More

    ಇಂದು ಸಕ್ಕರೆ ನಾಡಲ್ಲಿ ಮೋದಿ ಹವಾ! ಪ್ರಧಾನಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ…

    ಮಂಡ್ಯ: ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ, ಚುನಾವಣೆ ಸಮೀಪಿಸುತ್ತಿದ್ದಂತೆ ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿ ಮೋದಿ ಅವರು ಬರಲಿದ್ದು, ಒಕ್ಕಲಿಗರ ಕೋಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

    ನೂತನವಾಗಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 118 ಕಿ.ಮೀ ಉದ್ದದ ಮೈ-ಬೆಂ ದಶಪಥ ಹೆದ್ದಾರಿಯನ್ನು ಒಟ್ಟು 8,479 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಇಂದು ಮಂಡ್ಯದ ಅಮರಾವತಿ ಹೋಟೇಲ್ ಬಳಿ ಹೆದ್ದಾರಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಮಂಡ್ಯಕ್ಕೆ ಬರುವ ಪ್ರಧಾನಿ ಮೋದಿ ಅವರನ್ನು ವಿವಿಧ ಕಲಾ ತಂಡಗಳು ಸ್ವಾಗತಿಸಲಿವೆ. ಮಧ್ಯಾಹ್ನ 11.40ಕ್ಕೆ ಹೆದ್ದಾರಿ ಲೋಕಾರ್ಪಣೆಗೊಳ್ಳಲಿದೆ. ಮಧ್ಯಾಹ್ನ 12.15 ರಿಂದ 1.15 ರವರೆಗೆ ವೇದಿಕೆ ಕಾರ್ಯಕ್ರಮ ಇರಲಿದೆ. ಮದ್ದೂರಿನ ಗೆಜ್ಜಲಗೆರೆ ಕಾಲನಿ ಬಳಿ ಅದ್ಧೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಅದಕ್ಕೂ ಮುನ್ನ ಮಂಡ್ಯ ನಗರದಲ್ಲಿ 1.8 ಕಿ.ಮೀ ರೋಡ್ ಶೋ ನಡೆಯಲಿದೆ.

    ಇದನ್ನೂ ಓದಿ: ಮನೆಯಿಂದಲೇ ಮತದಾನ ಮಾಡಿ!; 80 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಸೌಲಭ್ಯ; ದೇಶದಲ್ಲೇ ಮೊದಲು

    ಬೆಳಗ್ಗೆ 11.20ಕ್ಕೆ ಮಂಡ್ಯಕ್ಕೆ ಆಗಮಿಸಲಿರುವ ಮೋದಿ, ಪಿಇಎಸ್ ಕಾಲೇಜು ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಬರಲಿದ್ದಾರೆ. ಬೆಳಗ್ಗೆ 11.25ಕ್ಕೆ ಮಂಡ್ಯದ ಪ್ರವಾಸಿ ಮಂದಿರದಿಂದ ರೋಡ್ ಶೋ ಆರಂಭವಾಗಲಿದ್ದು, 11.30ಕ್ಕೆ ಸಂಜಯ್ ವೃತ್ತಕ್ಕೆ ಆಗಮಿಸಲಿದೆ. 11.33 ಕ್ಕೆ ಮಹಾವೀರ್ ವೃತ್ತಕ್ಕೆ ಎಂಟ್ರಿ, 11.37ಕ್ಕೆ ನಂದ ವೃತ್ತಕ್ಕೆ ಎಂಟ್ರಿ ಹಾಗೂ 11.40ಕ್ಕೆ ಅಮರಾವತಿ ಬಳಿ ಇರುವ ಹೆದ್ದಾರಿಗೆ ರೋಡ್​ ಶೋ ಎಂಟ್ರಿ ಕೊಡಲಿದೆ.

    ಹೈವೆ ಲೋಕಾರ್ಪಣೆ ನಂತರ ಗಜ್ಜಲೆಗೆರೆ ವೇದಿಕೆಯತ್ತ ಪ್ರಧಾನಿ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ವೇದಿಕೆ ಕಾರ್ಯಕ್ರಮ ಮುಗಿಸಿ ಗಜ್ಜಲೆಗೆರೆ ಬಳಿ‌ ನಿರ್ಮಾಣವಾಗಿರುವ ಹೆಲಿಪ್ಯಾಡ್​ನಿಂದ ಧಾರವಾಡಕ್ಕೆ ಪ್ರಧಾನಿ ಮೋದಿ ತೆರಳಲಿದ್ದಾರೆ.

    ಮೋದಿ ಆಗಮನದಿಂದ ಹಳೇ ಮೈಸೂರು ಭಾಗದ ಬಿಜೆಪಿಯಲ್ಲಿ ಮತ್ತಷ್ಟು ಹುಮ್ಮಸ್ಸು ಬಂದಿದೆ. ವಿಧಾನಸಭಾ ಚುನಾವಣೆ ಮೇಲೆ ಮೋದಿ ಭೇಟಿ ಪ್ರಭಾವದ ಲೆಕ್ಕಾಚಾರ ಶುರುವಾಗಿದೆ. ಮಂಡ್ಯದಲ್ಲಿ ಬಿಜೆಪಿ ಶಕ್ತಿ ವೃದ್ಧಿಸಿಗೊಳ್ಳಲು ಕಮಲ ಪಾಳಯ ಪ್ಲಾನ್ ಮಾಡಿದೆ. ಮೋದಿ ರೋಡ್ ಶೋನಲ್ಲೂ ಹಿಂದುತ್ವ ಹಾಗೂ ಒಕ್ಕಲಿಗ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ. ಪ್ರಧಾನಿ ಸಂಚರಿಸಲಿರುವ ಮಾರ್ಗದ ನಾಲ್ಕು ವೃತ್ತಗಳಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ಮೈಷುಗರ್ ಫ್ಯಾಕ್ಟರಿ ವೃತ್ತದ ದ್ವಾರಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ನಿರ್ಮಿಸಲಾಗಿದೆ.

    ನಿನ್ನೆ ಉರೀಗೌಡ ಮತ್ತು ನಂಜೇಗೌಡರ ದ್ವಾರ ನಿರ್ಮಿಸಲಾಗಿತ್ತು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಮಹಾವೀರ ವೃತ್ತದಲ್ಲಿ ಒಕ್ಕಲಿಗ ಸಮುದಾಯದ ನಾಡಪ್ರಭು ಕೆಂಪೇಗೌಡ ದ್ವಾರ ನಿರ್ಮಿಸಲಾಗಿದೆ. ಮಂಡ್ಯ ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಮಹಾದ್ವಾರವನ್ನು ಸಹ ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಕಮಲ ಪಡೆ ತಂತ್ರಗಾರಿಕೆ ನಡೆಸಿದೆ.

    ಇದನ್ನೂ ಓದಿ: ತಾಪಮಾನ ತಾಪತ್ರಯ: ದೇಶದ ವಿವಿಧೆಡೆ ಹೆಚ್ಚಲಿದೆ ಬಿಸಿಗಾಳಿ

    ಮೊದಲ ಬಾರಿಗೆ ಮಂಡ್ಯಗೆ ವಿಶ್ವನಾಯಕ ಮೋದಿ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ನೀಡಲು ಕಮಲ ಪಾಳಯ ಸಜ್ಜಾಗಿದೆ. ಐತಿಹಾಸಿಕ ರೋಡ್ ಶೋಗೆ ಮಂಡ್ಯ ನಗರ ಕೇಸರಿಮಯವಾಗಿದೆ. ಮಂಡ್ಯದ ಎಲ್ಲಾ ರಸ್ತೆಗಳಲ್ಲೂ ಬಿಜೆಪಿ ಬಾವುಟ, ಬ್ಯಾನರ್ ಹಾಗೂ ಬಂಟಿಂಗ್ಸ್​ ರಾರಾಜಿಸುತ್ತಿವೆ. ಮೋದಿಗೆ ಸ್ವಾಗತ ಕೋರಿ ಬಿಜೆಪಿ ನಾಯಕರು, ಮುಖಂಡರಿಂದ ಫ್ಲೆಕ್ಸ್ ಅಳವಡಿಸಲಾಗಿದೆ. ರೋಡ್ ಶೋಗಾಗಿ ಹೆದ್ದಾರಿ ಬದಿಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಮಂಡ್ಯದ ಪ್ರವಾಸಿ ಮಂದಿರ ವೃತ್ತದಿಂದ ನಂದಾ ವೃತ್ತದವರೆಗೆ ರೋಡ್ ಶೋ ನಡೆಯಲಿದೆ. 1.8 ಕಿ.ಮೀ ರೋಡ್ ಶೋ ವೀಕ್ಷಣೆ ಮಾಡಲು 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. (ಏಜೆನ್ಸೀಸ್​)

    ತನ್ನನ್ನು ತಾನೇ ಮದ್ವೆಯಾಗಿ 24 ಗಂಟೆಗಳಲ್ಲೇ ಡಿವೋರ್ಸ್​ ಪಡೆದುಕೊಂಡ ಯುವತಿ! ಆಕೆ ಕೊಟ್ಟ ವಿಚಿತ್ರ ಕಾರಣವಿದು…

    ಇಡಿ ಇಕ್ಕಳದಲ್ಲಿ ಲಾಲು ಕುಟುಂಬ: 16ಕ್ಕೆ ಮತ್ತೆ ಕವಿತಾ ವಿಚಾರಣೆ; ಲಾಲು ಮನೆಯಲ್ಲಿ 1 ಕೋಟಿ ರೂ. ನಗದು ವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts