More

    ಜಿಯೋ ಸಿಂಥೆಟಿಕ್ ಕ್ಲೇ ಲೇಯರ್‌ಗೆ ವಿರೋಧ ;ಚಳವಳಿಗೆ ಮುಂದಾದ ಈಚನೂರು ಕೆರೆ ಆಶ್ರಿತ ಪ್ರದೇಶದ ರೈತರು

    ತಿಪಟೂರು: ನೊಣವಿನಕೆರೆಯಿಂದ ನಗರಕ್ಕೆ ಕುಡಿಯುವ ನೀರು ತರುವ 24/7 ಯೋಜನೆಯನ್ನು ಕೈಬಿಟ್ಟು ಈಚನೂರು ಕೆರೆಯಿಂದ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರ ಭಾಗವಾಗಿ ಕೆರೆಯ ಹೂಳು ತೆಗೆಸಿ ನೀರು ಇಂಗದಂತೆ ಜಿಯೋ ಸಿಂಥೆಟಿಕ್ ಕ್ಲೇ ಲೇಯರ್ ಹಾಕುತ್ತಿರುವುದು ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ.

    ರೈತರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 127 ಕೋಟಿ ರೂಪಾಯಿ ವೆಚ್ಚದ 296.75 ಎಂಸಿಎಫ್‌ಟಿ ನೀರು ಸಾಮರ್ಥ್ಯದ ನೊಣವಿನೆಕರೆ ಯೋಜನೆಯನ್ನು ಕೈಬಿಟ್ಟು ನಗರದಿಂದ 6 ಕಿಮೀ ದೂರದಲ್ಲಿರುವ ಕೇವಲ 72 ಎಂಸಿಎಫ್‌ಟಿ ನೀರಿನ ಸಾಮರ್ಥ್ಯ ಹೊಂದಿರುವ ಈಚನೂರು ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯವನ್ನು 100-150 ಎಂಸಿಎಫ್‌ಟಿಗೆ ಹೆಚ್ಚಿಸುವ ಸಲುವಾಗಿ 26 ಕೋಟಿ ರೂಪಾಯಿ ವೆಚ್ಚದಲ್ಲಿ 8 ರಿಂದ 10 ಅಡಿ ಆಳದವರೆಗೆ ಮಣ್ಣು ತೆಗೆಯುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲ ಹಾಗೂ ಯಾವ ಸಂದರ್ಭದಲ್ಲಾದರೂ ಹೇಮಾವತಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಹಿನ್ನೆಲೆಯಲ್ಲಿ ಆಗಸ್ಟ್ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳಿಸಲು ಸಮರೋಪಾದಿಯಲ್ಲಿ ಕಾಮಗಾರಿ ನಡೆಯುತ್ತಿದೆ.

    ರೈತರಲ್ಲಿ ಆತಂಕ: ಈಚನೂರು ಕೆರೆಯನ್ನು ಹೂಳು ತೆಗೆದ ನಂತರ ನೀರು ಭೂಮಿಯಲ್ಲಿ ಇಂಗಬಾರದೆಂಬ ಉದ್ದೇಶದಿಂದ ಇಡೀ ಕೆರೆಗೆ ರಬ್ಬರ್ ಮ್ಯಾಟ್ ಹಾಕಿ, ಇದರ ಮೇಲೆ ಜೇಡಿ ಮಣ್ಣು ಹರವಿ, ಮಟ್ಟ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂಬ ಆತಂಕ ರೈತರಲ್ಲಿ ಹುಟ್ಟಿಕೊಂಡಿದೆ. ಕೆರೆ ಅಂಗಳಕ್ಕೆ ರಬ್ಬರ ಮ್ಯಾಟ್ ಅಳವಡಿಸಿದರೆ ಕೆರೆಯ ಸುತ್ತಮುತ್ತ ಅಂತರ್ಜಲ ಬತ್ತುತ್ತದೆ. ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿ, ತೆಂಗು, ಅಡಿಕೆ ಬೆಳೆಯನ್ನೇ ನೆಚ್ಚಿಕೊಂಡಿರುವ ನಮ್ಮ ಬದುಕು ಅತಂತ್ರವಾಗುತ್ತದೆ ಎಂಬುದು ಈಚನೂರು ಕೆರೆ ಆಶ್ರಿತ ಗ್ರಾಮಗಳ ರೈತರ ಆರೋಪವಾಗಿದೆ. ಹೀಗಾಗಿ ಕೆರೆ ಆಶ್ರಿತ ರೈತ ಹೋರಾಟ ಸಮಿತಿ ರಚಿಸಿಕೊಂಡು, ಕಂಟಕವಾಗಿರುವ ರಬ್ಬರ್ ಮ್ಯಾಟ್ ಯಾವುದೇ ಕಾರಣಕ್ಕೂ ಅಳವಡಿಸಬಾರದೆಂದು ಚಳವಳಿಗೆ ಮುಂದಾಗಿದ್ದಾರೆ.

    ಜಿಯೊ ಸಿಂಥೆಟಿಕ್ ಕ್ಲೇ ಲೆಯರ್: ಮಣ್ಣು ಕುಸಿಯದಂತೆ ಜಿಯೋ ಸಿಂಥೆಟಿಕ್ ಕ್ಲೇ ಲೆಯರ್ ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಅದೇ ರೀತಿ ಈಚನೂರು ಕೆರೆಯ ನೀರು ಇಂಗದಂತೆ ಮಧ್ಯಭಾಗದಲ್ಲಿ ಮಾತ್ರ ಅಳವಡಿಸಲಾಗುತ್ತಿದೆ. ಇದರಿಂದ ನೀರಿನ ಸೆಲೆಬತ್ತಿ ಹೋಗಲಿದೆ ಎಂಬ ಆತಂಕ ಬೇಡವೆಂಬುದು ಇಂಜಿನಿಯರ್‌ಗಳ ಅಭಿಪ್ರಾಯವಾಗಿದೆ.

    ನಾನೆಂದೂ ಕೆರೆಗೆ ರಬ್ಬರ್ ಮ್ಯಾಟ್ ಹಾಕುವ ವಿಷಯ ಪ್ರಸ್ತಾಪಿಸಿಲ್ಲ. ಮ್ಯಾಟ್ ಹಾಕುವುದೂ ಇಲ್ಲ. ಕಪೋಕಲ್ಪಿತ ವಿಷಯಗಳಿಗೆ ಸಮಜಾಯಿಷಿ ಕೊಡಲು ಸಾಧ್ಯವಿಲ್ಲ.
    ಬಿ.ಸಿ.ನಾಗೇಶ್, ತಿಪಟೂರು ಶಾಸಕ

    ಕಾಮಗಾರಿ ಪ್ರಾರಂಭಿಸುವಾಗ ಸೌಜನ್ಯಕ್ಕಾದರೂ ನಮಗೆ ವಿಷಯ ತಿಳಿಸಿಲ್ಲ. ಕೆರೆ ಹೂಳೆತ್ತಲು ನಮ್ಮ ವಿರೋಧವಿಲ್ಲ. ಆದರೆ ಮ್ಯಾಟ್ ಹಾಕುತ್ತಾರೆಂದು ತಿಳಿದುಬಂದಿದೆ. ಹಾಗಾಗಿ, ಕಾಮಗಾರಿ ಸ್ಥಳದಲ್ಲಿ ಧರಣಿ ಕೂರುತ್ತೇವೆ. ಕಾಮಗಾರಿಯ ಸಂಪೂರ್ಣ ಮಾಹಿತಿ ಕೊಡಬೇಕು.
    ಶ್ರುತಿ ಜಯದೇವ್, ಈಚನೂರು ಗ್ರಾಪಂ ಅಧ್ಯಕ್ಷೆ

    ಕೆಲವರು ಕ್ಲೇ ಲೇಯರ್ ಬದಲು ಪ್ಲಾಸ್ಟಿಕ್ ಹಾಕುತ್ತಾರೆ. ಆದರೆ, ನಾವು ಜಿಯೊ ಸಿಂಥೆಟಿಕ್ ಕ್ಲೇ ಲೇಯರ್ ಹಾಕುತ್ತಿದ್ದೇವೆ. ಇದು ಪ್ಲಾಸ್ಟಿಕ್ ಅಥವಾ ರಬ್ಬರ್ ಅಲ್ಲ. ಯಾರೂ ಕೂಡ ಕೆರೆಯ ಸೀಪೆಜ್ ಅರೆಸ್ಟ್ ಮಾಡಲ್ಲ. ರೈತರು ಅನಗತ್ಯ ಗೊಂದಲಕ್ಕೆ ಒಳಗಾಗುವುದು ಬೇಡ.
    ನಾಗೇಶ್‌ರಾವ್, ಇಂಜಿನಿಯರ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts