More

    ಮತ್ತೆ ಮೂವರು ಮೃತ್ಯು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮತ್ತೆ ಏರುಗತಿ ಕಂಡಿದ್ದು, ಭಟ್ಕಳದ ಇಬ್ಬರು ಸೇರಿದಂತೆ ಮೂವರು ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಒಂದೇ ದಿನ 84 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

    ಬೆಂಗ್ರೆಯ 72 ವರ್ಷದ ವೃದ್ಧರು ಅಧಿಕ ರಕ್ತದೊತ್ತಡ, ಮಧುಮೇಹ, ಅಸ್ಪಿರೇಶನ್ ನ್ಯುಮೋನಿಯಾ, ಮಿದುಳಿನ ಉರಿಯೂತ ಮತ್ತು ಮಲೇರಿಯಾದಿಂದ ಬಳಲುತ್ತಿದ್ದು ಜೂ.30ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿಯೇ ಮೃತಪಟ್ಟಿದ್ದರು. ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು ಕರೊನಾ ಸೋಂಕು ಪತ್ತೆಯಾಗಿದೆ.

    ಉತ್ತರ ಕನ್ನಡದ ಭಟ್ಕಳದ 31 ವರ್ಷದ ಯುವಕ ತೀವ್ರ ಉಸಿರಾಟದ ತೊಂದರೆಯೊಂದಿಗೆ ಖಾಸಗಿ ಆಸ್ಪತ್ರೆಗೆ ಜೂ.30ರಂದು ದಾಖಲಿಸಲಾಗಿ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿಯೇ ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ನ್ಯುಮೋನಿಯಾ, ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ 76 ವರ್ಷದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವ ಮಾದರಿಯಲ್ಲೂ ಕರೊನಾ ಸೋಂಕು ದೃಢಪಟ್ಟಿದೆ. ಭಟ್ಕಳದ ಯುವಕನಿಗೆ ಒಂದು ವಾರದ ಹಿಂದೆಯಷ್ಟೇ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.

    ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 49 ವರ್ಷದ ರೋಗಿ ಡಯಾಬಿಟಿಸ್, ನ್ಯುಮೋನಿಯಾದಿಂದ ಬಳಲುತ್ತಿದ್ದು ಐಸಿಯುನಲ್ಲಿ ಸ್ಥಿತಿ ಸುಧಾರಣೆಯಾದ ಕಾರಣ ಅವರನ್ನು ವಾರ್ಡಿಗೆ ಸ್ಥಳಾಂತರಿಸಲಾಗಿದೆ. 39 ವರ್ಷದ ನ್ಯುಮೋನಿಯಾದಿಂದ ಬಳಲುತ್ತಿದ್ದ ರೋಗಿಯನ್ನು ಐಸಿಯುನಲ್ಲಿ ಇರಿಸಲಾಗಿದ್ದು ಸ್ಥಿತಿ ಸುಧಾರಿಸಿದ ಕಾರಣ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಪ್ರಸ್ತುತ ಮೂವರು ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಾರ್ಜಾದಿಂದ ಬಂದವರು ಆಸ್ಪತ್ರೆಗೆ: ಬುಧವಾರದ ವರದಿಯಂತೆ 6 ಮಂದಿ ಶಾರ್ಜಾದಿಂದ ಬಂದವರು ಹಾಗೂ ಒಬ್ಬರು ಮುಂಬೈನಿಂದ ಮರಳಿರುವ ಪ್ರಯಾಣಿಕರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. 28 ಮಂದಿ ಇನ್‌ಫ್ಲುಯೆಂಜಾ ಮಾದರಿಯ ಕಾಯಿಲೆಯಿದ್ದವರಿಗೆ ಪಾಸಿಟಿವ್ ಬಂದಿದೆ. 38 ಮಂದಿ ಪ್ರಥಮ ಸಂಪರ್ಕದಿಂದ ಸೋಂಕು ತಗಲಿದವರಿದ್ದಾರೆ. 11 ಮಂದಿಯ ಸಂಪರ್ಕ ಶೋಧ ನಡೆಯುತ್ತಿದೆ. ಬುಧವಾರದ ವೇಳೆಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 833ಕ್ಕೆ ಏರಿಕೆಯಾಗಿದೆ. 372 ಸಕ್ರಿಯ ಪ್ರಕರಣಗಳಿವೆ. ಬುಧವಾರದ ಒಂದು ಕೇಸ್ ಸೇರಿದಂತೆ ಒಟ್ಟು 444 ಮಂದಿ ಬಿಡುಗಡೆಯಾಗಿದ್ದಾರೆ.

    ಸುಳ್ಯ ಸರ್ಕಾರಿ ಆಸ್ಪತ್ರೆ ಐಸಿಯು ಸೀಲ್‌ಡೌನ್: ಸರ್ಕಾರಿ ಆಸ್ಪತ್ರೆಯ ನರ್ಸ್‌ಗೆ ಕರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆ ಐಸಿಯು ಸೀಲ್‌ಡೌನ್ ಮಾಡಲಾಗಿದೆ. ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಎರಡು ದಿನದ ಹಿಂದೆ ಕರೊನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯದ ಆಸ್ಪತ್ರೆಯ 13 ನರ್ಸ್‌ಗಳ ಗಂಟಲ ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬಂದಾಗ ಆ ರೋಗಿಗೆ ಚಿಕಿತ್ಸೆ ನೀಡಿದ ಐಸಿಯು ಘಟಕದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಗೆ ಸೋಂಕು ಪತ್ತೆಯಾಗಿದೆ. ಉಳಿದ 12 ಮಂದಿಯ ವರದಿ ನೆಗೆಟಿವ್ ಬಂದಿದೆ. ಐಸಿಯು ಮತ್ತು ಡಯಾಲಿಸಿಸ್ ವಿಭಾಗವನ್ನು 48 ಗಂಟೆ ಸೀಲ್‌ಡೌನ್ ಮಾಡಿ, ಸ್ಯಾನಿಟೈಸ್ ಬಳಿಕ ತೆರೆಯಲಾಗುವುದು. ಆಸ್ಪತ್ರೆಯ ಉಳಿದ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

    ಬಜ್ಪೆ ಪೊಲೀಸ್ ಠಾಣೆ ಸೀಲ್‌ಡೌನ್: ಬಜ್ಪೆ ಠಾಣಾ ವ್ಯಾಪ್ತಿಯ ಎಂಎಸ್‌ಇಝಡ್ ಕಾಲನಿಯ ಒಡ್ಡಿದಕಲ ಎಂಬಲ್ಲಿ ಜೂ.3ರಂದು ದನ ಕಳವು ಹಾಗೂ ದರೋಡೆ ಹೊಂಚು ಹಾಕಿದ್ದ ಆರೋಪದಲ್ಲಿ ಬಂಧಿತರಾದ ಒಬ್ಬರು ಆರೋಪಿಗಳಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಬಜ್ಪೆ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಯಿತು.
    ಠಾಣೆಯಲ್ಲಿ ಒಟ್ಟು 51 ಪೊಲೀಸ್ ಸಿಬ್ಬಂದಿ ಇದ್ದು, ಇವರಲ್ಲಿ ಆರೋಪಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಎಂಟು ಪೊಲೀಸರು ಹೋಂ ಕ್ವಾರಂಟೈನ್ ಆಗಿದ್ದಾರೆ. 48 ಗಂಟೆವರೆಗೆ ಠಾಣೆಯ ಹೊರಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬಜ್ಪೆ ಗ್ರಾಪಂ ಪಿಡಿಒ ಸಾಯೀಶ್ ಚೌಟ ತಿಳಿಸಿದರು.

    ದ.ಕ.ಡಿಸಿ ಕಚೇರಿ 3 ದಿನ ಬಂದ್: ಜುಲೈ 3ರಿಂದ 5ರವರೆಗೆ ದ.ಕ.ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳನ್ನೂ ಸ್ಯಾನಿಟೈಸ್ ಮಾಡುವ ಕಾರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

    31ರವರೆಗೆ ರಾತ್ರಿ ನಿಷೇಧಾಜ್ಞೆ: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಅನವಶ್ಯಕ ಓಡಾಟ ತಡೆಯುವ ಉದ್ದೇಶದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಜುಲೈ 31ರವರೆಗೆ ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಮರ್ದಾಳ 7 ಮನೆ ಸೀಲ್‌ಡೌನ್: ಇಲ್ಲಿನ ಕರೊನಾ ವಾರಿಯರ್‌ಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತ ಮಹಿಳೆ ಭೇಟಿ ನೀಡಿದ್ದಾರೆ ಎನ್ನಲಾದ ಮರ್ದಾಳದ ಚಿಕನ್ ಸೆಂಟರ್ ಸೀಲ್‌ಡೌನ್ ಮಾಡಲಾಗಿದೆ. ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ನರ್ಸ್‌ಗೆ ಸೋಂಕು ದೃಢಪಟ್ಟಿದೆ. ಮಹಿಳೆ ವಾಸವಿದ್ದ ಪ್ರದೇಶದ 100 ಮೀಟರ್ ವ್ಯಾಪ್ತಿಯ ಕೊಲಂತಾಡಿ ಅಂಗನವಾಡಿ, ಮರ್ದಾಳ ಕೋಳಿ ಅಂಗಡಿ, ಕೊಲಂತಾಡಿ ಆರೋಗ್ಯ ಕೇಂದ್ರ ಹಾಗೂ ಏಳು ಮನೆಗಳನ್ನೂ ಸೀಲ್‌ಡೌನ್ ಮಾಡಲಾಗಿದೆ.

    ಕಾಸರಗೋಡಿನ 10 ಜನರಿಗೆ ಕಾಯಿಲೆ : ಜಿಲ್ಲೆಯ 10 ಮಂದಿ ಸಹಿತ ಕೇರಳದಲ್ಲಿ 151 ಮಂದಿಗೆ ಬುಧವಾರ ಕರೊನಾ ಸೋಂಕು ದೃಢಪಟ್ಟಿದೆ. ರೋಗ ಬಾಧಿತರಲ್ಲಿ 86 ಮಂದಿ ವಿದೇಶದಿಂದ ಹಾಗೂ 81 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಸಂಪರ್ಕದ ಮೂಲಕ 13 ಮಂದಿಗೆ ಸೋಂಕು ತಗುಲಿದೆ. ಚಿಕಿತ್ಸೆಯಲ್ಲಿದ್ದ ಕಾಸರಗೋಡಿನ 16 ಮಂದಿ ಒಳಗೊಂಡಂತೆ ಕೇರಳದಲ್ಲಿ 136 ಮಂದಿ ರೋಗಮುಕ್ತರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts