More

    ಕೈ ಬಂಡಾಯಕ್ಕೆ ಇಂದೇ ಕ್ಲೈಮ್ಯಾಕ್ಸ್!

    ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಸತತ ನಾಲ್ಕು ಸಲ ಗೆದ್ದು ಬೀಗುತ್ತಿರುವ ಬಿಜೆಪಿ ವಿಜಯ ದುಂದುಬಿಗೆ ಬ್ರೇಕ್ ಹಾಕಬೇಕು ಎಂದು ಮುಂದಡಿ ಇಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ದಂಪತಿ ಭಿನ್ನ ಬಾವುಟಕ್ಕೆ ಮದ್ದರೆಯುವ ಕೆಲಸ ಇನ್ನೂ ಯಶಸ್ಸು ಕಂಡಿಲ್ಲ. ಇದು ಕಾಂಗ್ರೆಸ್ ಪಕ್ಷದ ಪ್ರಚಾರದ ಓಟಕ್ಕೆ ಅಲ್ಪಮಟ್ಟಿನ ಹಿನ್ನಡೆ ಎಂದೇ ಬಿಂಬಿತವಾಗುತ್ತಿದೆ.

    ವಿಜಯಪುರ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಪಾಟೀಲ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ವಿಶೇಷವಾಗಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಅಗಿದ್ದ ವೀಣಾ ಕಾಶಪ್ಪನವರ ಸಿಡಿದೆದ್ದಿದ್ದಾರೆ. ಇವರಿಗೆ ಅವರ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ ಕೈ ಜೋಡಿಸಿರುವುದು ಸದ್ಯಕ್ಕೆ ಹಸ್ತಪಕ್ಷದಲ್ಲಿ ತಲೆಬಿಸಿ ಉಂಟು ಮಾಡಿದೆ.

    ಅಸಮಾಧಾನ ಹೋಗಲಾಡಿಸಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಪಂಚಮಸಾಲಿ ಸಮಾಜದ ಮುಖಂಡ, ಕಾಂಗ್ರೆಸ್ ಪಕ್ಷದ ನೂತನ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ನಡೆಸಿರುವ ಸಂಧಾನ ಯಶಸ್ವಿಯಾಗಿಲ್ಲ. ಹೀಗಾಗಿ ಈ ಅಸಮಾಧಾನದ ಚೆಂಡನ್ನು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗಳಕ್ಕೆ ಹಾಕಲಾಗಿದೆ.

    ಮಾ. 28 ರಂದು ಬೆಂಗಳೂರಲ್ಲಿ ನಡೆಯುವ ಸಭೆಗೆ ಕಾಶಪ್ಪನವರ ದಂಪತಿ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಸಮಾಧಾನವನ್ನು ಬಗೆಹರಿಸುತ್ತಾರೆ ಎನ್ನುವ ವಿಶ್ವಾಸವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೊಂದಿದ್ದಾರೆ. ಸಭೆಯಲ್ಲಿ ಸಂಯುಕ್ತ ಪಾಟೀಲ ತಂದೆ, ಸಚಿವ ಶಿವಾನಂದ ಪಾಟೀಲ ಭಾಗಿಯಾಗುವ ನಿರೀಕ್ಷೆ ಇದೆ. ಆದರೆ, ಟಿಕೆಟ್ ಕೈತಪ್ಪಿದ್ದಕ್ಕೆ ಕೊತ ಕೊತ ಎನ್ನುತ್ತಿರುವ ಕಾಶಪ್ಪನವರ ದಂಪತಿ ಸಿಎಂ, ಡಿಸಿಎಂ ಮಧ್ಯಸ್ಥಿಕೆಯಲ್ಲಿ ನಡೆಯುವ ಸಂಧಾನಕ್ಕೆ ರಾಜಿ ಆಗುತ್ತಾರಾ ಎನ್ನುವುದು ಈಗ ಇರುವ ಪ್ರಶ್ನೆ. ಟಿಕೆಟ್ ಸಿಗಲಿಲ್ಲ ಎಂದು ಕಾಶಪ್ಪನವರ ದಂಪತಿ ಅಭಿಮಾನಿಗಳು, ಬೆಂಬಲಿತ ಕಾರ್ಯಕರ್ತರು, ಸಮಾಜದ ಮುಖಂಡರು ಎರಡು ಸಭೆಗಳನ್ನು ನಡೆಸಿದ್ದಾರೆ. ಸಭೆಯಲ್ಲಿ ಟಿಕೆಟ್ ಕೊಡದೆ ಇದ್ದರೆ ನಮ್ಮ ದಾರಿ ನಮಗೆ ಎನ್ನುವ ದಾಟಿಯಲ್ಲಿ ಆವಾಜ್ ಹಾಕಿದ್ದಾರೆ. ಹೀಗಾಗಿ ಅಂತಿಮವಾಗಿ ಸಿಎಂ ಅಂಗಳ ತಲುಪಿರುವ ಕಾಶಪ್ಪನವರ ದಂಪತಿ ಅಸಮಾಧಾನ ತಣಿದರೆ ಕಾಂಗ್ರೆಸ್ ನಿರಾಳ, ಇಲ್ಲವಾದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಟೆನ್ಶನ್ ಎನ್ನುವ ಮಾತುಗಳು ಇವೆ. ಆದರೆ, ಮುಖ್ಯಮಂತ್ರಿಗಳ ಮಾತು ಮೀರಿ ಬಂಡಾಯದ ಬಾವುಟ ಹಿಡಿಯಲಿಕ್ಕಿಲ್ಲ. ಕೆಲವು ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿಯಬಹುದು ಎನ್ನುವ ಮಾತುಗಳು ಇವೆ.

    ಕೈ ಮುಖಂಡರ ಸಭೆ

    ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಅತೃಪ್ತಿ ನಡುವೆಯೂ ಮಂಗಳವಾರ ಬಾಗಲಕೋಟೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಖಾಸಗಿ ರೆಸಾರ್ಟ್ ಒಂದರಲ್ಲಿ ಗೌಪ್ಯ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ವಿಜಯಾನಂದ ಕಾಶಪ್ಪನವರ ದಂಪತಿ ಹೊರತುಪಡಿಸಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಎಂಎಲ್ಸಿಗಳು ಭಾಗವಹಿಸಿದ್ದರು. ಎಂಎಲ್‌ಸಿ ಸುನೀಲಗೌಡ ಪಾಟೀಲ ಅವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಸಭೆ ನಿರ್ಣಯಕ್ಕೆ ಬದ್ಧವಾಗಿ ಕೆಲಸ ಮಾಡುವುದಾಗಿ ಮುಖಂಡರಿಗೆ ತಿಳಿಸಿದ್ದರು ಎನ್ನಲಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಚಿವ ಶಿವಾನಂದ ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಭೀಮಸೇನ್ ಚಿಮ್ಮನಕಟ್ಟಿ, ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡ ಸಿದ್ದು ಕೊಣ್ಣೂರ ಸೇರಿ ಹಲವು ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಏ.5 ರಿಂದ ಕ್ಷೇತ್ರದ ಎಲ್ಲ ವಿಧಾನಸಭೆ ಕ್ಷೇತ್ರದ ಹೆಡ್ ಕ್ವಾರ್ಟರ್‌ನಲ್ಲಿ ಎಲ್ಲರೂ ಸೇರಿ ಸಭೆಗಳನ್ನು ನಡೆಸುವುದು, ಕ್ಷೇತ್ರದ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸುವುದು, ಚುನಾವಣೆಗೆ ಸನ್ನದ್ಧಗೊಳಿಸಿ ಒಗ್ಗಟ್ಟು ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

    ಮಾ. 28 ರಂದು ಕಾಶಪ್ಪನವರ ದಂಪತಿಯನ್ನು ಸಿಎಂ ಅವರೇ ಮಾತುಕತೆಗೆ ಕರೆದಿದ್ದರಿಂದ ಎಲ್ಲವೂ ಬಗೆಹರಿದು ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಎಲ್ಲರೂ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ. ಪ್ರಿಯಾಂಕ್ ಖರ್ಗೆ ಜತೆ ಮಾತುಕತೆ : ವೀಣಾ ಕಾಶಪ್ಪನವರ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಕಾಶಪ್ಪನವರ ದಂಪತಿ ಬೆಂಬಲಿಗರು ಸಭೆಯಲ್ಲಿ ಜಿಲ್ಲೆಯ ಮುಖಂಡರ ವಿರುದ್ಧ ಹರಿಹಾಯುತ್ತಿದ್ದಾರೆ.

    ಹೈಕಮಾಂಡ್‌ಗೆ ವೀಣಾ ಹೆಸರೇ ಕಳಿಸಿಲ್ಲ. ಸಂಯುಕ್ತ ಒಬ್ಬರ ಹೆಸರು ಮಾತ್ರ ಕಳಿಸಿದ್ದಾರೆ ಎನ್ನುವ ವಿಚಾರವಾಗಿ ಜಿಲ್ಲೆಯ ಮುಖಂಡರೊಬ್ಬರು ಪ್ರಿಯಾಂಕ್ ಖರ್ಗೆ ಅವರಿಗೆ ಫೋನ್ ಮಾಡಿ ಈ ಬಗ್ಗೆ ವಾಸ್ತವದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ 8 ಜನರು ಅರ್ಜಿ ಸಲ್ಲಿಸಿದ್ದು, ಈ ಪೈಕಿ ನಾಲ್ವರ ಹೆಸರು ಕಳುಹಿಸುವಂತೆ ಜಿಲ್ಲಾ ಉಸ್ತುವಾರಿ ಆಗಿದ್ದ ಸಚಿವ ಪ್ರಿಯಾಂಕ್ ಅವರು ಹೇಳಿದ್ದರಂತೆ. ಅದರಂತೆ ಜಿಲ್ಲೆಯಿಂದ ವೀಣಾ ಕಾಶಪ್ಪನವರ, ಮಾಜಿ ಸಚಿವ ಅಜಯಕುಮಾರ ಸರನಾಯಕ, ರಕ್ಷಿತಾ ಈಟಿ ಹಾಗೂ ಬಸವಪ್ರಭು ಸರನಾಡಗೌಡ ಹೆಸರನ್ನು ಶಿಫಾರಸು ಮಾಡಿ ಕಳುಹಿಸಿದ್ದರು ಎನ್ನುವ ಮಾಹಿತಿಯನ್ನು ಸಚಿವರು ಸ್ಪಷ್ಪಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts