More

    ಈ ಬಾರಿ ಕಬ್ಬು ಯಾರಿಗೆ ಸಿಹಿ-ಕಹಿ?

    ಬೆಳಗಾವಿ: ಪ್ರಸಕ್ತ ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಮುನ್ನವೇ ಕಬ್ಬಿನ ನಿಗದಿ ವಿಷಯಕ್ಕೆ ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ.

    ರಾಜ್ಯದಲ್ಲಿ 5.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕವಾಗಿ ಸುಮಾರು 409.45 ಲಕ್ಷ ಮೆಟ್ರಿಕ್ ಟನ್ ಕಬ್ಬು ಉತ್ಪಾದಿಸಲಾಗುತ್ತದೆ. ಅಲ್ಲದೆ, 87 ಸಕ್ಕರೆ
    ಕಾರ್ಖಾನೆಗಳ ಪೈಕಿ 62 ಕಾರ್ಖಾನೆಗಳು ಸದ್ಯ ಕಾರ್ಯ ನಿರ್ವಹಿಸುತ್ತಿದೆ. ವಾರ್ಷಿಕ ಸರಾಸರಿ 45.01 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ
    ಶೇ. 10.60ರಷ್ಟು ಕಬ್ಬು ಇಳುವರಿ ದಾಖಲಿಸಿವೆ.

    ಈ ವರ್ಷ ಅತಿವೃಷ್ಟಿ ಹಾಗೂ ಕೋವಿಡ್-19 ನಿಂದಾಗಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳು 2020-21ನೇ ಸಾಲಿನ ಹಂಗಾಮಿನಲ್ಲಿ ಕಬ್ಬಿನ ದರ ಘೋಷಣೆ ಮಾಡಿಲ್ಲ.

    ಹೀಗಾಗಿ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನೂ ಕಾರ್ಖಾನೆಯವರೆ ಪಾವತಿಸಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸುತ್ತಿದ್ದಾರೆ. ನಡೆದಿಲ್ಲ ಸಭೆ: ಈಗಾಗಲೇ ಕೇಂದ್ರ ಸರ್ಕಾರವು ಶೇ.10ರಷ್ಟು ಸಕ್ಕರೆ ಇಳುವರಿ ಇರುವ ಪ್ರತಿಟನ್ ಕಬ್ಬಿಗೆ 2,850 ರೂಪಾಯಿ ಎಫ್‌ಆರ್‌ಪಿ (ನ್ಯಾಯ ಮತ್ತು ಲಾಭದಾಯಕ ಬೆಲೆ) ದರ ನಿಗದಿಪಡಿಸಿದೆ. ಈ ಆಧಾರದ ಮೇಲೆಯೇ ದರ ನಿಗದಿ ಪಡಿಸಬೇಕಿದ್ದ ರಾಜ್ಯ ಕಬ್ಬು ನಿಯಂತ್ರಣ ಮಂಡಳಿ ಇನ್ನೂ ಎ್ಆರ್‌ಪಿ ದರ ನಿಗದಿ ಪಡಿಸಿಲ್ಲ. ಅಲ್ಲದೆ,
    ಕಳೆದ 9 ತಿಂಗಳಿಂದ ರಾಜ್ಯ ಸಲಹಾ ಬೆಲೆ ಸಮಿತಿ (ಎಸ್‌ಎಪಿ) ಸಭೆ ಕರೆದಿಲ್ಲ.

    ದರ ನಿಗದಿಸದ ರಾಜ್ಯ ಸರ್ಕಾರ: ಕೇಂದ್ರ ಆಹಾರ ಸಚಿವಾಲಯವು ಪ್ರತಿವರ್ಷ ಕೇಂದ್ರ ಬೆಲೆ ಆಯೋಗದ ಶಿಫಾರಸು ಮೇರೆಗೆ ಸಕ್ಕರೆಗೆ ಎಫ್‌ಆರ್‌ಪಿ ದರ ನಿಗದಿ ಮಾಡುತ್ತದೆ. ಎಫ್‌ಆರ್‌ಪಿ ಆಧಾರದಲ್ಲಿ ಆಯಾ ರಾಜ್ಯಗಳಲ್ಲಿ ದರ ನಿಗದಿ ಮಾಡುವುದು ವಾಡಿಕೆಯಾಗಿದೆ. ಆದರೆ, ಕರ್ನಾಟಕ ಸರ್ಕಾರ ಇನ್ನೂ ದರ ನಿಗದಿ ಮಾಡಿಲ್ಲ
    ಎಂದು ಕಬ್ಬು ಬೆಳೆಗಾರರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರ ಶೇ.10ರಷ್ಟು ಸಕ್ಕರೆ ಇಳುವರಿ ಇರುವ ಪ್ರತಿಟನ್ ಕಬ್ಬಿಗೆ 2,850 ರೂ. ನಿಗದಿಪಡಿಸಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯಲ್ಲಿ ಇಳುವರಿ ಆಧಾರದ ಮೇಲೆ ದರ ಘೋಷಿಸಿಲ್ಲ. ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಶೇ.10ರಿಂದ 11.5ರ ವರೆಗೆ ಇಳುವರಿ ಬರುತ್ತದೆ. ಆದರೂ ಕಾರ್ಖಾನೆಗಳು ಶೇ.10ಕ್ಕಿಂತ ಕಡಿಮೆ ಇಳುವರಿ ತೋರಿಸುತ್ತಿವೆ. ಹೀಗಾಗಿ ಟನ್ ಕಬ್ಬಿಗೆ 450 ರಿಂದ 840 ರೂ. ವರೆಗೆ ರೈತರಿಗೆ ನಷ್ಟವಾಗುತ್ತಿದೆ.
    | ಚೂನಪ್ಪ ಪೂಜೇರಿ ಎಸ್‌ಎಪಿ ಸಮಿತಿ ಸದಸ್ಯ, ಬೆಳಗಾವಿ

    ಕೇಂದ್ರ ಸರ್ಕಾರವು ಕಬ್ಬು ಇಳುವರಿ ಆಧಾರದ ಮೇಲೆ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿಪಡಿಸುತ್ತದೆ. ರಾಜ್ಯ ಸರ್ಕಾರ ಇನ್ನೂ ಇಳುವರಿ ಆಧಾರದ ಮೇಲೆ ದರ ನಿಗದಿ ಮಾಡಿಲ್ಲ. ಪ್ರತಿವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ದರ ನಿಗದಿ ಆಗುತ್ತದೆ.
    | ಎಂ.ಜಿ.ಹಿರೇಮಠ. ಜಿಲ್ಲಾಧಿಕಾರಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts