More

    ಕಾರ್ವಿುಕರ ಪ್ರಯಾಣ ವ್ಯವಸ್ಥೆಯೇ ಅವ್ಯವಸ್ಥೆ: ಊರಿಗೆ ತೆರಳಲು ಮೆಜೆಸ್ಟಿಕ್​ಗೆ ಬಂದ ಸಾವಿರಾರು ಜನರು 

    ಅವಿನಾಶ ಮೂಡಾಂಬಿಕಾನ ಬೆಂಗಳೂರು

    ಕರೊನಾ ಲಾಕ್​ಡೌನ್ ಪರಿಣಾಮ ತಿಂಗಳಿಂದ ವೇತನವೂ ಇಲ್ಲದೆ, ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕಾರ್ವಿುಕರರನ್ನು ಊರಿಗೆ ಕಳುಹಿಸಲು ಮಾಡಿದ್ದ ಕೆಎಸ್​ಆರ್​ಟಿಸಿ ಬಸ್ ವ್ಯವಸ್ಥೆಯೇ ಅವ್ಯವಸ್ಥೆಯಾಗಿ ಮಾರ್ಪಟ್ಟಿತ್ತು.

    ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬೆಳಗ್ಗೆಯಿಂದ ಜಮಾಯಿಸತೊಡಗಿದ ಸಾವಿರಾರು ಕಾರ್ವಿುಕರು ಪ್ರಯಾಣ ದರ ದುಪ್ಪಟ್ಟಾಗಿದ್ದನ್ನು ಕೇಳಿ ಬೆಚ್ಚಿಬಿದ್ದರು. ಆದರೂ ಬೇರೆ ವಿಧಿ ಇಲ್ಲದೇ ಕೇಳಿದಷ್ಟು ಟಿಕೆಟ್ ಹಣ ತೆತ್ತು ಪ್ರಯಾಣಿಸಿದರು. ಹೇಗಾದರೂ ಮಾಡಿ ಊರಿಗೆ ಹೋಗಬೇಕು ಎಂಬ ಧಾವಂತದಲ್ಲಿದ್ದ ಜನರು ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮಗಳನ್ನು ಗಾಳಿಗೆ ತೂರಿ ದಂತಿತ್ತು. ಇಷ್ಟಾದರೂ ತಮಗೂ- ಜನಜಂಗುಳಿಗೂ ಸಂಬಂಧವಿಲ್ಲ ಎಂಬಂತೆ ಈ ದೃಶ್ಯ ನೋಡುತ್ತಿದ್ದ ಕೆಎಸ್​ಆರ್​ಟಿಸಿ ಸಿಬ್ಬಂದಿ, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಕಂಡು ಬಂತು.

    ಇದನ್ನೂ ಓದಿ ಕೋತಿಗಳೇ ಮದ್ಯ ಕುಡಿದಿವೆ!..ಈ ಉತ್ತರ ನಂಬಬಹುದಾ?

    ದೇಹದ ಉಷ್ಣಾಂಶ ಪರೀಕ್ಷೆ: ಕಾರ್ವಿುಕರು ಬಸ್ ಏರುವ ಮುನ್ನ ಅವರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರತಿಯೊಬ್ಬರ ದೇಹದ ಉಷ್ಣಾಂಶ ಪರೀಕ್ಷೆ (ಥರ್ಮಲ್ ಸ್ಕ್ರೀನಿಂಗ್) ಮಾಡಿದ ಬಳಿಕವೇ ಬಸ್ ಹತ್ತಲು ಅನುಮತಿ ನೀಡಲಾಯಿತು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಿರಲಿಲ್ಲ.

    ಒಂದು 30 ಮಂದಿಷ್ಟೇ ಅವಕಾಶ: 55 ಸೀಟುಗಳ ಬಸ್​ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಬಗ್ಗೆ ಪ್ರಶ್ನಿಸುತ್ತಿದ್ದ ಪ್ರಯಾಣಿಕರಿಗೆ, ಬೇಕಾದರೆ 30 ಪ್ರಯಾಣಿಕರ ಟಿಕೆಟ್ ಒಬ್ಬರೇ ನೀಡಿ ಪ್ರಯಾಣಿಸಬಹುದು ಎಂದು ಸಿಬ್ಬಂದಿ ಉತ್ತರ ನೀಡುತ್ತಿರುವುದು ಕಂಡುಬಂತು. ಜನರು ತಮ್ಮ ಜಿಲ್ಲೆಗೆ ಬರುವವರನ್ನು ಪಟ್ಟಿ ಮಾಡಿ, ಅವರಿಂದ ಟಿಕೆಟ್ ಹಣ ಪಡೆದು ಕೌಂಟರ್​ನಲ್ಲಿ ಕೊಡುತ್ತಿದ್ದರು. ಇದಾದ ಬಳಿಕ ಕೆಎಸ್​ಆರ್​ಟಿಸಿ ಸಿಬ್ಬಂದಿ ಆಯಾ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸುತ್ತಿದ್ದರು. ಇದರಿಂದಾಗಿ ಜನರು ಬಸ್​ಗಾಗಿ ಮುಗಿಬೀಳುವುದು ಅನಿವಾರ್ಯವಾಗಿತ್ತು. ಅಗತ್ಯ ತಯಾರಿ ಮಾಡದೇ ಅರಾಜಕ ವ್ಯವಸ್ಥೆ ಕಾರಣವಾಗಿದ್ದ ಕೆಎಸ್​ಆರ್​ಟಿಸಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿತ್ತು. ಎಂದು ಕೆಎಸ್​ಆರ್​ಟಿಸಿ ಸಿಬ್ಬಂದಿ ಪ್ರಯಾಣಿಕರಿಗೆ ಹೇಳುತ್ತಿದ್ದರು.

    ರಾಜಧಾನಿಯಿಂದ ಬೇರೆ ಜಿಲ್ಲೆಗಳಿಗೆ ತೆರಳುವವರನ್ನು ಮಾರ್ಗಮಧ್ಯೆ ಇಳಿಸುವಂತಿಲ್ಲ. ಆಯಾ ಜಿಲ್ಲೆಗಳಿಗೆ ಬಸ್ ತಲುಪಿದ ಬಳಿಕ, ಅಲ್ಲಿ ಮತ್ತೊಮ್ಮೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಿಯೇ ಪ್ರಯಾಣಿಕರನ್ನು ಕಳುಹಿಸಲಾಗುತ್ತದೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದರು.

    ತಾಸುಗಟ್ಟಲೆ ಕಾದರು: ಬೆಂಗಳೂರಿನ ವಿವಿಧೆಡೆ ನೆಲೆಸಿರುವ ಕೂಲಿ ಕಾರ್ವಿುಕರು ಬಸ್​ಗಳ ಓಡಾಟವಿಲ್ಲದೇ ಮೆಜೆಸ್ಟಿಕ್​ಗೆ ಬರಲು ಹರಸಾಹಸ ಪಡಬೇಕಾಯಿತು. ಹಲವು ಕಾರ್ವಿುಕರು ಸಣ್ಣ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ನಗರದ ವಿವಿಧೆಡೆಯಿಂದ ಕಾಲ್ನಡಿಗೆ ಮೂಲಕವೇ ಬಸ್ ನಿಲ್ದಾಣಕ್ಕೆ ಬಂದಿದ್ದರು. ವೃದ್ಧರು, ಮಕ್ಕಳು, ಯುವಕರೆನ್ನದೇ ತಾಸುಗಟ್ಟಲೆ ಕಾಯಬೇಕಾಯಿತು.

    ಇದನ್ನೂ ಓದಿ ಊಟಕ್ಕೂ ಇಲ್ಲದೆ ಬ್ರಿಟನ್​ನಲ್ಲಿ ಭಾರತೀಯ ವಿದ್ಯಾರ್ಥಿಗಳ ಕಣ್ಣೀರು!

    ಮಧ್ಯಾಹ್ನದ ನಂತರ ‘ಸಿಂಗಲ್ ಫೇರ್’: ಗೊಂದಲದ ವಾತಾವರಣದ ನಂತರ ಕಾರ್ವಿುಕರ ಕಷ್ಟ ಅರಿತ ಸರ್ಕಾರ, ಮಧ್ಯಾಹ್ನದ ವೇಳೆ ವಿಶೇಷ ದರಕ್ಕೆ ಬದಲಾಗಿ ಸಾಮಾನ್ಯ ದರ ನಿಗದಿಪಡಿಸಿ ಕಾರ್ವಿುಕರನ್ನು ಊರುಗಳಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಿತು. ಸಿಂಗಲ್ ಫೇರ್​ನಲ್ಲೇ (ಒಂದು ಕಡೆಯ ಪ್ರಯಾಣ ದರ) ಊರಿಗೆ ತೆರಳಲು ಅನುವು ಮಾಡಿಕೊಟ್ಟಿರುವುದಾಗಿ ಸಚಿವ ಸುರೇಶ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಚರ್ಚೆ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಮತ್ತೊಂದು ಕಡೆ ದರವನ್ನು (ಬಸ್ ವಾಪಾಸ್ಸಾಗುವ) ಕಾರ್ವಿುಕ ಇಲಾಖೆ ಭರಿಸಲಿದೆ ಎನ್ನಲಾಗುತ್ತಿದೆ.

    ಇಂದು 100 ಬಸ್​ಗಳ ವ್ಯವಸ್ಥೆ

    ಭಾನುವಾರ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ 100 ಬಸ್ ವ್ಯವಸ್ಥೆ ಮಾಡಲು ಕೆಎಸ್​ಆರ್​ಟಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಜನ ಸಂಖ್ಯೆಗೆ ಅನುಗುಣವಾಗಿ ಬಸ್ ಕಲ್ಪಿಸುವ ಸಾಧ್ಯತೆಗಳಿವೆ. ಶನಿವಾರ ಮೆಜೆಸ್ಟಿಕ್​ನ ಕೆಂಪೇಗೌಡ ಬಸ್ ನಿಲ್ದಾಣದಿಂದ 120 ಬಸ್​ಗಳು ಯಾದಗಿರಿ, ಬಾಗಲಕೋಟೆ, ಶಿವಮೊಗ್ಗ, ವಿಜಯಪುರ, ಕಲಬುರಗಿ, ರಾಯಚೂರು ಸೇರಿ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸಿದವು. ಪ್ರತಿ ಬಸ್​ನಲ್ಲಿ 30ರಂತೆ 3,600 ಜನ ಪ್ರಯಾಣ ಮಾಡಿದ್ದಾರೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಸಿಗದೆ ರಾತ್ರಿವರೆಗೂ ಕಾರ್ವಿುಕರು ನಿಲ್ದಾಣದಲ್ಲೇ ಕಾಲ ಕಳೆದಿದ್ದ್ದಾರೆ.

    ಅಂತರ ಕಾಪಾಡಲು ಬಿಎಂಟಿಸಿ ನಿಲ್ದಾಣಕ್ಕೆ ಸ್ಥಳಾಂತರ

    ಕೆಎಸ್​ಆರ್​ಟಿಸಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ಸುಗಳ ಕಾರ್ಯಚರಣೆಯನ್ನು ಬಿಎಂಟಿಸಿ ಬಸ್ ನಿಲ್ದಾಣಕ್ಕೆ (ಮೆಜೆಸ್ಟಿಕ್)ಸ್ಥಳಾಂತರ ಮಾಡಲಾಗಿದೆ. ಸಾಮಾಜಿಕ ಸಾಮಾಜಿಕ ಅಂತರ ಕಾಪಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಬಸ್ ವ್ಯವಸ್ಥೆಯು (ಕೆಂಪು ವಲಯ ಹೊರತು ಪಡಿಸಿ) ಬೇರೆ ಸ್ಥಳಗಳಿಗೆ ತೆರಳಲಿದೆ.

    ದರ ಏರಿಕೆ

    ಬಾಗಲಕೋಟೆಗೆ 1,311 ರೂ., ಬಳ್ಳಾರಿಗೆ 884, ಶಿವಮೊಗ್ಗಕ್ಕೆ 847, ಬೆಳಗಾವಿಗೆ 1,478, ಧಾರವಾಡಕ್ಕೆ 1,239, ದಾವಣಗೆರೆಗೆ 771 ರೂ., ಗದಗಕ್ಕೆ 1,070, ಮೈಸೂರು 390, ಬಿದರ್​ಗೆ 1,984 ಸೇರಿ ಎಲ್ಲ ಜಿಲ್ಲೆಗಳಿಗೂ ಹೆಚ್ಚಿನ ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಮಧ್ಯಾಹ್ನದ ನಂತರ ಸಾಮಾನ್ಯ ದರ ನಿಗದಿಪಡಿಸಲಾಯಿತು.

    ಇದನ್ನೂ ಓದಿ ಉ.ಪ್ರ.ದಲ್ಲಿ 30 ಕನ್ನಡಿಗರು ಅತಂತ್ರ; ಟ್ರಾವೆಲ್ ಏಜೆನ್ಸಿ ಮೂಲಕ ಪ್ರವಾಸ ಹೋಗಿದ್ದರು

    ಒಬ್ಬೊಬ್ಬ ಕಾರ್ವಿುಕನ ಕತೆ ಒಂದೊಂದು..

    ಬಸ್ ನಿಲ್ದಾಣಕ್ಕೆ ಬಂದಿದ್ದ ಒಬ್ಬೊಬ್ಬ ಕಾರ್ವಿುಕನ ಕಥೆಯೂ ಒಂದೊಂದು ರೀತಿಯದ್ದು. ಬನಶಂಕರಿಯಿಂದ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ನಡೆದು ಬಂದಿದ್ದೇನೆ. ಚಿತ್ರದುರ್ಗಕ್ಕೆ ತೆರಳಲು ಬಸ್ ಸಿಗದೇ ಕಾಯಬೇಕಾಗಿದೆ ಎಂದು ಅಡುಗೆ ಕೆಲಸ ಮಾಡುವ ಚಂದ್ರಮ್ಮ ಅಳಲು ತೋಡಿಕೊಂಡರು. ಬೆಂಗಳೂರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಡೆಸುತ್ತಿದ್ದೆ. ಣಗ ಬೀದರ್​ಗೆ ಹಿಂದಿರುಗುತ್ತಿದ್ದೇನೆ. ಪೋಲಿಯೋದಿಂದ ನಡೆಯಲಾಗುತ್ತಿಲ್ಲ, ಬಸ್​ಗಾಗಿ ಹೇಗೆ ಹುಡುಕಬೇಕೆಂಬುದೇ ಗೊತ್ತಾಗುತ್ತಿಲ್ಲ ಎಂದು ಎಂಬುದು ಬೀದರ್​ಗೆ ಹೊರಟಿರುವ ಗೌಸಿದ್ದೀನ್ ಮಾತು.

    ಆಯಾ ಜಿಲ್ಲೆಗೆ ತೆರಳುವ ಬಸ್​ಗಳು ನಿಗದಿತ ಸ್ಥಳದಲ್ಲಿ ನಿಂತಿವೆ. 30 ಪ್ರಯಾಣಿಕರು ಭರ್ತಿಯಾದ ಕೂಡಲೇ ಬಸ್ ಬಿಡುತ್ತೇವೆ. ಸುರಕ್ಷಿತವಾಗಿ ಕಾರ್ವಿುಕರನ್ನು ಊರಿಗೆ ತಲುಪಿಸುವುದು ನಮ್ಮ ಕರ್ತವ್ಯ.

    | ಶ್ರೀನಿವಾಸ್ ಕೆಎಸ್​ಆರ್​ಟಿಸಿ ನಿರೀಕ್ಷಕ

    ಕೆಲ ಸಮಯದ ಹಿಂದೆ ಕಲಬುರಗಿಯಿಂದ ನಗರಕ್ಕೆ ಬಂದು ಗಾರೆ ಕೆಲಸ ಮಾಡುತ್ತಿದ್ದೆ. ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಮಕ್ಕಳೊಂದಿಗೆ ಮತ್ತೆ ಕಲಬುರಗಿಗೆ ಹಿಂದಿರುಗಲು ಬಸ್​ಗಾಗಿ ಕಾದು ಕಾದು ಸುಸ್ತಾಗಿದೆ.

    | ರೇಷ್ಮಾ ಕಲಬುರಗಿ

    ಲಾಕ್​ಡೌನ್​ನಿಂದ ಶಿವಮೊಗ್ಗದಲ್ಲಿರುವ ಮನೆಗೆ ಹೋಗಲಾಗದೇ ಬೆಂಗಳೂರಿನಲ್ಲೇ ಸಿಕ್ಕಿಹಾಕಿಕೊಂಡಿದ್ದೆ.

    ಇದೀಗ ಊರಿಗೆ ಹೋಗಲು ಅವಕಾಶ ಕಲ್ಪಿಸಿರುವುದು ಒಳ್ಳೆಯ ನಿರ್ಧಾರ.

    | ಪ್ರದೀಪ್ ಶಿವಮೊಗ್ಗ

    ನನಗೆ ವಯಸ್ಸಾಗಿದ್ದು, ಇಷ್ಟೊಂದು ದೂರು ನಡೆದುಕೊಂಡು ಬರುವುದು ಕಷ್ಟವಾಯಿತು. ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ. ಈಗ ಯಾವುದೇ ಆಶಾಭಾವವಿಲ್ಲ. ಊರಿಗೆ (ಚಳ್ಳಕೆರೆ) ತೆರಳುವುದು ಅನಿವಾರ್ಯ. ಆದರೆ, ಹೆಚ್ಚಿನ ಟಿಕೆಟ್ ದರ ನೋಡಿ ಕಂಗಾಲಾಗುತ್ತಿದೆ.

    | ಶಾಂತಮ್ಮ ಚಳ್ಳಕೆರೆ

    ಇದನ್ನೂ ಓದಿ ಕೊವಿಡ್​ -19 ಚಿಕಿತ್ಸೆಗಾಗಿ ಬಳಸುತ್ತಿರುವ ಪಿಪಿಇ ಕಿಟ್​ ಕಳಪೆ; ಹೈಕೋರ್ಟ್​ ಮೆಟ್ಟಿಲೇರಿದೆ ಅಕ್ರಮ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts