More

    ಅದೆಷ್ಟು ದಿನ ಕಾಯಬೇಕೋ ನಿಮ್ಮಂಥವರು ಬರಲು…!

    ಸಿದ್ಧೇಶ್ವರ ಸ್ವಾಮೀಜಿ ಒಂದು ನೂರು ಸದ್ಗುಣಗಳ, ಒಂದು ನೂರು ಸದಿಚ್ಛೆಗಳ, ಒಂದು ನೂರು ಕನಸುಗಳ ಮೌನಶಿಲ್ಪಿ, ಮೌನಸ್ಪೂರ್ತಿಯ ಬತ್ತದ ಪಾವನಗಂಗೋತ್ರಿ ಆಗಿದ್ದರು. ಅವರು ಹುಟ್ಟು ಸತ್ಯಾನ್ವೇಷಕ, ಸತ್ಯದರ್ಶಿ, ಸತ್ಯ ಹಾಗೂ ಕೇವಲ ಸತ್ಯದ ಪಕ್ಷಪಾತಿ. ಸತ್ಯ ಸಾಕ್ಷಾತ್ಕಾರದಲ್ಲಿ ತಮ್ಮ ನೆಲೆಯನ್ನೇ ನಿರ್ವಿುಸಿಕೊಂಡವರು. ಅವರನ್ನು ಪಡೆದ ನಾಡು ಧನ್ಯ.

    | ಸ್ವಾಮಿ ನಿರ್ಭಯಾನಂದ ಸರಸ್ವತಿ

    Swamijiಖ್ಯಾತ ಕವಿ ಶಿವಪ್ಪನವರ ‘ಸಂತನೆಂದರೆ ಯಾರು ದಿವ್ಯತೆಯ ಮೆರೆದವರು…’ ಹಾಡು ಆಗಾಗ್ಗೆ ಕಿವಿಗೆ ಬೀಳುವುದುಂಟು. ಅದೇ ಸಂದರ್ಭಕ್ಕೆ ಅಗಲಿದ ಸಂತಲೋಕದ ಚಕ್ರವರ್ತಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಸಾವಕಾಶವಾಗಿ ನಡೆದುಕೊಂಡು ಬರುತ್ತಿರುವ, ಅವರನ್ನು ನೋಡಿ ಭಕ್ತರು ರಸ್ತೆಯ ಇಕ್ಕೆಲಗಳಲ್ಲೂ ನಿಂತು ಭಕ್ತಿಯಿಂದ ನಮಿಸುತ್ತಿರುವ ಚಿತ್ರವೂ ಅಲ್ಲಿ ಕಾಣುವುದುಂಟು. ಈ ಚಿತ್ರ, ಆ ಹಾಡು ಒಟ್ಟಿಗೆ ಕಣ್ಣಿಗೆ ಬಿದ್ದರೆ ಒಂದು ಕ್ಷಣಕ್ಕೆ ಕರುಳು ಕಿವುಚಿದಂತಾಗುತ್ತದೆ. ಎಷ್ಟೇ ಸಮಾಧಾನ ಮಾಡಿಕೊಳ್ಳಲೆತ್ನಿಸಿದರೂ ಒಡಲಾಳದಿಂದ ಒಂದು ನೋವು ನಿಡುಸುಯ್ದು ಹೊರಗೆ ಬರುವುದೇ ದಿಟ. ಏನೋ ಒಂದು ಹೇಳಿಕೊಳ್ಳಲಾಗದ ತಳಮಳ, ಸಂಕಟ. ತಮ್ಮ ಆಪ್ತೇಷ್ಟರನ್ನು ಕಳೆದುಕೊಂಡು ದುಃಖಿತರಾದ ಜನ, ತಮ್ಮ ಅಳಲನ್ನು ತೋಡಿಕೊಳ್ಳಲು ಅದೆಷ್ಟು ಸಲ ನನ್ನ ಹತ್ತಿರ ಬಂದಿಲ್ಲ. ಅದೆಷ್ಟು ಸಲ ಸಮಾಧಾನ ಮಾಡಿಕೊಂಡೂ ಹೋಗಿಲ್ಲ. ಆದರೆ ಈಗ ನನಗೇ ಆ ಸ್ಥಿತಿ ಬಂದಾಗ!

    ಸುಮಾರು ನಲ್ವತ್ತು ವರ್ಷಗಳ ಹಿಂದಿನ ಮಾತು. ಸಿದ್ಧೇಶ್ವರರು ಆಗಿನ್ನೂ ಇಷ್ಟು ಹೆಸರು ಮಾಡಿರಲಿಲ್ಲ. ಸರಳತೆ, ಸಾಧುತ್ವ ಈಗಿನಷ್ಟೇ ಇದ್ದರೂ ಅವು ಇನ್ನೂ ಬಹುಶೃತ ಆಗಿರಲಿಲ್ಲ. ಬಹುಮಾನ್ಯ ಆಗಿರಲಿಲ್ಲ. ಆಗತಾನೇ ಅವರು ‘ಗುರು’ವಿನ ಆಶೀರ್ವಾದದ ತೆಕ್ಕೆಯೊಳಗಿಂದ ಹೊರಬಂದಿದ್ದರು. ವಿಜಯಪುರದ ಸುತ್ತಮುತ್ತ ಕೆಲ ಹಳ್ಳಿಗಳಲ್ಲಿ, ನಗರದ ಮಧ್ಯದಲ್ಲಿನ ಸಿದ್ಧರಾಮೇಶ್ವರ ದೇವಾಲಯದ ಸಭಾಂಗಣದಲ್ಲಿ ಉಪನ್ಯಾಸಗಳನ್ನು ಕೊಡುತ್ತಿದ್ದ ಕಾಲವದು. ಹಳ್ಳಿಯೊಂದರಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಅವರನ್ನು ಸ್ವಾಗತಿಸುವ ಜವಾಬ್ದಾರಿ ನನ್ನದಾಗಿತ್ತು. ಅವರನ್ನು ಮೊಟ್ಟಮೊದಲು ನಾನು ಕಂಡಿದ್ದು ಅಂದೇ. ಅಂಥ ಸ್ಪೂರ್ತಿಯುತ, ಮೊದಲ ನೋಟದಲ್ಲೇ ಮನವನ್ನು ಸೂರೆಗೊಳ್ಳುವ ವ್ಯಕ್ತಿತ್ವವೇನೂ ಕಂಡುಬಂದಿರಲಿಲ್ಲ ನನಗೆ. ರಾಮಕೃಷ್ಣ ಮಿಷನ್ನಿನ ಹತ್ತಾರು ಎತ್ತರದ, ತೇಜಸ್ವಿ, ಇಂಗ್ಲಿಷ್, ಕನ್ನಡಗಳಲ್ಲಿ ನಿರರ್ಗಳವಾಗಿ ಅಧಿಕಾರಯುತವಾಗಿ ಮಾತನಾಡಿ, ಹುಬ್ಬೇರಿಸುವಂತೆ ಮಾಡುವ ಹಲವುಹತ್ತು ಸಾಧಕರನ್ನು ಕಂಡಿದ್ದವನು ನಾನು. ಈ ಹಿನ್ನೆಲೆಯಲ್ಲಿ ಶ್ರೀ ಸಿದ್ಧೇಶ್ವರರು ನನಗೆ ಕಂಡಿದ್ದು ಕೇವಲ ಅಂದ್ರೆ ಕೇವಲ ಅವರ ಹೊರರೂಪದಲ್ಲಿ ಮಾತ್ರ. ಕ್ರಿಸ್ತನಿಗಿಂತ ಹಲವು ಶತಮಾನಗಳ ಮುಂಚೆ ಇಡೀ ಪಾಶ್ಚಾತ್ಯ ಚಿಂತನಲೋಕವನ್ನು ಸೂರೆಗೊಂಡಿದ್ದ ಸಾಕ್ರಟೀಸ್ ಸಹ ಹೊರನೋಟಕ್ಕೆ ಹೀಗೆಯೇ ಇದ್ದ ಎಂಬ ಅರಿವು ನನಗೆ ಬರುವುದಕ್ಕೆ ಬಹುಕಾಲ ಹಿಡಿದಿತ್ತು. ಆದರೆ ಅಂದಿನ ನನ್ನ ಸ್ವಲ್ಪ ದೀರ್ಘವೇ ಎನ್ನಬಹುದಾದ ಸ್ವಾಗತ ಭಾಷಣ ಅವರಿಗೆ ಬಹಳ ಹಿಡಿಸಿತ್ತು. ಮುಂದೆ ಒಂದೆರಡು ವರ್ಷಗಳ ನಂತರ ಯಾವುದೋ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಹೋದಾಗ ತಕ್ಷಣವೇ ನನ್ನನ್ನು ಗುರ್ತ ಹಿಡಿದ ಅವರು ಆತ್ಮೀಯತೆಯೇ, ಸರಳತೆಯೇ, ಮಮತೆ, ವಾತ್ಸಲ್ಯಗಳೇ ಮೂರ್ತಿವೆತ್ತಂತೆ ಕಂಡುಬಂದರು. ಅವರ ಒಳವ್ಯಕ್ತಿತ್ವ ನನ್ನ ಅರಿವಿಗೆ ಬಂದದ್ದು ಆಗ. ಅಂದಿನಿಂದ ಅವರ ಕೊನೇ ದಿನಗಳವರೆಗೂ ಅವರು ನನ್ನ ಮೇಲೆ ಹರಿಸಿದ್ದು ವಾತ್ಸಲ್ಯದ ಹೊಳೆ. ಒಬ್ಬ ವಿಶ್ವಮಾನ್ಯವ್ಯಕ್ತಿ, ದೇವರೆಂದೇ ಜನರಿಂದ ಆರಾಧನೆಗೊಳಗಾಗಿದ್ದ, ಹಳ್ಳಿಯ ರೈತನಿಂದ ಹಿಡಿದು ಬಹುಶೃತ ವಿದ್ವಾಂಸರು, ಪ್ರಧಾನಮಂತ್ರಿಗಳವರೆಗೂ ಇನ್ನಿಲ್ಲದ ಗೌರವ, ಪೂಜ್ಯತೆಗೊಳಗಾದವರು, ಇಷ್ಟು ಅಹಂಕಾರಶೂನ್ಯ, ಇಷ್ಟು ನಿರ್ಲೆಪ ಆಗಿರಲು ಸಾಧ್ಯವೇ? ಈ ಪ್ರಶ್ನೆ ಅದೆಷ್ಟು ನೂರುಸಲ ನನ್ನನ್ನು ಕಾಡಿತ್ತು ಆ ದೇವನೇ ಬಲ್ಲ.

    ಒಂದು ನೂರು ಸದ್ಗುಣಗಳ, ಒಂದು ನೂರು ಸದಿಚ್ಛೆಗಳ, ಒಂದು ನೂರು ಕನಸುಗಳ ಮೌನಶಿಲ್ಪಿ, ಮೌನಸ್ಪೂರ್ತಿಯ ಬತ್ತದ ಪಾವನಗಂಗೋತ್ರಿ ಆಗಿದ್ದರು ಅವರು. ಅವರ ಆಸಕ್ತ ಕ್ಷೇತ್ರಗಳಿಗೆ ಸೀಮೆಯೇ ಇರಲಿಲ್ಲ. ಅದು ಅಂತಾರಾಷ್ಟ್ರೀಯ ಚರಿತ್ರೆ, ಆಧುನಿಕ ವಿಜ್ಞಾನ, ವಿಜ್ಞಾನ ಅಧ್ಯಾತ್ಮಗಳ ಸಮನ್ವಯ ಸೂತ್ರಗಳು, ಭಗವದ್ಗೀತೆ, ಪಾಶ್ಚಾತ್ಯ ಚಿಂತನೆ, ಪ್ರಖ್ಯಾತ ಚಿಂತಕರ ಜೀವನ ಘಟನೆಗಳು, ವಿವೇಕಾನಂದ, ರಾಮಕೃಷ್ಣ ಮತ್ತು ಇದೇ ಮಿಷನ್ನಿನ ಹಲವು ಅದ್ಭುತ ಲೇಖಕರು, ಪುಸ್ತಕಗಳು, ಸ್ವಾಮಿ ಗಂಭೀರಾನಂದಜಿಯವರ ‘ಬ್ರಹ್ಮಸೂತ್ರಗಳು’, ಶ್ರೀ ಹರ್ಷಾನಂದಜಿಯವರ ‘ಭಕ್ತಿಸೂತ್ರಗಳು’, ಅವರ ಸನ್ಮಿತ್ರರೇ ಆಗಿದ್ದ ಸ್ವಾಮಿ ಪುರುಷೋತ್ತಮಾನಂದಜಿಯವರ ‘ದೇವದುರ್ಲಭ ಕಂಠಸಿರಿ’, ‘ರಾಷ್ಟ್ರ ಎದುರಿಸುತ್ತಿರುವ ಪ್ರಸ್ತುತ ಕಂಟಕಗಳು, ಅವುಗಳ ಚಾರಿತ್ರಿಕ ಹಿನ್ನೆಲೆಗಳು’, ‘ದೇಶ ಕಟ್ಟಿದವರು ಎಡವಿದ್ದು ಎಲ್ಲಿ ಮತ್ತು ಅದರ ಪರಿಹಾರ ಸೂತ್ರ’, ಇದಿಲ್ಲ, ಅದಲ್ಲ, ಅಂತಿಲ್ಲ. ನಾವಿಬ್ಬರೂ ಒಟ್ಟಿಗೆ ಕೂಡಿದಾಗ ಅದು ಭಾರತ ಇರಲಿ, ಅಮೆರಿಕ ಇರಲಿ, ವಿಜಯಪುರ ಇರಲಿ, ಮೈಸೂರು ಇರಲಿ, ವಿಷಯಗಳ ಹಕ್ಕಿ ಗರಿಗೆದರಿ ಅಸೀಮ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿತ್ತು. ಅವರ ನಿರ್ಭಿಡೆಯ ನಿಲುವುಗಳು ಸಂಪ್ರದಾಯವಾದಿಗಳ ಕಣ್ಣನ್ನು ಕೆಂಪಾಗಿಸದೇನೂ ಇರಲಿಲ್ಲ. ಆದರೆ ಅವರು ಹುಟ್ಟ ಸತ್ಯಾನ್ವೇಷಕ, ಸತ್ಯದರ್ಶಿ, ಸತ್ಯ ಹಾಗೂ ಕೇವಲ ಸತ್ಯದ ಪಕ್ಷಪಾತಿ. ಯಾರನ್ನೂ ಎಂದೂ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಟೀಕಿಸದ ಅವರು ತಮ್ಮ ನಿಲುವಿಗೆ ಮಾತ್ರ ಅಚಲವಾಗಿ ನಿಲ್ಲುತ್ತಿದ್ದರು. ಯಾರ ವಿರೋಧವನ್ನೋ ಕಟ್ಟಿಕೊಳ್ಳಬೇಕಾದೀತು ಎಂದು ತಾವು ಒಪ್ಪಿಕೊಂಡ ಸತ್ಯಗಳನ್ನು ಎಳ್ಳಷ್ಟೂ ಯಾವ ಕಾರಣಕ್ಕೂ ಬದಲಿಸುತ್ತಿರಲಿಲ್ಲ. ಅವರ ಚಿಂತನೆ, ವಿಶ್ಲೇಷಣೆಗಳಿಗೆ ಒಂದೇ ಭಿಡೆ ಇದ್ದದ್ದು ; ಸತ್ಯಬದ್ಧತೆ! ಆದ್ದರಿಂದಲೇ ಅವು ಅಷ್ಟು ವಿಶಾಲ, ನೇರ ಮತ್ತು ಸರಳ. ಮಾಡರ್ನ್ ಫಿಜಿಕ್ಸ್ ಮತ್ತು ವೇದಾಂತಗಳ ಏಕಸೂತ್ರತೆಯನ್ನು ನಾನು ಅವರಿಗೆ ಮನಗಾಣಿಸಿದಾಗಲೆಲ್ಲ ಅವರ ಮುಖದಲ್ಲಿ ಅರಳುತ್ತಿದ್ದ ಮಂದಹಾಸವನ್ನು ನೋಡಬೇಕಿತ್ತು. ಹಾಗೆಯೇ ಅನ್ಯಧರ್ವಿುಯರ ಕುಟಿಲತೆಗಳ, ಭಾರತದ ಮೇಲೆ ಆದ ಪ್ರಹಾರಗಳನ್ನು ರ್ಚಚಿಸುವಾಗ ಅಷ್ಟೇ ಸ್ಪಷ್ಟವಾಗಿ ಮುಖ ಬಾಡುತ್ತಿದ್ದುದನ್ನೂ ಕಂಡಿದ್ದೇನೆ.

    ನನ್ನ ಹೃದಯ, ಬುದ್ಧಿಗಳು ತೃಪ್ತಿ ಆಗುವಷ್ಟು ರ್ಚಚಿಸುವುದಕ್ಕೆ ನನಗೆ ಸಿಗುತ್ತಿದ್ದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಶ್ರೀಗಳವರು ಒಬ್ಬರು. ಹಾಗೆಂದು ನಾನು ಹೇಳಿದ್ದಕ್ಕೆಲ್ಲ ಸುಮ್ಮನೆ ಹ್ಞೂಂಗುಡುತ್ತಿದ್ದ ವ್ಯಕ್ತಿಯೂ ಆಗಿರಲಿಲ್ಲ ಅವರು. ಖಗೋಳ ವಿಜ್ಞಾನಿ ಎಡಿಂಗ್ಟನ್ನರ ಒಂದು ವಿಚಾರವನ್ನು ಅದೊಂದು ಹೊಸದೆಂಬಂತೆ ಅತ್ಯುತ್ಸಾಹದಿಂದ ಅವರ ಗಮನಕ್ಕೆ ತಂದಾಗ ‘ಅದು ಬಹಳ ಹಳೇದು ರೀ’ ಎಂದು ತುಂಟನಗೆ ನಕ್ಕಿ, ಒಂದು ಕ್ಷಣ ನಾನು ಪೆಚ್ಚಾಗಿದ್ದುದೂ ಉಂಟು.

    ಜ್ಞಾನಿಯ ಲಕ್ಷಣಗಳೇನು? ಎಂಬುದನ್ನು ಶ್ರೀಕೃಷ್ಣ ಗೀತೆಯಲ್ಲಿ ಸ್ಪಷ್ಟಪಡಿಸುತ್ತಾನೆ. ಅಮಾನಿತ್ವಂನಿಂದ ಮೊದಲ್ಗೊಂಡು ಅರತಿರ್ಜನಸಂಸದಿವರೆಗೆ ಅರ್ಥಾತ್ ನಿರಹಂಕಾರದಿಂದ ಪ್ರಾರಂಭವಾಗಿ ಜನಜಂಗುಳಿಯನ್ನು ಇಷ್ಟಪಡದಿರುವುದು ಎಂಬಲ್ಲಿ ಕೊನೆಗೊಳ್ಳುತ್ತದೆ ಅದು. ಈ ಲಕ್ಷಣಗಳೆಲ್ಲ ಸಿದ್ಧೇಶ್ವರರಿಗೆ ಅದೆಷ್ಟು ಚೆನ್ನಾಗಿ ಒಪ್ಪುತ್ತಿತ್ತು ಎನ್ನುವುದು ಒಂದು ಕಡೆ ಇರಲಿ ಅವು ಅದೇ ಕ್ರಮದಲ್ಲಿ ಒಪ್ಪುತ್ತಿದ್ದವು ಎಂದರೆ ನಂಬುವಿರಾ? ಮುಂದೆ ಇಂಥವರೊಬ್ಬ ಬರಬಹುದು ಎಂದು ಭಗವಂತನೇ ಈ ಲಕ್ಷಣಗಳನ್ನು ಹೆಸರಿಸಿದನೇ ಎಂದು ಯಾರಿಗಾದರೂ ಆಶ್ಚರ್ಯವಾದರೆ ಉತ್ಪ್ರೇಕ್ಷೆಯೇನು ಇಲ್ಲ. ಅವರ ಮಹಿಮೆಯನ್ನೂ, ಸದ್ಗುಣಗಳನ್ನೂ, ಸಂತರಾಜ್ಯದ ಚಕ್ರವರ್ತಿಯ ವೈಭವವನ್ನೂ ಮುಚ್ಚಿಟ್ಟುಕೊಳ್ಳಲು ಅವರು ಮಾಡಿದ ಪ್ರಯತ್ನಗಳು ಸೂಕ್ಷ್ಮಬುದ್ಧಿಗಳಿಗಷ್ಟೇ ಗೋಚರವಾಗಬಹುದಿತ್ತು. ಆದರೆ ಅವರು ಹಿಡಿದಿಟ್ಟಷ್ಟೂ ಅದು ಹೆಚ್ಚು ರಭಸವಾಗಿಯೇ ಪ್ರಕಟವಾಗಲೆತ್ನಿಸುತ್ತಿತ್ತು. ಯಾವಾಗ ಅವರು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಆಗಲಿಲ್ಲವೋ ಆಗ ಮಾತ್ರ ಅದು ತನ್ನ ಪೂರ್ಣ ರಭಸದೊಂದಿಗೆ ಪ್ರವಾಹದೋಪಾದಿಯಲ್ಲಿ ಹೊರನುಗ್ಗಿತು. ಅದೇ ಅವರ ಮಹಾಪ್ರಸ್ಥಾನ ಮತ್ತು ಅದನ್ನು ಅನುಸರಿಸಿಕೊಂಡೇ ಬಂದ ನಾಡು ಕಾಣದ, ಕೇಳದ ಚರಿತ್ರಾರ್ಹ, ನ ಭೂತೋ ಎನ್ನಿಸಿದ ಶ್ರದ್ಧಾಂಜಲಿ.

    ಬದುಕನ್ನು ಅವರು ಪ್ರೀತಿಸಿದಷ್ಟು ಯಾರೂ ಪ್ರೀತಿಸಲಿಲ್ಲ. ಅವರ ಮಾತುಗಳ ಪಲ್ಲವಿಯೂ ಅದೇ. ಏಕೆಂದರೆ ಅವರು ಪೂರ್ಣಯೋಗಿ, ಸತ್ಯ ಸಾಕ್ಷಾತ್ಕಾರದಲ್ಲಿ ತಮ್ಮ ನೆಲೆಯನ್ನೇ ನಿರ್ವಿುಸಿಕೊಂಡವರು. ಅಂತಹವರಿಗೆ ಎಲ್ಲವೂ ನಿತ್ಯನೂತನ, ಜೀವನವೇ ನಿತ್ಯೋತ್ಸವ. ಮತ್ತೊಬ್ಬ ಇಂತಹ ಮಹಾತ್ಮನಿಗಾಗಿ ಅದಷ್ಟು ದಿನ ಕಾಯಬೇಕೋ ಆ ಮಹಾಕಾಲನೇ ಬಲ್ಲ. ಅವರ ನೆನಪೇ ಒಂದು ಯೋಗ. ಅದೇ ಒಂದು ಧ್ಯಾನ. ಅವರನ್ನು ಪಡೆದ ನಾಡು ಧನ್ಯ; ನೋಡಿದವರು ಮತ್ತೂ ಧನ್ಯರು.

    ಇಂದು ಗುರುನಮನ ಮಹೋತ್ಸವ

    ವಿಜಯಪುರ ನಗರದ ಜ್ಞಾನಯೋಗಾಶ್ರಮದ ಆವರಣದಲ್ಲಿ ಇಂದು ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳ ಗುರುನಮನ ಮಹೋತ್ಸವ ಆಯೋಜಿಸಲಾಗಿದೆ. ಬೆಳಗ್ಗೆ 8ಕ್ಕೆ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ಗುಗೆಗೆ ಪೂಜೆ, 9ಕ್ಕೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಪುಷ್ಪಸಮರ್ಪಣೆ. 10 ಕ್ಕೆ ನುಡಿನಮನ ಸಮಾರಂಭ. ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ, ಕನ್ಹೇರಿ ಸಿದ್ಧಗಿರಿ ಮಹಾಸಂಸ್ಥಾನಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಸಾನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟನೆ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಗ್ರಂಥಗಳ ಲೋಕಾರ್ಪಣೆ, ಸಚಿವರಾದ ಶಿವಾನಂದ ಪಾಟೀಲ್, ಎಂ.ಬಿ. ಪಾಟೀಲ್ ನೇತೃತ್ವ ವಹಿಸುವರು. ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ. ಗದ್ದಗೌಡರ, ಶಾಸಕರಾದ ಯಶವಂತರಾಯಗೌಡ ಪಾಟೀಲ್, ಲಕ್ಷ್ಮಣ್ ಸವದಿ, ಸಿ.ಎಸ್. ನಾಡಗೌಡ, ರಾಜುಗೌಡ ಪಾಟೀಲ್, ಪ್ರಕಾಶ ಹುಕ್ಕೇರಿ, ಜೆ.ಟಿ. ಪಾಟೀಲ್, ರಾಜು ಕಾಗೆ ಉಪಸ್ಥಿತರಿರುವರು.

    (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    15 ಸಾವಿರ ಕೊಟ್ರೆ 1 ಗಂಟೆಗೆ 55 ಸಾವಿರ ರೂ.!? ರೀಲ್ಸ್​ ಸ್ಟಾರ್​ ಅಮಲಾಳ ಹಗರಣ ಬಯಲು, ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts