More

    ಗಡಿ ಬಿಕ್ಕಟ್ಟು ಪರಿಹಾರಕ್ಕೆ 3 ಮಾರ್ಗೋಪಾಯ

    ದೇಶದಲ್ಲಿ ಏಳು ಅಂತಾರಾಜ್ಯ ಗಡಿ ಬಿಕ್ಕಟ್ಟುಗಳು ಇರುವುದನ್ನು ಗುರುತಿಸಲಾಗಿದೆ. ಈ ಪೈಕಿ ಅತಿದೊಡ್ಡ ವಿವಾದ ಇರುವುದು ಕರ್ನಾಟಕ- ಮಹಾರಾಷ್ಟ್ರ ನಡುವಿನದ್ದು. ಸಂಬಂಧಪಟ್ಟ ರಾಜ್ಯಗಳ ನಡುವೆ ಕೇಂದ್ರ ಸರ್ಕಾರದ ಸಂಧಾನ, ಸುಪ್ರೀಂ ಕೋರ್ಟ್ ತೀರ್ಪು ಅಥವಾ ಅಂತರ್​ರಾಜ್ಯ ಮಂಡಳಿ ಮೂಲಕ ವಿವಾದಗಳನ್ನು ಬಗೆಹರಿಸಲು ಅವಕಾಶವಿದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ದೀರ್ಘಕಾಲದಿಂದ ಇದೆ. ಎರಡೂ ರಾಜ್ಯಗಳು ತಮ್ಮ ನಿಲುವಿಗೆ ಅಂಟಿಕೊಂಡಿವೆ. ಈ ವಿಷಯದಲ್ಲಿ ನಿಲುವನ್ನು ಪುನರುಚ್ಚರಿಸುವ ನಿರ್ಣಯವನ್ನು ಬೆಳಗಾವಿಯಲ್ಲಿ ಜರುಗಿದ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ಅಂಗೀಕರಿಸಿದೆ. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ವಿಧಾನಸಭೆಯ ಉಭಯ ಸದನಗಳು ಕಾನೂನು ಹೋರಾಟ ಬೆಂಬಲಿಸಲು ನಿರ್ಣಯ ಅಂಗೀಕರಿಸಿವೆ.

    ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಉತ್ತರ ಕರ್ನಾಟಕದ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಗಡಿ ವಿವಾದ ಹಿಂದಿನಿಂದ ಇದೆ. 1956ರ ರಾಜ್ಯಗಳ ಪುನರ್​ವಿಂಗಡಣೆ ಕಾಯ್ದೆಯ ಪ್ರಕಾರ ರಾಜ್ಯದ ಗಡಿಗಳನ್ನು ಭಾಷಾವಾರು ಆಧಾರಿತವಾಗಿ ಪುನಃ ರಚಿಸಿದಾಗ, ಬೆಳಗಾವಿಯು ಹಿಂದಿನ ಮೈಸೂರು (ಪ್ರಸ್ತುತ ಕರ್ನಾಟಕ) ರಾಜ್ಯದ ಭಾಗವಾಯಿತು. ಆಗಿನಿಂದಲೂ ಮಹಾರಾಷ್ಟ್ರ ಸರ್ಕಾರವು ಮರಾಠಿ ಪ್ರಾಬಲ್ಯವಿರುವ ಬೆಳಗಾವಿ ಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಪ್ರತಿಪಾದಿಸುತ್ತಿದೆ.

    ಮಹಾಜನ್ ವರದಿ: ಕರ್ನಾಟಕದ ಬೆಳಗಾವಿಯನ್ನು ತನಗೆ ಸೇರಿಸಬೇಕೆಂಬ ಮಹಾರಾಷ್ಟ್ರ ಸರ್ಕಾರದ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ 1966ರ ಅಕ್ಟೋಬರ್​ನಲ್ಲಿ ಸವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮೆಹೆರ್ ಚಂದ್ ಮಹಾಜನ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಿತು. ಕರ್ನಾಟಕ-ಮಹಾರಾಷ್ಟ್ರ-ಕೇರಳ ನಡುವಿನ ಗಡಿ ಸಮಸ್ಯೆ ಪರಿಹರಿಸುವ ಜವಾಬ್ದಾರಿಯನ್ನು ಆಯೋಗಕ್ಕೆ ವಹಿಸಲಾಯಿತು. ಒಂದು ವರ್ಷ ಅಧ್ಯಯನ ನಡೆಸಿದ ಈ ತಂಡ 1967ರ ಆಗಸ್ಟ್​ನಲ್ಲಿ ವರದಿ ಸಲ್ಲಿಸಿತು. ಮಹಾರಾಷ್ಟ್ರ ತನ್ನದು ಎಂದು ಹೇಳಿಕೊಳ್ಳುತ್ತಿದ್ದ 247 ಹಳ್ಳಿಗಳು ಹಾಗೂ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂದು ವರದಿಯಲ್ಲಿ ಹೇಳಲಾಗಿತ್ತು. ವರದಿಯ ಶಿಫಾರಸುಗಳು ಏನೇ ಇದ್ದರೂ ಸ್ವೀಕರಿಸುವುದಾಗಿ ಹೇಳಿದ್ದ ಮಹಾರಾಷ್ಟ್ರ, ಬೆಳಗಾವಿ ತನಗೆ ಸೇರುವುದಿಲ್ಲ ಎಂದು ತಿಳಿದ ತಕ್ಷಣ ಅದನ್ನು ತಿರಸ್ಕರಿಸಿತು. ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

    ನ್ಯಾಯಾಂಗ ಪರಿಹಾರ: ಸಂವಿಧಾನದ 131 ನೇ ವಿಧಿಯ ಪ್ರಕಾರ, ಸುಪ್ರೀಂ ಕೋರ್ಟ್ ತನ್ನ ಮೂಲ ಅಧಿಕಾರ ವ್ಯಾಪ್ತಿಯಲ್ಲಿ ರಾಜ್ಯಗಳ ನಡುವಿನ ವಿವಾದಗಳನ್ನು ಕುರಿತು ನಿರ್ಧರಿಸಬಹುದಾಗಿದೆ. ಭಾರತ ಸರ್ಕಾರ ಮತ್ತು ರಾಜ್ಯಗಳ ನಡುವಿನ ಬಿಕ್ಕಟ್ಟುಗಳು; ವಿವಿಧ ರಾಜ್ಯಗಳ ನಡುವಿನ ವಿವಾದಗಳ ಕುರಿತು ನ್ಯಾಯ ನೀಡುವ ಅಧಿಕಾರ ಸುಪ್ರೀಂಕೋರ್ಟ್​ಗೆ ಇದೆ. ಆದರೆ, ಸಂವಿಧಾನ ಜಾರಿಯ ಮುಂಚಿತವಾಗಿ ಕಾರ್ಯಗತಗೊಳಿಸಿದ ಯಾವುದೇ ಒಪ್ಪಂದ, ಒಡಂಬಡಿಕೆಗಳಿಗೆ ಈ ನ್ಯಾಯವ್ಯಾಪ್ತಿ ವಿಸ್ತರಿಸುವುದಿಲ್ಲ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರ ಹತ್ಯೆ; ನಾಲ್ಕು ಕೊಲೆಗಳ ಆರೋಪಿಯ ತಾಯಿ ಹೇಳಿದ್ದೇನು?

    ಅಂತರ್​ರಾಜ್ಯ ಮಂಡಳಿ: ರಾಜ್ಯಗಳ ನಡುವಿನ ವಿವಾದಗಳ ಪರಿಹಾರಕ್ಕಾಗಿ ಅಂತರ-ರಾಜ್ಯ ಮಂಡಳಿಯನ್ನು ಸ್ಥಾಪಿಸಲು ಸಂವಿಧಾನದ 263 ನೇ ವಿಧಿಯ ಅನುಸಾರ ರಾಷ್ಟ್ರಪತಿಗಳಿಗೆ ಅಧಿಕಾರವಿದೆ. ಈ ಸಮಿತಿಯು ರಾಜ್ಯಗಳು ಮತ್ತು ಕೇಂದ್ರದ ನಡುವಿನ ಚರ್ಚೆಯ ವೇದಿಕೆಯಾಗಿರುತ್ತದೆ. ಈ ಮಂಡಳಿಯು ಶಾಶ್ವತ ಸಂಸ್ಥೆಯಾಗಿ ಅಸ್ತಿತ್ವದಲ್ಲಿರಬೇಕೆಂದು 1988ರಲ್ಲಿ ಸರ್ಕಾರಿಯಾ ಆಯೋಗವು ಸಲಹೆ ನೀಡಿತು. 1990ರಲ್ಲಿ ರಾಷ್ಟ್ರಪತಿಗಳ ಸುಗ್ರೀವಾಜ್ಞೆ ಮೂಲಕ ಈ ಸಲಹೆ ಜಾರಿಗೆ ಬಂದಿತು. ರಾಜ್ಯಗಳ ನಡುವೆ ಉದ್ಭವಿಸಬಹುದಾದ ವಿವಾದಗಳನ್ನು ವಿಚಾರಿಸುವುದು ಮತ್ತು ಸಲಹೆ ನೀಡುವುದು; ಕೆಲವು ರಾಜ್ಯಗಳು ಅಥವಾ ಕೇಂದ್ರ ಮತ್ತು ರಾಜ್ಯಗಳು ಆಸಕ್ತಿಯನ್ನು ಹೊಂದಿರುವ ವಿಷಯಗಳ ಕುರಿತು ರ್ಚಚಿಸುವುದು ಹಾಗೂ ಶಿಫಾರಸುಗಳನ್ನು ಮಾಡುವುದು ಈ ಮಂಡಳಿಯ ಕಾರ್ಯಗಳಾಗಿವೆ. 2021ರಲ್ಲಿ ಕೇಂದ್ರ ಸರ್ಕಾರವು ಮಂಡಳಿಯನ್ನು ಪುನರ್​ರಚಿಸಿದ್ದು, ಈಗ ಸಂಸ್ಥೆಯು 10 ಕೇಂದ್ರ ಮಂತ್ರಿಗಳನ್ನು ಶಾಶ್ವತ ಆಹ್ವಾನಿತರನ್ನಾಗಿ ಹೊಂದಿದೆ. ಈ ಮಂಡಳಿಯ ಸ್ಥಾಯಿ ಸಮಿತಿಯನ್ನು ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ಪುನರ್​ರಚಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ಮುಖ್ಯಮಂತ್ರಿಗಳು ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ.

    ಕೇಂದ್ರದ ಮಧ್ಯಸ್ಥಿಕೆ: ಗಡಿ ವಿವಾದಗಳನ್ನು ಪರಿಹರಿಸಲು ಇರುವ ಮಾರ್ಗಗಳ ಪೈಕಿ ಕೇಂದ್ರ ಸರ್ಕಾರದ ಸಂಧಾನವು ಒಂದಾಗಿದೆ. ಕೇಂದ್ರವು ಸಂಧಾನಕಾರನಾಗಿ ಅಥವಾ ತಟಸ್ಥ ಮಧ್ಯವರ್ತಿಯಾಗಿ ಎರಡೂ ಕಡೆಯವರ ಸಹಕಾರದೊಂದಿಗೆ ಅಂತರರಾಜ್ಯ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಬಹುದು. ವಿವಾದಗಳು ಸೌಹಾರ್ದಯುತವಾಗಿ ಪರಿಹಾರ ಕಂಡರೆ, ರಾಜ್ಯ ಗಡಿಗಳನ್ನು ಬದಲಾಯಿಸಲು ಸಂಸತ್ತು ಕಾನೂನನ್ನು ತರಬಹುದು. ಇದಕ್ಕೆ ಉದಾಹರಣೆ: ಬಿಹಾರ – ಉತ್ತರ ಪ್ರದೇಶ (ಗಡಿಗಳ ಬದಲಾವಣೆ) ಕಾಯ್ದೆ 1968 ಮತ್ತು ಹರಿಯಾಣ-ಉತ್ತರ ಪ್ರದೇಶ (ಗಡಿಗಳ ಬದಲಾವಣೆ) ಕಾಯ್ದೆ 1979.

    ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಕನ್ನಡ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಿಗೇ ಅವಮಾನ: ಬೇಸರಗೊಂಡು ಹೊರ ಬಂದ ಜೋಶಿ

    ವಿವಿಧ ರಾಜ್ಯಗಳ ನಡುವಿನ ಗಡಿ ವಿವಾದಗಳು

    ಅಸ್ಸಾಂ-ಮಿಜೋರಾಂ: ಮಿಜೋರಾಂ ಮೊದಲು ಅಸ್ಸಾಂನ ಜಿಲ್ಲೆಯಾಗಿತ್ತು. ನಂತರ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಯಿತು. ತದನಂತರ ಪ್ರತ್ಯೇಕ ರಾಜ್ಯವಾಯಿತು. ಮಿಜೋರಾಂ ರಾಜ್ಯವು ಅಸ್ಸಾಂನ ಕ್ಯಾಚಾರ್, ಹೈಲಕಂಡಿ ಮತ್ತು ಕರೀಂಗಂಜ್ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದಿವಾಸಿಗಳನ್ನು ಹೊರಗಿನವರ ಪ್ರಭಾವದಿಂದ ರಕ್ಷಿಸಲು 1875ರಲ್ಲಿ ಅಧಿಸೂಚಿತ ಪ್ರದೇಶದ ಪ್ರಕಾರ ಗಡಿ ಇರಬೇಕೆಂದು ಮಿಜೋರಾಂ ಪ್ರತಿಪಾದಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಗುರುತಿಸಿರುವಂತೆ ಜಿಲ್ಲೆಯ ಗಡಿರೇಖೆಗಳು ಇರಬೇಕೆಂಬುದು ಅಸ್ಸಾಂ ವಾದವಾಗಿದೆ.

    ಹರಿಯಾಣ-ಹಿಮಾಚಲ ಪ್ರದೇಶ: ಉತ್ತರದ ಈ ಎರಡೂ ರಾಜ್ಯಗಳು ಹರಿಯಾಣದ ಪಂಚಕುಲ ಜಿಲ್ಲೆಗೆ ಹೊಂದಿಕೊಂಡಿರುವ ಪರ್ವಾನೂ ಪ್ರದೇಶದ ಕುರಿತಂತೆ ವಿವಾದ ಹೊಂದಿವೆ. ಈ ಪ್ರದೇಶದ ಬಹುಭಾಗವು ತನಗೆ ಸೇರಿದ್ದು ಎಂದು ಪ್ರತಿಪಾದಿಸುವ ಹರಿಯಾಣ ರಾಜ್ಯವು, ಹಿಮಾಚಲ ಪ್ರದೇಶವು ತನ್ನ ಭೂಮಿಯನ್ನು ಅತಿಕ್ರಮಿಸುತ್ತಿದೆ ಎಂದು ಆರೋಪಿಸಿದೆ.

    ಲಡಾಖ್-ಹಿಮಾಚಲ ಪ್ರದೇಶ: ಲೆಹ್-ಮನಾಲಿ ಹೆದ್ದಾರಿಯ ಪ್ರಮುಖ ನಿಲುಗಡೆ ಸ್ಥಳವೊಂದರ ಮೇಲೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಹಿಮಾಚಲ ಪ್ರದೇಶ ರಾಜ್ಯ ಹಕ್ಕು ಸಾಧಿಸುತ್ತಿವೆ.ಈ ಪ್ರದೇಶವು ಹಿಮಾಚಲದ ಲಾಹೌಲ್ ಜಿಲ್ಲೆ ಮತ್ತು ಲಡಾಖ್​ನ ಲೇಹ್ ಜಿಲ್ಲೆಯ ನಡುವೆ ಇದೆ.

    ಅಸ್ಸಾಂ-ಅರುಣಾಚಲ ಪ್ರದೇಶ: ಈ ರಾಜ್ಯಗಳ ನಡುವೆ 804 ಕಿಮೀ ಅಂತರದ ಗಡಿ ಇದೆ. 1987ರಲ್ಲಿ ರಾಜ್ಯವಾಗಿ ರೂಪುಗೊಂಡ ಅರುಣಾಚಲ ಪ್ರದೇಶವು ಸಾಂಪ್ರದಾಯಿಕವಾಗಿ ತನಗೆ ಸೇರಿದ್ದ ಕೆಲವು ಪ್ರದೇಶಗಳನ್ನು ಅಸ್ಸಾಂಗೆ ನೀಡಲಾಗಿದೆ ಎಂದು ಆಕ್ಷೇಪಿಸುತ್ತಿದೆ. ತ್ರಿಪಕ್ಷೀಯ ಸಮಿತಿಯೊಂದು ಕೆಲವು ಪ್ರದೇಶಗಳನ್ನು ಅಸ್ಸಾಂನಿಂದ ವರ್ಗಾಯಿಸುವಂತೆ ಶಿಫಾರಸು ಮಾಡಿತ್ತು. ಅಂದಿನಿಂದ ಎರಡೂ ರಾಜ್ಯಗಳು ನ್ಯಾಯಾಲಯದಲ್ಲಿ ಹೋರಾಟ ನಡೆಸಿವೆ.

    ಅಸ್ಸಾಂ-ನಾಗಾಲ್ಯಾಂಡ್: 1963ರಲ್ಲಿ ನಾಗಾಲ್ಯಾಂಡ್ ರಚನೆಯಾದಾಗಿನಿಂದಲೂ ಎರಡೂ ರಾಜ್ಯಗಳ ನಡುವೆ ಗಡಿ ವಿವಾದ ಮುಂದುವರಿದಿದೆ. ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಕ್ಕದಲ್ಲಿರುವ ಪುಟ್ಟ ಗ್ರಾಮ ಮೇರಪಾನಿ ಪ್ರದೇಶದ ಮೇಲೆ ಎರಡೂ ರಾಜ್ಯಗಳು ಹಕ್ಕು ಪ್ರತಿಪಾದಿಸುತ್ತಿವೆ. 1860ರಿಂದಲೂ ಕೆಲ ಹಿಂಸಾಚಾರದ ಘಟನೆಗಳು ಈ ಪ್ರದೇಶದಲ್ಲಿ ವರದಿಯಾಗಿವೆ.

    ಅಸ್ಸಾಂ-ಮೇಘಾಲಯ: ಮೇಘಾಲಯವು ತನ್ನ ಗಡಿಗಳ ಕುರಿತಂತೆ ಅಸ್ಸಾಂನೊಂದಿಗೆ ವಿವಾದವಿರುವ ಒಂದು ಡಜನ್ ಪ್ರದೇಶಗಳನ್ನು ಗುರುತಿಸಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಇತ್ತೀಚೆಗೆ ಸಭೆ ನಡೆಸಿ, ಮೇಘಾಲಯ ಗುರುತಿಸಿರುವ ಎಲ್ಲ 12 ಪ್ರದೇಶಗಳ ಹಕ್ಕುಗಳ ಕುರಿತಂತೆ ಪರಿಶೀಲಿಸಲು ನಿರ್ಧರಿಸಲಾಗಿದೆ.

    ಸ್ವಾಮೀಜಿಗಳು ಸಿಎಂ ಯೋಗಿ ಆದಿತ್ಯನಾಥರ ಥರ ಆಗಬಾರದು: ಮುಖ್ಯಮಂತ್ರಿ ಚಂದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts