ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ‘ಹೀರೋ ಚಿತ್ರ ಬಿಡುಗಡೆ ಯಾದ ಮೂರೇ ಮೂರು ದಿನಕ್ಕೆ ಚಿತ್ರದ ಪೈರಸಿ ಕಾಪಿ ಬಿಡುಗಡೆಯಾಗಿತ್ತು. ಕೊನೆಗೆ ರಿಷಬ್ ಮತ್ತು ತಂಡದವರು ಆಂಟಿ ಪೈರಸಿ ವಿಭಾಗದವರ ಜತೆಗೆ ಕುಳಿತು ಆನ್ಲೈನ್ನಲ್ಲಿ ಪೈರಸಿ ಲಿಂಕ್ಗಳನ್ನು ತೆಗೆಸಿಹಾಕಿದರು. ಆದರೂ ಪೈರಸಿಯಿಂದ ಸಾಕಷ್ಟು ಸಮಸ್ಯೆಯಾಗಿದೆ ಮತ್ತು ಅದನ್ನು ಪ್ರೋತ್ಸಾಹಿಸಬೇಡಿ ಎಂದು ರಿಷಬ್ ಶೆಟ್ಟಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು.
ಈಗ ‘ರಾಬರ್ಟ್’ ನಿರ್ಮಾಪಕ ಉಮಾಪತಿ ಅವರ ಸರದಿ. ಉಮಾಪತಿ ಮನವಿ ಮಾಡಿಲ್ಲ, ಎಚ್ಚರಿಕೆ ನೀಡಿದ್ದಾರೆ. ಯಾರಾದರೂ, ಪೈರಸಿ ಮಾಡಿ ಸಿಕ್ಕಿಹಾಕಿಕೊಂಡಲ್ಲಿ ಪರಿಣಾಮ ಘೋರವಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ದಯವಿಟ್ಟು ಪೈರಸಿ ಮಾಡಬೇಡಿ. ಮಾಡಿದರೆ ಪರಿಣಾಮ ಘೋರವಾಗಿರುತ್ತದೆ. ನಾನಂತೂ ಪೈರಸಿ ವಿರುದ್ಧ ಬಂಡೆ ತರಹ ನಿಂತುಕೊಳ್ಳುತ್ತೇನೆ. ಯಾರಾದರೂ ಪೈರಸಿ ಮಾಡಿ ಸಿಕ್ಕಿಹಾಕಿಕೊಂಡರೆ, ಅವರನ್ನು ಕೋರ್ಟೂ-ಕಚೇರಿ ಅಂತ ಅಲೆಸಿ, ಅಲ್ಲೇ ತಮ್ಮ ಜೀವನವನ್ನು ಕಳೆಯುವಂತೆ ಮಾಡುತ್ತೇನೆ. ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ. ಸಿನಿಮಾ ಮಾಡಿರುವುದೇ ಜನ ನೋಡಲಿ ಎಂದು. ಹಾಗಾಗಿ ದಯವಿಟ್ಟು ಸಹಕರಿಸಿ ಮತ್ತು ಯಾವುದೇ ಕಾರಣಕ್ಕೂ ಪೈರಸಿಯನ್ನು ಪ್ರೋತ್ಸಾಹಿಸಬೇಡಿ’ ಎಂದು ಅವರು ಹೇಳಿದ್ದಾರೆ.