More

    ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ

    ಗುಂಡ್ಲುಪೇಟೆ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೂರು ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಗಡಿಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗಿದೆ ಎಂದು ಉಪ ಚುನಾವಣಾಧಿಕಾರಿ ದಯಾನಂದ ಹೇಳಿದರು.

    ಗುರುವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಮಾಹಿತಿ ನೀಡಿ ಮಾತನಾಡಿದರು.

    ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಪಾಳಿಯಲ್ಲಿ ಮೂರು ತಂಡ ರಚಿಸಲಾಗಿದ್ದು ಅಕ್ರಮ ಸಾಗಣೆ ಬಗ್ಗೆ ನಿಗಾವಹಿಸಲಾಗಿದೆ. ಸಭೆ, ಸಮಾರಂಭ ನಡೆಸುವ ರಾಜಕೀಯ ಪಕ್ಷಗಳವರು ಏಕಗವಾಕ್ಷಿ ಯೋಜನೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಯಕ್ರಮ ನಡೆಸುವ ಬಗ್ಗೆ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಸಭೆ, ಸಮಾರಂಭ ನಡೆಯುವ ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ವಿಡಿಯೋ ಮಾಡುವ ಮೂಲಕ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಿದೆ. ಗೃಹಪ್ರವೇಶ ನಾಮಕರಣ ಮುಂತಾದ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯವಿಲ್ಲ. ಆದರೆ ಗ್ರಾಮಗಳಲ್ಲಿ ನಡೆಯುವ ಹಬ್ಬ ಜಾತ್ರೆಗಳಿಗೆ ಅನುಮತಿ ನೀಡಲಾಗುತ್ತಿದ್ದು, ಯಾವುದೇ ರಾಜಕೀಯ ಚಟುವಟಿಕೆ ಹಾಗೂ ಪ್ರಚಾರ ಕೈಗೊಳ್ಳುವಂತಿಲ್ಲ. ಜಿಲ್ಲಾಡಳಿತ ಜಾತ್ರೆ ಮುಂತಾದ ಕಾರ್ಯಕ್ರಮಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಯಾವುದೇ ಮಾಹಿತಿ ಇಲ್ಲವೇ ದೂರು ಇದ್ದರೆ ಕಂಟ್ರೋಲ್ ರೂಂ 08229-222225 ಸಂಖ್ಯೆಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.

    ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಲೋಕಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರದ 169 ಮತಗಟ್ಟೆಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಏಪ್ರಿಲ್ 5ರಂದು ಚುನಾವಣೆಯಲ್ಲಿ ಭಾಗವಹಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ಕಾರ್ಯಕ್ರಮ ನಡೆಸಲಾಗುವುದು. ಹಿಂದೆ ಅಹಿತಕರ ಘಟನೆ ನಡೆಸಿದ್ದ ಮತಗಟ್ಟೆಗಳಿಗೆ ಪೊಲೀಸರ ಜತೆ ತೆರಳಿ ಪರಿಶೀಲಿಸಿ ಶಾಂತಿಯುತವಾಗಿ ಮತದಾನ ಮಾಡಬೇಕಾದ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗಿದೆ. ಸುಗಮ ಮತದಾನಕ್ಕೆ ಮಾಧ್ಯಮಗಳೂ ಸಹ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಪರಶಿವಮೂರ್ತಿ, ವನರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts