ್ನಿಸಿ. ಧೂಮಪಾನ ಮಾಡುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಕ್ಕೆ ದಾರಿಮಾಡಿಕೊಟ್ಟಂತಿರುತ್ತದೆ.
    · ಪ್ರತಿನಿತ್ಯವು ನಿಯಮಿತವಾಗಿ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆಯಿರಿ.
    · ಕೆಮ್ಮುವಾಗ ಹಾಗೂ ಸೀನುವಾಗ ಕೈಯಿಂದ ಅಥವಾ ಬಟ್ಟೆಯಿಂದ ಬಾಯನ್ನು ಮುಚ್ಚಿಕೊಳ್ಳಿ. ಉಪಯೋಗಿಸಿದ ಟಿಶ್ಯೂ ಪೇಪರ್ ದಯಮಾಡಿ ಎಸೆಯಿರಿ.
    · ರೋಗನಿರೋಧಕ ಶಕ್ತಿ ಹೆಚ್ಚಿಸಲು ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ, ಆರೋಗ್ಯಕರ ಆಹಾರ ಪದ್ಧತಿ ಬೆಳೆಸಿಕೊಳ್ಳಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ.

    | ಸಮರ್ಥ ಸಾಗರ ಸ್ನಾತಕೋತ್ತರ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts