More

    ಇಡಿ ಇಕ್ಕಳದಲ್ಲಿ ಲಾಲು ಕುಟುಂಬ: 16ಕ್ಕೆ ಮತ್ತೆ ಕವಿತಾ ವಿಚಾರಣೆ; ಲಾಲು ಮನೆಯಲ್ಲಿ 1 ಕೋಟಿ ರೂ. ನಗದು ವಶ

    ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ ಹಾಗೂ ಬಿಆರ್​ಎಸ್ ನಾಯಕಿ ಮತ್ತು ಶಾಸಕಿ ಕವಿತಾರನ್ನು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಸುಮಾರು ಒಂಬತ್ತು ತಾಸು ವಿಚಾರಣೆ ನಡೆಸಿ, ಮಾರ್ಚ್ 16ಕ್ಕೆ ಮತ್ತೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದೆ. ಇನ್ನೊಂದೆಡೆ, ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧ ಆರ್​ಜೆಡಿ ವರಿಷ್ಠ ಲಾಲು ಪ್ರಸಾದ್ ಮತ್ತು ಅವರ ಕುಟುಂಬವು 600 ಕೋಟಿ ರೂ. ಅಕ್ರಮ ವಹಿವಾಟು ನಡೆಸಿದೆ ಎಂದು ಇಡಿ ಆರೋಪಿಸಿದೆ.

    ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಡಿ ಪ್ರಧಾನ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ ಕವಿತಾ, ರಾತ್ರಿ 8ರವರೆಗೆ ವಿಚಾರಣೆ ಎದುರಿಸಿದರು.ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಹಣ ವರ್ಗಾವಣೆಯ ತನಿಖೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಕವಿತಾ ಉತ್ತರಿಸಿದರು ಎನ್ನಲಾಗಿದೆ. ತಮ್ಮ ನಾಯಕಿಯ ವಿಚಾರಣೆ ವಿರೋಧಿಸಿ ಬಿಆರ್​ಎಸ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರಿಂದ ಇಡಿ ಕಚೇರಿ ಬಳಿ ದೆಹಲಿ ಪೊಲೀಸರು ಮತ್ತು ಕೇಂದ್ರ ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಹೈದರಾಬಾದ್​ನಲ್ಲೂ ಬಿಆರ್​ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಕವಿತಾ ಅವರಿಗೆ ಮಾ. 9ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿತ್ತು. ಆದರೆ ದೀರ್ಘಾವಧಿ ಯಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಆಗ್ರಹಿಸಲು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದ್ದರಿಂದ ಹೊಸ ದಿನಾಂಕ ನೀಡಬೇಕೆಂದು ಕವಿತಾ ಇಡಿಯನ್ನು ಕೋರಿದ್ದರು. ಕವಿತಾ ವಿಚಾರಣೆಯು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳೈಬಂಧನ ನಂತರ ನಡೆದಿದೆ.

    ಪ್ರಧಾನಿಗೆ 8 ಗಂಟೆಗಳ ಶಾಂತಿಯುತ ನಿದ್ದೆ: ವಿರೋಧ ಪಕ್ಷಗಳ ಎಲ್ಲ ನಾಯಕರು ಎನ್​ಕೌಂಟರ್ ಆದರೆ ಪ್ರಧಾನಿ ನರೇಂದ್ರ ಮೋದಿ ಕನಿಷ್ಠ 8 ಗಂಟೆ ಕಾಲ ಶಾಂತಿಯುತವಾಗಿ ನಿದ್ದೆ ಮಾಡಬಹುದು ಎಂದು ಆಮ್ ಆದ್ಮಿ ಪಾರ್ಟಿಯ ಹಿರಿಯ ನಾಯಕ ಸಂಜಯ್ ಸಿಂಗ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಸರ್ಕಾರಕ್ಕೆ ಮತ್ತೊಂದು ತಲೆನೋವು; ಇನ್ನೊಂದು ಸರ್ಕಾರಿ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ

    ಹೈದರಾಬಾದ್​ನಲ್ಲಿ ಡಿಟರ್ಜೆಂಟ್ ಪೋಸ್ಟರ್: ದೆಹಲಿ ಯಲ್ಲಿ ಕವಿತಾ ವಿಚಾರಣೆ ನಡೆಯುತ್ತಿದ್ದಾಗ ಇತ್ತ ಹೈದರಾಬಾದ್​ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಂತೆ ವಿವಿಧ ಪಕ್ಷಗಳ ನಾಯಕರನ್ನು ತೋರಿಸುವ ಪೋಸ್ಟರ್​ಗಳು ರಾರಾಜಿಸಿದವು. ಬಿಜೆಪಿಗೆ ಸೇರಿದ ನಾಯಕರು ಯಾವುದೇ ಏಜೆನ್ಸಿ ದಾಳಿಗಳನ್ನು ಎದುರಿಸುವಂತಿಲ್ಲ ಎಂಬ ಭಾವಾರ್ಥದ ಪೋಸ್ಟರ್​ಗಳ ಜತೆ ಕವಿತಾ ಭಾವಚಿತ್ರವಿರುವ ಪೋಸ್ಟರ್​ಗಳು ಕಂಡುಬಂದವು.

    ಜೈಲಿಗೆ ಹಾಕಿದ್ರೂ ಆತ್ಮಸ್ಥೈರ್ಯ ಕುಂದಲ್ಲ: ‘ನನ್ನನ್ನು ಜೈಲಿಗೆ ಹಾಕಿ ತೊಂದರೆ ಕೊಡಬಹುದು. ಆದರೆ ನನ್ನ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ’ ಎಂದು ಅಬಕಾರಿ ನೀತಿ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ‘ಸಾಹೇಬ್, ಬ್ರಿಟಿಷ್ ಆಡಳಿತಗಾರರು ಸಹ ಸ್ವಾತಂತ್ರ್ಯ ಹೋರಾಟಗಾರರಿಗೆ ತೊಂದರೆಯುಂಟು ಮಾಡಿದರು. ಆದರೆ ಅವರ ಉತ್ಸಾಹ ಎಂದಿಗೂ ಕುಗ್ಗಲಿಲ್ಲ’ ಎಂದು ಮನೀಶ್ ಸಿಸೋಡಿಯಾ ಅವರ ಸಂದೇಶ ಎಂದು ಎಎಪಿ ನಾಯಕನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಿಂದ ಹಿಂದಿಯಲ್ಲಿ ಟ್ವೀಟ್ ಮಾಡಲಾಗಿದೆ.

    ಲಾಲು ಪ್ರಸಾದ್ ಮತ್ತು ಅವರ ಕುಟುಂಬಸ್ಥರ ನಿವಾಸಗಳಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಡೆಸುತ್ತಿರುವ ಪರಿಶೀಲನೆಯು ರಾಜಕೀಯ ಪ್ರೇರಿತ. 2017ರಲ್ಲೂ ಹೀಗೆ ಆಗಿತ್ತು.

    | ನಿತೀಶ್ ಕುಮಾರ್ ಬಿಹಾರ ಸಿಎಂ

    ವಿಚಾರಣೆಗೆ ಗೈರಾದ ತೇಜಸ್ವಿ: ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಗರ್ಭಿಣಿ ಪತ್ನಿಯ ಅನಾರೋಗ್ಯದ ಕಾರಣ ನೀಡಿ ಸಿಬಿಐ ವಿಚಾರಣೆಗೆ ಎರಡನೇ ಬಾರಿಗೆ ಗೈರು ಹಾಜರಾಗಿದ್ದು, ಹೊಸ ದಿನಾಂಕ ಕೋರಿದ್ದಾರೆ. ಹಗರಣ ಸಂಬಂಧ ಯಾದವ್ ಪತ್ನಿಯನ್ನು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರಿಂದ ಬಿಪಿ ಹೆಚ್ಚಾಗಿ ಅವರು ಮೂರ್ಛೆ ಹೋದರು. ಹಾಗಾಗಿ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಲಾಲು ಕುಟುಂಬದಿಂದ 600 ಕೋಟಿ ರೂ. ಅಕ್ರಮ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ ದಾಖಲೆ ಇಲ್ಲದ 1 ಕೋಟಿ ರೂ. ನಗದು, 1900 ಅಮೆರಿಕನ್ ಡಾಲರ್ , 540 ಗ್ರಾಂ ಚಿನ್ನದ ಗಟ್ಟಿ, 1.50 ಕೆ.ಜಿಗೂ ಹೆಚ್ಚಿನ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

    ಹಗರಣಕ್ಕೆ ಸಂಬಂಧಿಸಿದಂತೆ ಒಟ್ಟು 24 ಕಡೆಗಳಲ್ಲಿ ದಾಳಿ ನಡೆದಿದ್ದು, 600 ಕೋಟಿ ರೂ. ಅಕ್ರಮ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ. ಲಾಲು ಪ್ರಸಾದ್ ಕುಟುಂಬ ಮತ್ತು ಅವರ ಸಹಚರರ ಪರವಾಗಿ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಹೆಚ್ಚಿನ ಹೂಡಿಕೆ ಕುರಿತು ತನಿಖೆ ನಡೆಸಲಾಗುತ್ತಿದೆ. ಲಾಲು ಪ್ರಸಾದ್ ರೈಲ್ವೆ ಸಚಿವರಾಗಿದ್ದಾಗ ಉದ್ಯೋಗ ನೀಡಲು ಪಡೆದುಕೊಂಡ ಭೂಮಿಯ ಈಗಿನ ಮಾರುಕಟ್ಟೆ ಬೆಲೆ 200 ಕೋಟಿ ರೂ. ಎಂದು ಇಡಿ ತಿಳಿಸಿದೆ.

    ಲಾಲು ಕಿಡಿ: ಗರ್ಭಿಣಿ ಸೊಸೆಯನ್ನು 15 ಗಂಟೆ ಕಾಲ ಕುಳಿತುಕೊಳ್ಳುವಂತೆ ಇಡಿ ಮಾಡಿದೆ. ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲ ಎಂದು ಲಾಲು ಪ್ರಸಾದ್ ಆರೋಪಿಸಿದ್ದಾರೆ.

    ‘ಸಂಘ ಪರಿವಾರ (ಆರ್​ಎಸ್​ಎಸ್) ಮತ್ತು ಬಿಜೆಪಿ ವಿರುದ್ಧ ನನ್ನ ಸೈದ್ಧಾಂತಿಕ ಹೋರಾಟ ಹಿಂದೆಯೂ ಇತ್ತು. ಮುಂದೆಯೂ ಇರಲಿದೆ. ನಾನು ಮತ್ತು ನನ್ನ ಕುಟುಂಬದ ಯಾರೊಬ್ಬರೂ ನಿಮ್ಮ (ಬಿಜೆಪಿ) ಮುಂದೆ ತಲೆಬಾಗುವುದಿಲ್ಲ’ ಎಂದು ಲಾಲು ಟ್ವೀಟ್ ಮಾಡಿದ್ದಾರೆ. ‘ತುರ್ತ ಪರಿಸ್ಥಿತಿಯ ಕರಾಳ ದಿನಗಳನ್ನು ನೋಡಿದ್ದೇನೆ. ನನ್ನ ವಿರುದ್ಧ ರಾಜಕೀಯ ಹೋರಾಟ ನಡೆಸಲು ಬಿಜೆಪಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts