More

    ಗ್ರಾಮಾಯಣ ಮೊದಲ ಚರಣ: ಇಂದು ಮೊದಲ ಹಂತದ ಮತದಾನ; 1,17,383 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ

    ಬೆಂಗಳೂರು: ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ವೇದಿಕೆ ತೆರೆದುಕೊಂಡಿದ್ದು ಇಂದು (ಮಂಗಳವಾರ) ಮೊದಲ ಹಂತದ ಮತದಾನ ನಡೆಯಲಿದೆ. ಕರೊನಾತಂಕದ ನಡುವೆಯೇ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ಹಳ್ಳಿಫೈಟ್​ನ ಅಖಾಡದಲ್ಲಿ 1,17,383 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 113 ತಾಲೂಕುಗಳ 3,019 ಗ್ರಾಮ ಪಂಚಾಯತ್​ಗಳ 43,238 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. 5,847 ಚುನಾವಣಾ ಅಧಿಕಾರಿಗಳು ಹಾಗೂ 6,085 ಸಹಾಯಕ ಚುನಾವಣಾ ಅಧಿಕಾರಿಗಳು ನಿಯೋಜನೆಗೊಂಡಿದ್ದು, 45,128 ಮತಗಟ್ಟೆ ಗಳಿಗೆ 2,70,268 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಕವಾಗಿದ್ದಾರೆ. ಈ ಬಾರಿ 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ.

    ಆಯೋಗದ ಸೂಚನೆ

    • ಕರೊನಾ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
    • ಹೆಚ್ಚು ಜನಸಂದಣಿ ಹಾಗೂ ಸಿಬ್ಬಂದಿ ಕೊರತೆಯಾಗದಂತೆ ಯೋಜಿಸಿ, ಮತದಾನ ನಡೆಸಿ
    • ಮುಂಜಾಗ್ರತಾ ಕ್ರಮ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೊಣೆ

    ಸೋಂಕಿತರಿಗೂ ಅವಕಾಶ: ಕರೊನಾ ಸೋಂಕಿತರು ಹಾಗೂ ಶಂಕಿತರು ಮತದಾನ ಮಾಡಲು ಕೊನೆಯ 1 ಗಂಟೆ ಅವಕಾಶ ಇರುತ್ತದೆ

    ಬಿಗಿ ಬಂದೋಬಸ್ತ್: ನಿರಾತಂಕವಾಗಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೂ ಪೊಲೀಸರನ್ನು ನಿಯೋಜಿಸಲಾಗಿದೆ.

    1853 ಬಸ್​ಗಳ ಬಳಕೆ: ಮೊದಲ ಹಂತದ ಚುನಾವಣೆಗೆ ಕೆಎಸ್ಸಾರ್ಟಿಸಿಯ 1,853 ಬಸ್​ಗಳನ್ನು ಒಪ್ಪಂದದ ಮೇಲೆ ನೀಡಲಾಗಿದೆ. ಮತಗಟ್ಟೆಗಳಿಗೆ ಸಿಬ್ಬಂದಿ, ಮತಪೆಟ್ಟಿಗೆ ಮತ್ತಿತರ ಸಾಮಗ್ರಿಗಳನ್ನು ಕೊಂಡೊಯ್ಯಲು ಮತ್ತು ಮರಳಿ ಕರೆತರಲು ಬಸ್ ಬಳಸಿಕೊಳ್ಳಲಾಗುತ್ತಿದೆ.

    ಮತದಾರರೇ, ಹೀಗೆ ಮಾಡಿ

    • ಕರೊನಾ ಹಿನ್ನೆಲೆಯಲ್ಲಿ ಮತಗಟ್ಟೆಗೆ ಬರುವ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸಿ
    • ವ್ಯಕ್ತಿಗತ ಅಂತರ ಕಾಯ್ದುಕೊಂಡು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಹಕ್ಕು ಚಲಾಯಿಸಿ
    • ಮತಗಟ್ಟೆಗಳಲ್ಲಿ ಜನಸಂದಣಿಯಾಗದಂತೆ ಸರತಿ ಸಾಲು, ವ್ಯಕ್ತಿಗತ ಅಂತರ ಪಾಲನೆ ಮಾಡುವ ಸಂಬಂಧ ಮತದಾರರಿಗೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ.

    ಎಲ್ಲೆಲ್ಲೂ ಎಣ್ಣೆ ಘಾಟು

    ಮತದಾನದ ಮುನ್ನಾದಿನ ವನ್ನು ಸಾಮಾನ್ಯವಾಗಿ ‘ಕತ್ತಲೆ ರಾತ್ರಿ’ ಎಂದೇ ಕರೆಯಲಾಗುತ್ತದೆ. ಅನೇಕ ಹಳ್ಳಿಗಳಲ್ಲಿ ಮತದಾನದ ಹಿಂದಿನ ರಾತ್ರಿಯಲ್ಲಿ ಮದ್ಯ ಸಮಾರಾಧನೆಯೇ ನಡೆಯಿತು. ಅನೇಕ ಕಡೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಮದ್ಯ ದಾಸ್ತಾನು ಮಾಡಲಾಗಿತ್ತು. ನಗರಗಳ ಸಮೀಪದ ರೆಸಾರ್ಟ್, ಬಾರ್​ಗಳು ತುಂಬಿ ತುಳುಕಿದ್ದವು. ಕೇಸ್​ಗಟ್ಟಲೆ ಮದ್ಯವನ್ನು ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಮನೆಯಲ್ಲಿಟ್ಟು ಹಂಚಿಕೆ ಮಾಡಿದ್ದು ಕಂಡುಬಂತು.

    ಎಡಗೈ ಹೆಬ್ಬೆರಳಿಗೆ ಶಾಯಿ: ವಿಧಾನಸಭಾ ಉಪ ಚುನಾವಣೆ ಹಾಗೂ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆ, ಸೊಸೈಟಿಗಳಿಗೆ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ.

    50/100 ರೂ. ನೋಟಿಗೆ ಬೇಡಿಕೆ: ಮತದಾರರಿಗೆ ಹಂಚಲು ಹಾಗೂ ಸಣ್ಣಪುಟ್ಟ ಖರ್ಚುಗಳಿಗೆ ವ್ಯಯಿಸಲು ಅಭ್ಯರ್ಥಿಗಳು ಬ್ಯಾಂಕ್/ಸಹಕಾರ ಬ್ಯಾಂಕ್​ಗಳಲ್ಲಿ ನೂರು, ಐವತ್ತರ ಮುಖಬೆಲೆ ನೋಟಿಗೆ ಮೊರೆ ಹೋದ ಪ್ರಕರಣಗಳು ಅನೇಕ ಕಡೆ ಕಂಡುಬಂತು.

    80 ಸಾವಿರ ಪೊಲೀಸರ ನಿಯೋಜನೆ

    ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಾಗಿ 80 ಸಾವಿರ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ನಿಯೋಜಿಸಿದೆ. ಡಿ.22ಕ್ಕೆ ಮೊದಲ ಹಂತದ ಮತದಾನಕ್ಕೆ 10,969 ಹೋಂ ಗಾರ್ಡ್, 5369 ಕಾನ್​ಸ್ಟೇಬಲ್ ನಿಯೋಜಿಸಲಾಗಿದೆ. ಜತೆಗೆ 1746 ಗಸ್ತು ತಂಡ ನೇಮಿಸಲಾಗಿದೆ. ಇದರಲ್ಲಿ ಎಎಸ್​ಐ, ಪಿಎಸ್​ಐ, ಇನ್​ಸ್ಪೆಕ್ಟರ್​ಗಳು, ಡಿವೈಎಸ್​ಪಿಗಳು ಇರುತ್ತಾರೆ. 1044 ಹೆಚ್ಚುವರಿ ಗಸ್ತು ವಾಹನಗಳು ಹಾಗೂ 111 ಕೆಎಸ್​ಆರ್​ಪಿ, ಡಿಎಆರ್ ತುಕಡಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿ.27ಕ್ಕೆ ನಡೆಯುವ 2ನೇ ಹಂತದ ಮತದಾನಕ್ಕೆ 9083 ಹೋಂ ಗಾರ್ಡ್, 5246 ಪೇದೆಗಳು, 1540 ಗಸ್ತು ತಂಡಗಳು, 97 ಕೆಎಸ್​ಆರ್​ಪಿ, ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ರಾಜ್ಯ ಚುನಾವಣಾ ಆಯೋಗದ ಆಶೆಯದಂತೆ ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಕೋವಿಡ್-19ರ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts