More

    ಮನೆಯಿಂದಲೇ ಮತದಾನ ಮಾಡಿ!; 80 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಸೌಲಭ್ಯ; ದೇಶದಲ್ಲೇ ಮೊದಲು

    ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜ್ಯ ಸಜ್ಜಾಗಿದೆ. ಹದಿನಾರನೇ ವಿಧಾನಸಭೆಯನ್ನು ಪ್ರತಿಷ್ಠಾಪಿಸುವ ಎಲ್ಲ ಪ್ರಕ್ರಿಯೆಗಳನ್ನು ಮೇ 24 ರೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದು, ದೇಶದಲ್ಲೇ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ರಾಜ್ಯದ ಮತದಾರರಿಗೆ ಕಲ್ಪಿಸಲಾಗುವುದು ಎಂದು ಘೋಷಿಸಿದ್ದಾರೆ. ಮೂರು ದಿನಗಳಿಂದ ರಾಜ್ಯದಲ್ಲಿ ಬೀಡುಬಿಟ್ಟು ಪೂರ್ವ ತಯಾರಿಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗದ ತಂಡವು ಚುನಾವಣಾ ಸಿದ್ಧತೆ, ಸಿಬ್ಬಂದಿ, ಮತಗಟ್ಟೆ, ಮತದಾರರು ಹಾಗೂ ಮತದಾನಕ್ಕೆ ಕಲ್ಪಿಸಲಾಗುವ ಸೌಲಭ್ಯಗಳ ವಿವರಗಳನ್ನು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿತು.

    ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಪೇಕ್ಷಿತ 80 ವರ್ಷಕ್ಕೂ ಹೆಚ್ಚು ವಯಸ್ಸಿನವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯ ಒದಗಿಸಲಾಗುವುದು. ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ 12,15,763 ಮಂದಿ ಮತದಾರರಿದ್ದಾರೆ. 16,976 ಮಂದಿ 100 ವರ್ಷ ಮೇಲ್ಪಟ್ಟವರಿದ್ದಾರೆ. 5.55 ಲಕ್ಷ ಅಂಗವಿಕಲರಿದ್ದು, ಈ ಪೈಕಿ ಮತದಾನ ಕೇಂದ್ರಕ್ಕೆ ಬರಲಾಗದೆ ಮನೆಯಲ್ಲೇ ಮತದಾನ ಬಯಸುವವರಿಗೆ ಆಯೋಗ ಸೌಲಭ್ಯ ಕಲ್ಪಿಸಲಿದೆ. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರು, ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪಾರದರ್ಶಕವಾಗಿ ಗೌಪ್ಯ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ ಎಂದರು.

    ಇದನ್ನೂ ಓದಿ: ಕರ್ನಾಟಕಕ್ಕೆ ಬರುವ ಮೊದಲೇ ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ; ನಾಳೆ ಇರಲಿದ್ಯಾ ಆ ಡೈಲಾಗ್?

    ನಗರ ಮತದಾರರ ನಿರಾಸಕ್ತಿ: ನಗರ ಮತದಾರರ ನಿರಾಸಕ್ತಿ ದೊಡ್ಡ ಸವಾಲಾಗಿದೆ. 2013ರಲ್ಲಿ ನಡೆದ ಮತದಾನಕ್ಕಿಂತಲೂ ಕಡಿಮೆ ಮತದಾನ 2018ರ ಚುನಾವಣೆಗಳಲ್ಲಿ ಕಂಡುಬರುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡಿಮೆ ಮತದಾನ ಕಂಡುಬಂದಿದೆ. ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.

    ಮನೆಯಿಂದಲೇ ಮತದಾನ ಮಾಡಿ!; 80 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಸೌಲಭ್ಯ; ದೇಶದಲ್ಲೇ ಮೊದಲು

    ಸಿ-ವಿಜಿಲ್-ಸುವಿಧಾ-ಸಕ್ಷಮ ಸೌಲಭ್ಯ: ಹಣದ ಪ್ರಭಾವ ಬಳಸಿ ನಡೆಸಲಾಗುವ ಚುನಾವಣಾ ಅಕ್ರಮ ತಪ್ಪಿಸಲು ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಿ-ವಿಜಿಲ್ ಆಪ್ ಮೂಲಕ ಜನಸಾಮಾನ್ಯರು ಇಂಥ ಅಕ್ರಮದ ಬಗ್ಗೆ ಅನಾಮಧೇಯವಾಗಿ ದೂರು ನೀಡಬಹುದಾಗಿದೆ.

    ಚುನಾವಣಾ ಆಯೋಗದಿಂದ ಸುವಿಧಾ ವೆಬ್​ಸೈಟ್ ಮತ್ತು ಸಕ್ಷಮ್ ಆಪ್ ರಚಿಸಲಾಗಿದ್ದು, ಮತದಾರರು ಹಾಗೂ ರಾಜಕೀಯ ಪಕ್ಷಗಳು ವಿವಿಧ ಅಗತ್ಯಗಳಿಗೆ ಇವುಗಳನ್ನು ಬಳಸಿಕೊಳ್ಳಬಹುದು ಎಂದು ರಾಜೀವ್ ಕುಮಾರ್ ವಿವರಿಸಿದರು.

    ಇದನ್ನೂ ಓದಿ: ಸದ್ಯಕ್ಕಿಲ್ಲ 5 ಮತ್ತು 8ನೇ ತರಗತಿ ಪರೀಕ್ಷೆ; ಮುಂದೂಡುವುದಾಗಿ ಹೇಳಿದ ಸರ್ಕಾರ

    34 ಚುನಾವಣಾ ಜಿಲ್ಲೆ: ರಾಜ್ಯದಲ್ಲಿ 31 ಕಂದಾಯ ಜಿಲ್ಲೆಗಳಿದ್ದು, 34 ಚುನಾವಣಾ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ರಾಜ್ಯದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 6.1 ಕೋಟಿ ಇದ್ದು, ಪುರುಷರು 3.09 ಕೋಟಿ (ಶೇ.50.6) ಮಹಿಳೆಯರು 3.01 ಕೋಟಿ (ಶೇ.49.34) ಇದ್ದಾರೆ.

    5.21 ಕೋಟಿ ವೋಟರ್ಸ್: 224 ವಿಧಾನಸಭಾ ಕ್ಷೇತ್ರಗಳಿದ್ದು, ಪರಿಶಿಷ್ಟ ಜಾತಿಗೆ 36 ಮತ್ತು ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 5,21,76,579 ಕೋಟಿ ಮತದಾರರಿದ್ದಾರೆ. ಇದರಲ್ಲಿ 2,62,42,561 ಮಹಿಳಾ ಮತದಾರರು ಹಾಗೂ 2,59,26,319 ಪುರುಷ ಮತದಾರರು ಇದ್ದಾರೆ.

    ವಿಶೇಷ ಸೌಲಭ್ಯ: ಅಂಗವಿಕಲ ಮತದಾರರಿಗೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತದೆ. ಮನೆಯಿಂದ ಮತಗಟ್ಟೆಗೆ ಪಿಕ್ ಆಂಡ್ ಡ್ರಾಪ್, ಸಕ್ಷಮ್ ಆಪ್ ಮೂಲಕ ತಮಗೆ ಬೇಕಾದ ಸೌಲಭ್ಯಗಳ ಬಗ್ಗೆ ಮೊದಲೇ ನೋಂದಾಯಿಸಿಕೊಳ್ಳುವ ಅವಕಾಶ. ವ್ಹೀಲ್​ಚೇರ್, ಆದ್ಯತಾ ಮತದಾನ, ದೃಷ್ಟಿದೋಷದ ಮತದಾರರಿಗೆ ಬ್ರೖೆಲ್ ಬ್ಯಾಲೆಟ್ ಪೇಪರ್​ನಂತಹ ಸೌಲಭ್ಯ ಕಲ್ಪಿಸಲಾಗುತ್ತದೆ.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    9.17 ಲಕ್ಷ ಮಂದಿಗೆ ಮೊದಲ ಬಾರಿ ಮತದಾನದ ಹಕ್ಕು: ಚುನಾವಣಾ ಆಯೋಗದ ಪ್ರಯತ್ನದಿಂದ ಈ ಬಾರಿ 9.17 ಲಕ್ಷ ಮೊದಲ ಬಾರಿಯ ಮತದಾರರು ಹಕ್ಕನ್ನು ಚಲಾಯಿಸಲಿದ್ದಾರೆ. ಅಲ್ಲದೆ, ಅಡ್ವಾನ್ಸ್ ಅಪ್ಲಿಕೇಷನ್ ಸೌಲಭ್ಯದ ಮೂಲಕ ಈಗಾಗಲೆ 1.25 ಲಕ್ಷ ಯುವಕರು ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ 41,000 ಮತದಾರರು 2023ರ ಏಪ್ರಿಲ್ 1ರಿಂದ ಮತದಾನಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ.

    ಬುಡಕಟ್ಟು ಜನರಿಗೆ ವಿಶೇಷ ಒತ್ತು: ಬುಡಕಟ್ಟು ಜನಾಂಗದವರು, ಅದರಲ್ಲೂ ಜೇನು ಕುರುಬ ಮತ್ತು ಕೊರಗ ಬುಡಕಟ್ಟು ಜನಾಂಗದವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ವಿಶೇಷ ಒತ್ತು ನೀಡಲಾಗಿದೆ. ಇವರಲ್ಲಿ ಅರ್ಹರಿರುವ ಎಲ್ಲರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ, ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ 40 ಸಾಂಪ್ರದಾಯಿಕ (ಎಥ್ನಿಕ್) ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

    ತೃತೀಯ ಲಿಂಗಿಗಳಿಗೂ ಅವಕಾಶ: ರಾಜ್ಯದಲ್ಲಿ ಅಂದಾಜು 42,756 ತೃತೀಯ ಲಿಂಗಿಗಳಿದ್ದು, ಇವರಲ್ಲಿ 41,312 ಮಂದಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

    1,200 ಸೂಕ್ಷ್ಮ ಮತಗಟ್ಟೆಗಳು: ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಂತೆ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ನಗರ ಪ್ರದೇಶಗಳಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳು ಇರಲಿವೆ. ವಿಶೇಷವಾಗಿ 1,320 ಮಹಿಳಾ ಮತಗಟ್ಟೆಗಳು, 224 ಯುವ ಅಧಿಕಾರಿ, 224 ಅಂಗವಿಕಲರು ನಿರ್ವಹಿಸುವ ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 1,200 ಸೂಕ್ಷ್ಮ ಮತಗಟ್ಟೆಗಳ ನಿರ್ವಹಣೆಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಶೇ.50 ಮತಗಟ್ಟೆಗಳು ವೆಬ್​ಕಾಸ್ಟಿಂಗ್ ಸೌಲಭ್ಯ ಹೊಂದಿವೆ.

    ಶಾಲೆಗಳಲ್ಲಿ ಶಾಶ್ವತ ಮೂಲಸೌಕರ್ಯ: ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಗೃಹ ಮತ್ತು ಅಂಗವಿಕಲರಿಗೆ ರ್ಯಾಂಪ್​ನಂತಹ ಸೌಲಭ್ಯಗಳನ್ನು ಪ್ರತಿಬಾರಿ ತಾತ್ಕಾಲಿಕವಾಗಿ ಅಳವಡಿಸುವ ಚಿಂತನೆ ಬಿಟ್ಟು, ಶಾಶ್ವತವಾಗಿ ಸೌಕರ್ಯ ಅಳವಡಿಸಲಾಗುವುದು. ಚುನಾವಣಾ ಆಯೋಗದಿಂದ ಆಯಾ ಶಾಲೆಗಳಿಗೆ ಇದು ಉಡುಗೊರೆಯಾಗಿರಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts