More

    ತರಹೇವಾರಿ ತರಕಾರಿ ಕೃಷಿ

    ತರಹೇವಾರಿ ತರಕಾರಿ ಕೃಷಿ

    ಶೃಂಗೇರಿ: ಮಲೆನಾಡಲ್ಲಿ ಕೃಷಿಯನ್ನೇ ನಂಬಿ ಜೀವನ ಸಾಗಿಸುವರ ಸಂಖ್ಯೆ ಬಹಳಷ್ಟು. ಅಡಕೆಗೆ ವಿವಿಧ ರೋಗಗಳು ತಗುಲಿದ ಮೇಲೆ ಪರ್ಯಾಯ ಬೆಳೆಗಳತ್ತ ಮುಖ ಮಾಡಿರುವವರ ಪ್ರಮಾಣ ಅಧಿಕ. ಅದರಲ್ಲೂ ತರಕಾರಿ ಬೆಳೆಗೆ ಆದ್ಯತೆ ನೀಡಿದ್ದಾರೆ.

    ಇಂಥವರಲ್ಲಿ ಮರ್ಕಲ್ ಗ್ರಾಪಂನ ತೋರಣಗದ್ದೆ ಕೃಷಿಕ ನಟರಾಜ್ ರಾವ್ 20 ವರ್ಷಗಳಿಂದ ತರಕಾರಿ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ತೋರಿ ಯಶಸ್ಸು ಕಂಡಿದ್ದಾರೆ. ಕೇವಲ ಒಂದು ಎಕರೆ ಭೂಮಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ ತರಹೇವಾರಿ ತರಕಾರಿ ಬೆಳೆದು ಮೂರು ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಇವರನ್ನು ತಾಲೂಕಿನ ಮಾದರಿ ರೈತ ಎಂದರೆ ತಪ್ಪಾಗಲಾರದು.

    ಪ್ರತಿ ವರ್ಷ ಭತ್ತದ ಕೃಷಿ ಮುಗಿದ ನಂತರ ವಿವಿಧ ತರಕಾರಿ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಬೆಂಡೆಕಾಯಿ 35 ಹಾಗೂ ಗದ್ದೆ ಸೌತೆ 12, ಬೀನ್ಸ್ 2, ಹೀರೇಕಾಯಿ 2, ಮೂಲಂಗಿ 2, ಉದ್ದನೆಕೆಂಪು ಬದನೆ 2, ಬೀಟ್ರೂಟ್ ಒಂದು ಕ್ವಿಂಟಾಲ್ ಬೆಳೆಯುತ್ತಾರೆ. ಜತೆಗೆ ಪಾಲಕ್, ಹರಿವೆ, ಕೊತ್ತುಂಬರಿ, ಮೆಂತೆ ಸೊಪ್ಪು ಬೆಳೆಯುತ್ತಿದ್ದಾರೆ.

    ಸಾವಯವ ಗೊಬ್ಬರ ಬಳಕೆ: ತರಕಾರಿ ಬೆಳೆಗೆ ಬಾವಿ ನೀರು ಆಶ್ರಯಿಸಿದ್ದಾರೆ. ಬಿತ್ತನೆ ಮುನ್ನ ಟ್ರ್ಯಾಕ್ಟರ್ ಮೂಲಕ ಮಣ್ಣು ಹದಗೊಳಿಸಿ, ಏರಿ ಮಾಡುತ್ತಾರೆ. ಅಡಕೆ ಸಿಪ್ಪೆಯನ್ನು ಸುಟ್ಟ ಮಣ್ಣಿನೊಂದಿಗೆ ಮಿಶ್ರಣ ಮಾಡಿ, ಸಾವಯವ ಗೊಬ್ಬರ ಬಳಸಿ ಬೀಜ ಬಿತ್ತನೆ ಮಾಡುತ್ತಾರೆ.

    ಬಿತ್ತನೆ ನಂತರ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ನೀರು ಹಾಯಿಸುತ್ತಾರೆ. ಗಿಡಗಳು ಬೆಳೆದ ನಂತರ ದಿನಕ್ಕೊಮ್ಮೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಾರೆ. ಬೆಂಡೆಕಾಯಿ ಅತಿ ಹೆಚ್ಚು ಬೆಳೆಯುವ ಇವರು, ಎರಡು ದಿನಕ್ಕೊಮ್ಮೆ 75 ಕೆ.ಜಿ ಕೊಯ್ಲು ಮಾಡಿ ಮಾರಾಟ ಮಾಡುತ್ತಾರೆ.

    ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಭತ್ತದ ಕೃಷಿ ನಂತರ ಗದ್ದೆಯನ್ನು ಮುಂದಿನ ಮಳೆಗಾಲದವರೆಗೆ ಹಾಳು ಬಿಡಬಾರದು. ಅದೇ ಜಾಗದಲ್ಲಿ ಸಾವಯವ ಗೊಬ್ಬರ ಬಳಸಿ, ವಿವಿಧ ತರಕಾರಿ ಬೆಳೆದು ಆರ್ಥಿಕವಾಗಿ ಸಬಲರಾಗಬಹುದು. ಕೃಷಿ ಕ್ಷೇತ್ರದಲ್ಲಿ ವಾಣಿಜ್ಯ ಬೆಳೆಗಳ ಜತೆಗೆ ಪರ್ಯಾಯವಾಗಿ ವಿವಿಧ ತರಕಾರಿ ಬೆಳೆದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಸಾವಯವ ಗೊಬ್ಬರ ಬಳಕೆಯಿಂದ ತರಕಾರಿಯಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು. ಮಂಗಗಳ ಕಾಟವಿದೆ. ಆದರೆ ಅಲ್ಪಾವಧಿ ತರಕಾರಿ ಬೆಳೆಗಳಿಂದ ಆರ್ಥಿಕ ಲಾಭ ಗಳಿಸಬಹುದು ಎಂಬುದು ನಟರಾಜ್ ಅವರ ಅಭಿಪ್ರಾಯ.

    ಹೈನುಗಾರಿಕೆಯಲ್ಲೂ ಮುಂದು: ತರಕಾರಿ ಕೃಷಿ, ತೋಟಗಾರಿಕೆ ಕೆಲಸಕ್ಕಷ್ಟೇ ಸೀಮಿತವಾಗದ ನಟರಾಜ್ ರಾವ್, ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಬಳಿ 20 ಜರ್ಸಿ ಮತ್ತು ಒಂದು ಗೀರ್ ಹಸು ಇದೆ. ಪ್ರತಿದಿನ 100 ಲೀ. ಹಾಲು ಕರೆಯುವ ಇವರು 7 ಕಿ.ಮೀ ದೂರದಿಂದ ಪಟ್ಟಣಕ್ಕೆ ಆಗಮಿಸಿ ಬೆಳಗ್ಗೆ ಮತ್ತು ಸಂಜೆ ಶ್ರೀಮಠಕ್ಕೆ ಮತ್ತು ವಿವಿಧ ಮನೆಗಳಿಗೆ ಹಾಲು ಪೂರೈಸುತ್ತಾರೆ. ಕೊಟ್ಟಿಗೆ ಗೊಬ್ಬರವನ್ನು ಅಡಕೆ, ಕಾಫಿ, ಕಾಳುಮೆಣಸು ಕೃಷಿಗೆ ಬಳಸುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಾಗಿದೆ. ಬಹುತೇಕ ಕೃಷಿಕರಿಗೆ ತರಕಾರಿ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯ ಆಗದಿರಬಹುದು. ಆದರೆ ಮನೆಗೆ ಬೇಕಾದಷ್ಟು ತರಕಾರಿ ಬೆಳೆಸಬಹುದು. ಸಾವಯವ ಗೊಬ್ಬರದ ಬಳಕೆಯಿಂದ ಆರೋಗ್ಯಕರವಾದ ತರಕಾರಿ ಲಭ್ಯವಾಗುತ್ತದೆ ಎಂಬುದು ನಟರಾಜ್ ಅವರ ಇಂಗಿತ. ಇವರ ಕೃಷಿ ಸಾಧನೆಯನ್ನು ಪರಿಗಣಿಸಿ ಕೃಷಿ ಇಲಾಖೆ 2019-20ರ ಆತ್ಮಯೋಜನೆಯಡಿ ಪುರಸ್ಕರಿಸಿದೆ. ವಿವಿಧ ಸಂಘ ಸಂಸ್ಥೆಗಳು ಕೂಡ ಸನ್ಮಾನಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts