More

    ಈ‌ ಬಾರಿ‌ ಸರಳ‌‌‌, ಶಿಕ್ಷಕ‌ಸ್ನೇಹಿ‌ ವರ್ಗಾವಣೆ; ಟ್ರಾನ್ಸ್​ಫರ್ ಮಿತಿಯೂ ಹೆಚ್ಚಳ…

    ಬೆಂಗಳೂರು: ಈಗಾಗಲೇ ಪ್ರಾರಂಭವಾಗಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಎದುರಿಸಲಾಗುತ್ತಿರುವ ಕೆಲವು ಪ್ರಾಯೋಗಿಕ ಸಮಸ್ಯೆಗಳನ್ನು ಸರಿಪಡಿಸುವ ಜತೆಗೆ ಕಡ್ಡಾಯ-ಹೆಚ್ಚುವರಿ ವರ್ಗಾವಣೆಯಾದ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಬಾರಿ ವರ್ಗಾವಣೆ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಿರುವುದರಿಂದ ಬಹುಪಾಲು ಶಿಕ್ಷಕರಿಗೆ ವರ್ಗಾವಣೆ ಅವಕಾಶಗಳಿವೆ. ಒಟ್ಟಿನಲ್ಲಿ ಈ ಸಲದ್ದು‌ ಸರಳ‌‌‌, ಶಿಕ್ಷಕ‌ಸ್ನೇಹಿ‌ ವರ್ಗಾವಣೆ ಎಂದು ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್ ಹೇಳಿದರು.

    ಬುಧವಾರ ಸಮಗ್ರ ಶಿಕ್ಷಣ-ಕರ್ನಾಟಕ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳು ಸೇರಿ ವಿವಿಧ ವಿಷಯಗಳ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

    ಸಿಆರ್​ಪಿ, ಬಿಆರ್​ಪಿಗಳಿಗೂ ಅವಕಾಶ: ಸಿಆರ್​ಪಿ ಮತ್ತು ಬಿಆರ್​ಪಿ ಶಿಕ್ಷಕರಿಗೆ ವರ್ಗಾವಣಾ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯ ವರ್ಗಾವಣಾ ವ್ಯಾಪ್ತಿಯಲ್ಲಿ ಬಂದ ಮುಖ್ಯೋಪಾಧ್ಯಾಯರಿಗೆ ಮತ್ತು ಪದವಿಪೂರ್ವ ಉಪನ್ಯಾಸಕರಿಗೂ ಈ ಬಾರಿ ಆದ್ಯತೆಯ ವರ್ಗಾವಣೆಗೆ ಅವಕಾಶ ನೀಡಲಾಗುವುದು ಎಂದು ಸಚಿವರು ಹೇಳಿದರು.

    ಹೊಸದಾಗಿ ನೇಮಕಗೊಂಡವರಿಗೆ ನಿರಾಕ್ಷೇಪಣಾ ಪತ್ರ: ಹೊಸದಾಗಿ ನೇಮಕಗೊಂಡ ಸೇವಾನಿರತ ಪದವಿಪೂರ್ವ ಶಿಕ್ಷಣ ಉಪನ್ಯಾಸಕ ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳು ನಿರಪೇಕ್ಷಣಾ ಪ್ರಮಾಣಪತ್ರಗಳನ್ನ ನೀಡಬೇಕೆಂದು ಆಗ್ರಹ ವ್ಯಕ್ತವಾಗಿದ್ದು, ಕೂಡಲೇ ಈ ಕುರಿತು ಕ್ರಮ ವಹಿಸಬೇಕೆಂದು ಸಚಿವರು ಪಿಯು ಇಲಾಖೆ ನಿರ್ದೇಶಕರಿಗೆ ಸೂಚಿಸಿದರು. ಆರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಸ್ಥಗಿತಗೊಂಡಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

    ಈ ಬಾರಿಯ ತಂತ್ರಜ್ಞಾನಾಧಾರಿತ ವರ್ಗಾವಣಾ ವ್ಯವಸ್ಥೆಗೆ ಮುಕ್ತಕಂಠದಿಂದ ಪ್ರಶಂಶಿಸಿದ ವಿಧಾನಪರಿಷತ್ ಸದಸ್ಯರು, ಶಿಕ್ಷಕರು ಕುಳಿತ ಸ್ಥಳದಿಂದಲೇ ತಮ್ಮ ಮೊಬೈಲ್​ಫೋನ್​ನಿಂದಲೇ ಅರ್ಜಿ ಹಾಕಿಕೊಳ್ಳುವಂತಹ ವ್ಯವಸ್ಥೆ ಪರಿಣಾಮಕಾರಿಯಾಗಿದ್ದು, ಅದರಲ್ಲಿನ ಕೆಲವು ಗೊಂದಲಗಳನ್ನು ಸರಿಪಡಿಸಿದರೆ ಇದು ತುಂಬಾ ಉಪಯುಕ್ತವಾಗಿದೆ ಎಂದರು. ಶಿಕ್ಷಣ ಇಲಾಖೆ ಕಳೆದ ಒಂದೂವರೆ ವರ್ಷದಲ್ಲಿ ಕೈಗೊಂಡ ಉಪಕ್ರಮಗಳನ್ನು ಸದಸ್ಯರು ಶ್ಲಾಘಿಸಿದರು.

    ಸಭೆಯಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಮಾಜಿ ಶಿಕ್ಷಣ ಸಚಿವ ಬಸವರಾಜ ಎಸ್. ಹೊರಟ್ಟಿ, ಡಾ. ವೈ.ಎಸ್.ನಾರಾಯಣಸ್ವಾಮಿ, ಶಶೀಲ್ ನಮೋಶಿ, ಸಂಕನೂರು, ಚಿದಾನಂದ ಎಸ್. ಗೌಡ, ಮರಿತಿಬ್ಬೇಗೌಡ, ಪುಟ್ಟಣ್ಣ , ಬೋಜೇಗೌಡ ಭಾಗವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾಚೋಳನ್ ಸೇರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    ತಕ್ಷಣವೇ ಶಾಲೆ ಆರಂಭಿಸಿ.. ಸರ್ಕಾರದೊಂದಿಗೆ ನಾವಿದ್ದೇವೆ: ಶಿಕ್ಷಣ ಸಚಿವರಿಗೆ ಭಾರಿ ಒತ್ತಾಯ

    ನಿವೃತ್ತಿಯಾದರೂ ಬಿಡಲಿಲ್ವೇ ಚಾಳಿ?; ಇಬ್ಬರೂ ಸಿಕ್ಕಿಬಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts