More

    ಬಹುಮುಖ ಪ್ರತಿಭೆಯ ವೃತ್ತಿರಂಗದ ಸಕಲ ಕಲಾವಲ್ಲಭರು; ಈ ಜಗತ್ತಿನಲ್ಲಿದೆ ಬಹುಶ್ರುತರ ಅಗತ್ಯ

    ­­| ಸುಧೀಶ್‌ ವೆಂಕಟೇಶ್‌, ಮುಖ್ಯ ಸಂವಹನ ಅಧಿಕಾರಿ, ಅಜೀಂ ಪ್ರೇಮ್‌ಜಿ ಫೌಂಡೇಷನ್

    ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರದಲ್ಲಿ ಕ್ಯಾಪ್ಟನ್‌ ಗೋಪಿನಾಥ್‌ ಅವರು ಮಾತನಾಡುವುದನ್ನು ನಾನು ಕೇಳಿಸಿಕೊಂಡೆ. ಕ್ಯಾಪ್ಟನ್‌ ಗೋಪಿನಾಥ್‌ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪಳಗಿದವರು. ಒಬ್ಬ ಸೈನಿಕನಾಗಿ, ರೈತನಾಗಿ ಹಾಗೂ ಉದ್ಯಮಿಯಾಗಿ ತನ್ನ ಛಾಪನ್ನು ಇವರು ಮೂಡಿಸಿದ್ದಾರೆ. ನನಗೆ ಒಂದು ಬೃಹತ್‌ ಐ.ಟಿ. ಸಂಸ್ಥೆಯ ಎಚ್‌.ಆರ್‌ ಮುಖ್ಯಸ್ಥರ ಪರಿಚಯವಿದೆ. ಬಿಡುವಿಲ್ಲದ ತನ್ನ ಉದ್ಯೋಗದ ನಡುವೆಯೂ ಪಿ.ಎಚ್‌.ಡಿ ಮಾಡಿ ಮುಗಿಸಿರುವ ಇವರು ನಿರಂತರವಾಗಿ ಮ್ಯಾರಥಾನ್​ನಲ್ಲಿ ಪಾಲ್ಗೊಳ್ಳುತ್ತಾರೆ. ನನ್ನ ಕೆಲಸದ ಕಾರಣ ಬೇರೆ ಬೇರೆ ಕೆಲಸಗಳನ್ನು ಚೆನ್ನಾಗಿ ಮಾಡಿರುವ ಅನೇಕ ಜನರನ್ನು ಭೇಟಿಯಾಗಲು ಹಾಗೂ ಅವರನ್ನು ಬಹಳವಾಗಿ ಮೆಚ್ಚಿಕೊಳ್ಳಲು ನನಗೆ ಅವಕಾಶ ದೊರೆಯುತ್ತದೆ. ಹೀಗಾಗಿಯೇ ʻಎಲ್ಲ ವಿಷಯಗಳನ್ನು ಅರಿತುಕೊಂಡ, ಆದರೆ ಯಾವುದೇ ವಿಷಯದ ಮೇಲೂ ಪರಿಣತಿ ಸಾಧಿಸದ ವ್ಯಕ್ತಿ ಎನಿಸಬೇಡʼ ಎನ್ನುವ ಸಾಮಾನ್ಯ ಎಚ್ಚರಿಕೆಯನ್ನು ಮರುಮೌಲ್ಯಮಾಪನಕ್ಕೆ ಒಳಪಡಿಸುವ ಅಗತ್ಯವಿದೆ ಎಂದು ನನಗನಿಸಿದೆ.

    ವ್ಯಕ್ತಿಗಳು ಬಹು ಅಂತ:ಸ್ಸತ್ತ್ವಗಳನ್ನು ಹೊಂದಿರುತ್ತಾರೆ: ಅಮೆರಿಕದ ಲೇಖಕ ರಾಬರ್ಟ್‌ ಎ. ಹೀನ್ಲಿನ್‌ ಅವರು ತನ್ನ ʻಟೈಮ್‌ ಎನಫ್‌ ಫಾರ್‌ ಲವ್‌ʼ ಎಂಬ ವೈಜ್ಞಾನಿಕ ಕಾಲ್ಪನಿಕ ಕಾದಂಬರಿಯಲ್ಲಿ ಹೀಗೆ ಹೇಳುತ್ತಾರೆ: “ಮಾನವನಿಗೆ ಡಯಾಪರ್‌ (ಕೂಸಿನ ಕೌಪೀನ) ಬದಲಾಯಿಸುವ, ದಾಳಿಗೆ ಯೋಜನೆ ರೂಪಿಸುವ, ಹಂದಿಯನ್ನು ಕಡಿಯುವ, ಹಡಗನ್ನು ನಿರ್ದೇಶಿಸುವ, ಕಟ್ಟಡವನ್ನು ವಿನ್ಯಾಸಗೊಳಿಸುವ, ಚತುರ್ದಶಪದಿ (ಸುನೀತ) ಬರೆಯುವ, ಲೆಕ್ಕಪತ್ರಗಳನ್ನು ಸಂತುಲನಗೊಳಿಸುವ, ಗೋಡೆಯನ್ನು ನಿರ್ಮಿಸುವ, ಮುರಿದ ಎಲುಬುಗಳನ್ನು ಜೋಡಿಸುವ, ಸಾಯುವವರಿಗೆ ಸಾಂತ್ವನ ಹೇಳುವ, ಆದೇಶಗಳನ್ನು ತೆಗೆದುಕೊಳ್ಳುವ, ಆದೇಶಗಳನ್ನು ನೀಡುವ, ಸಹಕರಿಸುವ, ಏಕಾಂಗಿಯಾಗಿ ಕಾರ್ಯನಿರ್ವಹಿಸುವ, ಸಮೀಕರಣಗಳನ್ನು ಬಿಡಿಸುವ, ಹೊಸ ಸಮಸ್ಯೆ ವಿಶ್ಲೇಷಿಸುವ, ಗೊಬ್ಬರ ಹಾಕುವ, ಕಂಪ್ಯೂಟರ್​​ಗೆ ಪ್ರೋಗ್ರಾಂ ಬರೆಯುವ, ರುಚಿಕರ ಊಟ ಸಿದ್ಧಪಡಿಸುವ, ದಕ್ಷತೆಯಿಂದ ಹೋರಾಡುವ ಹಾಗೂ ಧೈರ್ಯದಿಂದ ಸಾಯುವ ಸಾಮರ್ಥ್ಯ ಇರಬೇಕು. ವಿಶೇಷಜ್ಞತೆ ಕೀಟಗಳಿಗೆ ಮೀಸಲಾಗಿದೆ” ಮಾನವರು ಬಹುವಿಧ ಅಂತ:ಸ್ಸತ್ತ್ವಗಳನ್ನು ಹೊಂದಿರುತ್ತಾರೆ. ಅಲ್ಲದೆ ಕೆಲವರು ಬಹುಶ್ರುತರಾಗಿರುತ್ತಾರೆ. ಅಂದರೆ ಅವರು ವಿಶಾಲ, ವಿಭಿನ್ನ ಮತ್ತು ವಿಶ್ವಕೋಶದಂತಹ ಕಲಿಕೆಯನ್ನು ಗಳಿಸಿರುತ್ತಾರೆ.

    ಕೆಲವು ಜನರು ಹೇಗೆ ಬಹುಶ್ರುತರಾಗುತ್ತಾರೆ?

    ಅವರು ಆಧಾರಭೂತವೆನಿಸುವ ಒಂದು ವಿಷಯದಲ್ಲಿ ಪಳಗಿರುತ್ತಾರೆ ಹಾಗೂ ಅದರ ಮೇಲೆ ತನ್ನ ಜ್ಞಾನಭಂಡಾರವನ್ನು ರೂಪಿಸುತ್ತಾರೆ. ಉದಾಹರಣೆಗೆ, ಚಾರ್ಲ್ಸ್‌ ಡಾರ್ವಿನ್ನನು ಜೀವವಿಜ್ಞಾನದಲ್ಲಿ ಸವೆಸಿದ ಬದುಕು ಮತ್ತು ಕಾರ್ಯದಲ್ಲಿ ಭೂವಿಜ್ಞಾನವು ಮೂಲ ಪಾತ್ರವನ್ನು ವಹಿಸಿತು. ಜ್ವಾಲಾಮುಖಿ ಮತ್ತು ಪಳೆಯುಳಿಕೆಗಳ ಕುರಿತು ಆತ ನಡೆಸಿದ ಅಧ್ಯಯನವು, ನಂತರದ ವಿಕಸನ ಮತ್ತು ನೈಸರ್ಗಿಕ ಆಯ್ಕೆಯ ಸಿದ್ಧಾಂತಗಳನ್ನು ಪ್ರಭಾವಿಸಿತು. ಅತ್ಯಂತ ಚಿರಪರಿಚಿತ ಬಹುಶ್ರುತ ಎನಿಸಿದ ಲಿಯೋನಾರ್ದೊ ದ ವಿಂಚಿ ಕಚ್ಚಾ ನಕಾಶೆಯಿಂದ ಚಿತ್ರ ಬಿಡಿಸುವುದು, ಬಣ್ಣಗಳ ಮಿಶ್ರಣ, ರಾಸಾಯನಿಕ ಸಂಯೋಜನೆ ಅರಿತುಕೊಳ್ಳುವುದು, ಮಾನವನ ಶರೀರಶಾಸ್ತ್ರ, ನಂತರ ಅಂಗರಚನಾಶಾಸ್ತ್ರ – ಹೀಗೆ ಒಂದರ ನಂತರ ಒಂದರಂತೆ ತನ್ನ ಜ್ಞಾನವನ್ನು ವೃದ್ಧಿಸುತ್ತ ಹೋದ.

    ಅವರು ಒಂದರ ಉತ್ಪನ್ನ­­ವನ್ನು ಇನ್ನೊಂದಕ್ಕೆ ಅಡ್ಡ ಬಳಕೆ ಮಾಡುತ್ತಾರೆ. ಚಾರ್ಲ್ಸ್‌ ಬಬೇಜ್‌ ಅವರು ಸಿಲ್ಕ್‌ ಪ್ರಿಂಟಿಂಗ್​ನ ತನ್ನ ಜ್ಞಾನವನ್ನು ಡಿಜಿಟಲ್‌ ಪ್ರೋಗ್ರಾಮೇಬಲ್‌ ಕಂಪ್ಯೂಟರಿಗೆ ಬಳಸಿಕೊಂಡನು ಹಾಗೂ ಜೊಹಾನ್ಸ್‌ ಗುಟನ್‌ ಬರ್ಗ್‌ ವೈನ್‌ ಪ್ರೆಸ್‌ ಆಧರಿಸಿ ಚಲಿಸುವ ಪ್ರಕಾರದ ಮುದ್ರಣ ಯಂತ್ರ ಕಂಡುಹಿಡಿದ. ಫ್ರೆಂಚ್‌ ಗಣಿತಶಾಸ್ತ್ರಜ್ಞ ಮತ್ತು ಬಹುಶ್ರುತ ಹೆನ್ರಿ ಪೋಯಿಂಕೇರ್​​ನ ಕೆಲಸವನ್ನು ʻಹೂವಿನಿಂದ ಹೂವಿಗೆ ಹಾರುವ ಜೇನ್ನೊಣʼಕ್ಕೆ ಹೋಲಿಸಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ, ಮುಖ್ಯವಾಗಿ ಸಾಮಾಜಿಕ ವಿಜ್ಞಾನದಲ್ಲಿ, ಡಾಕ್ಟರೇಟ್‌ ಅಧ್ಯಯನ ಕಾರ್ಯವು ಪುಸ್ತಕದ ರಚನೆಗೆ ಕಾರಣವೆನಿಸುತ್ತದೆ. ಆದರೆ ಭೌತಿಕ ವಿಜ್ಞಾನಗಳಲ್ಲಿ ಸಂಶೋಧಕರು ತಮ್ಮ ಅರಿವನ್ನು ಹೂಡಿಕೆ ಮತ್ತು ಸಮಾಲೋಚನಾ ಕ್ಷೇತ್ರಗಳಿಗಾಗಿ ಬಳಸಿಕೊಳ್ಳುತ್ತಾರೆ.

    ಅವರು ಸ್ವಯಂ ಆಗಿ ಕಲಿಯುತ್ತಾರೆ. ಅವರು ಅದ್ಭುತ ಕುತೂಹಲವನ್ನು ಹೊಂದಿರುತ್ತಾರೆ ಹಾಗೂ ನಿರಂತರವಾಗಿ ಕಲಿಯುತ್ತಾರೆ. ಅವರು ನಿರಂತರವಾಗಿ ನೈಜ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತ ಇರುತ್ತಾರೆ. ಅಲ್ಲದೆ ಪ್ರಯೋಗ ನಡೆಸುತ್ತಲೇ ಸಂಬಂಧಗಳ ಅನ್ವೇಷಣೆ ಮಾಡುತ್ತಿರುತ್ತಾರೆ. ಮತ್ತು ಒಂದರ ಅನುಭವದಲ್ಲಿ ದೊರೆತ ಕಲಿಕೆಯನ್ನು ಇನ್ನೊಂದಕ್ಕೆ ವಿಸ್ತರಿಸುತ್ತಾರೆ. ಅತ್ಯಂತ ಗೌರವಾನ್ವಿತ ಹೂಡಿಕೆದಾರರಲ್ಲಿ ಒಬ್ಬರೆನಿಸಿದ, ಬರ್ಕ್‌ ಶೈರ್‌ ಹ್ಯಾಥ್ವೇ ಸಂಸ್ಥೆಯ ಉಪಾಧ್ಯಕ್ಷರಾದ ಚಾರ್ಲಿ ಮುಂಗರ್‌ ಅವರು ದಿನಕ್ಕೆ 500 ಪುಟಗಳನ್ನು ಓದುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಮಕ್ಕಳು ಅವರನ್ನು ʻಕಾಲುಗಳಿರುವ ಪುಸ್ತಕʼ ಎಂದು ಕರೆಯುತ್ತಾರೆ. ವಿಜ್ಞಾನಿ, ಲೇಖಕ, ರಾಜಕಾರಣಿ – ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಬೆಂಜಮಿನ್‌ ಫ್ರಾಂಕ್ಲಿನ್‌ ಅವರು ದಿನಕ್ಕೆ ಒಂದು ಗಂಟೆ ಅಥವಾ ವಾರಕ್ಕೆ ಐದು ಗಂಟೆಗಳನ್ನು ಕಲಿಕೆ ಮತ್ತು ಓದುವಿಕೆಗೆ ಮೀಸಲಿಟ್ಟಿದ್ದರು (ಮೈಕಲ್‌ ಸಿಮನ್‌ ಅವರ 5 ಗಂಟೆಯ ನಿಯಮದಂತೆ).

    ಸಂಕೀರ್ಣ ಸಮಸ್ಯೆಗಳನ್ನು ಹೊಂದಿರುವ ಈ ಜಗತ್ತನ್ನು ಮುನ್ನಡೆಸಲು ಬಹುಶ್ರುತರ ಅಗತ್ಯವಿದೆ: ಈ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು (ಉದಾ: ಹವಾಮಾನ ಬದಲಾವಣೆ, ಭವಿಷ್ಯದಲ್ಲಿ ಎದುರಾಗಬಹುದಾದ ಪಿಡುಗು, ಹಸಿವಿನ ಸಮಸ್ಯೆ ಇತ್ಯಾದಿ) ಅರಿತುಕೊಳ್ಳಬೇಕಾದರೆ ಬಹುಶಿಸ್ತೀಯ ವಿಷಯಗಳನ್ನು ಕುರಿತ ಜ್ಞಾನದ ಅಗತ್ಯವಿದೆ. ಹವಾಮಾನ ಬದಲಾವಣೆಯಂತಹ ಸಂಕೀರ್ಣ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಾದರೆ ನೈಸರ್ಗಿಕ ವಿಜ್ಞಾನ, ಅರ್ಥಶಾಸ್ತ್ರ, ಮತ್ತು ಭೂರಾಜ್ಯಶಾಸ್ತ್ರ ಇತ್ಯಾದಿಗಳ ಕುರಿತ ಒಳನೋಟದ ಅಗತ್ಯವಿದೆ. ಸಮಸ್ಯೆಗಳ ಕುರಿತು ವಿಶ್ವಕೋಶದಂತಹ ಜ್ಞಾನವನ್ನು ಹೊಂದಿರುವವರು ಅಂತಹ ಉಪಕ್ರಮವನ್ನು ಮುನ್ನಡೆಸಲು ಸೂಕ್ತ ಸಾಮರ್ಥ್ಯವನ್ನು ಹೊಂದಿರುತ್ತಾರೆ.

    ಅಂದರೆ ಯಾವುದಾದರೂ ಒಂದು ವಿಷಯದಲ್ಲಿ ವಿಶೇಷಜ್ಞತೆಯ ಅಗತ್ಯವಿಲ್ಲವೇ? ಖಂಡಿತವಾಗಿಯೂ ಹೀಗೆ ಭಾವಿಸಬಾರದು. ಇಲ್ಲಿ ಮುಂದಿರಿಸುವ ವಾದವೆಂದರೆ, ಅಂತರ್‌ ಶಿಸ್ತೀಯ ಅರಿವಿನ ಜೊತೆಗೆ ಒಂದು ವಿಷಯದಲ್ಲಿ ವಿಶೇಷ ಪಾಂಡಿತ್ಯವನ್ನು ಹೊಂದಿರಬೇಕು. ನಾನು ಅನೇಕ ವರ್ಷಗಳ ಕಾಲ ದುಡಿದ ʻಟೆಸ್ಕೊʼ ಎಂಬ ಸಂಘಟಿತ ಬ್ರಿಟಿಷ್‌ ಚಿಲ್ಲರೆ ವ್ಯಾಪಾರ ಸಂಸ್ಥೆಯಲ್ಲಿ ಇದನ್ನು ʻಟೆಸ್ಕೊ ಟಿʼ ಎಂದು ಕರೆಯಲಾಗುತ್ತದೆ. ಜನರಲ್‌ ಮ್ಯಾನೇಜರ್‌ ಗಳು ಮತ್ತು ಸಂಸ್ಥೆಯ ನಾಯಕರು ಒಂದು ವಿಭಾಗದ ಕುರಿತು ಆಳವಾದ ಮತ್ತು ವಿಸ್ತೃತ ಜ್ಞಾನವನ್ನು ಹೊಂದಿರಬೇಕಿತ್ತು ಹಾಗೂ ಇತರ ವಿಭಾಗಗಳ ಕುರಿತು ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕಿತ್ತು.

    ತನ್ನ ʻಔಟ್ಲೈನರ್ಸ್‌ʼ ಪುಸ್ತಕದಲ್ಲಿ ಮಾಲ್ಕಮ್‌ ಗ್ಲಾಡ್ವೆಲ್‌ ಹೇಳುವಂತೆ, ಯಾವುದೇ ಕೌಶಲ್ಯದಲ್ಲಿ ನಿಜವಾದ ಪ್ರಾವೀಣ್ಯತೆ ಗಳಿಸಬೇಕಾದರೆ ಕನಿಷ್ಠ 10,000 ಗಂಟೆಗಳ ಕಾಲ ಅಭ್ಯಾಸ ನಡೆಸಬೇಕು. ಒಂದು ವೇಳೆ ಇದು ನಿಜವಾಗಿದ್ದರೆ, ಒಂದು ಕೌಶಲ್ಯದಲ್ಲಿ 6-8 ವರ್ಷಗಳ ಕಾಲ ಉಳಿದುಕೊಂಡರೆ ಅದರಲ್ಲಿ ಪ್ರಾವೀಣ್ಯತೆಯನ್ನು ಗಳಿಸಬಹುದು. ಆದರ್ಶಪ್ರಾಯವಾಗಿ, 35 ವರ್ಷಗಳ ವೃತ್ತಿಯಲ್ಲಿ ಅಂತಹ 5-6 ಪ್ರಾವಿಣ್ಯತೆಗಳನ್ನು ಸಾಧಿಸಬಹುದು. ನೋಬೆಲ್‌ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯಂ ಚಂದ್ರಶೇಖರ್‌ ಅವರು ಪ್ರತಿ 10 ವರ್ಷಗಳಿಗೊಮ್ಮೆ ತನ್ನ ಅಧ್ಯಯನದ ವಿಷಯವನ್ನು ಬದಲಾಯಿಸುತ್ತಿದ್ದರು ಹಾಗೂ ನಾಕ್ಷತ್ರಿಕ ರಚನೆ, ಕ್ವಾಂಟಮ್‌ ಸಿದ್ಧಾಂತ ಮತ್ತು ದ್ರವಕಾಂತೀಯ ಸ್ಥಿರತೆ ಇತ್ಯಾದಿ ವಿಷಯಗಳಲ್ಲಿ ಅವರು ತನ್ನ ಸಂಶೋಧನೆಯನ್ನು ಕೈಗೊಂಡರು.

    ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌.ಇ.ಪಿ. 2020) ಇದನ್ನು ಗುರುತಿಸುತ್ತದೆ:  ಎನ್‌.ಇ.ಪಿ 2020 ಅಂತರ್‌ – ಶಿಸ್ತೀಯ ಕಲಿಕೆಯ ಪ್ರಯೋಜನವನ್ನು ಗುರುತಿಸಿದೆ ಹಾಗೂ ಕೋರ್ಸುಗಳ ಆಯ್ಕೆಯಲ್ಲಿ ನಮ್ಯತೆಯನ್ನು ಪರಿಚಯಿಸಿದೆ. ಹೊಸ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಿಷಯಗಳ ನಡುವೆ ಆಯ್ಕೆ ಮಾಡಿಕೊಳ್ಳಲು, ಬಾಹ್ಯಪರಿಧಿಯುಳ್ಳ ವಿಶಾಲದೃಷ್ಟಿಯನ್ನು ಬೆಳೆಸಿಕೊಳ್ಳಲು (ಸೀಮಿತ ಉದ್ದೇಶದತ್ತ ಮಾತ್ರವೇ ನೋಡುವ ʻಸುರಂಗ ದೃಷ್ಟಿʼಗೆ ವಿರುದ್ಧವಾಗಿ) ಮತ್ತು ಹೊಸ ಸಾಧ್ಯತೆಗಳ ಕುರಿತು ಯೋಚಿಸಲು ಉತ್ತೇಜಿಸುತ್ತವೆ. ಅಂತರ್‌ – ಶಿಸ್ತೀಯ ಕಲಿಕೆಯು, ವಿಚಾರಗಳ ಸಂಶ್ಲೇಷಣೆ, ಕ್ಷಿಪ್ರ ಕಲಿಕೆ ಮತ್ತು ಹೊಂದಿಕೊಳ್ಳುವಿಕೆ ಮುಂತಾದ ಬಹು ಸಾಮರ್ಥ್ಯಗಳನ್ನು ರೂಪಿಸಿಕೊಳ್ಳಲು ಕಾರಣವೆನಿಸುತ್ತದೆ.

    ವಿದ್ಯಾರ್ಥಿಗಳು ತಮ್ಮ ಆರಾಮ ವಲಯದಿಂದ ಹೊರಬಂದು ಹೊಸ ವಿಷಯಗಳನ್ನು ಶೋಧಿಸಿದಾಗ ಅವರು ವಿಫಲರಾಗುವುದು ಸರ್ವೇ ಸಾಮಾನ್ಯ. ಅಂತರ್‌ ಶಿಸ್ತೀಯ ಶಿಕ್ಷಣವು ಯಶಸ್ವಿಯಾಗಬೇಕಾದರೆ, ವಿಫಲತೆಯನ್ನು ಹೀಗಳೆಯುವ ಸಂಸ್ಕೃತಿಗೆ ತಿಲಾಂಜಲಿ ಹೇಳುವ ಅಗತ್ಯವೂ ಇದೆ. ʻದೊಡ್ಡವರಾದಾಗ ನೀವು ಏನಾಗಲು ಬಯಸುತ್ತೀರಿʼ ಎಂದು ಮಕ್ಕಳನ್ನು ಕೇಳಿ ಅವರಿಗೆ ಕಿರಿಕಿರಿಯನ್ನುಂಟು ಮಾಡುವ ಬದಲಿಗೆ, ಅಮೆರಿಕನ್‌ ಲೇಖಕ ಡಾ. ಸ್ಯೂಸ್‌ ಅವರ ʻನೀವು ಯಾವ ದಿಕ್ಕಿನಲ್ಲಿ ಸಾಗಿದರೂ ಯಶಸ್ಸನ್ನು ಗಳಿಸಬಲ್ಲಿರಿʼ ಎಂಬ ಮಾತನ್ನು ಹೇಳೋಣ.

    8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

    ಸಂಜೆ ಸ್ನೇಹಿತರ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಒಂದು ಕೆ.ಜಿ. ಚಿನ್ನಾಭರಣ ಕಳವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts