More

    ತುಳು ಲಿಪಿಯಲ್ಲೂ ಬಂತು ಆ್ಯಪ್, ಕನ್ನಡಿಗನಿಂದ ‘ಪದ ತುಳು’ ಅಭಿವೃದ್ಧಿ

    – ಅವಿನ್ ಶೆಟ್ಟಿ ಉಡುಪಿ
    ತುಳು ಭಾಷೆ ಮಾತನಾಡಲು ಬಾರದ, ಸರಿಯಾಗಿ ಅರ್ಥವಾಗದ ಕನ್ನಡಿಗ ಯುವಕನೊಬ್ಬ ತುಳು ಲಿಪಿಗೊಂದು ಆ್ಯಪ್ (ಆ್ಯಂಡ್ರಾಯ್ಡಾ ಬಳಕೆದಾರರಿಗೆ ) ಸೃಷ್ಟಿಸಿದ್ದಾರೆ.

    ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ದಾವಣಗೆರೆಯ ಲೋಹಿತ್ ಶಿವಮೂರ್ತಿ ತುಳು ಪದ ಆ್ಯಪ್‌ನ ಸೃಷ್ಟಿಕರ್ತ. ಈ ಹಿಂದೆ ಇವರು ರೂಪಿಸಿದ್ದ ಪದ ಕನ್ನಡ ಆ್ಯಪ್ ಜನಪ್ರಿಯವಾಗಿತ್ತು. ಈಗ ‘ಪದ ತುಳು’ ಆ್ಯಪ್ ರೂಪಿಸಿದ್ದಾರೆ. ‘ಕಣಾದ’ ಎಂಬ ತಂಡದಿಂದ ಸಿದ್ಧವಾದ ತುಳು ಯುನಿಕೋಡ್ ಫಾಂಟ್ (ತುಳುಸಿರಿ) ಬಳಸಿಕೊಂಡು ಲೋಹಿತ್ ಈ ಆ್ಯಪ್ ರಚಿಸಿದ್ದಾರೆ.

    ಆ್ಯಪ್ ಬಳಕೆ ಹೇಗೆ?: ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಇಂಗ್ಲಿಷ್ ಅಕ್ಷರದಲ್ಲಿ ಟೈಪ್ ಮಾಡಿದಾಗ ತುಳು ಲಿಪಿಯಲ್ಲಿ ಅಕ್ಷರಗಳು ಮೂಡುತ್ತವೆ. ಲಿಪಿ ಗೊತ್ತಿದ್ದವರು, ಕಲಿಯುತ್ತಿರುವವರಿಗೆ ಅನುಕೂಲವಾಗಿದೆ. ಇನ್ನೂ ಸುಧಾರಣೆ ಕೆಲಸಗಳು ನಡೆಯುತ್ತಿವೆ. ಸದ್ಯಕ್ಕೆ ಇಲ್ಲಿ ಟೈಪ್ ಮಾಡಿದ ಅಕ್ಷರಗಳನ್ನು ಸ್ಕ್ರೀನ್‌ಶಾಟ್ ತೆಗೆದು ಬೇರೆಕಡೆಗಳಲ್ಲಿ ಪೋಸ್ಟ್ ಮಾಡಬಹುದು ಎನ್ನುತ್ತಾರೆ ಲೋಹಿತ್.

    ಐದಾರು ತುಳು ಫಾಂಟ್‌ಗಳ ಅವಶ್ಯಕತೆ: ಪದ ತುಳು ಆ್ಯಪ್ ಬಗ್ಗೆ ಅವಿಭಜಿತ ದಕ್ಷಿಣ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಲೋಹಿತ್ ಅವರನ್ನು ಶ್ಲಾಘಿಸಿದ್ದಾರೆ. ಸದ್ಯಕ್ಕೆ ತುಳು ಲಿಪಿ ಬಳಕೆಗೆ ಎರಡು ಫಾಂಟ್‌ಗಳಷ್ಟೇ (ತುಳುಸಿರಿ, ಶ್ರೀಹರಿ) ಲಭ್ಯವಿದೆ. ತುಳು ಯೂನಿವರ್ಸಲ್ ಫಾಂಟ್ ಆಗಿ ರೂಪುಗೊಳ್ಳಲು ಕನಿಷ್ಠ ಐದಾರು ತುಳು ಫಾಂಟ್‌ಗಳ ಅವಶ್ಯಕತೆ ಇದೆ. ಗ್ರಂಥಗಳಲ್ಲಿನ ಜ್ಞಾನ ಕೇವಲ ಗ್ರಂಥಗಳಲ್ಲಿಯೇ ಉಳಿಯದೆ ಲಿಪಿ ಬಳಕೆಗೆ ತಂತ್ರಜ್ಞಾನ ಸದ್ಬಳಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ತುಳು ಆಕಾಡೆಮಿ ಪಾತ್ರ ದೊಡ್ಡದು.

    ಈ ಲಿಂಕ್‌ನಲ್ಲಿ ಲಭ್ಯ:
    https://play.google.com/store/apps/details?id=pro.pada.android.padatulu

    ಪದ ತುಳು ಆ್ಯಂಡ್ರಾಯ್ಡಾ ಅಪ್ಲಿಕೇಶನ್ ಚೆನ್ನಾಗಿದೆ. ಇಂಥ ಕೆಲಸ ಮಾಡಿರುವುದು ತುಂಬ ಸಂತಸದ ವಿಚಾರ, ಈ ಬಗ್ಗೆ ಎಲ್ಲರೂ ಮಾತನಾಡುತಿದ್ದಾರೆ. ತುಳು ಲಿಪಿ ಸುಂದರವಾದುದು. ತುಳು ಲಿಪಿ ಬಳಕೆ ಹೆಚ್ಚಾಗಲಿ.
    – ಪ್ರೊ.ಕೆ.ಪಿ ರಾವ್, ಲಿಪಿ ತಜ್ಞ

    2012ರಲ್ಲಿ ತುಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ನನ್ನಲ್ಲಿ ಈ ಆಲೋಚನೆ ಬಂದಿತ್ತು. ಸಮ್ಮೇಳನದಲ್ಲಿ ಹಿರಿಯರಾದ ಕೆ.ಪಿ ರಾವ್ ಅವರು ಭಾಗವಹಿಸಿದ್ದು, ಅವರೊಂದಿಗೂ ಈ ಬಗ್ಗೆ ಮಾತುಕತೆ ನಡೆಸಿದ್ದೆ. ತುಳುಸಿರಿ ಫಾಂಟ್ ಬಳಕೆ ಮಾಡಿಕೊಂಡು ಆ್ಯಪ್ ಅಭಿವೃದ್ಧಿಪಡಿಸಿದ್ದೇನೆ. ಈ ನನ್ನ ಹವ್ಯಾಸಕ್ಕೆ ಕೆ.ಪಿ.ರಾವ್ ಅವರ ಮಾರ್ಗದರ್ಶನ, ಆಶೀರ್ವಾದ ಇದೆ.
    – ಲೋಹಿತ್ ಶಿವಮೂರ್ತಿ, ತಂತ್ರಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts